ಡಿಜೈರ್ ವರ್ಸಸ್ ಡಿಜೈರ್: ಮಾರುತಿ ಡಿಜೈರ್ ಹೊಸ ಮಾಡೆಲ್‌ಗೆ ಕಾಯುವುದೇ? ಈಗಾಗಲೇ ಮಾರಾಟವಾಗುತ್ತಿರುವುದನ್ನು ಖರೀದಿಸುವುದೇ? ಪರಿಶೀಲಿಸಿ
Oct 28, 2024 11:17 AM IST
2024ನೇ ಮಾರುತಿ ಸುಜುಕಿ ಡಿಜೈರ್ ಮಾಡೆಲ್ ಇದೇ ನವೆಂಬರ್ 11ರಂದು ಭಾರತೀಯ ಕಾರು ಮಾರುಕಟ್ಟೆಗೆ ಆಗಮಿಸಲಿದೆ.
- ಮಾರುತಿ ಸುಜುಕಿ ಫ್ಯಾಕ್ಟರಿಯಿಂದ ಹೊಸ ಡಿಜೈರ್ ಕಾರು ನವೆಂಬರ್ ತಿಂಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಮಾರಾಟವಾಗುತ್ತಿರುವ ಡಿಜೈರ್ ಕಾರು ಖರೀದಿಸುವುದು ಉತ್ತಮವೇ ಅಥವಾ ಹೊಸ ಮಾಡೆಲ್‌ಗೆ ಕಾಯುವುದು ಉತ್ತಮ ನಿರ್ಧಾರವೇ ಎಂದು ತಿಳಿಯೋಣ.
ಕಳೆದ ಕೆಲವು ವರ್ಷಗಳಿಂದ ಮಾರುತಿ ಸುಜುಕಿ ಕಂಪನಿಯ ಡಿಜೈರ್ ಕಾರು ಗ್ರಾಹಕರ ಅಚ್ಚುಮೆಚ್ಚಿನ ಆಯ್ಕೆಯಾಗಿದೆ. ಹಳೆಯ ಮಾಡೆಲ್ ಆಗಿರಲಿ, ಹೊಸ ಮಾಡೆಲ್ ಆಗಿರಲಿ, ಡಿಜೈರ್ ಕಾರು ಉತ್ತಮವೆಂಬ ಅಭಿಪ್ರಾಯ ಸಾಕಷ್ಟು ಜನರಲ್ಲಿದೆ. ಆದರೆ, ಈಗ ಇದೇ ದರದಲ್ಲಿ ಸಾಕಷ್ಟು ಇತರೆ ಕಾರುಗಳೂ ಇವೆ. ಸೆಡಾನ್ ಕಾರಿಗೆ ಬೇಡಿಕೆ ಗಮನಾರ್ಹವಾಗಿ ಕಡಿಮೆಯಾಗುತ್ತಿರುವ ಸಮಯದಲ್ಲಿ ಕಂಪನಿಯು ತನ್ನ ಡಿಜೈರ್ ಕಾರಿಗೆ ಮೊದಲ ಪ್ರಮುಖ ಅಪ್‌ಡೇಟ್ ಮಾಡಿದೆ. ಹೊಸ ಮಾಡೆಲ್ ಇದೇ ನವೆಂಬರ್‌ನಲ್ಲಿ ಬಿಡುಗಡೆಯಾಗಲಿದೆ. ಡಿಜೈರ್ ಖರೀದಿಸಬೇಕೆನ್ನುವವರು ಈಗಲೇ ಶೋರೂಂಗೆ ಭೇಟಿ ನೀಡಿ ಮಾರುಕಟ್ಟೆಯಲ್ಲಿರುವ ಡಿಜೈರ್ ಖರೀದಿಸುವುದು ಉತ್ತಮವೇ? ಅಥವಾ ಹೊಸ ಮಾಡೆಲ್ ಬಿಡುಗಡೆಯಾದ ಬಳಿಕ ಖರೀದಿಸುವುದು ಉತ್ತಮವೇ? ಖಂಡಿತಾ, ಇದು ಯೋಚಿಸಬೇಕಾದ ವಿಚಾರ.
2024ನೇ ಮಾರುತಿ ಸುಜುಕಿ ಡಿಜೈರ್ ಮಾಡೆಲ್ ಇದೇ ನವೆಂಬರ್ 11ರಂದು ಭಾರತೀಯ ಕಾರು ಮಾರುಕಟ್ಟೆಗೆ ಆಗಮಿಸಲಿದೆ. ಈ ಕಾರಿನ ಅಂದ ಸಾಕಷ್ಟು ಬದಲಾಗಿರುವ ಸೂಚನೆಯಿದೆ. ಹೊರನೋಟಕ್ಕೆ ತನ್ನ ಸ್ಟೈಲ್ ಬದಲಾಯಿಸಿಕೊಳ್ಳಲಿದೆ. ಇದರೊಂದಿಗೆ ಕ್ಯಾಬಿನ್‌ನಲ್ಲೂ ಸಾಕಷ್ಟು ಅಪ್‌ಡೇಟ್ ನಿರೀಕ್ಷಿಸಬಹುದು. ಮಾರುತಿ ಸುಜುಕಿ ಕಂಪನಿಯ ಇತರೆ ಕಾರುಗಳಿಗಿಂತ ಭಿನ್ನವಾಗಿರುವ ಸೂಚನೆಯಿದೆ. ಹೀಗಿರುವಾಗ ಈಗಲೇ ಡಿಜೈರ್ ಖರೀದಿಸುವುದೇ? ಅಥವಾ ಹೊಸ ಮಾಡೆಲ್ ಬಂದ ನಂತರ ಹೋಲಿಕೆ ಮಾಡಿ ನೋಡೋಣ ಎಂದು ಕಾಯುವುದಾ?
ಮಾರುತಿ ಸುಜುಕಿ ಡಿಜೈರ್ ದರವೇನು?
ಅರೆನಾ ರಿಟೇಲ್ ಚೇನ್‌ಗಳಲ್ಲಿ ಮಾರುತಿ ಡಿಜೈರ್ ಕಾರನ್ನು ಮಾರಾಟ ಮಾಡಲಾಗುತ್ತಿದೆ. ಡಿಜೈರ್ ಆರಂಭಿಕ ಎಕ್ಸ್‌ಶೋರೂಂ ದರ 6.50 ಲಕ್ಷ ರೂಪಾಯಿ ಇದೆ. ಗರಿಷ್ಠ 9.40 ಲಕ್ಷ ರೂಪಾಯಿವರೆಗಿದೆ. ಇದೇ ಸಮಯದಲ್ಲಿ ಎಲ್‌ಐಎಕ್ಸ್‌ಐ, ವಿಎಕ್ಸ್‌ಐ, ಝಡ್‌ಎಕ್ಸ್‌ಐ ಮತ್ತು ಝಡ್‌ಎಕ್ಸ್‌ಐ ಪ್ಲಸ್ ಎಂಬ ಮಾಡೆಲ್‌ಗಳೂ ಇವೆ. ಫ್ಯಾಕ್ಟರಿ ಫಿಟ್ಟೆಡ್ ಸಿಎನ್‌ಜಿ ಆಯ್ಕೆಯಲ್ಲೂ ಲಭ್ಯವಿದೆ. ಈಗ ಎಕ್ಸ್‌ಚೇಂಜ್ ಬೋನಸ್ 15 ಸಾವಿರ ರೂಪಾಯಿ ಇದೆ. ಇದರೊಂದಿಗೆ 10 ಸಾವಿರ ರೂಪಾಯಿ ಕ್ಯಾಶ್ ಡಿಸ್ಕೌಂಟ್ ಕೂಡ ಇದೆ.
ಇದೇ ಸಮಯದಲ್ಲಿ ಆಯಾ ಡೀಲರ್‌ಶಿಪ್‌ಗಳಲ್ಲಿ ಬೇರೆಬೇರೆ ರೀತಿಯ ಆಫರ್‌ಗಳು ನಡೆಯುತ್ತಿವೆ. ಹೊಸ ಮಾರುತಿ ಡಿಜೈರ್ ಬಿಡುಗಡೆಗೆ ಸನಿಹದಲ್ಲಿರುವಾಗ ಡೀಲರ್‌ಶಿಪ್‌ಗಳಿಗೆ ತಮ್ಮಲ್ಲಿರುವ ಹಳೆಯ ಡಿಜೈರ್ ದಾಸ್ತಾನು ಖಾಲಿ ಮಾಡಬೇಕಾದ ಒತ್ತಡವೂ ಇದೆ. ಇದರಿಂದಾಗಿ ಸಾಕಷ್ಟು ಆಫರ್‌ಗಳು ದೊರಕುತ್ತಿವೆ.
ಡಿಜೈರ್ ವರ್ಸಸ್ ಡಿಜೈರ್: ಯಾವುದನ್ನು ಖರೀದಿಸಲಿ?
ನಿಜಕ್ಕೂ ಡಿಜೈರ್ ಖರೀದಿಸಬೇಕೆನ್ನುವವರಿಗೆ ಇದು ಇಕ್ಕಟ್ಟಿನ ಸಮಯ. ಆ ಡಿಜೈರಾ? ಈ ಡಿಜೈರಾ ಎಂದು ಯೋಚಿಸುತ್ತಿರಬಹುದು. ಹಳೆಯದಕ್ಕಿಂತ ಹೊಸ ಮಾಡೆಲ್ ಉತ್ತಮ ಎನ್ನುವುದು ಸುಳ್ಳಲ್ಲ. ಇನ್ನು ಹತ್ತು ಹದಿನಾಲ್ಕು ದಿನ ಕಾದರೆ ಇನ್ನಷ್ಟು ಫೀಚರ್‌ನ, ಹೊಸ ಡಿಸೈನ್‌ನ ಡಿಜೈರ್ ಕಾರು ಖರೀದಿಸಬಹುದು. ಹೀಗಾಗಿ, ಹೊಸ ಕಾರು ಖರೀದಿಸುವುದು ಉತ್ತಮ ಎನ್ನುವುದು ನಮ್ಮ ಅಭಿಪ್ರಾಯ. ಆದರೆ, ಬಜೆಟ್ ಟೈಟ್ ಇದ್ದವರು ಇನ್ನೊಮ್ಮೆ ಯೋಚಿಸಿ.
ನಿಮ್ಮಲ್ಲಿ ಬಜೆಟ್ ಕಡಿಮೆ ಇದೆ ಎಂದಾದರೆ, ಹತ್ತಿಪ್ಪತ್ತು ಐವತ್ತು ಸಾವಿರ ರೂಪಾಯಿ ಹೆಚ್ಚು ನೀಡುವುದು ಕಷ್ಟ ಎನಿಸಿದರೆ ಹಳೆಯ ಡಿಜೈರ್ ಖರೀದಿಸುವುದು ಬುದ್ಧಿವಂತ ನಿರ್ಧಾರವಾಗಬಹುದು. ಹೊಸ ಡಿಜೈರ್‌ನಲ್ಲಿ ಹಲವು ಫೀಚರ್‌ಗಳು ಇರಲಿದೆ, ಅಂದವೂ ಹೆಚ್ಚಲಿದೆ. ಇದರಿಂದ ದರದಲ್ಲೂ ಸಾಕಷ್ಟು ವ್ಯತ್ಯಾಸ ಇರಬಹುದು. ಈಗ ದೀಪಾವಳಿ ಆಫರ್ ನಡೆಯುತ್ತಿರುವುದರಿಂದ ಹಳೆ ಡಿಜೈರ್ ಖರೀದಿಸಲು ಸೂಕ್ತ ಸಮಯವಾಗಿದೆ.
ಹೊಸ ಡಿಜೈರ್‌ನ ಎಕ್ಸ್ ಶೋರೂಂ ದರ 7-10 ಲಕ್ಷ ರೂಪಾಯಿ ಆಸುಪಾಸಿನಲ್ಲಿರಬಹುದು. ಇದರಲ್ಲಿ 1.2 ಲೀಟರ್‌ನ ಮೂರು ಸಿಲಿಂಡರ್‌ನ ಪೆಟ್ರೋಲ್ ಎಂಜಿನ್ ಇರಲಿದೆ. ಈಗಿನ ಡಿಜೈರ್‌ನಲ್ಲಿ 1.2 ಲೀಟರ್‌ನ ನಾಲ್ಕು ಸಿಲಿಂಡರ್ ಮೋಟಾರ್ ಇದೆ.