Bhagavad Gita: ದೇಹ, ಆತ್ಮವನ್ನು ಒಟ್ಟಿಗಿರಿಸಲು ಮನುಷ್ಯ ಯೋಚಿಸಬೇಕಾಗಿಲ್ಲ; ಭಗವದ್ಗೀತೆಯಲ್ಲಿನ ಕಾರಣ ಹೀಗಿದೆ
Aug 10, 2024 05:00 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita: ದೇಹ ಮತ್ತು ಆತ್ಮವನ್ನು ಒಟ್ಟಿಗಿರಿಸಲು ಮನುಷ್ಯ ಯೋಚಿಸಬೇಕಾಗಿಲ್ಲ ಯಾಕೆ ಎಂಬುದನ್ನು ಭಗವದ್ಗೀತೆಯ 12 ನೇ ಅಧ್ಯಾಯದ ಕೊನೆಯ ಹಾಗೂ 20 ನೇ ಶ್ಲೋಕದಲ್ಲಿ ತಿಳಿಯಿರಿ.
ಅಧ್ಯಾಯ 12 - ಭಕ್ತಿ ಸೇವೆ -ಶ್ಲೋಕ - 20
ಯೇ ತು ಧರ್ಮಾಮೃತಮಿದಂ ಯಥೋಕ್ತಂ ಪರ್ಯುಪಾಸತೇ |
ಶ್ರದ್ದಧಾನಾ ಮತ್ಪರಮಾ ಭಕ್ತಾಸ್ತೇತೀವ ಮೇ ಪ್ರಿಯಾಃ ||20|
ಅನುವಾದ: ಯಾರು ಭಕ್ತಿಸೇವೆಯ ಈ ಅಮೃತಮಾರ್ಗವನ್ನು ಹಿಡಿದು ಶ್ರದ್ಧೆಯಿಂದ ನನ್ನನ್ನೇ ಪರಮ ಗುರಿಯನ್ನಾಗಿ ಮಾಡಿಕೊಳ್ಳುವರೋ ಅವರು ನನಗೆ ಬಹು ಪ್ರಿಯರು.
ತಾಜಾ ಫೋಟೊಗಳು
ಭಾವಾರ್ಥ: ಈ ಅಧ್ಯಾಯದಲ್ಲಿ ಎರಡನೆಯ ಶ್ಲೋಕದಿಂದ ಕಡೆಯವರೆಗೆ - ಮಯ್ಯಾವೇಶ್ಯ ಮನೋ ಯೇ ಮಾಮ್ (ನನ್ನಲ್ಲಿ ಮನಸ್ಸನ್ನು ಸ್ಥಿರಗೊಳಿಸಿ) ಎಂಬಲ್ಲಿಂದ ಯೇ ತು ಧರ್ಮಾಮೃತಮಿದಮ್ (ನಿತ್ಯ ನಿರತತೆಯ ಈ ಧರ್ಮ) ವರೆಗೆ ಪರಮ ಪ್ರಭುವು ಆತನ ಬಳಿಸಾರಲು ಬೇಕಾದ ಅಲೌಕಿಕ ಸೇವೆಯ ಪ್ರಕ್ರಿಯೆಯನ್ನು ವಿವರಿಸಿದ್ದಾನೆ. ಇಂತಹ ಪ್ರಕ್ರಿಯೆಗಳು ಪ್ರಭುವಿಗೆ ಬಹು ಪ್ರಿಯವಾದವು. ಅವುಗಳಲ್ಲಿ ನಿರತರಾದವನ್ನು ಅವನು ಸ್ವೀಕರಿಸುತ್ತಾನೆ. ನಿರಾಕಾರ ಬ್ರಹ್ಮನ ಮಾರ್ಗದಲ್ಲಿ ನಿರತನಾದವನು, ದೇವೋತ್ತಮ ಪರಮ ಪುರುಷನ ವೈಯಕ್ತಿಕ ಸೇವೆಯಲ್ಲಿ ನಿರತನಾದವನು - ಇವರಿಬ್ಬರಲ್ಲಿ ಯಾರು ಉತ್ತಮ ಎನ್ನುವ ಪ್ರಶ್ನೆಯನ್ನು ಅರ್ಜುನನು ಎತ್ತಿದ.
ಪ್ರಭುವು ಅವನಿಗೆ ಎಷ್ಟು ಸ್ಪಷ್ಟವಾಗಿ ಉತ್ತರಕೊಟ್ಟನೆಂದರೆ, ಅಧ್ಯಾತ್ಮಿಕ ಸಾಕ್ಷಾತ್ಕಾರಕ್ಕೆ ದೇವೋತ್ತಮ ಪರಮ ಪುರುಷನ ಭಕ್ತಿಸೇವೆಯೇ ಎಲ್ಲ ಪ್ರಕ್ರಿಯೆಗಳಲ್ಲಿ ಅತಿ ಶ್ರೇಷ್ಠವಾದದ್ದು ಎನ್ನುವುದರಲ್ಲಿ ಸಂದೇಹವೇ ಇಲ್ಲ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ಒಳ್ಳೆಯ ಸಹವಾಸದಿಂದ ಮನುಷ್ಯನು ಪರಿಶುದ್ಧ ಭಕ್ತಿಸೇವೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾನೆ. ಇದರಿಂದ ಒಬ್ಬ ಯೋಗ್ಯ ಗುರುವನ್ನು ಸ್ವೀಕರಿಸುತ್ತಾನೆ. ಅವನ ಉದ್ದೇಶ ಕೇಳಿ, ಸಂಕೀರ್ತನೆ ಮಾಡಿ, ಶ್ರದ್ಧೆಯಿಂದ, ಆಸಕ್ತಿಯಿಂದ ಮತ್ತು ಭಕ್ತಿಯಿಂದ ಭಕ್ತಿಸೇವೆಯ ನಿಯಂತ್ರಕ ತತ್ವಗಳನ್ನು ಆಚರಿಸಲು ಪ್ರಾರಂಭಿಸುತ್ತಾನೆ. ಹೀಗೆ ಪ್ರಭುವಿನ ದಿವ್ಯಸೇವೆಯಲ್ಲಿ ನಿರತನಾಗುತ್ತಾನೆ ಎಂದು ಈ ಅಧ್ಯಾಯದಲ್ಲಿ ನಿರ್ಣಯಿಸಿದೆ ಮತ್ತು ಆ ಮಾರ್ಗವನ್ನು ಸಮರ್ಥಿಸಿದೆ. ಆದುದರಿಂದ ಆತ್ಮ ಸಾಕ್ಷತ್ಕಾರಕ್ಕೆ, ದೇವೋತ್ತಮ ಪರಮ ಪುರುಷನನ್ನು ಸೇರಿವುದಕ್ಕೆ ಭಕ್ತಿಸೇವೆಯೊಂದೇ ಪರಿಪೂರ್ಣ ಮಾರ್ಗ ಎನ್ನುವುದರಲ್ಲಿ ಸಂಶಯವಿಲ್ಲ.
ಈ ಅಧ್ಯಾಯದಲ್ಲಿ ಹೇಳಿರುವಂತೆ, ಪರಮ ಪರಿಪೂರ್ಣ ಸತ್ಯದ ನಿರಾಕಾರ ಪರಿಕಲ್ಪನೆಯನ್ನು ಮನುಷ್ಯನು ಆತ್ಮಸಾಕ್ಷಾತ್ಕಾರಕ್ಕಾಗಿ ತನ್ನನ್ನು ಅರ್ಪಿಸಿಕೊಳ್ಳುವವರೆಗೆ ಸಲಹೆ ಮಾಡಿದೆ. ಎಂದರೆ, ಪರಿಶುದ್ಧ ಭಕ್ತನ ಸಹವಾಸವು ದೊರೆಯುವವರೆಗೆ ನಿರಾಕಾರ ಪರಿಕಲ್ಪನೆಯು ಸಹಾಯಕವಾಗಬಹುದು. ಪರಮ ಸತ್ಯದ ನಿರಾಕಾರ ಪರಿಕಲ್ಪನೆಯಲ್ಲಿ ಮನುಷ್ಯನು ಫಲಾಪೇಕ್ಷೆ ಇಲ್ಲದೆ ಕರ್ಮ ಮಾಡುತ್ತಾನೆ. ಧ್ಯಾನ ಮಾಡುತ್ತಾನೆ, ಮತ್ತು ಚೇತನ ಹಾಗೂ ಜಡವಸ್ತುವನ್ನು ಅರಿಯಲು ಜ್ಞಾನವನ್ನು ಬೆಳೆಸಿಕೊಳ್ಳುತ್ತಾನೆ. ಪರಿಶುದ್ಧ ಭಕ್ತಿಸೇವೆಯಲ್ಲಿ ತೊಡಗಲು ಮನುಷ್ಯನು ನಿರ್ಧಿರಿಸಿದರೆ ಆತನು ಆತ್ಮಸಾಕ್ಷಾತ್ಕಾರದಲ್ಲಿ ಹೆಜ್ಜೆಹೆಜ್ಜೆಯಾಗಿ ಉತ್ತಮಗೊಳ್ಳುತ್ತ ಹೋಗುವ ಅಗತ್ಯವಿಲ್ಲ.
ಭಗವದ್ಗೀತೆಯ ಮಧ್ಯದ ಆರು ಅಧ್ಯಾಯಗಳಲ್ಲಿ ವರ್ಣಿಸಿದಂತೆ ಭಕ್ತಿಸೇವೆಯು ಇನ್ನೂ ಹಿತಕರ. ದೇಹ ಆತ್ಮಗಳನ್ನು ಒಟ್ಟಿಗಿರಿಸಲು ಮನುಷ್ಯ ಯೋಚಿಸಬೇಕಾಗಿಲ್ಲ. ಏಕೆಂದರೆ ಪ್ರಭುವಿನ ಕೃಪೆಯಿಂದ ಎಲ್ಲವೂ ತಂತಾನೇ ಆಗುತ್ತದೆ. ಇಲ್ಲಿಗೆ ಶ್ರೀಮದ್ಭಗವದ್ಗೀತೆಯ ಭಕ್ತಿಸೇವೆ ಎಂಬ ಹನ್ನೆರಡನೆಯ ಅಧ್ಯಾಯದ ಭಕ್ತಿವೇದಾಂತ ಭಾವಾರ್ಥವು ಮುಗಿಯಿತು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)