Dhanurmasam 2024: ಧನುರ್ಮಾಸ ಆರಂಭ; ಈ ತಿಂಗಳಲ್ಲಿ ಏನು ಮಾಡಬೇಕು? ಏನು ಮಾಡಬಾರದು? ಇಲ್ಲಿದೆ ಮಾಹಿತಿ
ಹಿಂದೂ ಧರ್ಮದಲ್ಲಿ ಧನುರ್ಮಾಸವನ್ನು ಶೂನ್ಯ ಮಾಸ ಎಂದು ಪರಿಗಣಿಸಲಾಗುತ್ತದೆ. ಪ್ರತಿ ವರ್ಷ ಡಿಸೆಂಬರ್ 16 ರಿಂದ ಧನುರ್ಮಾಸ ಆರಂಭವಾಗುತ್ತದೆ. ಜನವರಿಯಲ್ಲಿ ಬರುವ ಮಕರ ಸಂಕ್ರಾಂತಿ ಹಿಂದಿನ ದಿನದವರೆಗೆ ಧನುರ್ಮಾಸವಿರುತ್ತದೆ. ಈ ಒಂದು ತಿಂಗಳಲ್ಲಿ ಆಚರಿಸಬೇಕಾದ ಕ್ರಮಗಳೇನು, ಏನು ಮಾಡಬಾರದು ಎಂಬ ವಿವರ ಇಲ್ಲಿದೆ.
ಧನುರ್ಮಾಸ ಆರಂಭವಾಗಿದೆ. ಹಿಂದೂಗಳಿಗೆ ಧನುರ್ಮಾಸ ಎಂದರೆ ಅಶುಭ ಮಾಸ. ಈ ತಿಂಗಳಲ್ಲಿ ಶುಭಕಾರ್ಯಗಳನ್ನು ಮಾಡುವುದು ನಿಷಿದ್ಧ. ಇದನ್ನು ಖಾರ್ಮಾಸ ಎಂದೂ ಕೂಡ ಕರೆಯಲಾಗುತ್ತದೆ. ಹಾಗಾಗಿ ತಿಂಗಳಲ್ಲಿ ಬಹುತೇಕ ಶುಭ ಸಮಾರಂಭಗಳು ನಡೆಯುವುದಿಲ್ಲ. 30 ದಿನಗಳ ಕಾಲ ಇರುವ ಧನುರ್ಮಾಸದಲ್ಲಿ ಕೆಲವು ಕೆಲಸಗಳನ್ನು ಮಾಡುವುದು ಕೂಡ ಅಶುಭ ಎಂದು ಪರಿಗಣಿಸಲಾಗುತ್ತದೆ.
ಧನುರ್ಮಾಸವನ್ನು ಶೂನ್ಯ ಮಾಸ ಎಂದು ಕೂಡ ಕರೆಯಲಾಗುತ್ತದೆ. ಈ ಕಾರಣಕ್ಕೆ ಈ ತಿಂಗಳಲ್ಲಿ ಶುಭಕಾರ್ಯಗಳನ್ನು ಮಾಡುವುದು ನಿಷಿದ್ಧ. ಈ ಮಾಸದಲ್ಲಿ ಮದುವೆ, ಗೃಹಪ್ರವೇಶದಂತಹ ಯಾವುದೇ ಹೊಸ ಆರಂಭಗಳನ್ನು ಮಾಡಬಾರದು, ಇದರಿಂದ ಕೇಡಾಗುತ್ತದೆ ಎಂಬ ನಂಬಿಕೆ ಇದೆ. ದಕ್ಷಿಣ ಭಾರತದಲ್ಲಿ ಧನುರ್ಮಾಸಕ್ಕೆ ವಿಶೇಷ ಮಹತ್ವವಿದೆ. ಈ ಸಮಯದಲ್ಲಿ ಹಿಂದೂಗಳು ಮನಸ್ಸು ಹಾಗೂ ಆತ್ಮ ಶುದ್ಧಿಗಾಗಿ ಧ್ಯಾನ, ಉಪವಾಸ, ದಾನದಂತಹ ಕಾರ್ಯಗಳಲ್ಲಿ ತೊಡಗುತ್ತಾರೆ.
ಧನುರ್ಮಾಸದ ಮಹತ್ವ
ಡಿಸೆಂಬರ್ ಅರ್ಧದಿಂದ ಜನವರಿ ತಿಂಗಳ ಅರ್ಧವರೆಗೆ ಆಚರಿಸುವ ಧನುರ್ಮಾಸವು ಲೌಕಿಕ ಹಾಗೂ ಹೊಸ ಆರಂಭಗಳಿಗೆ ಅಶುಭ ಅವಧಿ ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಸಮಯದಲ್ಲಿ ಕೆಲವು ಆಧ್ಯಾತ್ಮಿಕ ಆಚರಣೆಗಳಿಗೆ ಮಹತ್ವ ನೀಡಲಾಗುತ್ತದೆ, ಧನುರ್ಮಾಸದಲ್ಲಿ ವಿಷ್ಣು ಪೂಜೆ ಮಾಡುವುದು ವಿಶೇಷ. ಈ ಅವಧಿಯಲ್ಲಿ ಭಕ್ತರು ವಿಷ್ಣು ಸಹಸ್ರ ನಾಮ ಪಠಿಸುವ ಮೂಲಕ ದೇವರನ್ನು ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ.
ಹಿಂದೂ ಸಂಪ್ರದಾಯದ ಪ್ರಕಾರ ಧನುರ್ಮಾಸದ ಸಮಯದಲ್ಲಿ ಬೆಳಿಗ್ಗೆ ಪೂಜೆ ಮಾಡಲು ಸೂಕ್ತ ಸಮಯವಾಗಿದೆ. ಈ ತಿಂಗಳಲ್ಲಿ ಭಾರತದಾದ್ಯಂತ ಇರುವ ದೇಗುಲಗಳಲ್ಲಿ ಬೆಳಿಗ್ಗೆ ಬೇಗ ವಿಶೇಷ ಪೂಜೆಗಳನ್ನು ಮಾಡಲಾಗುತ್ತದೆ. ವಿಶೇಷವಾಗಿ ಆರುದ್ರಾ ನಕ್ಷತ್ರದ ದಿನದಂದು ಶಿವನನ್ನು ಪೂಜಿಸುವುದು ಅತ್ಯಂತ ಮಂಗಳಕರವೆಂದು ಭಕ್ತರು ಪರಿಗಣಿಸುತ್ತಾರೆ. ಅನೇಕರು ದರ್ಶನಕ್ಕಾಗಿ ಸೂರ್ಯೋದಯಕ್ಕೆ ಮುನ್ನ ಶಿವ ದೇವಾಲಯಗಳಿಗೆ ಭೇಟಿ ನೀಡುತ್ತಾರೆ ಮತ್ತು ಮನೆಗಳಲ್ಲಿಯೂ ಆಚರಣೆಗಳು ನಡೆಯುತ್ತವೆ.
ಧನುರ್ಮಾಸದ ಆಚರಣೆಗಳು
ಹಿಂದೂ ಸಂಪ್ರದಾಯದ ಪ್ರಕಾರ, ಧನುರ್ಮಾಸವು ಆಧ್ಯಾತ್ಮಿಕ ಅನ್ವೇಷಣೆಗಳಿಗೆ ವಿಶೇಷ ತಿಂಗಳು. ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಈ ಮಾಸದಲ್ಲಿ ಹೆಚ್ಚು ಪ್ರಕಟಗೊಳ್ಳುತ್ತಾನೆ ಎಂದು ಘೋಷಿಸುತ್ತಾನೆ. ಇದರ ಫಲವಾಗಿ ಋಷಿಮುನಿಗಳು ಈ ಮಾಸವನ್ನು ಭಕ್ತಿ ಕಾರ್ಯಗಳಿಗೆ ಮೀಸಲಿಟ್ಟಿದ್ದಾರೆ. ಧನುರ್ಮಾಸದ ಸಮಯದಲ್ಲಿ, ದೇವರುಗಳು ಬೇಗನೆ ಎಚ್ಚರಗೊಳ್ಳುತ್ತಾರೆ ಎಂದು ಹಿಂದೂಗಳು ನಂಬುತ್ತಾರೆ ಮತ್ತು ಮಂಗಳಕರವಾದ ಬ್ರಹ್ಮ ಮುಹೂರ್ತದ ಅವಧಿಯಲ್ಲಿ ವಿಷ್ಣುವಿಗೆ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತದೆ. ಹಾಗೂ ಎಲ್ಲಾ ದೇವರುಗಳಿಗೆ ಬ್ರಾಹ್ಮಿ ಮುಹೂರ್ತದಲ್ಲೇ ಪೂಜೆ ಸಲ್ಲಿಸಲಾಗುತ್ತದೆ.
ಧನುರ್ಮಾಸದ ಉದ್ದಕ್ಕೂ, ಪ್ರತಿದಿನ ಬೆಳಿಗ್ಗೆ ಸ್ತೋತ್ರಗಳನ್ನು ಪಠಿಸಲಾಗುತ್ತದೆ. ಭಕ್ತರು ಪೊಂಗಲ್ ಮತ್ತು ಪುಳಿಯೋಗರೆಯಂತಹ ಸಿಹಿ ತಿನಿಸುಗಳನ್ನು ನೈವೇದ್ಯವಾಗಿ ಅರ್ಪಿಸಿ ಪ್ರಸಾದವಾಗಿ ಹಂಚುತ್ತಾರೆ. ಈ ತಿಂಗಳು ಆಧ್ಯಾತ್ಮಿಕ ಪ್ರತಿಬಿಂಬ, ಭಕ್ತಿ ಮತ್ತು ದೈವಿಕ ಸಂಪರ್ಕದ ಸಮಯವೂ ಹೌದು.
ಧನುರ್ಮಾಸದಲ್ಲಿ ಏನು ಮಾಡಬಾರದು
- ಧನುರ್ಮಾಸದಲ್ಲಿ ಮಾಂಸಹಾರ ಸೇವನೆ ಮಾಡಬಾರದು ಎಂದು ಹೇಳಲಾಗುತ್ತದೆ
- ಈ ತಿಂಗಳಲ್ಲಿ ಜಗಳ, ವಾದ–ವಿವಾದಗಳಿಂದ ದೂರ ಇರುವುದು ಉತ್ತಮ
- ಯಾವುದೇ ಮಂಗಳಕರ ಚಟುವಟಿಕೆಯನ್ನೂ ಮಾಡುವಂತಿಲ್ಲ
- ಯಾವುದೇ ಹೊಸ ಆರಂಭಕ್ಕೂ ಧನುರ್ಮಾಸ ಸೂಕ್ತವಲ್ಲ
(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ)