Bhagavad Gita: ಗಾಯತ್ರಿ ಮಂತ್ರ ಜಪಿಸಲು ಮನುಷ್ಯನು ಮೊದಲು ಪರಿಪೂರ್ಣ ಸ್ಥಿತಿಯಲ್ಲಿರಬೇಕು; ಗೀತೆಯ ಸಾರಾಂಶ ಹೀಗಿದೆ
Jun 15, 2024 05:15 AM IST
ಶ್ರೀಕೃಷ್ಣನು ಅರ್ಜುನನಿಗೆ ನೀಡಿದ ಧರ್ಮೋಪದೇಶದ ಸಾರವೇ ಭಗವದ್ಗೀತೆಯಾಗಿದೆ. ಎದುರಾಳಿ ಬಣದಿಂದ ತನ್ನ ಬಂಧುಗಳೊಂದಿಗೆ ಹೋರಾಡಲು ಅರ್ಜುನ ನಿರಾಕರಿಸಿದಾಗ ಶ್ರೀಕೃಷ್ಣ ಪಾಂಡವರಲ್ಲಿ ಒಬ್ಬನಾದ ಅರ್ಜುನನಿಗೆ ಈ ರೀತಿಯ ಉಪದೇಶ ನೀಡುತ್ತಾನೆ.
- Bhagavad Gita: ಗಾಯತ್ರಿ ಮಂತ್ರ ಜಪಿಸಲು ಮನುಷ್ಯನು ಮೊದಲು ಪರಿಪೂರ್ಣ ಸ್ಥಿತಿಯಲ್ಲಿರಬೇಕು ಎಂಬುದರ ಅರ್ಥವನ್ನು ಭಗವದ್ಗೀತೆ 10ನೇ ಅಧ್ಯಾಯದ 35 ಮತ್ತು 36ನೇ ಶ್ಲೋಕದಲ್ಲಿ ತಿಳಿಯಿರಿ.
ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 35
ಬೃಹತ್ಸಾಮ ತಥಾ ಸಾಮ್ನಾಂ ಗಾಯತ್ರೀ ಛನ್ದಸಾಮಹಮ್ |
ಮಾಸಾನಾಂ ಮಾರ್ಗಶೀರ್ಷೋಹಮೃತೂನಾಂ ಕುಸುಮಾಕರಃ ||35||
ಅನುವಾದ: ಸಾಮವೇದದಲ್ಲಿ ಸ್ತೋತ್ರಗಳಲ್ಲಿ ನಾನು ಬೃಹತ್ ಸಾಮ, ಕಾವ್ಯದಲ್ಲಿ ಗಾಯತ್ರಿ, ಮಾಸಗಳಲ್ಲಿ ನಾನು ಮಾರ್ಗಶಿರ ಮತ್ತು ಋತುಗಳಲ್ಲಿ ಕುಸುಮಾಕರವಾದ ವಸಂತ.
ತಾಜಾ ಫೋಟೊಗಳು
ಭಾವಾರ್ಥ: ವೇದಗಳಲ್ಲಿ ತಾನು ಸಾಮವೇದ ಎಂದು ಪ್ರಭುವು ಆಗಲೇ ವಿವರಿಸಿದ್ದಾನೆ. ಬೇರೆ ಬೇರೆ ದೇವತೆಗಳು ಹಾಡುವ ಸುಂದರವಾದ ಹಾಡುಗಳಿಂದ ಸಾಮವೇದವು ತುಂಬಿಹೋಗಿದೆ. ಈ ಹಾಡುಗಳಲ್ಲಿ ಒಂದು ಬೃಹತ್ ಸಾಮ. ಇದು ಬಹು ಮಧುರವಾಗಿದೆ. ಇದನ್ನು ಮಧ್ಯರಾತ್ರಿಯ ಸಮಯದಲ್ಲಿ ಹಾಡುತ್ತಾರೆ.
ಸಂಸ್ಕೃತದಲ್ಲಿ ಕಾವ್ಯವನ್ನು ನಿಯಂತ್ರಿಸಲು ನಿರ್ದಿಷ್ಟ ನಿಯಮಗಳಿವೆ. ಆಧುನಿಕ ಕಾವ್ಯದಲ್ಲಿರುವಂತೆ ಪ್ರಾಸ ಮತ್ತು ಛಂದಸ್ಸನ್ನು ಮನಸೋ ಇಚ್ಛೆ ಬಳಸುವುದಿಲ್ಲ. ಛಂದೋಬದ್ಧ ಕವನಗಳಲ್ಲಿ, ಯೋಗ್ಯ ಅರ್ಹತೆಯುಳ್ಳ ಬ್ರಾಹ್ಮಣರು ಜಪಮಾಡುವ ಗಾಯತ್ರಿಮಂತ್ರವು ಅತ್ಯಂತ ಮುಖ್ಯವಾದದ್ದು. ಶ್ರೀಮದ್ಭಾಗವತದಲ್ಲಿ ಗಾಯತ್ರಿ ಮಂತ್ರದ ಪ್ರಸ್ತಾಪವಿದೆ. ಗಾಯತ್ರಿ ಮಂತ್ರದ ಉದ್ದೇಶವು ವಿಶೇಷವಾಗಿ ಭಗವಂತನ ಸಾಕ್ಷಾತ್ಕಾರವಾದುದರಿಂದ ಅದು ಪರಮ ಪ್ರಭುವನ್ನು ಪ್ರತಿನಿಧಿಸುತ್ತದೆ. ಇದು ಅಧ್ಯಾತ್ಮಿಕವಾಗಿ ಮುಂದವರಿದವರಿಗಾಗಿಯೇ ರಚಿತವಾದ ಮಂತ್ರ. ಅದರ ಜಪದಲ್ಲಿ ಯಶಸ್ವಿಯಾದವನು ಪ್ರಭುವಿನ ದಿವ್ಯಸ್ಥಾನವನ್ನು ಪ್ರವೇಶಿಸಬಲ್ಲ.
ಗಾಯಿತ್ರಿಮಂತ್ರವನ್ನು ಜಪಿಸಲು ಮನುಷ್ಯನು ಮೊದಲು ಪರಿಪೂರ್ಣ ಸ್ಥಿತಿಯಲ್ಲಿರುವ ವ್ಯಕ್ತಿಯ ಗುಣಗಳನ್ನು, ಐಹಿಕ ಪ್ರಕೃತಿಯ ನಿಯಮಗಳಿಗೆ ಅನುಗುಣವಾಗಿ ಸಾತ್ವಿಕ ಗುಣಗಳನ್ನು ಪಡೆದುಕೊಳ್ಳಬೇಕು. ವೇದ ನಾಗರಿಕತೆಯಲ್ಲಿ ಗಾಯತ್ರಿಮಂತ್ರವು ಬಹಳ ಮುಖ್ಯವಾದದ್ದು. ಅದು ಬ್ರಹ್ಮನ್‌ನ ಶಬ್ದಾವತಾರ ಎಂದು ಪರಿಗಣಿಸುತ್ತಾರೆ. ಬ್ರಹ್ಮನು ಅದನ್ನು ಉಪಕ್ರಮ ಮಾಡಿದವನು. ಅವನಿಂದ ಅದು ಗುರು ಶಿಷ್ಯ ಪರಂಪರೆಯಲ್ಲಿ ಸಾಗಿ ಬಂದಿದೆ.
ಎಲ್ಲ ತಿಂಗಳುಗಳಲ್ಲಿ ನವೆಂಬರ್-ಡಿಸೆಂಬರ್ ತಿಂಗಳು ಅತ್ಯಂತ ಶ್ರೇಷ್ಠವಾದದ್ದು ಎಂದು ಭಾವಿಸುತ್ತಾರೆ. ಏಕೆಂದರೆ ಭಾರತದಲ್ಲಿ ಇದು ಸುಗ್ಗಿಯ ಕಾಲ. ಜನರು ತುಂಬ ಸಂತೋಷದಿಂದ ಇರುತ್ತಾರೆ. ವಸಂತವೆಂದರೆ ಎಲ್ಲರಿಗೂ ಪ್ರೀತಿ. ಏಕೆಂದರೆ ಬಹು ಸೆಕೆಯೂ ಇರುವುದಿಲ್ಲ ಬಹುಚಳಿಯೂ ಇರುವುದಿಲ್ಲ. ಹೂಗಳು ಅರಳುತ್ತವೆ. ಗಿಡಮರಗಳು ಬೆಳೆಯುತ್ತವೆ. ವಸಂತ ಋತುವಿನಲ್ಲಿ ಕೃಷ್ಣನ ಲೀಲೆಗಳನ್ನು ನೆನಪಿಗೆ ತರುವ ಅನೇಕ ಉತ್ಸವಗಳಿವೆ. ಆದುದರಿಂದ ಇದು ಎಲ್ಲ ಋತುಗಳಲ್ಲಿ ಅತ್ಯಂತ ಸಂತೋಷದ ಋತು. ಅದು ಪರಮ ಪ್ರಭು ಕೃಷ್ಣನ ಪ್ರತಿನಿಧಿ.
ಅಧ್ಯಾಯ 10 - ವಿಭೂತಿ ಯೋಗ -ಶ್ಲೋಕ - 36
ದ್ಯೂತಂ ಛಲಯತಾಮಸ್ಮಿ ತೇಜಸ್ತೇಜಸ್ವಿನಾಮಹಮ್ |
ಜಯೋಸ್ಮಿ ವ್ಯವಸಾಯೋಸ್ಮಿ ಸತ್ತ್ವಂ ಸತ್ತ್ವವತಾಮಹಮ್ ||36||
ಅನುವಾದ: ಮೋಸಗಾರರ ಜೂಜು ನಾನೇ. ತೇಜಸ್ವಿಗಳ ತೇಜಸ್ಸು ನಾನು. ನಾನು ಜಯ, ನಾನು ಸಾಹಸ, ಬಲಿಷ್ಠರ ಬಲವೂ ನಾನೇ.
ಭಾವಾರ್ಥ: ವಿಶ್ವದಲ್ಲಿ ನಾನಾ ಬಗೆಯ ಮೋಸಗಾರರುಂಟು. ಇತರ ಎಲ್ಲ ಮೋಸ ರೀತಿಗಳನ್ನು ಮೀರಿಸಿದ್ದು ಜೂಜು. ಆದುದರಿಂದ ಅದು ಕೃಷ್ಣನ ಪ್ರತಿನಿಧಿ. ಪರಮನಾಗಿ ಕೃಷ್ಣನು ಇತರರಿಗಿಂತ ಹೆಚ್ಚು ಮೋಸಗಾರನಾಗಿರಬಲ್ಲ. ಯಾರೂ ಆತನ ಮೋಸವನ್ನು ಆತನಿಗೆ ತಿಳಿಯದಂತೆ ಕಂಡುಹಿಡಿಯಲಾರರು. ಅವನ ಹಿರಿಮೆಗೆ ಒಂದೇ ಮುಖವಲ್ಲ. ಅದಕ್ಕೆ ಎಲ್ಲ ಮುಖಗಳುಂಟು.
ಜಯಶಾಲಿಗಳಲ್ಲಿ ಆತನು ಜಯ. ತೇಜಸ್ವಿಗಳ ತೇಜಸ್ಸು ಅವನು. ಸಾಹಸಿಗಳು, ಶ್ರಮಪಡುವವರಲ್ಲಿ ಆತನೇ ಮಹಾಸಾಹಸಿ, ಅತ್ಯಂತ ಶ್ರಮಪಡುವವನು. ಕೃಷ್ಣನು ಭೂಮಿಯ ಮೇಲೆ ಇದ್ದಾಗ ಅವನನ್ನು ಯಾರೂ ಬಲದಲ್ಲಿ ಮೀರಿಸುವವರಿರಲಿಲ್ಲ. ಬಾಲ್ಯದಲ್ಲಿಯೇ ಗೋವರ್ಧನಗಿರಿಯನ್ನು ಎತ್ತದವನು ಅವನು. ಮೋಸದಲ್ಲಿ ಯಾರೂ ಅವನನ್ನು ಮೀರಿಸಲಾರರು. ತೇಜಸ್ಸಿನಲ್ಲಿ ಅವನನ್ನು ಯಾರೂ ಮೀರಿಸಲಾರರು. ಜಯದಲ್ಲಿ ಯಾರೂ ಅವನನ್ನು ಮೀರಿಸಲಾರರು. ಸಾಹಸದಲ್ಲಿ ಯಾರೂ ಅವನನ್ನು ಮೀರಿಸಲಾರರು ಮತ್ತು ಶಕ್ತಿಯಲ್ಲಿ ಯಾರೂ ಅವನನ್ನು ಮೀರಿಸಲಾರರು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)