ಸುರಕ್ಷತೆಗೆ ಅಪಾಯ, ಆ ದೇಶದಲ್ಲಿ 2024ರ ಕಿಯಾ ಕಾರ್ನಿವಲ್ ಹಿಂತೆಗೆತ; ಭಾರತದಲ್ಲೂ ಬಿಡುಗಡೆಯಾಗಿದೆ ಈ ಎಂಪಿವಿ
Oct 07, 2024 07:06 PM IST
ಸುರಕ್ಷತೆಗೆ ಅಪಾಯ, ಈ ದೇಶದಲ್ಲಿ 2024ರ ಕಿಯಾ ಕಾರ್ನಿವಲ್ ಹಿಂತೆಗೆತ
- ಇತ್ತೀಚೆಗೆ ಭಾರತದಲ್ಲಿ ಕಿಯಾ ಕಾರ್ನಿವಲ್ 2024ರ ಎಂಪಿವಿ ಬಿಡುಗಡೆಯಾಗಿದೆ. ಇದರ ಎಕ್ಸ್ ಶೋರೂಂ ದರ 63.90 ಲಕ್ಷ ರೂಪಾಯಿ ಇದೆ. ಆದರೆ, ಜಾಗತಿಕವಾಗಿ ಈ ಕಾರು ಈ ಹಿಂದೆಯೇ ಬಿಡುಗಡೆಯಾಗಿದೆ. ಯಾವ ದೇಶದಲ್ಲಿ ಸುರಕ್ಷತೆಯ ಕಾರಣದಿಂದ ಈ ಕಾರನ್ನು ಹಿಂತೆಗೆದುಕೊಳ್ಳಲಾಗಿದೆ ತಿಳಿಯೋಣ.
ದಕ್ಷಿಣ ಕೊರಿಯಾದ ವಾಹನ ತಯಾರಿಕಾ ಕಂಪನಿ ಕಿಯಾವು 2024ರ ಕಾರ್ನಿವಲ್ ಕಾರನ್ನು ಆಸ್ಟ್ರೇಲಿಯಾದ ಗ್ರಾಹಕರಿಂದ ಹಿಂತೆಗೆದುಕೊMಡಿದೆ. ಕಾರಿನ ಅಸಿಸ್ಟೆಡ್ ಸ್ಟಿಯರಿಂಗ್ ವೀಲ್ ಕಾರ್ಯದಲ್ಲಿ ಸಂಭಾವ್ಯ ತೊಂದರೆ ಇರುವ ಕಾರಣಕ್ಕೆ ಗ್ರಾಹಕರಿಂದ ಈ ಕಾರನ್ನು ಹಿಂತೆಗೆದುಕೊಂಡಿದೆ. ತೊಂದರೆ ಇರುವ ಎಂಪಿವಿಗಳನ್ನು ಸರಿಪಡಿಸಿ ಗ್ರಾಹಕರಿಗೆ ವಾಪಸ್ ನೀಡಲಿದೆ. "ತಯಾರಿಕೆಯ ಸಂದರ್ಭದಲ್ಲಿ ಆದ ದೋಷವನ್ನು ಸರಿಪಡಿಸುವ ಸಲುವಾಗಿ ಹಿಂತೆಗೆದುಕೊಳ್ಳಲಾಗುತ್ತದೆ. ಸ್ಟಿಯರಿಂಗ್ ಕಾಲಮ್ ಶಾಫ್ಟ್‌ಗೆ ಹಾನಿಯಾಗುವ ಅಪಾಯ ಇರುವ ಕಾರಣ ರಿಕಾಲ್ ಮಾಡಲಾಗಿದೆ. ಪವರ್ ಅಸಿಸ್ಟೆಡ್ ಸ್ಟಿಯರಿಂಗ್‌ಗೆ ತೊಂದರೆಯಾಗುವ ಕಾರಣದಿಂದ ಹಿಂತೆಗೆದುಕೊಳ್ಳಲಾಗಿದೆ" ಎಂದು ಕಿಯಾ ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.
ಏನಿದು ಹಿಂತೆಗೆತ?
ಕಾರು ಕಂಪನಿಗಳು ತಮ್ಮ ವಾಹನದಲ್ಲಿ ಏನಾದರೂ ತೊಂದರೆ ಇದೆ, ಭವಿಷ್ಯದಲ್ಲಿ ಪ್ರಯಾಣಿಕರಿಗೆ ತೊಂದರೆಯಾಬಹುದು ಎಂದೆನಿಸಿದರೆ ಸ್ವಯಂ ಪ್ರೇರಿತವಾಗಿ ಕಾರುಗಳನ್ನು ಹಿಂತೆಗೆದುಕೊಂಡು ಸರಿಪಡಿಸಿಕೊಡುತ್ತವೆ. ಈ ಮೂಲಕ ಕಂಪನಿಗಳು ತಾವು ಗ್ರಾಹಕರ ಪರವಾಗಿ ಇರುವವರು, ನಂಬಿಕಸ್ಥ ಎಂದು ಸಾಬೀತುಪಡಿಸುತ್ತವೆ. ಭಾರತದಲ್ಲಿಯೂ ಹಲವು ಕಂಪನಿಗಳು ನಿರ್ದಿಷ್ಟ ಅವಧಿಯಲ್ಲಿ ತಯಾರಾದ ವಾಹನಗಳನ್ನು ಇದೇ ರೀತಿ ರಿಕಾಲ್ ಮಾಡಿದ ಘಟನೆಗಳು ಆಗಾಗ ನಡೆಯುತ್ತಿವೆ.
ಭಾರತಕ್ಕೆ ಆಗಮಿಸಿದ ಕಾರ್ನಿವಲ್ ಎಂಪಿವಿ
ಕೆಲವು ದಿನಗಳ ಹಿಂದೆ ಕಿಯಾ ಕಂಪನಿಯು ಬಹುನಿರೀಕ್ಷಿತ ಕಾರ್ನಿವಲ್ 2024 ಎಂಪಿವಿಯನ್ನು ಭಾರತದ ಮಾರುಕಟ್ಟೆಯಲ್ಲಿ ಲಾಂಚ್ ಮಾಡಿದೆ. 2024ರ ಕಿಯಾ ಕಾರ್ನಿವಲ್ ಆರಂಭಿಕ ಎಕ್ಸ್ ಶೋರೂಂ ದರ 63.90 ಲಕ್ಷ ರೂ ಇದೆ. ಕಿಯಾ ಕಾರ್ನಿವಲ್‌ಗೆ ಮೂರು ವರ್ಷದ ವಾರೆಂಟಿ, ಮೂರು ವರ್ಷದ ಉಚಿತ ರೋಡ್ ಸೈಡ್ ಅಸಿಸ್ಟೆನ್ಸ್ ಮತ್ತು ಮೂರು ವರ್ಷದ ಉಚಿತ ಮೇಂಟೆನ್ಸ್ ಸೇವೆಯನ್ನು ತನ್ನ ಗ್ರಾಹಕರಿಗೆ ನೀಡುತ್ತದೆ.
2024ರ ಕಿಯಾ ಕಾರ್ನಿವಲ್ ಹಳೆಯ ಕಾರ್ನಿವಲ್‌ನ ಎಕ್ಸ್‌ಟೀರಿಯರ್‌ಗೆ ಹೋಲಿಸಿದರೆ ಸಾಕಷ್ಟು ಬದಲಾಗಿದೆ. ನೋಡಲು ಇದು ಎಂಪಿವಿ ಬದಲು ಎಸ್‌ಯುವಿಯತೆ ಕಾಣಿಸುತ್ತದೆ. ರಸ್ತೆಯಲ್ಲಿ ಬಿಗ್‌ಬಿ ಕಾರು ಎನ್ನಬಹುದು. ಎಸ್‌ಯುವಿಯಿಂದ ಸ್ಪೂರ್ತಿ ಪಡೆದ ವಿನ್ಯಾಸ ಇದರದ್ದಾಗಿದೆ. ವಿಶಾಲವಾದ ಗ್ರಿಲ್‌ಗಳಿಂದ ಕಾರು ಎದ್ದು ಕಾಣಿಸುತ್ತದೆ. ಲಂಬವಾಗಿ ಜೋಡಿಸಿರುವ ಎಲ್‌ಇಡಿ ಹೆಡ್‌ಲೈಟ್‌ಗಳು, ಎಲ್ ಆಕಾರದ ಡೇಟೈಮ್ ರನ್ನಿಂಗ್ ಲೈಟ್‌ಗಳು ಇವೆ. 18 ಇಂಚಿನ ಅಲಾಯ್ ವೀಲ್‌ನಿಂದ ಈ ಎಂಪಿವಿಯ ರೋಡ್ ಪ್ರೆಸೆನ್ಸ್ ಅದ್ಧೂರಿಯಾಗಿದೆ. ಕಾರಿನ ಬದಿಗಳೂ ಆಕರ್ಷಕ. ಕಾರ್ನಿವಲ್ ಆಕರ್ಷಕವಾಗಿ ಕಾಣಿಸುತ್ತದೆ. ಅಡ್ವೆಂಚರ್ ಪರ್ಸನಾಲಿಟಿಯತೆ ಕಾಣಿಸುತ್ತದೆ. ಹಿಂಭಾಗದಲ್ಲಿ ಕಿಯಾದ ಸಿಗ್ನೇಚರ್ ಎಲ್‌ಇಡಿ ಟೇಲ್ ಲೈಟ್‌ಗಳಿವೆ.
ಡೂಯೆಲ್ ಪನೋರಾಮಿಕ್ ಡಿಸ್ಪ್ಲೇಗಳೊಂದಿಗೆ ಮೂರು ಸ್ಕ್ರೀನ್‌ಗಳಿವೆ. 12.3 ಇಚಿನ ಇನ್‌ಫೋಟೈನ್‌ಮೆಂಟ್ ಸ್ಕ್ರೀನ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಗೆ ಬೆಂಬಲ ನೀಡುತ್ತದೆ. 12.3 ಇಂಚಿನ ಡ್ರೈವರ್ ಡಿಸ್‌ಪ್ಲೇ ಇದೆ. 12 ಸ್ಪೀಕರ್‌ನ ಬಾಷ್ ಸೌಂಡ್ ಸಿಸ್ಟಮ್ ಇದೆ. 11 ಇಂಚಿನ ಹೆಡ್ಸ್ ಅಪ್ ಡಿಸ್‌ಪ್ಲೇ ಕೂಡ ಇದೆ.