ದೇವಿಯ ಋತುಚಕ್ರವನ್ನು ಹಬ್ಬವಾಗಿ ಆಚರಿಸುವ ಏಕೈಕ ಧಾರ್ಮಿಕ ಸ್ಥಳ ಅಸ್ಸಾಂ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಾಲಯ
Oct 31, 2024 10:56 PM IST
ದೇವಿಯ ಋತುಚಕ್ರವನ್ನು ಹಬ್ಬವಾಗಿ ಆಚರಿಸುವ ಅಸ್ಸಾಂ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಾಲಯ
ಅಸ್ಸಾಂ ಗುವಾಹಟಿಯಲ್ಲಿರುವ ಕಾಮಾಕ್ಯ ದೇವಾಲಯದಲ್ಲಿ ಪ್ರತಿ ವರ್ಷ ಜೂನ್ ಸಮಯದಲ್ಲಿ ದೇವಿ ಋತುಚಕ್ರವನ್ನು ಆಚರಿಸಲಾಗುತ್ತದೆ. ಈ ಸಮಯದಲ್ಲಿ 3 ದಿನಗಳ ಕಾಲ ದೇವಸ್ಥಾನದವನ್ನು ಮುಚ್ಚಿ ನಂತರ ಶುಚಿಕೊಳಿಸಿ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ. ಈ ಸಮಯದಲ್ಲಿ ದೇವಾಲಯದ ಪಕ್ಕದಲ್ಲಿರುವ ನೀರು ಕೆಂಪು ಬಣ್ಣಕ್ಕೆ ತಿರುಗುತ್ತದೆ. (ಬರಹ:ಎಚ್. ಸತೀಶ್, ಜ್ಯೋತಿಷಿ)
ಭಾರತದಲ್ಲಿ ಬಹಳಷ್ಟು ಪ್ರಸಿದ್ಧ ದೇವಾಲಯಗಳಿವೆ. ಕೆಲವು ವಾಸ್ತುಶಿಲ್ಪಕ್ಕೆ ಹೆಸರಾದರೆ ಕೆಲವು ಮಹಿಮೆಗಳಿಗೆ ಹೆಸರಾಗಿರುತ್ತದೆ. ಕೆಲವೊಂದು ನಿಗೂಢತೆಗೆ ಹೆಸರಾದರೆ ಇನ್ನೂ ಕೆಲವರು ಅಪರೂಪದ ಆಚರಣೆಗೆ ಹೆಸರಾಗಿರುತ್ತದೆ. ಅಸ್ಸಾಂನ ಕಾಮಾಕ್ಯ ದೇವಾಲಯದಲ್ಲಿ ದೇವಿಯ ಋುತುಚಕ್ರವನ್ನು ಪ್ರತಿ ವರ್ಷ ಹಬ್ಬದಂತೆ ಆಚರಿಸಲಾಗುತ್ತದೆ. ಈ ದೇವಾಲಯದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
ತಾಜಾ ಫೋಟೊಗಳು
ಗುವಾಹಟಿಯ ನೀಲಾಚಲ ಬೆಟ್ಟದಲ್ಲಿರುವ ಕಾಮಾಕ್ಯ ದೇವಾಲಯ
ದಶಮಹಾವಿದ್ಯೆಯಲ್ಲಿ ಬರುವ ದೇವತೆಗಳ ನಡುವೆ ಇರುವ ದೇವತೆಯೇ ಕಾಮಾಕ್ಯದೇವಿ. ಈ ದೇವಾಲಯವು ಅಸ್ಸಾಂ ರಾಜ್ಯದಲ್ಲಿದೆ. ಗುವಾಹಟಿಯ ನೀಲಾಚಲ ಬೆಟ್ಟದಲ್ಲಿ ಕಾಮಾಕ್ಯ ದೇವಿಯ ದೇವಾಲಯವಿದೆ. ಇಲ್ಲಿ ತಾಂತ್ರಿಕ ಪೂಜೆಗಳನ್ನು ಹೆಚ್ಚಾಗಿ ಮಾಡಲಾಗುತ್ತದೆ. ಇದು ಭಾರತದ ಪ್ರಮುಖ ಯಾತ್ರಾಸ್ಥಳವಾಗಿದೆ. ಈ ಈ ದೇವಾಲಯವನ್ನು 1565ರಲ್ಲಿ ಚಿಲಾರಾಯ್ ಎನ್ನುವವರು ನಿರ್ಮಿಸಿದರು. ಇಂದು ಈ ದೇವಾಲಯ ಭಾರತದ ಪ್ರಮುಖ ದೇವಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಕಾಮಾಕ್ಯ ದೇವಾಲಯದ ಶಿಖರವು ಜೇನುಗೂಡಿನ ಆಕಾರದಲ್ಲಿದೆ. ದೇವಾಲಯದ ಹೊರ ಭಾಗದಲ್ಲಿ ಅನೇಕ ದೇವಾನುದೇವತೆಗಳ ಶಿಲ್ಪಕಲಾಕೃತಿಗಳ ಫಲಕಗಳು ಮತ್ತು ಚಿತ್ರಗಳಿವೆ. ಈ ದೇವಾಲಗಳ ಅಂಗಳವು ವಿಶಾಲವಾಗಿದ್ದು ಆಯತಾಕಾರದಲ್ಲಿದೆ. ಇದನ್ನು ವಾಸ್ತುವಿನ ಪ್ರಕಾರ ನಿರ್ಮಿಸಲಾಗಿದ್ದು ಪ್ರಮುಖ ಪೂಜಾಕಾರ್ಯಗಳಿಗೆ ಬಳಸಲಾಗುತ್ತದೆ. ಆದರೆ ಸಾಮಾನ್ಯ ತೀರ್ಥ ಯಾತ್ರಾರ್ಥಿಗಳಿಂದ ಬಳಸಲಾಗುವುದಿಲ್ಲ. ದೇವಾಲಯದ ಮಧ್ಯ ಭಾಗವು ಚೌಕಾಕಾರದಲ್ಲಿದೆ. ಸಭಾಂಗಣದ ಗೋಡೆಗಳಲ್ಲಿ ಭಗವಾನ್ ವಿಷ್ಣುವಿನ ಶಿಲ್ಪಾಕೃತಿಗಳಿವೆ. ಇದೇ ಸ್ಥಳದಲ್ಲಿ ಹಲವು ಶಾಸನಗಳನ್ನು ನಾವು ಕಾಣಬಹುದಾಗಿದೆ. ಗುಹೆಯ ರೂಪದಲ್ಲಿ ದೇವಸ್ಥಾನದ ಗರ್ಭಗುಡಿಗೆ ಪ್ರವೇಶವನ್ನು ಹೊಂದಿದ್ದು, ಅದು ನೆಲದಡಿಯ ಚಿಲುಮೆಯನ್ನು ಹೊಂದಿದೆ. ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಕಾಮಾಕ್ಯ ತಾಯಿಯ ಋತುಚಕ್ರವನ್ನು ಆಚರಿಸಲಾಗುತ್ತದೆ. ಈ ವೇಳೆ ದೇವಾಲಯದ ಸಮೀಪದಲ್ಲಿರುವ ನೀರು ಕೆಂಪು ಬಣ್ಣದಲ್ಲಿ ಹರಿಯುತ್ತದೆ. ಈಕೆಯನ್ನು ಶಿವನ ಕಿರಿಯ ಸತಿಯೆಂದು ಹೇಳಲಾಗುತ್ತದೆ.
ಸತಿಯ ಯೋನಿ ಭಾಗ ಬಿದ್ದ ಸ್ಥಳವಿದು
ಈ ದೇವಾಲಯದಲ್ಲಿ ಮಹಿಳೆಯರು ಪೂಜೆ ಸಲ್ಲಿಸಿ, ತಮ್ಮ ಆಸೆಯನ್ನು ದೇವಿ ಬಳಿ ಬೇಡಿಕೊಂಡಲ್ಲಿ ಶೀಘ್ರವೇ ಆಸೆ ನೆರವೇರುತ್ತದೆ. ಈ ದೇವಾಲಯದ ಆವರಣದಲ್ಲಿ ಹೆಣ್ಣು ಮಕ್ಕಳಿಗೆ ವಿಶೇಷ ಗೌರವವನ್ನು ನೀಡಲಾಗುತ್ತದೆ. ಇದಕ್ಕೆ ಕಾರಣವೂ ಇದೆ. ಒಮ್ಮೆ ಸತಿಗೆ ಶಿವನನ್ನು ವಿವಾಹವಾಗುವ ಬಯಕೆ ಉಂಟಾಗುತ್ತದೆ. ಕಾಳಿಕಾ ಪುರಾಣದ ಪ್ರಕಾರ, ಕಾಮಾಕ್ಯ ದೇವಸ್ಥಾನದಲ್ಲಿ ಸತಿ, ಪರಮೇಶ್ವರನನ್ನು ಭೇಟಿ ಮಾಡುತ್ತಿದ್ದಳು. ಆದರೆ ಒಮ್ಮೆ ಸತಿ ಅಕಾಲಿಕ ಮರಣ ಹೊಂದಿದಾಗ ಶಿವನು ಸತಿಯ ಕಳೇಬರದೊಂದಿಗೆ ತಾಂಡವ ನೃತ್ಯ ಮಾಡುತ್ತಾನೆ. ಸತಿಯ ದೇವಿಯ ದೇಹ ಭಾಗಗಳು ಬಿದ್ದ ಸ್ಥಳಗಳು ಇಂದು ಶಕ್ತಿ ಪೀಠಗಳಾಗಿ ಪ್ರಸಿದ್ಧಿಯಾಗಿದೆ. ಸತಿಯ ಯೋನಿ ಭಾಗ ಬಿದ್ದ ಸ್ಥಳವೇ ಕಾಮಾಕ್ಯ ದೇವಿಯ ನೆಲೆಯಾಗುತ್ತದೆ. ದೇವಿ ಕಾಳಿಯೊಂದಿಗೆ ಕಾಮಾಕ್ಯದೇವಿಯನ್ನು ಹೋಲಿಸಲಾಗುತ್ತದೆ.
ಮತ್ತೊಂದು ಕಥೆಯ ಅನ್ವಯ ಬಿಹಾರದ ರಾಜಮನೆತನದವರ ಮೇಲೆ ಕಾಮಾಕ್ಯದೇವಿಯ ಅವಕೃಪೆ ಇರುತ್ತದೆ. ಅವರ ಮೇಲೆ ದೇವಿಯ ಶಾಪ ಇರುತ್ತದೆ. ಇಂದಿಗೂ ರಾಜ ಮನೆತನದ ವಂಶಸ್ಥರು ಕಾಮಾಕ್ಯ ಬೆಟ್ಟದ ಬಳಿ ಸಾಗುವಾಗ ಬೆಟ್ಟವನ್ನು ಸಹ ಕಣ್ಣೆತ್ತಿ ನೋಡುವುದಿಲ್ಲ. ಆದರೆ ಈ ಕುಟುಂಬಸ್ಥರ ಬೆಂಬಲವಿಲ್ಲದೆ ದೇವಾಲಯದ ಪ್ರಗತಿ ಇರುವುದಿಲ್ಲ. ದಿನ ಕಳೆದಂತೆ ರಾಜ ಜಯದ್ವಜರ ನೇತೃತ್ವದಲ್ಲಿ ಅಹೋಮಾಗಳು ಅಸ್ಸಾಂ ರಾಜ್ಯವನ್ನು ಯುದ್ದದಲ್ಲಿ ಗೆಲ್ಲುತ್ತಾರೆ. ಇವರು ದೇವಾಲಯದ ಬೆಳವಣಿಗೆಯಲ್ಲಿ ಆಸಕ್ತಿ ತೋರಿಸಿ ದೇವಾಲಯದ ಜೀರ್ಣೋದ್ದಾರ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇವರು ಶಕ್ತ ಪಂಥದ ಮಹಂತರಾದ ಕೃಷ್ಣಾರಾಮ ಭಟ್ಟಾಚಾರ್ಯರನ್ನು ತನ್ನ ಗುರುವಾಗಿ ಸ್ವೀಕರಿಸುತ್ತಾರೆ. ದೇವಾಲಯದ ನಿರ್ವಹಣೆಯ ಉಸ್ತುವಾರಿ ಇವರಿಗೆ ದೊರೆಯುತ್ತದೆ.
ತಾಂತ್ರಿಕ ಪೂಜೆಗೆ ಹೆಸರಾದ ದೇವಾಲಯ
ಈ ದೇವಾಲಯದಲ್ಲಿ ತಾಂತ್ರಿಕ ಪೂಜೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. ಇಲ್ಲಿ ಪ್ರತಿ ವರ್ಷ ಅಂಬುಬಾಚಿ ಮೇಳ ನಡೆಯುತ್ತದೆ. ಲಕ್ಷಾಂತರ ಭಕ್ತರು ಈ ಆಚರಣೆಯಲ್ಲಿ ಭಾಗವಹಿಸುತ್ತಾರೆ. ಮಾನಸ ಪೂಜೆಯು ಇಲ್ಲಿನ ಮತ್ತೊಂದು ಮುಖ್ಯ ಪೂಜೆಯಾಗಿದೆ. ನವರಾತ್ರಿಯಲ್ಲಿ ಕಾಮಾಕ್ಯ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ಕ್ಷೇತ್ರದಲ್ಲಿ ಐದು ದಿನಗಳ ಕಾಲ ಉತ್ಸವ ನಡೆಯುತ್ತದೆ. ಶುಕ್ಲಪಕ್ಷದ ಅಷ್ಟಮಿಯ ದಿನದಂದು ಸೇವೆ ಸಲ್ಲಿಸಿದಲ್ಲಿ ಅಪಮೃತ್ಯು ಪರಿಹಾರವಾಗುತ್ತದೆ. ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ಮಾಡುವ ಪೂಜೆಯಿಂದ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ.
ಬರಹ: ಎಚ್. ಸತೀಶ್, ಜ್ಯೋತಿಷಿ
ಮೊಬೈಲ್: 8546865832