ಪ್ರತಿದಿನ ಮನೆ ಮುಂದೆ ರಂಗೋಲಿ ಹಾಕುವ ಉದ್ದೇಶವೇನು, ಯಾವ ದಿನಗಳಲ್ಲಿ ರಂಗೋಲಿ ಇಡಬಾರದು; ಇಲ್ಲಿದೆ ಮಾಹಿತಿ
Dec 18, 2024 08:48 AM IST
ಪ್ರತಿದಿನ ಮನೆ ಮುಂದೆ ರಂಗೋಲಿ ಹಾಕುವ ಉದ್ದೇಶವೇನು?
- ಹಿಂದೂ ಸಂಪ್ರದಾಯದಲ್ಲಿ ರಂಗೋಲಿಗೆ ವಿಶೇಷ ಮಹತ್ವವಿದೆ. ಅನಾದಿ ಕಾಲದಿಂದಲೂ ಮನೆ ಮುಂದೆ ರಂಗೋಲಿ ಬಿಡಿಸುವ ಪದ್ಧತಿ ಇದೆ. ಹಾಗಾದರೆ ಪ್ರತಿದಿನ ಮನೆ ಮಂದೆ ರಂಗೋಲಿ ಹಾಕಬೇಕು ಎನ್ನುವುದಕ್ಕೆ ಕಾರಣವೇನು, ಯಾವ ಸ್ಥಳದಲ್ಲಿ ರಂಗೋಲಿ ಇದ್ದರೆ ಶ್ರೇಷ್ಠ, ಯಾವ ದಿನಗಳಲ್ಲಿ ರಂಗೋಲಿ ಇಡಬಾರದು ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ರಂಗೋಲಿ ಎಂದರೆ ಹಿಂದೂ ಸಂಪ್ರದಾಯದಲ್ಲಿ ಬಹಳ ವಿಶೇಷ. ಹಬ್ಬ–ಹರಿದಿನಗಳು ಬಂತೆಂದರೆ ತಪ್ಪದೇ ಮನೆ ಮುಂದೆ ರಂಗೋಲಿ ಇಡುತ್ತಾರೆ. ರಂಗೋಲಿಯು ಕೇವಲ ಮನೆ ಅಲಂಕಾರದ ಭಾಗವಲ್ಲ, ಜ್ಯೋತಿಷ್ಯದಲ್ಲೂ ರಂಗೋಲಿಗೆ ವಿಶೇಷ ಮಹತ್ವವಿದೆ. ನಾವು ಮನೆಯನ್ನು ಸ್ವಚ್ಛವಾಗಿ, ಸುಂದರವಾಗಿ ಇರಿಸಿದರೆ ಲಕ್ಷ್ಮೀದೇವಿ ನೆಲೆಸುತ್ತಾಳೆ ಎಂಬ ನಂಬಿಕೆಯೂ ಇದೆ. ರಂಗೋಲಿ ಮನೆಯನ್ನು ಸುಂದರವಾಗಿಸುವ ಅಂಶವೂ ಹೌದು.
ತಾಜಾ ಫೋಟೊಗಳು
ಅನಾದಿ ಕಾಲದಿಂದಲೂ ಬೆಳಗೆದ್ದು ಅಂಗಳ ಗುಡಿಸಿ, ಸಾರಿಸಿ ರಂಗೋಲಿ ಹಾಕುವ ಪದ್ಧತಿ ಇದೆ. ಸೂರ್ಯಾಸ್ತಕ್ಕೂ ಮುನ್ನ ರಂಗೋಲಿ ಹಾಕುವುದು ಶುಭ ಸಂಕೇತ ಎಂದು ಹಿರಿಯಲು ಹೇಳುವುದನ್ನು ನೀವು ಕೇಳಿರಬಹುದು. ಹಾಗಾದರೆ ಮನೆ ಮುಂದೆ ಪ್ರತಿದಿನ ರಂಗೋಲಿ ಹಾಕುವುದೇಕೆ, ಇದರ ಮಹತ್ವದ ಬಗ್ಗೆ ಜ್ಯೋತಿಷ್ಯ ಹೇಳುವುದೇನು ನೋಡಿ.
ಮನೆ ಮುಂದೆ ಯಾಕೆ ರಂಗೋಲಿ ಹಾಕಬೇಕು?
ಮನೆ ಮುಂದೆ ರಂಗೋಲಿ ಹಾಕುವುದು ದೇವರನ್ನು ಒಲಿಸಿಕೊಳ್ಳುವ ಕ್ರಮವೂ ಹೌದು. ರಂಗೋಲಿ ಹಾಕಲು ಕೆಲವು ಕ್ರಮಗಳಿವೆ. ಅದನ್ನು ತಪ್ಪದೇ ಅನುಸರಿಸಬೇಕು. ಮನೆ ಮುಂದೆ ರಂಗೋಲಿ ಹಾಕುವ ಮುನ್ನ ನೀರು ಚಿಮುಕಿಸಬೇಕು. ಇದು ನೆಲವನ್ನು ಸ್ವಚ್ಛ ಮಾಡುವ ಕ್ರಮವೂ ಹೌದು. ಮೊದಲು ಹೊಸ್ತಿಲಿಗೆ ಎರಡು ರೇಖೆಗಳನ್ನು ಎಳೆಯಲಾಗುತ್ತದೆ. ರಂಗೋಲಿ ಹಾಕುವ ಮುನ್ನ ಹೊಸ್ತಿಲಿನ ಮೇಲೆ ಗೆರೆಗಳನ್ನು ಎಳೆಯುವ ಹಿಂದೆ ಕೂಡ ಮಹತ್ತರ ಉದ್ದೇಶವಿದೆ. ಇದರಿಂದ ದುಷ್ಟಶಕ್ತಿಗಳು ಮನೆಯೊಳಗೆ ಪ್ರವೇಶ ಮಾಡುವುದನ್ನು ತಡೆಯಬಹುದು ಎಂದು ಜ್ಯೋತಿಷ್ಯ ಹೇಳುತ್ತದೆ. ಹೀಗೆ ಹೊಸ್ತಿಲಿಗೆ ಗೆರೆ ಎಳೆದು, ಮನೆ ಮುಂದೆ ರಂಗೋಲಿ ಹಾಕುವುದರಿಂದ ಲಕ್ಷ್ಮೀದೇವಿ ಮನೆ ಒಳಗೆ ಇರುತ್ತಾಳೆ, ಮನೆಯಿಂದ ಹೊರ ಹೋಗುವುದಿಲ್ಲ ಎಂದು ಹೇಳಲಾಗುತ್ತದೆ.
ಈ ರಂಗೋಲಿಯನ್ನು ತಪ್ಪಿಯೂ ತುಳಿಯಬಾರದು
ಹಲವರು ತಮ್ಮ ಮನೆ ಮುಂದೆ ಓಂಕಾರ, ಸ್ವಸ್ತಿಕ್, ಶ್ರೀ ಚಿಹ್ನೆಗಳನ್ನು ಹೋಲುವ ರಂಗೋಲಿಯನ್ನು ಬಿಡುಸುತ್ತಾರೆ. ಹಿಂದೂ ಧರ್ಮದಲ್ಲಿ ಈ ಚಿಹ್ನೆಗಳು ದೇವರ ಸಂಕೇತ. ಆದರೆ ಈ ರಂಗೋಲಿಗಳನ್ನು ಎಂದಿಗೂ ತುಳಿಯಬಾರದು. ಈ ರಂಗೋಲಿಗಳ ಮೇಲೆ ಕಾಲಿಟ್ಟರೆ ಪಾಪ ತಟ್ಟುತ್ತದೆ ಎಂಬ ಮಾತಿದೆ. ತುಳಸಿ ಗಿಡದ ಬಳಿ ಯಾವಾಗಲೂ ಅಷ್ಟ ಪದ್ಮದಳದ ರಂಗೋಲಿ ಹಾಕಿ ದೀಪ ಹಚ್ಚಿದರೆ ಒಳ್ಳೆಯದು. ಇದರಿಂದ ಲಕ್ಷ್ಮೀದೇವಿ ಸಂತುಷ್ಟಗೊಳ್ಳುತ್ತಾಳೆ.
ದೇವಾಲಯಗಳ ಮುಂದೆ ರಂಗೋಲಿ ಬಿಡಿಸುವುದರ ಮಹತ್ವ
ದೇವಸ್ಥಾನಗಳಲ್ಲಿ ರಂಗೋಲಿ ಹಾಕುವುದು ಸರ್ವಶ್ರೇಷ್ಠ. ವಿಷ್ಣು ಹಾಗೂ ದೇವಿ ಮುಂದೆ ರಂಗೋಲಿ ಹಾಕುವ ಮುತ್ತೈದೆಯರು 7 ಜನ್ಮಕ್ಕೂ ಮುತ್ತೈದೆಯರಾಗಿಯೇ ಸಾಯುತ್ತಾರೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ದೇವಿ ಭಾಗವತ ಮತ್ತು ಬ್ರಹ್ಮಾಂಡ ಪುರಾಣವೂ ಇದನ್ನೇ ಹೇಳುತ್ತದೆ. ಬಣ್ಣಗಳ ಬದಲಿಗೆ ರಂಗೋಲಿ ಹಾಕಲು ಅಕ್ಕಿಹಿಟ್ಟು ಸೇರಿಸುವುದು ಉತ್ತಮ.
ಎಲ್ಲಿ ರಂಗೋಲಿ ಇಡಬೇಕು
ಪ್ರತಿದಿನ ನಾವು ಮನೆ ಮುಂದೆ, ದೇವರಕೋಣೆ ಮುಂದೆ ಹಾಗೂ ತುಳಸಿ ಕಟ್ಟೆಯ ಮುಂದೆ ರಂಗೋಲಿ ಹಾಕಬೇಕು ಎಂದು ಜ್ಯೋತಿಷ್ಯ ಹೇಳುತ್ತದೆ. ಇದರಿಂದ ಮನೆಯ ಒಳಗೆ ಹಾಗೂ ಸುತ್ತಲಿನ ಧನಾತ್ಮಕ ಶಕ್ತಿ ಹೆಚ್ಚುತ್ತದೆ, ಋಣಾತ್ಮಕ ಶಕ್ತಿ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ.
ಯಾವಾಗ ರಂಗೋಲಿ ಹಾಕಬಾರದು
ಜ್ಯೋತಿಷ್ಯದ ಪ್ರಕಾರ ಮನೆಯಲ್ಲಿ ಯಾರಾದರೂ ವ್ಯಕ್ತಿ ಮರಣ ಹೊಂದಿದ್ದರೆ ಅಂತಹ ಸಂದರ್ಭದಲ್ಲಿ ರಂಗೋಲಿ ಇಡಬಾರದು. ಶ್ರಾದ್ಧ ಕರ್ಮಗಳು ಮುಗಿದ ನಂತರ ಪುನಃ ರಂಗೋಲಿ ಇಡುವ ಪದ್ಧತಿಯನ್ನು ಮುಂದುವರಿಸಬೇಕು.
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)