ವಾಸ್ತು ನಿಯಮದ ಪ್ರಕಾರ ಈ ವಸ್ತುಗಳನ್ನು ಮನೆಯ ಮುಂಬಾಗಿಲ ಬಳಿ ಇಟ್ಟರೆ ತೊಂದರೆ ತಪ್ಪಿದ್ದಲ್ಲ, ನೆಮ್ಮದಿ ಕೆಡಬಹುದು ಎಚ್ಚರ
Aug 17, 2024 11:30 AM IST
ಈ ವಸ್ತುಗಳನ್ನು ಮನೆಯ ಮುಂಬಾಗಿಲಿನ ಬಳಿ ಇಟ್ಟರೆ ತೊಂದರೆ ತಪ್ಪಿದ್ದಲ್ಲ; ವಾಸ್ತು ಹೇಳುವ ಆ 5 ವಸ್ತುಗಳು ಇವೇ ನೋಡಿ
- ವಾಸ್ತು ಶಾಸ್ತ್ರದಲ್ಲಿ ಮನೆಯ ಮುಂಬಾಗಿಲಿಗೆ ಬಹಳ ಮಹತ್ವ ನೀಡಲಾಗಿದೆ. ಇದು ಸಕಾರಾತ್ಮಕ ಶಕ್ತಿ, ಸಮೃದ್ಧಿ ಮನೆಯೊಳಗೆ ನೆಲೆಸುವಂತೆ ಮಾಡುತ್ತದೆ. ಆದರೆ ಮನೆಯ ಮುಂಬಾಗಿಲ ಬಳಿ ಅಪ್ಪಿ ತಪ್ಪಿಯೂ ಈ 5 ವಸ್ತುಗಳನ್ನು ಇಡಲೇಬೇಡಿ.
ಮನೆಯೆಂಬುದು ದಣಿದು ಬಂದಾಗ ನೆಮ್ಮದಿಯನ್ನು ನೀಡುವ ಜಾಗ. ಅತಿ ಒತ್ತಡದ ದಿನಗಳಲ್ಲಿ ದೂರದಿಂದ ಮನೆಯ ಮುಂಬಾಗಿಲನ್ನು ನೋಡಿದರೂ ಸಾಕು ಅರ್ಧದಷ್ಟು ದಣಿವು ಮಾಯವಾಗಿಬಿಡುತ್ತದೆ. ವಾಸ್ತು ಶಾಸ್ತ್ರದಲ್ಲೂ ಮನೆಯ ಮುಂಬಾಗಿಲಿಗೆ ಬಹಳ ಮಹತ್ವವನ್ನು ನೀಡಲಾಗಿದೆ. ಅದು ಧನಾತ್ಮಕ ಶಕ್ತಿಗಳನ್ನು ಬರಮಾಡಿಕೊಳ್ಳುವ ಮತ್ತು ನಕಾರಾತ್ಮಕ ಶಕ್ತಿಗಳನ್ನು ಹೊರದೂಡುವ ಮಾರ್ಗವಾಗಿದೆ. ಶಾಸ್ತ್ರದಲ್ಲಿ ಮನೆಯ ಮುಂಬಾಗಿಲನ್ನು ಪ್ರಾಣ ಎಂದೂ ವಿವರಿಸಲಾಗಿದೆ. ಸರಿಯಾದ ಜಾಗದಲ್ಲಿ ಅಳವಡಿಸಲಾದ ಬಾಗಿಲು ಮನೆಗೆ ಶೋಭೆ ನೀಡುವುದರ ಜೊತೆಗೆ ಮನೆಯಲ್ಲಿ ನೆಮ್ಮದಿ, ಶಾಂತಿ, ಸಮೃದ್ಧಿ ನೆಲೆಸುವಂತೆ ಮಾಡುತ್ತದೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳನ್ನು ಮನೆಯ ಮುಂಬಾಗಿಲಿನಲ್ಲಿ ಇಡಬಾರದು. ಏಕೆಂದರೆ ಅವುಗಳು ಮನೆಗೆ ನಕಾರಾತ್ಮಕ ಶಕ್ತಿಗಳನ್ನು ಎಳೆದು ತರುತ್ತವೆ. ಹಾಗಾದರೆ ಶಾಸ್ತ್ರದಲ್ಲಿ ಹೇಳಲಾದ ಆ 5 ವಸ್ತುಗಳು ಯಾವವು ತಿಳಿಯೋಣ.
ತಾಜಾ ಫೋಟೊಗಳು
ಮನೆಯ ಮುಂಬಾಗಿಲಿನ ಬಳಿ ಇಡಬಾರದ 5 ವಸ್ತುಗಳು
- ಮುರಿದ ವಸ್ತುಗಳು
ಮನೆಯ ಮುಂದೆ ಮುರಿದ ಅಥವಾ ಹಾಳಾದ ವಸ್ತುಗಳನ್ನು ಇಡಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ. ಹಳಾದ ಗಡಿಯಾರ, ಒಡೆದ ಹೂದಾನಿ ಮುಂತಾದ ವಸ್ತುಗಳನ್ನು ಮನೆಯ ಮುಂಬಾಗಿಲಿನ ಬಳಿ ಇಡುವುದರಿಂದ ನಕಾರಾತ್ಮಕ ಶಕ್ತಿ ಅಲ್ಲಿ ನೆಲೆಸುತ್ತದೆ. ಹಾಗಾಗಿ ಅಂತಹ ವಸ್ತುಗಳ ಬದಲಿಗೆ ಧನಾತ್ಮಕ ಆಂಶಗಳನ್ನು ಸೆಳೆಯುವ ವಸ್ತುಗಳನ್ನು ಇರಿಸಿ.
2. ಹರಿತವಾದ ವಸ್ತುಗಳು
ಹರಿತವಾದ ವಸ್ತುಗಳಾದ ಚಾಕು, ಕತ್ತರಿ, ಕತ್ತಿ ಮುಂತಾದ ವಸ್ತುಗಳನ್ನು ಮನೆಯ ಎದುರಿಗೆ ಇರದಂತೆ ನೋಡಿಕೊಳ್ಳಿ. ಈ ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಉತ್ಪತ್ತಿ ಮಾಡುತ್ತವೆ. ಅವುಗಳನ್ನು ಸುರಕ್ಷಿತ ಜಾಗದಲ್ಲಿಡಿ. ಧನಾತ್ಮಕ ಶಕ್ತಿಗಳು ಮನೆಯೊಳೆಗೆ ಸುಲಭವಾಗಿ ಬರುವಂತಿರಲಿ.
3. ಜೀವವಿಲ್ಲದ ಗಿಡಗಳು
ಮನೆಯ ಮುಂಭಾಗವು ಯಾವಾಗಲೂ ಸ್ವಚ್ಛವಾಗಿರಬೇಕು. ಅಲ್ಲಿ ಜೀವವಿಲ್ಲದ ಗಿಡಗಳು ಮತ್ತು ಕಳೆ ಸಸ್ಯಗಳು ಇರಬಾರದು. ಅವು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಅಷ್ಟೇ ಅಲ್ಲದೇ ಅದೃಷ್ಟ ಮತ್ತು ಸಂಪತ್ತು ಮನೆಯೊಳಗೆ ಬರುವುದನ್ನು ತಡೆಯಬಹುದು. ಅದಕ್ಕಾಗಿ ಮನೆಯ ಮುಂಭಾಗವು ಒಳ್ಳೆಯದನ್ನು ಸ್ವಾಗತಿಸುವಂತಿರಬೇಕು. ಯಾವಾಗಲೂ ಗಿಡಗಳು ಹಸಿರಾಗಿರುವಂತೆ ನೋಡಿಕೊಳ್ಳಿ.
4. ಕಸದ ಬುಟ್ಟಿ
ಮನೆಯ ಮುಂಬಾಗಿಲಿನ ಎದುರಿಗೆ ಡಸ್ಟ್‌ಬಿನ್‌ಗಳನ್ನು ಇಡಬೇಡಿ. ಅದು ನಕಾರಾತ್ಮಕ ಶಕ್ತಿಯನ್ನು ಸೆಳೆಯುವುದರ ಜೊತೆಗೆ ಮನೆಯ ಅಂದವನ್ನು ಹಾಳು ಮಾಡುತ್ತದೆ. ಹಾಗಾಗಿ ಅಂತಹವುಗಳನ್ನು ಸ್ವಲ್ಪ ದೂರದಲ್ಲಿ ಒಂದು ನಿರ್ದಿಷ್ಟ ಜಾಗದಲ್ಲಿಡಿ.
5. ಗಾಢ ಬಣ್ಣದ ವಸ್ತುಗಳು
ಮನೆಯ ಮುಂಬಾಗಿಲಿನಲ್ಲಿ ಕಪ್ಪು ಪ್ರತಿಮೆ, ಗಾಢ ಬಣ್ಣದ ಮ್ಯಾಟ್ ಅಥವ ಕಪ್ಪು ಬಣ್ಣದ ವಸ್ತುಗಳನ್ನು ಇಡಬೇಡಿ. ಇವು ಸಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತವೆ. ಹಾಗಾಗಿ ಸಕಾರಾತ್ಮಕ ಶಕ್ತಿ ಆಹ್ವಾನಿಸಲು ಮನಸ್ಸಿಗೆ ಮುದ ನೀಡುವ ಬಣ್ಣಗಳ ವಸ್ತುಗಳನ್ನು ಇಡಿ.
ಹೀಗೆ ಸಣ್ಣ ಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಮನೆಯಲ್ಲಿ ಸಮೃದ್ಧಿ, ಸಾಮರಸ್ಯ ತುಂಬಿರುತ್ತದೆ.