ಕಿಯಾ ಕಾರು ಅಭಿಮಾನಿಗಳಿಗೆ ಪುಳಕ, ಬಹುನಿರೀಕ್ಷಿತ ಹೊಸ ಕಿಯಾ ಕಾರ್ನಿವಲ್ ಎಂಪಿವಿ ಬಿಡುಗಡೆ; ದರ, ಫೀಚರ್ಸ್ ತಿಳಿಯೋಣ ಬನ್ನಿ
ಬಹುನಿರೀಕ್ಷಿತ ಕಿಯಾ ಕಾರ್ನಿವಲ್ 2024 ಕಾರು ಭಾರತದಲ್ಲಿ ಬಿಡುಗಡೆಯಾಗಿದೆ. ಇದರ ಎಕ್ಸ್ ಶೋರೂಂ ದರ 63.90 ಲಕ್ಷ ರೂಪಾಯಿ. ಇದರಲ್ಲಿ 12.3 ಇಂಚಿನ ಟಚ್‌ಸ್ಕ್ರೀನ್, 12.3 ಇಂಚಿನ ಡಿಜಿಟಲ್ ಡ್ರೈವರ್ ಡಿಸ್ ಪ್ಲೇ, 12 ಸ್ಪೀಕರ್ ಬಾಷ್ ಸೌಂಡ್ ಸಿಸ್ಟಮ್, 11 ಇಂಚಿನ ಡಿಸ್‌ಪ್ಲೇ ಸೇರಿದಂತೆ ಸಾಕಷ್ಟು ಫೀಚರ್‌ಗಳಿವೆ.
ಬೆಂಗಳೂರು: ಕಿಯಾ ಕಂಪನಿಯು ಬಹುನಿರೀಕ್ಷಿತ ಕಾರ್ನಿವಲ್ 2024 ಎಂಪಿವಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದನ್ನು ಸಿಬಿಯು (ಸಂಪೂರ್ಣವಾಗಿ ನಿರ್ಮಿಸಿ) ಹಾದಿಯಲ್ಲಿ ಭಾರತಕ್ಕೆ ತಂದಿದೆ. 2024ರ ಕಿಯಾ ಕಾರ್ನಿವಲ್ ಆರಂಭಿಕ ಎಕ್ಸ್ ಶೋರೂಂ ದರ 63.90 ಲಕ್ಷ ರೂಪಾಯಿ ಇದೆ. ಇದು ಲಿಮೊಸಿನ್ ಪ್ಲಸ್ ಆವೃತ್ತಿಯ ದರ. ಕಿಯಾ ಕಾರ್ನಿವಲ್‌ಗೆ ಮೂರು ವರ್ಷದ ವಾರೆಂಟಿ, ಮೂರು ವರ್ಷದ ಉಚಿತ ರೋಡ್ ಸೈಡ್ ಅಸಿಸ್ಟೆನ್ಸ್ ಮತ್ತು ಮೂರು ವರ್ಷದ ಉಚಿತ ಮೇಂಟೆನ್ಸ್ ಸೇವೆಯನ್ನು ಕಂಪನಿ ನೀಡುತ್ತಿದೆ.
2023ರಲ್ಲಿ ಹಿಂದಿನ ತಲೆಮಾರಿನ ಕಾರ್ನಿವಲ್ ಕಾರನ್ನು ಶೋರೂಂನಿಂದ ಕಿಯಾ ಕಂಪನಿ ವಾಪಸ್‌ತೆಗೆದುಕೊಡಿತ್ತು. 2020-23ರಲ್ಲಿ 14,542 ಕಾರ್ನಿವಲ್ ಕಾರುಗಳು ಮಾರಾಟವಾಗಿತ್ತು. ಈಗಾಗಲೇ ಹೊಸ ಕಾರ್ನಿವಲ್ ಅನ್ನು 2,796 ಗ್ರಾಹಕರು ಬುಕ್ಕಿಂಗ್ ಮಾಡಿದ್ದಾರೆ ಎಂದು ಕಂಪನಿ ತಿಳಿಸಿದೆ. ಕಂಪನಿಯು ಹೊಸ ಕಾರ್ನಿವಲ್ ಎಂಪಿವಿ ಜತೆಗೆ ಕಿಯಾ ಇವಿ9 ಎಲೆಕ್ಟ್ರಿಕ್ ಎಸ್‌ಯುವಿಯನ್ನೂ ಬಿಡುಗಡೆ ಮಾಡಿದೆ.
ಕಿಯಾ ಕಾರ್ನಿವಲ್ ಎಕ್ಸ್‌ಟೀರಿಯರ್ ಹೇಗಿದೆ?
2024ರ ಕಿಯಾ ಕಾರ್ನಿವಲ್‌ನ ಹೊರನೋಟ ಸಾಕಷ್ಟು ಬದಲಾಗಿದೆ. ಹಳೆಯ ಕಾರ್ನಿವಲ್‌ಗೆ ಹೋಲಿಸಿದರೆ ಸಾಕಷ್ಟು ಬೋಲ್ಡ್ ಆಗಿದೆ. ಮೊದಲ ನೋಟಕ್ಕೆ ಎಸ್‌ಯುವಿಯತೆ ಕಾಣಿಸುತ್ತದೆ. ಎಸ್‌ಯುವಿಯಿಂದ ಸ್ಪೂರ್ತಿ ಪಡೆದ ವಿನ್ಯಾಸ ಇದರದ್ದಾಗಿದೆ. ವಿಶಾಲವಾದ ಗ್ರಿಲ್‌ಗಳಿಂದ ಕಾರು ಎದ್ದು ಕಾಣಿಸುತ್ತದೆ. ಇದರೊಂದಮಿಗೆ ಲಂಬವಾಗಿ ಜೋಡಿಸಿರುವ ಎಲ್‌ಇಡಿ ಹೆಡ್‌ಲೈಟ್‌ಗಳು, ಎಲ್ ಆಕಾರದ ಡೇಟೈಮ್ ರನ್ನಿಂಗ್ ಲೈಟ್‌ಗಳು ಇವೆ. 18 ಇಂಚಿನ ಅಲಾಯ್ ವೀಲ್‌ನಿಂದ ಈ ಎಂಪಿವಿಯ ರೋಡ್ ಪ್ರೆಸೆನ್ಸ್ ಇನ್ನಷ್ಟು ಅಮೋಘವಾಗಿದೆ.
ಸೈಡ್‌ನಿಂದ ನೋಡಿದರೂ ನೂತನ ಕಾರ್ನಿವಲ್ ಆಕರ್ಷಕವಾಗಿ ಕಾಣಿಸುತ್ತದೆ. ಅಡ್ವೆಂಚರ್ ಪರ್ಸನಾಲಿಟಿಯತೆ ಕಾಣಿಸುತ್ತದೆ. ಹಿಂಭಾಗದಲ್ಲಿ ಕಿಯಾದ ಸಿಗ್ನೇಚರ್ ಎಲ್‌ಇಡಿ ಟೇಲ್ ಲೈಟ್‌ಗಳಿವೆ. ಕಿಯಾ ಸೆಲ್ಟೋಸ್, ಸೊನೆಟ್ ಬಳಿಕ ಸಾಕಷ್ಟು ಅಪ್‌ಡೇಟ್ ಆದ ವಿನ್ಯಾಸ ಕಾಣಿಸುತ್ತದೆ. ಒಟ್ಟಾರೆ ಸದೃಢ ಸ್ನಾಯುಗಳನ್ನು ತುಂಬಿಕೊಂಡ ದೃಢಕಾಯನಂತೆ ನೂತನ ಕಾರ್ನಿವಲ್ ಕಾಣಿಸುತ್ತದೆ.
ಕಾರಿನೊಳಗೆ ನೋಡಿ
ಕಿಯಾ ಕಾರ್ನಿವಲ್‌ನ ಇಂಟೀರಿಯರ್ ಕೂಡ ಅತ್ಯಾಕರ್ಷಕವಾಗಿದೆ. ಗುಣಮಟ್ಟದ ವಸ್ತುಗಳಿದ ನಿರ್ಮಾಣದ ಜತೆಗೆ ಅತ್ಯಾಧುನಿಕ ಟೆಕ್ ಫೀಚರ್‌ಗಳು ಗಮನ ಸೆಳೆಯುತ್ತವೆ. ಕಂದು ಮತ್ತು ಕಪ್ಪು ಥೀಮ್‌ನಲ್ಲಿ ಈ ಏಳು ಸೀಟಿನ ಎಂಪಿವಿಯನ್ನು ವಿನ್ಯಾಸ ಮಾಡಲಾಗಿದೆ.
ಫೀಚರ್ಸ್ ವಿಷಯದಲ್ಲೂ ಕಾರ್ನಿವಲ್ ಗಮನ ಸೆಳೆಯುತ್ತದೆ. ಡ್ಯೂಯೆಲ್ ಪನೋರಾಮಿಕ್ ಡಿಸ್ಪ್ಲೇಗಳೊಂದಿಗೆ ಮೂರು ಸ್ಕ್ರೀನ್‌ಗಳಿವೆ. 12.3 ಇಚಿನ ಇನ್‌ಫೋಟೈನ್‌ಮೆಂಟ್ ಸ್ಕ್ರೀನ್ ವೈರ್‌ಲೆಸ್ ಆಂಡ್ರಾಯ್ಡ್ ಆಟೋ ಮತ್ತು ಆಪಲ್ ಕಾರ್ ಪ್ಲೇಗೆ ಬೆಂಬಲ ನೀಡುತ್ತದೆ. 12.3 ಇಂಚಿನ ಡ್ರೈವರ್ ಡಿಸ್‌ಪ್ಲೇ ಇದೆ. 12 ಸ್ಪೀಕರ್‌ನ ಬಾಷ್ ಸೌಂಡ್ ಸಿಸ್ಟಮ್ ಇದೆ. 11 ಇಂಚಿನ ಹೆಡ್ಸ್ ಅಪ್ ಡಿಸ್‌ಪ್ಲೇ ಕೂಡ ಇದೆ. ಮೊದಲ ಮತ್ತು ಎರಡನೇ ಸಾಲಿನಲ್ಲಿ ಪವರ್ಡ್ ಮತ್ತು ವೆಂಟಿಲೇಟೆಡ್ ಸೀಟುಗಳಿವೆ. ವೈರ್‌ಲೆಸ್ ಫೋನ್ ಚಾರ್ಜಿಂಗ್, 3 ವಲಯದ ಕ್ಲೈಮೇಟ್ ಕಂಟ್ರೋಲ್, ವಿದ್ಯುನ್ಮಾನವಾಗಿ ನಿರ್ವಹಿಸಬಹುದಾದ ಸ್ಲೈಡಿಂಗ್ ಡೋರ್‌ಗಳು, ಕನೆಕ್ಟೆಡ್ ಕಾರ್ ಫಂಕ್ಷನಾಲಿಟಿ ಸೇರಿದಂತೆ ಹಲವು ವೈಶಿಷ್ಟ್ಯಗಳು ಇವೆ.
ಸುರಕ್ಷತೆಯ ವಿಷಯದಲ್ಲೂ 2024ರ ಕಾರ್ನಿವಲ್ ಗಮನ ಸೆಳೆಯುತ್ತದೆ. ಇದು ಎಂಟು ಏರ್‌ಬ್ಯಾಗ್‌ಗಳು, ಇಬಿಡಿ ಜತೆಗೆ ಎಬಿಎಸ್, ಆಲ್ ವೀಲ್ ಡಿಸ್ಕ್ ಬ್ರೇಕ್‌ಗಳು, ಟೈರ್ ಪ್ರೆಷರ್ ಮಾನಿಟರಿಂಗ್ ವ್ಯವಸ್ಥೆ, ಮುಂಭಾಗ ಮತ್ತು ಹಿಂಭಾಗದಲ್ಲಿ ಪಾರ್ಕಿಂಗ್ ಸೆನ್ಸಾರ್‌ಗಳು ಇವೆ. ಇದರೊಂದಿಗೆ 360 ಡಿಗ್ರಿ ಕ್ಯಾಮೆರಾ ವ್ಯವಸ್ಥೆ, ಲೆವೆಲ್ 2 ಎಡಿಎಸ್ ವ್ಯವಸ್ಥೆ, 23 ಸುರಕ್ಷತಾ ಫೀಚರ್‌ಗಳು ಇವೆ. ಅಂದರೆ, ಮುಂಭಾಗಕ್ಕೆ ಪಲ್ಟಿಯಾಗುವುದನ್ನು ತಪ್ಪಿಸುವ ವ್ಯವಸ್ಥೆ, ಲೇನ್ ತಪ್ಪಿ ಪ್ರಯಾಣಿಸಿದರೆ ಎಚ್ಚರಿಸುವ ವ್ಯವಸ್ಥೆ, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಮುಂತಾದ ಫೀಚರ್‌ಗಳಿವೆ.
ಇದು 22 ಲೀಟರ್‌ನ ಡೀಸೆಲ್ ಎಂಜಿನ್ ಹೊಂದಿದೆ. 190 ಬಿಎಚ್‌ಪಿ ಮತ್ತು 441 ಎನ್‌ಎಂ ಟಾರ್ಕ್ ಒದಗಿಸುತ್ತದೆ. 8 ಸ್ಪೀಡ್ ಆಟೋಮ್ಯಾಟಿಕ್ ಗಿಯರ್‌ಬಾಕ್ಸ್ ಇದೆ. ಭಾರತದಲ್ಲಿ ಇದು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಆದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ 3.5 ಲೀಟರ್ ಪೆಟ್ರೋಲ್ ಎಂಜಿನ್ ಇದೆ.
ಇಲ್ಲಿಗೆ ಭೇಟಿ ನೀಡಿ>> ವಾಹನ ಪ್ರಪಂಚ