logo
ಕನ್ನಡ ಸುದ್ದಿ  /  ಕ್ರೀಡೆ  /  ಕಾರ್ಲೊಸ್ ಅಲ್ಕರಾಜ್ ಫ್ರೆಂಚ್ ಓಪನ್ ಚಾಂಪಿಯನ್; ಅಲೆಕ್ಸಾಂಡರ್ ಜ್ವೆರೆವ್ ಮಣಿಸಿ 3ನೇ ಪ್ರಶಸ್ತಿ ಗೆದ್ದ ಸ್ಪೇನ್ ತಾರೆ

ಕಾರ್ಲೊಸ್ ಅಲ್ಕರಾಜ್ ಫ್ರೆಂಚ್ ಓಪನ್ ಚಾಂಪಿಯನ್; ಅಲೆಕ್ಸಾಂಡರ್ ಜ್ವೆರೆವ್ ಮಣಿಸಿ 3ನೇ ಪ್ರಶಸ್ತಿ ಗೆದ್ದ ಸ್ಪೇನ್ ತಾರೆ

Prasanna Kumar P N HT Kannada

Jun 10, 2024 08:04 AM IST

google News

ಕಾರ್ಲೊಸ್ ಅಲ್ಕರಾಜ್ ಫ್ರೆಂಚ್ ಓಪನ್ ಚಾಂಪಿಯನ್; ಅಲೆಕ್ಸಾಂಡರ್ ಜ್ವೆರೆವ್ ಮಣಿಸಿ 3ನೇ ಪ್ರಶಸ್ತಿ ಗೆದ್ದ ಸ್ಪೇನ್ ತಾರೆ

    • French Open 2024: ಫ್ರೆಂಚ್ ಓಪನ್ 2024 ಫೈನಲ್ ಪಂದ್ಯದಲ್ಲಿ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ವಿರುದ್ಧ ಸ್ಪೇನ್​ ಯುವ ಆಟಗಾರ ಕಾರ್ಲೊಸ್ ಅಲ್ಕರಾಜ್ ಗೆದ್ದು ಚೊಚ್ಚಲ ಕಿರೀಟಕ್ಕೆ ಮುತ್ತಿಕ್ಕಿದ್ದಾರೆ.
ಕಾರ್ಲೊಸ್ ಅಲ್ಕರಾಜ್ ಫ್ರೆಂಚ್ ಓಪನ್ ಚಾಂಪಿಯನ್; ಅಲೆಕ್ಸಾಂಡರ್ ಜ್ವೆರೆವ್ ಮಣಿಸಿ 3ನೇ ಪ್ರಶಸ್ತಿ ಗೆದ್ದ ಸ್ಪೇನ್ ತಾರೆ
ಕಾರ್ಲೊಸ್ ಅಲ್ಕರಾಜ್ ಫ್ರೆಂಚ್ ಓಪನ್ ಚಾಂಪಿಯನ್; ಅಲೆಕ್ಸಾಂಡರ್ ಜ್ವೆರೆವ್ ಮಣಿಸಿ 3ನೇ ಪ್ರಶಸ್ತಿ ಗೆದ್ದ ಸ್ಪೇನ್ ತಾರೆ

ಸ್ಪೇನ್​ನ ಯುವ ಆಟಗಾರ ಹಾಗೂ ವಿಶ್ವದ ಮೂರನೇ ಶ್ರೇಯಾಂಕಿತ ಕಾರ್ಲೊಸ್ ಅಲ್ಕರಾಜ್ (Carlos Alcaraz) ಅವರು ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ (Alexander Zverev) ಅವರನ್ನು ಐದು ಸೆಟ್‌ಗಳ ರೋಚಕ ಪಂದ್ಯದಲ್ಲಿ ಸೋಲಿಸಿ ತಮ್ಮ ಚೊಚ್ಚಲ ಫ್ರೆಂಚ್ ಓಪನ್ ಪ್ರಶಸ್ತಿಯನ್ನು (French Open 2024) ಮುಡಿಗೇರಿಸಿಕೊಂಡಿದ್ದಾರೆ. ಜಿದ್ದಾಜಿದ್ದಿನ ಫೈನಲ್ ಪಂದ್ಯದಲ್ಲಿ ಜಯಿಸುವ ಮೂಲಕ ಅಲ್ಕರಾಜ್, ತನ್ನ ವೃತ್ತಿಜೀವನದ ಮೂರನೇ ಗ್ರ್ಯಾಂಡ್ ಸ್ಲಾಂ ಪ್ರಶಸ್ತಿಗೆ ಮುತ್ತಿಕ್ಕಿದರು. ರೋಲ್ಯಾಂಡ್ ಗ್ಯಾರೋಸ್ ಪ್ರಶಸ್ತಿಯನ್ನು ಗೆದ್ದ ಸ್ಪೇನ್​​​ನ 7ನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

ರೋಲ್ಯಾಂಡ್ ಗ್ಯಾರಸ್​​​ನ ಕ್ಲೇಕೋರ್ಟ್​​ನಲ್ಲಿ ಜೂನ್ 9ರಂದು ನಡೆದ ಪ್ರಶಸ್ತಿ ಸುತ್ತಿನ ಸಮರದಲ್ಲಿ ಮೊದಲ ನಾಲ್ಕು ಸೆಟ್​ಗಳಲ್ಲಿ ಸಮಬಲದ ಹೋರಾಟ ನಡೆಯಿತು. ಬಳಿಕ ಮೂರನೇ ಶ್ರೇಯಾಂಕದ ಅಲ್ಕರಾಜ್, ನಿರ್ಣಾಯಕ ಸೆಟ್​​ನಲ್ಲಿ ಗೆದ್ದು ಬೀಗಿದರು. ವಿಶ್ವದ ನಾಲ್ಕನೇ ಶ್ರೇಯಾಂಕಿತ ಜ್ವೆರೆವ್ ವಿರುದ್ಧ ನಡೆದ 4 ಗಂಟೆ, 19 ನಿಮಿಷಗಳ ಹೋರಾಟದಲ್ಲಿ ಅಲ್ಕರಾಜ್, 6-3, 2-6, 5-7, 6-1, 6-2 ಸೆಟ್‌ಗಳಿಂದ ಗೆದ್ದು ಬೀಗಿದರು. ಮೊದಲ ಸೆಟ್​​ನಿಂದಲೇ ನಿಕಟ ಹೋರಾಟ ಏರ್ಪಟ್ಟರೂ ಅಲ್ಕರಾಜ್ 46 ನಿಮಿಷಗಳಲ್ಲಿ ಜಯದ ನಗೆ ಬೀರಿದರು.

ಆದರೆ, 2 ಮತ್ತು 3ನೇ ಸೆಟ್​​ನಲ್ಲಿ ಪ್ರಬಲ ಪೈಪೋಟಿ ನೀಡುವ ಮೂಲಕ ಜ್ವೆರೆವ್ ಗೆದ್ದುಕೊಂಡರು. 2ನೇ ಸೆಟ್​ ಅನ್ನು 52 ನಿಮಿಷಗಳಲ್ಲಿ ಕೈ ವಶ ಮಾಡಿಕೊಂಡ ಜ್ವೆರೆವ್, 3ನೇ ಸೆಟ್ ಅನ್ನು 1 ಗಂಟೆ 5 ನಿಮಿಷಗಳ ಕಾಲ ಹೋರಾಟ ನಡೆಸಿ ಗೆದ್ದರು. 3ನೇ ಸೆಟ್ ಅನ್ನು ವಶಪಡಿಸಿಕೊಳ್ಳುವಲ್ಲಿ ಉತ್ತಮ ಅವಕಾಶ ಹೊಂದಿದ್ದರು. ಆದರೆ ಸಾಧ್ಯವಾಗಲಿಲ್ಲ. ಹಾಗಾಗಿ 3 ಸೆಟ್​​ಗಳಲ್ಲಿ 2-1 ರಿಂದ ಜ್ವೆರೆವ್ ಮುನ್ನಡೆ ಕಾಯ್ದುಕೊಂಡರು. ಆದರೆ ನಾಲ್ಕನೇ ಸೆಟ್​ನಲ್ಲಿ ಅಲ್ಕರಾಜ್ ತೀವ್ರ ಪೈಪೋಟಿ ಒಡ್ಡಿದರು.

4ನೇ ಸೆಟ್​​ನಲ್ಲಿ ಅಲ್ಕರಾಜ್​ ಆರಂಭದಿಂದಲೇ ಮುನ್ನಡೆ ಸಾಧಿಸಿದರು. ಯಾವುದೇ ಹಂತದಲ್ಲಿ ಜ್ವೆರೆವ್ ಮುನ್ನಡೆ ಪಡೆಯಲು ಸಾಧ್ಯವಾಗಲೇ ಇಲ್ಲ. ಆ ಸೆಟ್ ಅನ್ನು 6-1 ರಿಂದ ಸೋತರು. ಇದರೊಂದಿಗೆ 4 ಸೆಟ್​ಗಳ ಮುಕ್ತಾಯಕ್ಕೆ ಉಭಯ ಆಟಗಾರರು 2-2ರಲ್ಲಿ ಸಮಬಲ ಸಾಧಿಸಿದರು. ಆದರೆ ನಿರ್ಣಾಯಕ ಹಾಗೂ ಅಂತಿಮ ಸೆಟ್​​ನಲ್ಲಿ ಅಲ್ಕರಾಜ್ ಮೇಲುಗೈ ಸಾಧಿಸಿದರು. ಎರಡು ಮತ್ತು ಮೂರನೇ ಸೆಟ್​​ ಸೋತರೂ ಅದ್ಭುತವಾಗಿ ಕಂಬ್ಯಾಕ್ ಮಾಡಿದ ಅಲ್ಕರಾಜ್, ಕೊನೆಯ 2 ಸೆಟ್​ಗಳನ್ನು ಗೆದ್ದು ಚಾಂಪಿಯನ್​ ಆದರು.

ಅಲ್ಕರಾಜ್ ಇದಕ್ಕೂ ಮುನ್ನ 2022ರಲ್ಲಿ ಯುಎಸ್​ ಓಪನ್ ಪ್ರಶಸ್ತಿ ಮತ್ತು 2023ರಲ್ಲಿ ವಿಂಬಲ್ಡನ್ ಪ್ರಶಸ್ತಿ ಗೆದ್ದುಕೊಂಡಿದ್ದರು. 27 ವರ್ಷದ ಜ್ವೆರೆವ್ ಚೊಚ್ಚಲ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿನ ಹೊಸ್ತಿಲಲ್ಲಿ ಎಡವಿದ್ದರು. ಈ ಮುನ್ನ 2020ರ ಯುಎಸ್​ ಓಪನ್​​ ಫೈನಲ್​​ನಲ್ಲೂ ನಿರಾಸೆ ಅನುಭವಿಸಿದ್ದರು. ರೋಲ್ಯಾಂಡ್ ಗ್ಯಾರೋಸ್​​​ನಲ್ಲಿ ಕಳೆದ ಮೂರು ಆವೃತ್ತಿಗಳಲ್ಲಿ ಸೆಮಿಫೈನಲ್​​ನಲ್ಲಿ ನಿರ್ಗಮಿಸಿದ್ದ ಜ್ವೆರೆವ್ ಈ ಫೈನಲ್​​ಗೇರಿದ್ದೇ ಸಾಧನೆ ಎನಿಸಿತು. 2004ರ ನಂತರದಲ್ಲಿ ದಿಗ್ಗಜರಾದ ರಾಫೆಲ್, ನೊವಾಕ್ ಜೊಕೊವಿಕ್ ಮತ್ತು ರೋಜರ್ ಫೆಡರರ್ ಅವರಲ್ಲಿ ಒಬ್ಬರೂ ಇಲ್ಲದೆ ನಡೆದ ಮೊದಲ ಫ್ರೆಂಚ್ ಓಪನ್ ಫೈನಲ್ ಆಗಿದೆ.

ಗೆದ್ದ ಅಲ್ಕರಾಜ್​ಗೆ ಸಿಕ್ಕ ಪ್ರಶಸ್ತಿಯ ಮೊತ್ತ ಎಷ್ಟು?

ಚೊಚ್ಚಲ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡ ಅಲ್ಕರಾಜ್ ಅವರಿಗೆ ದೊಡ್ಡ ಪ್ರಮಾಣದ ಮೊತ್ತ ಸಿಕ್ಕಿದೆ. ಪ್ರಶಸ್ತಿ ವಿಜೇತರಾದ ಅಲ್ಕರಾಜ್​ಗೆ 21.62 ಕೋಟಿ ಬಹುಮಾನ ಸಿಕ್ಕಿದೆ. ರನ್ನರ್​ಅಪ್​​​ ಜ್ವೆರೆವ್ 10.81 ಕೋಟಿ ಪಡೆದಿದ್ದಾರೆ. ಸೆಮಿಫೈನಲ್​​ನಲ್ಲಿ ನಿರ್ಗಮಿಸಿದ ಜಾನಿಕ್ ಸಿನ್ನರ್ ಮತ್ತು ಕ್ಯಾಸ್ಪರ್ ರೂಡ್ ಅವರಿಗೆ 650,000 ಡಾಲರ್​ ಅಂದರೆ 5 ಕೋಟಿಗೂ ಹೆಚ್ಚು ಬಹುಮಾನ ಸಿಕ್ಕಿದೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ