ರಾಮಾಯಣ: ಅರಮನೆಗೆ ಬಂದು ರಾಮನನ್ನು ತನ್ನ ಜೊತೆ ಕಳಿಸು ಎಂದ ವಿಶ್ವಾಮಿತ್ರ; ದಶರಥನಾಗ ಚಿಂತಾಕ್ರಾಂತ
Sep 23, 2024 05:27 PM IST
ದಶರಥನ ಆಸ್ಥಾನಕ್ಕೆ ವಿಶ್ವಾಮಿತ್ರ
- ಅಪಾರ ಪರಾಕ್ರಮಿಯಾದ ನಿನ್ನ ಮೊದಲನೆಯ ಮಗನಾದ ರಾಮನ ಸಹಾಯದ ಅವಶ್ಯಕತೆ ನನಗಿದೆ. ಆದ್ದರಿಂದ ಮನಸ್ಸನ್ನು ಬದಲಿಸದೆ ಅವನನ್ನು ನನ್ನೊಡನೆ ಕಳುಹಿಸು ಎಂದು ವಿಶ್ವಾಮಿತ್ರರು ದಶರಥನಲ್ಲಿ ಕೇಳುತ್ತಾರೆ. ನಂತರ ಏನಾಗುತ್ತದೆ ನೋಡಿ. (ಬರಹ: ಎಚ್.ಸತೀಶ್, ಜ್ಯೋತಿಷಿ).
ದ್ವಾರಪಾಲಕರ ಮುಖಾಂತರ ತನ್ನನ್ನು ಭೇಟಿ ಮಾಡಲು ವಿಶ್ವಾಮಿತ್ರರು ಆಗಮಿಸಿರುವುದು ದಶರಥನಿಗೆ ತಿಳಿಯುತ್ತದೆ. ಸ್ವತ: ಬ್ರಹ್ಮರ್ಷಿಗಳೇ ತನ್ನನ್ನು ಭೇಟಿ ಮಾಡಲು ಬಂದಿರುವ ವಿಚಾರವನ್ನು ತಿಳಿದು ಸಂತೋಷವಾಗುತ್ತದೆ. ತನ್ನ ಕರ್ತವ್ಯವಂತೆ ಅವರನ್ನು ಅರಮನೆಯ ಒಳಗೆ ಕರೆತರಲು ಮಹಾದ್ವಾರದ ಕಡೆ ತೆರಳುತ್ತಾನೆ. ವಸಿಷ್ಠರ ಆದೇಶದಂತೆ ಮಹಾರಾಜನು ವಿಶ್ವಮಿತ್ರನ್ನು ಗೌರವಾಧರಗಳೊಂದಿಗೆ ಅರಮನೆಗೆ ಆಹ್ವಾನಿಸುತ್ತಾನೆ. ವಿಶ್ವಾಮಿತ್ರರು ದಶರಥನನ್ನು ರಾಜ್ಯದ ಪ್ರಗತಿಯ ಬಗ್ಗೆ ವಿಚಾರಿಸುತ್ತಾರೆ. ಕೇವಲ ಬಂಧು ಮಿತ್ರರಲ್ಲದೆ ಶತ್ರು ರಾಜರ ಬಗ್ಗೆಯೂ ವಿಶ್ವಾಮಿತ್ರರು ವಿಚಾರ ಸಂಗ್ರಹಣೆ ಮಾಡುತ್ತಾರೆ. ಆಸ್ಥಾನದಲ್ಲಿ ವಿಶ್ವಾಮಿತ್ರರಿಗೆ ಗೌರವದ ಸ್ಥಾನವನ್ನು ನೀಡಿ ಅವರ ಆಗಮನದಿಂದ ತನಗೆ ಅಪರಿಮಿತ ಆನಂದವಾಗಿದೆ ಎಂದು ತಿಳಿಸುತ್ತಾನೆ. ಬ್ರಹ್ಮರ್ಷಿಗಳಾದ ನಿಮಗೆ ಯಾವುದು ಅಸಾಧ್ಯವಲ್ಲ.
ತಾಜಾ ಫೋಟೊಗಳು
ರಾಜ್ಯಕ್ಕೆ ಬಂದಿರುವ ಹಿನ್ನೆಲೆ ಏನು?
ಆದರೂ ಸಹ ನನ್ನನ್ನು ಕಾಣಲೆಂದು ನನ್ನ ರಾಜ್ಯಕ್ಕೆ ಬಂದಿರುವ ಹಿನ್ನೆಲೆ ಏನು? ನನ್ನಿಂದ ನಿಮಗೆ ಆಗಬೇಕಾಗಿರುವ ಸೇವೆ ಯಾವುದು ಎಂದು ಕೇಳುತ್ತಾನೆ. ಮಹಾರಾಜನ ಈ ಮಾತುಗಳು ವಿಶ್ವಾಮಿತ್ರರಲ್ಲಿ ಸಂತೋಷವನ್ನು ಉಂಟುಮಾಡುತ್ತದೆ. ವಿಶ್ವಾಮಿತ್ರರು ರಾಜನನ್ನು ಕುರಿತು ನಿನ್ನಿಂದ ಒಂದು ದೊಡ್ಡ ಕೆಲಸವಾಗಬೇಕಾಗಿದೆ. ಅ ನಿರೀಕ್ಷೆಯಿಂದ ನಾನು ನಿನ್ನಲ್ಲಿಗೆ ಬಂದಿದ್ದೇನೆ. ನಿನ್ನಿಂದ ನಿರಾಸೆಯಾಗದು ಎಂದು ತಿಳಿದಿದ್ದೇನೆ ಎನ್ನುತ್ತಾರೆ.
ಸುಬಾಹು ಮತ್ತು ಮಾರೀಚರ ಉಪಟಳ
ಮಹಾರಾಜನೇ ವಸಿಷ್ಠರ ಮಾರ್ಗದರ್ಶನದಲ್ಲಿ ನೀನು ಮಾಡುವ ಕೆಲಸಗಳೆಲ್ಲ ಸತ್ಯದ ಹಾದಿಯಲ್ಲಿಯೇ ಇರುತ್ತದೆ. ಮೊದಲು ನಾನು ಕೇಳುವ ಕೆಲಸವನ್ನು ಮಾಡಿ ಕೊಡುವೆ ಎಂದು ಮಾತನ್ನು ನೀಡು. ಕಾರಣವೇನೆಂದರೆ ಇದು ನನಗೆ ಅತಿ ಮುಖ್ಯವಾದ ಕೆಲಸವಾಗಿದೆ. ನಾನೊಂದು ವ್ರತದಲ್ಲಿ ನಿರತನಾಗಿದ್ದೇನೆ. ಈ ವ್ರತದ ಅನುಷ್ಠಾನಕ್ಕೆ ಇಬ್ಬರು ರಾಕ್ಷಸರು ಇನ್ನಿಲ್ಲದ ತೊಂದರೆಯನ್ನು ನೀಡುತ್ತಿದ್ದಾರೆ. ಸುಬಾಹು ಮತ್ತು ಮಾರೀಚರೆಂಬ ಅವರಿಬ್ಬರೂ ಮಹಾಪರಾಕ್ರಮಿಗಳು. ಯುದ್ಧದಲ್ಲಿ ಸುಲಭವಾಗಿ ಅವರನ್ನು ಜಯಿಸಲು ಸಾಧ್ಯವಿಲ್ಲ. ಇವರ ಉಪಟಳವನ್ನು ತಾಳಲಾರದೆ ಆಶ್ರಮವನ್ನು ತೊರೆದು ನಿನ್ನಲ್ಲಿಗೆ ಬಂದಿದ್ದೇನೆ.
ಈ ವ್ರತದ ಮಧ್ಯೆ ಬೇರೆಯವರ ಮೇಲೆ ಕೋಪಗೊಳ್ಳಬಾರದು. ಬೇರೆಯವರನ್ನು ಶಪಿಸಲು ಬಾರದು. ಇದರಿಂದಾಗಿ ನಾನು ಅವರನ್ನು ಶಿಕ್ಷಿಸಲು ಸಾಧ್ಯವಿಲ್ಲ. ಒಂದು ವೇಳೆ ಹಾಗೆ ಮಾಡಿದರೆ ಅದರಿಂದ ನನ್ನ ವ್ರತಭಂಗವಾಗುತ್ತದೆ. ಈ ಮಾತಿಗೆ ಮಹಾರಾಜನು ಆ ರಾಕ್ಷಸರ ಬಗ್ಗೆ ನಿಮಗೆ ಇನ್ನೂ ಯೋಚನೆ ಬೇಡ. ಈಗಲೇ ನಾನು ನಿಮ್ಮೊಡನೆ ಬಂದು ಅವರ ಸಂಹಾರವನ್ನು ಮಾಡುತ್ತೇನೆ. ಇನ್ನು ಮುಂದೆ ನಿಮ್ಮ ವ್ರತಾಚರಣೆಯು ಯಾವುದೇ ಅಡೆತಡೆ ಇಲ್ಲದೆ ಸರಾಗವಾಗಿ ನಡೆಯಲಿದೆ. ನನ್ನ ಜೀವವಿರುವವರೆಗೂ ಸತ್ಯಕ್ಕೆ ಜಯ ತಂದುಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಹೇಳುತ್ತಾನೆ.
ರಾಮನ ಸಹಾಯದ ಅವಶ್ಯಕತೆ ಇದೆ
ಮಹಾರಾಜ ಈ ಕೆಲಸದಲ್ಲಿ ನೀನು ಸಮರ್ಥ ಎಂದು ನನಗೆ ತಿಳಿದಿದೆ. ಆದರೆ ನನಗೆ ನಿನ್ನ ಸಹಾಯದ ಅಗತ್ಯವಿಲ್ಲ. ನನಗೆ ಸತ್ಯನಿಷ್ಠನಾದ, ಅಪಾರ ಪರಾಕ್ರಮಿಯಾದ ನಿನ್ನ ಮೊದಲನೆಯ ಮಗನಾದ ರಾಮನ ಸಹಾಯದ ಅವಶ್ಯಕತೆ ನನಗಿದೆ. ಆದ್ದರಿಂದ ಮನಸ್ಸನ್ನು ಬದಲಿಸದೆ ಅವನನ್ನು ನನ್ನೊಡನೆ ಕಳುಹಿಸು ಎಂದು ತಿಳಿಸುತ್ತಾನೆ. ನಿನ್ನ ಮಗನಿಗೆ ನನ್ನ ರಕ್ಷಣೆ ಮತ್ತು ಸಹಕಾರ ಸದಾಕಾಲ ಇರುತ್ತದೆ. ಧೈರ್ಯಶಾಲಿಯಾದ ಅವನು ರಾಕ್ಷಸರನ್ನು ವಿನಾಶ ಮಾಡಿ, ನಾನು ಮಾಡುವ ಯಜ್ಞವನ್ನು ಕಾಪಾಡುವಲ್ಲಿ ಯಶಸ್ವಿಯಾಗುತ್ತಾನೆ ಎಂದು ಹೇಳುತ್ತಾನೆ.
ರಾಮನಲ್ಲದೆ ಈ ರಾಕ್ಷಸರನ್ನು ಕೊಲ್ಲಲು ಯಾರಿಂದಲೂ ಸಾಧ್ಯವಿಲ್ಲ
ಈ ಕೆಲಸದಿಂದಾಗಿ ರಾಮನಿಗೆ ಅಪಾರವಾದ ಕೀರ್ತಿಯು ದೊರೆಯುತ್ತದೆ. ಅಲ್ಲದೆ ಅನೇಕ ವಿಧದ ಯಶಸ್ಸು ಅವನದಾಗುತ್ತದೆ. ರಾಮನಲ್ಲದೆ ಈ ರಾಕ್ಷಸರನ್ನು ಕೊಲ್ಲಲು ಬೇರೆ ಯಾರಿಂದಲೂ ಸಾಧ್ಯವಾಗುವುದಿಲ್ಲ ಎಂದು ವಿಶ್ವಾಮಿತ್ರರು ತಿಳಿಸುತ್ತಾರೆ. ರಾಮನ ಮೇಲೆ ನಿಮಗೆ ವಿಶೇಷವಾದ ಪ್ರೀತಿ ಮತ್ತು ಅಕ್ಕರೆ ಇರುವುದರಿಂದ ಅವನನ್ನು ಕಳಿಸುಕೊಳ್ಳಲು ನಿಮ್ಮ ಮನಸ್ಸು ಒಪ್ಪುವುದಿಲ್ಲ. ಈ ಸತ್ಯದ ಅರಿವು ನನಗಿದೆ. ವಿಶ್ವಾಮಿತ್ರನ್ನು ಕುರಿತು ದಶರಥನು ನನ್ನ ಮಗನ ವಯಸ್ಸು ಚಿಕ್ಕದು. ಆದ್ದರಿಂದ ಅವನನ್ನು ಅಪಾಯಕ್ಕೆ ತಳ್ಳಲು ನಾನು ಸಿದ್ಧನಿಲ್ಲ ಎಂದು ಹೇಳುತ್ತಾನೆ. ಆಗ ವಿಶ್ವಾಮಿತ್ರರು ನಿನ್ನ ಮಗ ವಯಸ್ಸಿನಲ್ಲಿ ಚಿಕ್ಕವನಿರಬಹುದು, ಆದರೆ ಅವನ ಯುದ್ಧ ಕೌಶಲ್ಯಕ್ಕೆ ಸರಿ ಸಮಾನವಾಗಿ ನಿಲ್ಲಬಲ್ಲವರು ಮೂರು ಲೋಕದಲ್ಲಿಯೂ ಯಾರು ಇಲ್ಲ ಎಂದು ತಿಳಿಸುತ್ತಾರೆ. ದಶರಥನು ಒಂದು ಕ್ಷಣ ಚಿಂತಾ ಕ್ರಾಂತನಾಗುತ್ತಾನೆ.
ವಿಭಾಗ