2025ರ ಅಮಾವಾಸ್ಯೆ ತಿಥಿಗಳ ವಿವರ: ಜನವರಿಯಿಂದ ಡಿಸೆಂಬರ್‌ವರೆಗೆ ಅಮಾವಾಸ್ಯೆ ಯಾವಾಗ; ಇಲ್ಲಿದೆ ಮಾಹಿತಿ
Dec 23, 2024 03:20 PM IST
2025ರ ಅಮಾವಾಸ್ಯೆ ವಿವರ
- ಹಿಂದೂ ಧರ್ಮದಲ್ಲಿ ಅಮಾವಾಸ್ಯೆ ಆಚರಣೆಗೆ ಆಳವಾದ ಆಧ್ಯಾತ್ಮಿಕ ಮಹತ್ವವಿದೆ. ಪೂರ್ವಜರನ್ನು ಗೌರವಿಸುವುದು ಮತ್ತು ಅವರ ಆಶೀರ್ವಾದ ಪಡೆಯುವುದು ಅಮಾವಾಸ್ಯೆ ವ್ರತಾಚರಣೆಯ ಉದ್ದೇಶವಾಗಿದೆ. ಪ್ರತಿವರ್ಷ ತಿಂಗಳಿಗೆ ಒಂದರಂತೆ 12 ಅಮಾವಾಸ್ಯೆ ಬರುತ್ತದೆ. 2025ರಲ್ಲಿ ಜನವರಿಯಿಂದ ಡಿಸೆಂಬರ್‌ವರೆಗೆ ಅಮಾವಾಸ್ಯೆ ಯಾವಾಗ ನೋಡಿ.
ಹಿಂದೂ ಸಂಸ್ಕೃತಿಯಲ್ಲಿ ಪೂಜೆ, ವ್ರತಾಚರಣೆಗಳಂತಹ ಧಾರ್ಮಿಕ ಕಾರ್ಯಕ್ರಮಗಳಿಗೆ ಹೆಚ್ಚು ಪ್ರಾಮುಖ್ಯ ನೀಡಲಾಗುತ್ತದೆ. ಹಿಂದೂ ಪಂಚಾಂಗದ ಪ್ರತಿ ಮಾಸದಲ್ಲೂ ಬರುವ ಸಂಕಷ್ಟಿ, ಏಕಾದಶಿ, ಅಮಾವಾಸ್ಯೆ ಮುಂತಾದವುಗಳನ್ನು ಭಕ್ತರು ಬಹಳ ಭಕ್ತಿಯಿಂದ ಆಚರಿಸುತ್ತಾರೆ. ಹಿಂದೂ ಧರ್ಮದಲ್ಲಿ ಅಮಾವಾಸ್ಯೆಗೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಇದು ಪಿತೃಗಳಿಗೆ ಸಂಬಂಧಿಸಿದ ಆಚರಣೆ ಎಂಬ ನಂಬಿಕೆಯಿದೆ. ಕೃಷ್ಣ ಪಕ್ಷದ ಕೊನೆಯ ದಿನವಾದ ಅಮಾವಾಸ್ಯೆಯಂದು ಚಂದ್ರನು ಆಕಾಶದಲ್ಲಿ ಅದೃಶ್ಯವಾಗುವ ದಿನ ಇದಾಗಿದೆ.
ತಾಜಾ ಫೋಟೊಗಳು
ಈ ದಿನದಂದು ಮಾಡುವ ವ್ರತಾಚರಣೆ, ಪೂಜೆ ಮತ್ತು ದಾನಗಳಿಂದ ಪೂರ್ವಜರ ಆತ್ಮಗಳಿಗೆ ಶಾಂತಿ ದೊರಕುತ್ತದೆ ಮತ್ತು ವಿಶೇಷ ಆಶೀರ್ವಾದಗಳು ದೊರಕುತ್ತವೆ ಎಂಬ ನಂಬಿಕೆಯಿದೆ. ಅಮಾವಾಸ್ಯೆಗೂ ಪಿತೃ ಪಕ್ಷಕ್ಕೂ ನಿಕಟವಾದ ಸಂಬಂಧವಿದೆ ಎಂದು ಹೇಳಲಾಗುತ್ತದೆ. ಏಕೆಂದರೆ ಆ ದಿನದಂದು ನಮ್ಮನ್ನು ಅಗಲಿದವರ ಆತ್ಮಗಳು ಭೂಮಿಗೆ ಭೇಟಿ ನೀಡುತ್ತವೆ ಎಂದು ಹೇಳಲಾಗುತ್ತದೆ.
ಹಾಗಾಗಿ ಆ ದಿನದಂದು ಶ್ರಾದ್ಧ, ದಾನ ಮುಂತಾದ ಆಚರಣೆಗಳನ್ನು ಮಾಡಿ ಅವರನ್ನು ಗೌರವಿಸುವುದರಿಂದ ಅವರ ಆತ್ಮಕ್ಕೆ ಶಾಂತಿ ದೊರಕುತ್ತದೆ. ಅದರಿಂದ ಅವರು ನಮ್ಮನ್ನು ಹರಸುತ್ತಾರೆ ಎಂದು ಹೇಳಲಾಗಿದೆ. ಹಿಂದೂ ಕ್ಯಾಲೆಂಡರ್‌ನ ಪ್ರತಿ ಮಾಸದಲ್ಲಿ ಬರುವ ಎಲ್ಲಾ ಅಮಾವಾಸ್ಯೆಗಳಿಗೆ ವಿಶೇಷ ಅರ್ಥ ಮತ್ತು ಪ್ರಾಮುಖ್ಯತೆಯಿದೆ. ಮುಂದಿನ ವರ್ಷ 2025ರಲ್ಲಿ ಯಾವ ದಿನಾಂಕದಂದು ಅಮಾವಾಸ್ಯೆಗಳು ಬರುತ್ತವೆ ಮತ್ತು ಅದರ ಆಚರಣೆ ಹಾಗೂ ಮಹತ್ವಗಳೇನು ತಿಳಿಯಲು ಮುಂದೆ ಓದಿ.
2025ರ ಅಮಾವಾಸ್ಯೆ ತಿಥಿಯ ದಿನಾಂಕಗಳ ಪಟ್ಟಿ
ಹಿಂದೂ ಪಂಚಾಂಗದ ಪ್ರಕಾರ ಪ್ರತಿ ವರ್ಷ ಒಟ್ಟು 12 ಅಮಾವಾಸ್ಯೆಗಳನ್ನು ಆಚರಿಸಲಾಗುತ್ತದೆ. ಕೆಲವು ವಾರದಂದು ಬರುವ ಅಮಾವಾಸ್ಯೆಯನ್ನು ವಿಶೇಷ ಹೆಸರಿನಿಂದ ಕರೆಯಲಾಗುತ್ತದೆ. ಕ್ರೋಧಿ ಸಂವತ್ಸರದ, ಮಾಘ ಮಾಸದ ಅಮಾವಾಸ್ಯೆಯಿಂದ ಹಿಡಿದು ವಿಶ್ವಾವಸು ಸಂವತ್ಸರದ, ಪುಷ್ಯ ಮಾಸದವರೆಗಿನ ಅಮಾವಾಸ್ಯೆ ತಿಥಿಯ ದಿನಾಂಕಗಳ ಪಟ್ಟಿ (ಅಂದರೆ ಜನವರಿ 2025 ರಿಂದ ಡಿಸೆಂಬರ್ 2025ರವರೆಗಿನ ಅಮಾವಾಸ್ಯೆ ದಿನಗಳ ಪಟ್ಟಿ) ಹೀಗಿದೆ.
- ಜನವರಿ 29, 2025 ಬುಧವಾರ, ಪುಷ್ಯ ಅಮಾವಾಸ್ಯೆ
- ಫೆಬ್ರವರಿ 27, 2025 ಗುರುವಾರ, ಮಾಘ ಅಮಾವಾಸ್ಯೆ
- ಮಾರ್ಚ್ 29, 2025 ಶನಿವಾರ, ಫಾಲ್ಗುಣ ಅಮಾವಾಸ್ಯೆ
- ಏಪ್ರಿಲ್ 27, 2025 ಭಾನುವಾರ, ಚೈತ್ರ ಅಮಾವಾಸ್ಯೆ
- ಮೇ 27, 2025 ಮಂಗಳವಾರ, ವೈಶಾಖ ಅಮಾವಾಸ್ಯೆ
- ಜೂನ್ 25, 2025 ಬುಧವಾರ, ಜ್ಯೇಷ್ಠ ಅಮಾವಾಸ್ಯೆ
- ಜುಲೈ 24, 2025 ಗುರುವಾರ, ಆಷಾಢ ಅಮಾವಾಸ್ಯೆ
- ಆಗಸ್ಟ್ 23, 2025 ಶನಿವಾರ, ಶ್ರಾವಣ ಅಮಾವಾಸ್ಯೆ
- ಸೆಪ್ಟೆಂಬರ್ 21, 2025 ಭಾನುವಾರ, ಭಾದ್ರಪದ ಅಮಾವಾಸ್ಯೆ
- ಅಕ್ಟೋಬರ್ 21, 2025 ಮಂಗಳವಾರ, ಆಶ್ವಯಜ ಅಮಾವಾಸ್ಯೆ
- ನವೆಂಬರ್ 20, 2025 ಗುರುವಾರ, ಕಾರ್ತಿಕ ಅಮಾವಾಸ್ಯೆ
- ಡಿಸೆಂಬರ್ 19, 2025 ಶುಕ್ರವಾರ, ಮಾರ್ಗಶಿರ ಅಮಾವಾಸ್ಯೆ
ಇದನ್ನೂ ಓದಿ: 12 ವರ್ಷಗಳ ನಂತರ ಮೀನ ರಾಶಿಯಲ್ಲಿ ಲಕ್ಷ್ಮೀನಾರಾಯಣ ರಾಜಯೋಗ: 2025 ಈ 3 ರಾಶಿಯವರಿಗೆ ದೊರೆಯಲಿದೆ ಲಕ್ಷ್ಮೀ ಕಟಾಕ್ಷ
ವಿಶೇಷ ಹೆಸರಿನ ಅಮಾವಾಸ್ಯೆಗಳು
ಅಮಾವಾಸ್ಯೆ ತಿಥಿಯು ಆಳವಾದ ಆಧ್ಯಾತ್ಮಿಕ ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ದಿನದಂದು ವಿಶೇಷ ಪೂಜೆ, ದಾನ ಮತ್ತು ಉಪವಾಸವನ್ನು ಮಾಡುವುದರಿಂದ ಜೀವನದಲ್ಲಿ ಸುಖ, ಶಾಂತಿ ಲಭಿಸುತ್ತದೆ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ನಿರ್ದಿಷ್ಟ ವಾರದಂದು ಬರುವ ಅಮಾವಾಸ್ಯೆಗೆ ವಿಶೇಷ ಪ್ರಾಮುಖ್ಯವಿದೆ.
ಸೋಮಾವತಿ ಅಮವಾಸ್ಯೆ: ಸೋಮವಾರದಂದು ಅಮಾವಾಸ್ಯೆಯು ಬಂದರೆ ಅದನ್ನು ಸೋಮಾವತಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಇದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನದಂದು ಉಪವಾಸವನ್ನು ಆಚರಿಸಿ, ಶಿವ ಮತ್ತು ಪೂರ್ವಜರನ್ನು ಪೂಜಿಸಲಾಗುತ್ತದೆ.
ಭೌಮಾವತಿ ಅಮಾವಾಸ್ಯೆ: ಅಮಾವಾಸ್ಯೆಯು ಮಂಗಳವಾರದಂದು ಬಂದರೆ ಅದನ್ನು ಭೌಮಾವತಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಇದು ದುರಾದೃಷ್ಟಗಳನ್ನು ಕಡಿಮೆ ಮಾಡುತ್ತದೆ ಮತ್ತು ಶಕ್ತಿಯನ್ನು ನೀಡುತ್ತದೆ ಎಂದು ನಂಬಲಾಗಿದೆ.
ಶನಿ ಅಮಾವಾಸ್ಯೆ: ಶನಿವಾರದಂದು ಬರುವ ಅಮಾವಾಸ್ಯೆಯನ್ನು ಶನಿ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ. ಅಂದು ಶನಿ ದೇವರನ್ನು ಪೂಜಿಸಲಾಗುತ್ತದೆ ಮತ್ತು ಗ್ರಹಗಳ ಪ್ರಭಾವದಿಂದ ಉಂಟಾಗುವ ಅಡೆತಡೆಗಳ ನಿವಾರಣೆಗೆ ಶನಿ ಅಮಾವಾಸ್ಯೆ ವ್ರತಾಚರಣೆಯು ಹೆಚ್ಚು ಪ್ರಾಮುಖ್ಯತೆಯನ್ನು ಪಡೆದಿದೆ.
ಅಮಾವಾಸ್ಯೆ ಆಚರಿಸುವುದು ಹೇಗೆ?
ಅಮಾವಾಸ್ಯೆ ವ್ರತಾಚರಣೆಯು ಪಿತೃ ಪೂಜೆ, ದಾನ ಮತ್ತು ದೇವರ ಪೂಜೆಯನ್ನು ಒಳಗೊಂಡಿದೆ.
ಪಿತೃ ಪೂಜೆ: ಅಮಾವಾಸ್ಯೆಯ ದಿನದಂದು ಪೂರ್ವಜರು ಭೂಮಿಗೆ ಭೇಟಿ ನೀಡುತ್ತಾರೆ ಎಂದು ನಂಬಲಾಗಿದೆ. ಆ ದಿನ ಶ್ರಾದ್ಧ, ತರ್ಪಣ, ನೀಡುವುದರಿಂದ ಅವರ ಅತ್ಮಗಳಿಗೆ ಶಾಂತಿಯನ್ನು ತರುತ್ತದೆ.
ಉಪವಾಸ: ಅಮಾವಾಸ್ಯೆಯ ಉಪವಾಸ ವ್ರತವು ಮನಸ್ಸು ಮತ್ತು ದೇಹ ಎರಡನ್ನೂ ಶುದ್ಧೀಕರಿಸುತ್ತದೆ. ಮತ್ತು ಜೀವನದಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ ಎಂಬ ನಂಬಿಕೆಯಿದೆ.
ದಾನಗಳು: ಅಮಾವಾಸ್ಯೆಯ ದಿನದಂದು ಅಗತ್ಯವಿರುವವರಿಗೆ ಅನ್ನ, ಬಟ್ಟೆ, ಆಹಾರ ಮತ್ತು ನೀರನ್ನು ದಾನ ಮಾಡುವುದರಿಂದ ಪೂರ್ವಜರ ಆಶೀರ್ವಾದ ದೊರಕುತ್ತದೆ. ಧನಾತ್ಮಕತೆ ಹೆಚ್ಚುತ್ತದೆ.
ದೇವರ ಪೂಜೆ: ಭಕ್ತರು ದೇವರ ಅನುಗ್ರಹ ಪಡೆಯಲು ಅಮಾವಾಸ್ಯೆಯ ದಿನದಂದು ಭಗವಾನ್ ಶಿವ, ವಿಷ್ಣು ಮತ್ತು ಸೂರ್ಯ ದೇವನನ್ನು ಪೂಜಿಸುತ್ತಾರೆ. ಇದರಿಂದ ಸಮೃದ್ಧಿ ಹೆಚ್ಚಾಗುತ್ತದೆ ಎಂಬ ನಂಬಿಕೆಯಿದೆ.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)