ಕಟಕ ರಾಶಿಗೆ ಸೂರ್ಯನ ಸಂಚಾರ, ದ್ವಾದಶ ರಾಶಿಗಳಿಗೆ ಮಿಶ್ರಫಲ; ಯಾರಿಗೆ ಬೇವು ಯಾರಿಗೆ ಬೆಲ್ಲ?
Jul 12, 2024 05:06 PM IST
ಕಟಕ ರಾಶಿಗೆ ಸೂರ್ಯನ ಸಂಚಾರ
ಗ್ರಹಗಳು ಆಗ್ಗಾಗ್ಗೆ ಸ್ಥಾನ ಬದಲಿಸುತ್ತವೆ. ಇದೀಗ ಸೂರ್ಯನ ಕಟಕ ರಾಶಿಗೆ ಪ್ರವೇಶಿಸಲಿದ್ದು ಎಲ್ಲಾ 12 ರಾಶಿಗಳು ಇದರ ಪರಿಣಾಮ ಎದುರಿಸಬೇಕಾಗುತ್ತದೆ. ಸೂರ್ಯನ ಸ್ಥಾನ ಪಲ್ಲಟದಿಂದ ಯಾವ ರಾಶಿಯವರಿಗೆ ಏನು ಪರಿಣಾಮ ಬೀರಲಿದೆ ನೋಡೋಣ. (ಬರಹ: ಎಚ್. ಸತೀಶ್, ಜ್ಯೋತಿಷಿ)
ಜುಲೈ 16 ರಿಂದ ಆಗಸ್ಟ್ 16 ರವರೆಗೂ ಸೂರ್ಯನು ಕಟಕ ರಾಶಿಯಲ್ಲಿ ಸಂಚರಿಸುತ್ತಾನೆ. ಮೀನದಲ್ಲಿ ರಾಹು ಇದ್ದು ರವಿಯನ್ನು ವೀಕ್ಷಿಸುತ್ತಾನೆ. ಈ ಕಾರಣದಿಂದ ಪ್ರತಿಯೊಂದು ರಾಶಿಗಳು ತನ್ನದೇ ಆದ ಫಲಗಳನ್ನು ಪಡೆಯುತ್ತಾರೆ. ರಾಹುಶಾಂತಿ ಮತ್ತು ಸೂರ್ಯಾರಾಧನೆಯಿಂದ ಶುಭಫಲಗಳು ದೊರೆಯುತ್ತವೆ. ಪ್ರತಿಯೊಂದು ರಾಶಿಯವರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
ತಾಜಾ ಫೋಟೊಗಳು
ಮೇಷ
ಆತುರದಿಂದ ಕುಟುಂಬದ ಕೆಲಸ ಕಾರ್ಯಗಳನ್ನು ನಿರ್ವಹಿಸುವಿರಿ. ಸೋಲಿನ ವೇಳೆಯಲ್ಲಿಯೂ ನಿಮ್ಮ ಪ್ರಯತ್ನವನ್ನು ಬಿಡದೆ ಕಾರ್ಯ ಸಾಧಿಸುವಿರಿ. ಕುಟುಂಬದಲ್ಲಿ ಅನಾವಶ್ಯಕ ಒತ್ತಡದ ಸನ್ನಿವೇಶವಿರುತ್ತದೆ. ನಿಮ್ಮ ಮಾತಿನ ಬಲದಿಂದ ಕುಟುಂಬದ ಮೇಲೆ ಹತೋಟಿ ಸಾಧಿಸುವಿರಿ. ಹಣಕಾಸಿನ ತೊಂದರೆ ಇರುವುದಿಲ್ಲ. ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ತಾಯಿಯ ಆರೋಗ್ಯದಲ್ಲಿ ಸಮಸ್ಯೆ ಎದುರಾಗಬಹುದು. ಮಕ್ಕಳ ವಿಚಾರದಲ್ಲಿ ಕುಟುಂಬದಲ್ಲಿ ಬೇಸರ ಉಂಟಾಗಲಿದೆ. ಬೇರೆಯವರ ಮಾತುಗಳನ್ನು ನಂಬಿದರೆ ಎಲ್ಲರ ವಿರೋಧ ಎದುರಿಸಬೇಕಾಗುತ್ತದೆ. ಆತುರದ ನಿರ್ಧಾರಗಳು ಜೀವನದ ಹಾದಿ ತಪ್ಪಿಸಲಿದೆ. ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನದಿಂದ ಕಲಿಕೆಯಲ್ಲಿ ಮುಂದುವರೆಯುತ್ತಾರೆ. ಬೇರೆಯವರನ್ನು ಅವಲಂಬಿಸದೆ ಸ್ವತಂತ್ರವಾಗಿ ಕಾರ್ಯ ನಿರ್ವಹಿಸಿದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವ ಪ್ರಯತ್ನ ಮಾಡಿರಿ.
ವೃಷಭ
ಒಮ್ಮೆ ತೆಗೆದುಕೊಂಡ ತೀರ್ಮಾನಗಳನ್ನು ಬದಲಿಸುವುದಿಲ್ಲ. ಆದರೆ ಮನಸ್ಸು ಮಗುವಿನಷ್ಟು ಮೃದುವಾಗಿರುತ್ತದೆ. ಆದ್ದರಿಂದ ಜೀವನದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ಕಿರಿಯ ಸೋದರ ಅಥವಾ ಸೋದರಿಯ ಆರೋಗ್ಯದಲ್ಲಿ ತೊಂದರೆ ಇರುತ್ತದೆ. ಅನಿರೀಕ್ಷಿತ ಧನಲಾಭವಿರುತ್ತದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ಕುಟುಂಬದಲ್ಲಿ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವಿರಿ. ಸ್ವಂತ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ವರಮಾನ ಇರುತ್ತದೆ. ನೀರಿರುವ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಿದ್ದೀರಿ. ಯಾವುದೇ ತೊಂದರೆ ಇರದೆ ಹೋದರೂ ಮನದಲ್ಲಿ ಆತಂತಕವಿರುತ್ತದೆ. ನಿಮ್ಮ ಪ್ರಯತ್ನದಿಂದ ಕುಟುಂಬದಲ್ಲಿ ಪರಸ್ಪರ ವಿಶ್ವಾಸ ಹೆಚ್ಚುತ್ತದೆ. ನಿಮ್ಮಿಂದ ಮರೆಯಾದ ಅವಕಾಶವೊಂದು ಮರಳಿ ದೊರೆಯುತ್ತದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬರುತ್ತದೆ.
ಮಿಥುನ
ನಿಮ್ಮ ಮಾತಿನಲ್ಲಿ ದಿಟ್ಟತನ ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಯಾವುದೇ ಹಿಂಜರಿಕೆ ಇರುವುದಿಲ್ಲ. ಆತ್ಮವಿಶ್ವಾಸದಿಂದ ಕೆಲಸ ಕಾರ್ಯಗಳಲ್ಲಿ ತೊಡಗುವಿರಿ. ಉದ್ಯೋಗದಲ್ಲಿ ಎದುರಾದ ಅಡಚಣೆಗಳು ಶೀಘ್ರದಲ್ಲೇ ಬಗೆಹರಿಯುತ್ತದೆ. ಮಾನಸಿಕ ಒತ್ತಡಕ್ಕೆ ಒಳಗಾಗದೆ ಕೆಲಸ ಕಾರ್ಯಗಳಲ್ಲಿ ತೊಡಗುವುದು. ಒಳ್ಳೆಯದು ಉತ್ತಮ ಆದಾಯವಿದ್ದರೂ ಖರ್ಚು ವೆಚ್ಚಗಳಿಗೆ ಕಡಿಮೆ ಇರುವುದಿಲ್ಲ. ಪರಿಚಯದವರು ನಿಮಗೆ ಸಹಾಯ ಮಾಡಲಿದ್ದಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ನೆರೆಹೊರೆಯವರಿಂದ ಸಹಾಯ ದೊರೆಯುತ್ತದೆ. ಆತ್ಮೀಯರ ವಿವಾಹ ಕಾರ್ಯಕ್ಕೆ ಹಣದ ಸಹಾಯ ಮಾಡುವಿರಿ. ಪಾಲುದಾರಿಕೆ ವ್ಯಾಪಾರವಿದ್ದರೆ ಲಾಭಾಂಶ ದೊರೆಯುತ್ತದೆ. ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಿರಿ. ಉನ್ನತ ವಿದ್ಯಾಭ್ಯಾಸಕ್ಕಾಗಿ ಉತ್ತಮ ಅವಕಾಶ ದೊರೆಯುತ್ತದೆ.
ಕಟಕ
ನಿಮ್ಮ ಕೆಲಸ ಕಾರ್ಯಗಳನ್ನು ಆತ್ಮೀಯರು ಗಮನಿಸುತ್ತಾರೆ. ಮನದಲ್ಲಿ ಅಂಜಿಕೆಯ ಮನೋಭಾವನೆ ಇರುತ್ತದೆ. ನಿಮ್ಮಲ್ಲಿನ ಕ್ರಿಯಾಶೀಲತೆ ಎಲ್ಲರಿಗೂ ಸ್ಪೂರ್ತಿಯಾಗುತ್ತದೆ. ಆತರದಿಂದ ತಪ್ಪು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಯಾವುದೇ ಕೆಲಸ ಕಾರ್ಯಗಳನ್ನು ಉಳಿಸದೆ ಪೂರ್ಣಗೊಳಿಸುವಿರಿ. ಹಣಕಾಸಿನ ಕೊರತೆ ಇರುವುದಿಲ್ಲ. ಬುದ್ಧಿವಂತಿಕೆಯಿಂದ ಆದಾಯದ ಅಲ್ಪಭಾಗವನ್ನು ಉಳಿಸುವಿರಿ. ಸಂತಾನ ಲಾಭವಿದೆ. ಸಂಚಾರದಿಂದ ಉತ್ತಮ ವರಮಾನ ದೊರೆಯುತ್ತದೆ. ಕುಟುಂಬದ ವಾದವಿವಾದಗಳನ್ನು ಮಾತುಕತೆಯ ಮುಖಾಂತರ ಬಗೆಹರಿಸುವಿರಿ. ಕುಟುಂಬದ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುವಿರಿ. ಜೀವನದ ಬಗ್ಗೆ ಹೊಸ ಯೋಜನೆಯನ್ನು ರೂಪಿಸುವಿರಿ. ಎಲ್ಲರೊಂದಿಗೆ ಉತ್ತಮ ಸ್ನೇಹಿತರಂತೆ ವರ್ತಿಸುವಿರಿ. ಕುಟುಂಬದಲ್ಲಿ ನಿಮ್ಮ ಪ್ರಯತ್ನದಿಂದ ಪ್ರೀತಿ ವಿಶ್ವಾಸ ಹೆಚ್ಚುತ್ತದೆ. ಒಮ್ಮೆ ಯೋಚಿಸಿ ನಂತರ ಮನಸ್ಸಿನ ವಿಚಾರಗಳನ್ನು ಕಾರ್ಯಗತಗೊಳಿಸುವುದು ಒಳ್ಳೆಯದು.
ಸಿಂಹ
ಎಲ್ಲರಿಗೂ ಪ್ರಯೋಜನವಾಗುವಂತಹ ಕೆಲಸ ಕಾರ್ಯಗಳನ್ನುಮಾಡಲು ಪ್ರಯತ್ನಿಸುವಿರಿ. ನಿಮ್ಮಲ್ಲಿನ ಹಟದ ಸ್ವಭಾವವು ಬೇರೆಯವರಲ್ಲಿ ಬೇಸರ ಮೂಡಿಸುತ್ತದೆ. ನಿಮ್ಮ ಮನಸ್ಸು ಒಪ್ಪದೇ ಹೋದರೂ ಹೆಚ್ಚಿನ ಜವಾಬ್ದಾರಿಗಳು ನಿಮ್ಮದಾಗುತ್ತದೆ. ಕುಟುಂಬದ ಎಲ್ಲರೂ ನಿಮ್ಮ ನಿರ್ಧಾರವನ್ನು ಗೌರವದಿಂದ ಒಪ್ಪಿಕೊಳ್ಳುತ್ತಾರೆ. ಉದ್ಯೋಗದಲ್ಲಿ ಉನ್ನತ ಸ್ಥಾನಮಾನ ದೊರೆಯುತ್ತದೆ. ಬಹುದಿನಗಳಿಂದ ಇದ್ದ ಕಾನೂನಿನ ಪ್ರಕ್ರಿಯೆಯಲ್ಲಿ ಜಯ ಗಳಿಸುವಿರಿ. ಮಕ್ಕಳ ಜೀವನ ಅಭಿವೃದ್ಧಿಗೆ ಉತ್ತಮ ಯೋಜನೆಗಳನ್ನು ರೂಪಿಸುವಿರಿ. ಉದ್ಯೋಗವನ್ನು ಬದಲಾಯಿಸುವ ಕಾರಣ ಹಣಕಾಸಿನ ಪರಿಸ್ಥಿತಿಯಲ್ಲಿ ಪ್ರಗತಿ ಕಂಡುಬರುತ್ತದೆ. ಆರೋಗ್ಯದಲ್ಲಿ ಯಾವುದೇ ತೊಂದರೆ ಕಂಡು ಬರುವುದಿಲ್ಲ. ಸ್ವಂತ ಉದ್ದಿಮೆ ಆರಂಭಿಸುವ ಮನಸ್ಸಿದ್ದಲ್ಲಿ ಈ ಸಮಯದಲ್ಲಿ ಸಾಧ್ಯವಾಗುತ್ತದೆ. ಉನ್ನತ ಅಧಿಕಾರಿಗಳು ತಮ್ಮ ಸಹೋದ್ಯೋಗಿಗಳ ನಡುವೆ ಸಂಯಮದಿಂದ ನಡೆದುಕೊಳ್ಳಬೇಕು.
ಕನ್ಯಾ
ಆಡುವ ಮಾತಿನ ಭರದಲ್ಲಿ ಮನದಲ್ಲಿ ಇರುವ ವಿಚಾರಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳುವಿರಿ. ನಿಮ್ಮ ತಪ್ಪಿಗೆ ಬೇರೆಯವರನ್ನು ಹೊಣೆ ಮಾಡುವಿರಿ. ಎಲ್ಲರನ್ನೂ ಟೀಕೆ ಮಾಡುವ ನಿಮ್ಮ ಗುಣ ಕೆಲವರಿಗೆ ಮನರಂಜನೆಯನ್ನು ನೀಡುತ್ತದೆ. ಅದೃಷ್ಟದಿಂದ ನಿಮ್ಮ ಮನಸ್ಸಿನ ಎಲ್ಲಾ ಕೆಲಸ ಕಾರ್ಯಗಳು ಯಶಸ್ಸನ್ನು ನೀಡುತ್ತದೆ. ನಿಮ್ಮ ಆತ್ಮೀಯರೊಬ್ಬರ ಸಹಾಯ ಸಹಕಾರದಿಂದ ಸಣ್ಣ ಪ್ರಮಾಣದ ಉದ್ದಿಮೆಯನ್ನು ಆರಂಭಿಸುವಿರಿ. ತಂದೆಯವರ ಜೀವನದಲ್ಲಿ ಉಪಯೋಗವಾಗುವಂತಹ ಬದಲಾವಣೆಗಳು ಕಂಡು ಬರಲಿದೆ. ವಿದ್ಯಾರ್ಥಿಗಳು ನಿಧಾನವಾದರೂ ತಮ್ಮ ಗುರಿಯನ್ನು ತಲುಪುವಲ್ಲಿ ಯಶಸ್ವಿಯಾಗುತ್ತಾರೆ. ಸುಲಭವಾಗಿ ಬೇರೆಯವರ ಹೊಗಳಿಕೆಗೆ ಮರುಳಾಗುವಿರಿ. ಯಾವುದೇ ನಿರ್ಧಾರವನ್ನು ದೀರ್ಘಕಾಲ ಉಳಿಸಿಕೊಳ್ಳುವುದಿಲ್ಲ. ಸಣ್ಣಪುಟ್ಟ ಕೆಲಸ ಕಾರ್ಯಗಳಿಗೂ ಹೆಚ್ಚಿನ ಶ್ರಮದ ಅವಶ್ಯಕತೆ ಇರುತ್ತದೆ.
ತುಲಾ
ಕೆಲಸ ಕಾರ್ಯಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವ ಆಸೆ ಇರುತ್ತದೆ. ಆದರೆ ತಪ್ಪಾದ ದಾರಿಯಲ್ಲಿ ನಡೆಯುವುದಿಲ್ಲ. ಜನೋಪಯೋಗಿ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ ತೋರುವುದಿಲ್ಲ. ಉದ್ಯೋಗದಲ್ಲಿ ಬಹುದಿನದಿಂದ ನಿರೀಕ್ಷಿಸುತ್ತಿದ್ದ ತಿರುವು ದೊರೆಯುತ್ತದೆ. ಕುಟುಂಬದ ಸಿರಿತನವು ನಿಮಗೆ ಲಭಿಸುತ್ತದೆ. ತಂದೆಯವರು ಮಾಡುತ್ತಿದ್ದ ವಂಶದ ವೃತ್ತಿಯನ್ನು ಅನುಸರಿಸಬೇಕಾದ ಪ್ರಮೇಯ ಎದುರಾಗುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಿರಲಿ. ಉದ್ಯೋಗದ ಸಮಸ್ಯೆಗಳು ಸಂಧಾನದ ಮಾತುಕತೆಯಿಂದ ಬಗೆಹರಿಯುತ್ತದೆ. ಉದ್ಯೋಗ ಬದಲಿಸುವ ನಿಮ್ಮ ಆಸೆ ಈಡೇರುತ್ತದೆ. ಜೀವನದಲ್ಲಿ ಅನೇಕ ಬದಲಾವಣೆಗಳು ಎದುರಾದರೂ ಅದಕ್ಕೆ ಹೊಂದಿಕೊಂಡು ನಡೆಯಬೇಕಾಗುತ್ತದೆ. ವಿದ್ಯಾರ್ಥಿಗಳು ಕ್ರಮೇಣವಾಗಿ ಜವಾಬ್ದಾರಿ ಅರಿತುಕೊಳ್ಳುತ್ತಾರೆ. ಹಣಕಾಸಿನ ತೊಂದರೆ ಉಂಟಾಗುವುದಿಲ್ಲ. ಅನಿರೀಕ್ಷಿತ ಧನಲಾಭವಿರುತ್ತದೆ. ನಿಮ್ಮಲ್ಲಿರುವ ಹಣವನ್ನು ಪ್ರೀತಿ ವಿಶ್ವಾಸಕ್ಕಾಗಲಿ ಅಥವಾ ಸಹಾಯವೆಂದಾಗಲಿ ಯಾರಿಗೂ ನೀಡುವುದಿಲ್ಲ.
ವೃಶ್ಚಿಕ
ವಿನಾಕಾರಣ ಸಿಡುಕುತನದಿಂದ ವರ್ತಿಸುವಿರಿ. ಯಾರೊಬ್ಬರ ಸಲಹೆಯನ್ನು ಒಪ್ಪದೆ ಸ್ವಂತ ನಿರ್ಧಾರಗಳಿಗೆ ಬದ್ಧರಾಗುವಿರಿ. ಆದರೆ ಎದುರಾಗುವ ಅಡ್ಡಿ ಆತಂಕಗಳನ್ನು ಬದಿಗೊತ್ತಿ ಆರಂಭಿಸುವ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣುವಿರಿ. ವಿದ್ಯಾರ್ಥಿಗಳು ಕೇವಲ ಹೆಚ್ಚಿನ ಪ್ರಯತ್ನದಿಂದ ಕಲಿಕೆಯಲ್ಲಿ ಮುಂದುವರೆಯಲು ಸಾಧ್ಯ. ಆತ್ಮವಿಶ್ವಾಸವೊಂದೇ ನಿಮ್ಮ ಬಲವಾಗುತ್ತದೆ. ನಿಮ್ಮ ಒರಟುತನದ ಕಾರಣ ಯಾರ ಸಹಾಯ ಸಹಕಾರವು ದೊರೆಯುವುದಿಲ್ಲ. ಒಂಟಿಯಾಗಿ ಜೀವನವನ್ನು ಎದುರಿಸಬೇಕಾಗುತ್ತದೆ. ಕುಟುಂಬದಲ್ಲಿ ಹಿರಿಯರ ಬೆಂಬಲ ದೊರೆಯುತ್ತದೆ. ಸಂಗಾತಿಯ ಸಹಕಾರ ನಿಮ್ಮ ಜೀವನದಲ್ಲಿ ಒಳ್ಳೆಯ ಬದಲಾವಣೆಗಳನ್ನು ತರುತ್ತದೆ. ಆರೋಗ್ಯದಲ್ಲಿ ಇದ್ದ ತೊಂದರೆಯೂ ದೂರವಾಗುತ್ತದೆ. ಪ್ರೀತಿ ವಿಶ್ವಾಸದಿಂದ ನಡೆದುಕೊಂಡರೆ ಉದ್ಯೋಗದಲ್ಲಿ ಧನಾತ್ಮಕ ಬದಲಾವಣೆಗಳು ಕಂಡುಬರುತ್ತದೆ. ಬಿಡುವಿಲ್ಲದ ದುಡಿಮೆ ನಿಮ್ಮದಾಗುತ್ತದೆ.
ಧನಸ್ಸು
ನಿಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿ ಬಿಗುವಿನ ಪರಿಸ್ಥಿತಿ ಎದುರಾಗುತ್ತದೆ. ನಿಮ್ಮ ಮನದ ಯೋಜನೆಗಳನ್ನು ಅನಾವಶ್ಯಕವಾಗಿ ಬದಲಾಯಿಸುವಿರಿ. ನಿಮ್ಮಲ್ಲಿ ದೃಢವಾದ ಮನಸ್ಸು ಇರುವುದಿಲ್ಲ. ಮಹಿಳೆಯರ ಆರೋಗ್ಯದಲ್ಲಿ ಏರಿಳಿತ ಉಂಟಾಗುತ್ತದೆ. ಕುಟುಂಬದ ಆಸ್ತಿಯ ವಿಚಾರದಲ್ಲಿ ವಾದ ವಿವಾದ ಉಂಟಾಗುತ್ತದೆ. ವಿದ್ಯಾರ್ಥಿಗಳು ಉನ್ನತ ಅಧ್ಯಯನದಲ್ಲಿ ತೊಡಗುತ್ತಾರೆ. ತೆಗೆದುಕೊಳ್ಳುವ ನಿರ್ಧಾರಗಳು ನಿಧಾನವೆನಿಸುತ್ತದೆ. ಉದ್ಯೋಗ ಬದಲಾಯಿಸುವ ಬದಲು ಉಪವೃತ್ತಿಯನ್ನು ಆರಂಭಿಸುವಿರಿ. ವಾಸಸ್ಥಳವನ್ನು ಬದಲಾಯಿಸುವ ಸೂಚನೆಗಳಿವೆ. ಸಂಗಾತಿ ಮತ್ತು ಮಕ್ಕಳ ಜೊತೆ ಸಣ್ಣಮಟ್ಟದ ಪ್ರವಾಸದಲ್ಲಿ ಸಂತಸ ಕಾಣುವಿರಿ. ಹಣಕಾಸಿನ ತೊಂದರೆ ಇರುವುದಿಲ್ಲ. ಆದರೆ ಆದಾಯದಲ್ಲಿ ಸ್ಥಿರತೆ ಇರುವುದಿಲ್ಲ. ಅನಾವಶ್ಯಕವಾಗಿ ಕೋಪಗೊಂಡರು ಹಿಂಜರಿಯದೆ ಕ್ಷಮೆ ಯಾಚಿಸುವಿರಿ. ಒಟ್ಟಾರೆ ಈ ಅವಧಿಯಲ್ಲಿ ಉತ್ತಮ ಬದಲಾವಣೆಗಳು ಕಂಡುಬರುತ್ತವೆ.
ಮಕರ
ಅರೆ ಮನಸ್ಸಿನಿಂದ ಕೆಲಸ ಕಾರ್ಯಗಳನ್ನು ಆರಂಭಿಸಿದರೂ ಎಲ್ಲವೂ ಸುಸೂತ್ರವಾಗಿ ಸಾಗಲಿದೆ. ಯಾವುದೇ ಭೇದ ಭಾವ ತೋರದೆ ಎಲ್ಲರಿಗೂ ಸಹಾಯ ಮಾಡುವಿರಿ. ನಿಮ್ಮ ಮನದ ಇಚ್ಛೆಯಂತೆ ಎಲ್ಲಾ ಕೆಲಸ ಕಾರ್ಯಗಳು ನಡೆಯುತ್ತವೆ. ನೀವು ಸಂತಸದಿಂದ ಇರುವುದಲ್ಲದೆ ಎಲ್ಲರನ್ನು ಸಂತಸಕ್ಕೂ ಕಾರಣರಾಗುವಿರಿ. ವಿದ್ಯಾರ್ಥಿಗಳು ಕಷ್ಟಪಟ್ಟು ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಕುಟುಂಬದ ಹಿರಿಯರ ಆರೋಗ್ಯದಲ್ಲಿ ಚೇತರಿಕೆ ಕಂಡುಬರುತ್ತದೆ. ಆತ್ಮೀಯರ ಜೊತೆ ವ್ಯಾಪಾರ ವ್ಯವಹಾರವನ್ನು ಆರಂಭಿಸುವ ಸಾಧ್ಯತೆಗಳಿವೆ. ಉದ್ಯೋಗದಲ್ಲಿ ಸಹೋದ್ಯೋಗಿಗಳ ಸಹಾಯ ದೊರೆಯಲಿದೆ. ಮಾತನ್ನು ಕಡಿಮೆ ಮಾಡಿ ಕೆಲಸದಲ್ಲಿ ತೊಡಗುವುದು ಉತ್ತಮ. ಯಾರಿಗೂ ಹಣದ ಸಹಾಯ ಮಾಡುವುದಿಲ್ಲ ಹಾಗೆಯೇ ಬೇರೆಯವರಿಂದ ಹಣವನ್ನು ಪಡೆಯುವುದಿಲ್ಲ
ಕುಂಭ
ಕೆಲಸ ಕಾರ್ಯಗಳಲ್ಲಿ ಯಶಸ್ಸು ಗಳಿಸುವವರೆಗೂ ವಿಶ್ರಾಂತಿ ಪಡೆಯುವುದಿಲ್ಲ. ನಿಮ್ಮ ಮನಸ್ಸು ಯಾರಿಗೂ ಅರ್ಥವಾಗುವುದಿಲ್ಲ. ಆಡುವ ಮಾತು ಕಡಿಮೆಯಾದರೂ ಅದರ ಅರ್ಥವೂ ಮಹತ್ತರವಾಗಿರುತ್ತದೆ. ಆತ್ಮವಿಶ್ವಾಸದ ಕೊರತೆ ಇದ್ದರೂ ಗೆಲ್ಲುವ ಛಲವಿರುತ್ತದೆ. ನೀವು ಆಡುವ ಮಾತುಗಳಲ್ಲಿ ನಾನಾ ಅರ್ಥಗಳು ತುಂಬಿರುತ್ತವೆ. ಹಣಕಾಸಿನ ವಿಚಾರದಲ್ಲಿ ಮಾನಸಿಕ ಒತ್ತಡವಿರುತ್ತದೆ. ಉತ್ತಮ ಆದಾಯವಿರುತ್ತದೆ. ಆದರೆ ಇರುವ ಹಣವನ್ನು ಖರ್ಚು ಮಾಡುವ ವಿಧಾನ ಸರಿ ಇರುವುದಿಲ್ಲ. ಕುಟುಂಬದಲ್ಲಿ ನಿಮ್ಮ ತಪ್ಪನ್ನು ಮರೆತು ನಿಮ್ಮೊಂದಿಗೆ ಸಂತಸದಿಂದ ಬಾಳುತ್ತಾರೆ. ಆರೋಗ್ಯದ ಬಗ್ಗೆ ಗಮನ ನೀಡುವುದು ಒಳ್ಳೆಯದು. ಉದ್ಯೋಗದಲ್ಲಿ ಬುದ್ದಿವಂತಿಕೆಯಿಂದ ನಿಮ್ಮ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸುವಿರಿ. ಜಗಳ ಕದನಗಳಿಗೆ ಒಳಗಾಗದೆ ಬುದ್ಧಿವಂತಿಕೆಯಿಂದ ವಿವಾದಗಳನ್ನು ಪರಿಹರಿಸುವಿರಿ.
ಮೀನ
ಹೊಸದಾಗಿ ಯಾವುದೇ ಕೆಲಸವನ್ನು ಆರಂಭಿಸುವುದಿಲ್ಲ. ಮನಸ್ಸಿನಲ್ಲಿ ಸದಾಕಾಲ ಆತಂಕದ ಮನೋಭಾವನೆ ಇರುತ್ತದೆ. ಆದರೆ ನಿಮ್ಮ ಪ್ರಯತ್ನವನ್ನು ಎಂದಿಗೂ ಕೈಬಿಡುವುದಿಲ್ಲ. ಇದರಿಂದಾಗಿ ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಗಳಿಸುವಿರಿ. ನಿಮ್ಮ ಮನಸ್ಸಿನಲ್ಲಿ ಎಲ್ಲರ ಬಗ್ಗೆಯೂ ಒಳ್ಳೆಯ ಭಾವನೆ ಇರುತ್ತದೆ. ಬೇರೆಯವರ ಸಲಹೆ ಸೂಚನೆಯನ್ನು ಹಗುರವಾಗಿ ತೆಗೆದುಕೊಳ್ಳುವಿರಿ. ಮಕ್ಕಳು ವಿದ್ಯಾಭ್ಯಾಸವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ನಿಮ್ಮ ಸಹಕಾರ ಮತ್ತು ಸ್ಪೂರ್ತಿಯು ನಿಮ್ಮ ಮಕ್ಕಳಿಗೆ ಉತ್ತಮ ಬಾಳ್ವೆಯನ್ನು ನೀಡುತ್ತದೆ. ಯಾರ ಜೊತೆಯೂ ಅನಾವಶ್ಯಕವಾದ ವಾದದಲ್ಲಿ ತೊಡಗುವುದಿಲ್ಲ. ನಿಮ್ಮ ಮನಸ್ಸಿನಲ್ಲಿ ಹಲವು ಧನಾತ್ಮಕ ಚಿಂತನೆಗಳು ಮೂಡುತ್ತವೆ. ಆದರೆ ಅದನ್ನು ಪ್ರಾಯೋಗಿಕವಾಗಿ ಮಾಡಲು ಸಾಧ್ಯವಾಗುವುದಿಲ್ಲ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).