Petrol VS Electric Scooters: ಪೆಟ್ರೋಲ್ ಎಂಜಿನ್‌ನ ಸ್ಕೂಟರ್‌ಗಿಂತ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಉತ್ತಮ ಏಕೆ? ಇಲ್ಲಿವೆ 12 ಕಾರಣಗಳು
Sep 11, 2024 09:39 AM IST
ಪೆಟ್ರೋಲ್ ಎಂಜಿನ್‌ನ ಸ್ಕೂಟರ್‌ಗಿಂತ ಎಲೆಕ್ಟ್ರಿಕ್ ಸ್ಕೂಟರ್ ಖರೀದಿ ಉತ್ತಮ ಏಕೆ?
- Petrol VS Electric Scooters: ಸಾಕಷ್ಟು ಜನರು ಈಗ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುತ್ತಿದ್ದಾರೆ. ಹೊಸದಾಗಿ ಸ್ಕೂಟರ್ ಖರೀದಿಸುವವರಿಗೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲೇ ಅಥವಾ ಪೆಟ್ರೋಲ್ ಸ್ಕೂಟರ್ ಖರೀದಿಸಲೇ ಎಂಬ ಸಂದಿಗ್ಧತೆ ಉಂಟಾಗುವ ಸಮಯವಿದು. ಪೆಟ್ರೋಲ್‌ಗಿಂತ ಎಲೆಕ್ಟ್ರಿಕ್ ಸ್ಕೂಟರ್ ಏಕೆ ಉತ್ತಮ ಎಂದು ತಿಳಿಯೋಣ ಬನ್ನಿ.
Petrol VS Electric Scooters: ನೀವೀಗ ಗಮನಿಸಿರಬಹುದು. ರಸ್ತೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗಿದೆ. ಪುಟ್ಟ ಪಟ್ಟಣಗಳಿಂದ ಬೆಂಗಳೂರಿನಂತಹ ಮಹಾನಗರಿಗಳಲ್ಲಿ ಎಲ್ಲೆಲ್ಲೂ ಸದ್ದಿಲ್ಲದೆ ಇ-ಸ್ಕೂಟರ್‌ಗಳು ಸಾಗುತ್ತಿವೆ. ಪ್ರತಿನಿತ್ಯ ಪೆಟ್ರೋಲ್ ತುಂಬಿಸುವ ಕಷ್ಟವಿಲ್ಲದೆ ಚಾರ್ಜ್ ಮಾಡಿಕೊಂಡು ಸ್ಕೂಟರ್ ಚಲಾಯಿಸುವವರ ಸಂಖ್ಯೆ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಲಿದೆ. ಹೊಸದಾಗಿ ಸ್ಕೂಟರ್ ಖರೀದಿಸುವವರಿಗೆ ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಲೇ ಅಥವಾ ಪೆಟ್ರೋಲ್ ಸ್ಕೂಟರ್ ಖರೀದಿಸಲೇ ಎಂಬ ಸಂದಿಗ್ಧತೆ ಉಂಟಾಗುವ ಸಮಯವಿದು. ಮೊದಲೆಲ್ಲ ಎಲೆಕ್ಟ್ರಿಕ್ ಸ್ಕೂಟರ್ ಖರೀದಿದಾರರು "ನಮ್ಮ ಮನೆಯಲ್ಲಿ ಚಾರ್ಜಿಂಗ್ ಪಾಯಿಂಟ್ ಇಲ್ಲ, ನಮ್ಮ ಮನೆ ತಳಮಹಡಿಯಲ್ಲಿ ಇಲ್ಲ" ಎಂದೆಲ್ಲ ಹೇಳುತ್ತಿದ್ದರು. ಈಗ ಮೊಬೈಲ್‌ನಂತೆ ರಿಮೋವೆಬಲ್ ಬ್ಯಾಟರಿಯ ಸ್ಕೂಟರ್‌ಗಳು ಬಂದಿದ್ದು, ಮನೆಯೊಳಗೆ ಬ್ಯಾಟರಿ ತೆಗೆದುಕೊಂಡು ಹೋಗಿ ಚಾರ್ಜ್ ಮಾಡುವ ಅವಕಾಶವಿದೆ. ಆಥೆರ್ ಎನರ್ಜಿ, ಓಲಾ ಎಲೆಕ್ಟ್ರಿಕ್, ಹೀರೋ ಎಲೆಕ್ಟ್ರಿಕ್ ಆಪ್ಟಿಮಾ, ಬಜಾಜ್ ಚೇತಕ್ ಎಲೆಕ್ಟ್ರಿಕ್, ಹೀರೋ ವಿದಾ ವಿ1, ಟಿವಿಎಸ್ ಐಕ್ಯೂಬ್, ಒಕಿನವಾ ಪ್ರೈಸ್ ಸೇರಿದಂತೆ ಹತ್ತು ಹಲವು ಎಲೆಕ್ಟ್ರಿಕ್ ಸ್ಕೂಟರ್‌ಗಳು ಲಭ್ಯ ಇವೆ. ಪೆಟ್ರೋಲ್ ಸ್ಕೂಟರ್‌ಗಿಂತ ಎಲೆಕ್ಟ್ರಿಕ್ ಸ್ಕೂಟರ್‌ಗಳು ಏಕೆ ಉತ್ತಮ ಎಂದು ತಿಳಿಯೋಣ ಬನ್ನಿ.
- ಕಡಿಮೆ ಖರ್ಚು: ಪೆಟ್ರೋಲ್ ಎಂಜಿನ್ ಸ್ಕೂಟರ್‌ಗಳಿಗೆ ಮಾಡುವ ಖರ್ಚಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಸ್ಕೂಟರ್‌ಗಳು ಕಡಿಮೆ ವೆಚ್ಚದಾಯಕ. ಪೆಟ್ರೊಲ್‌ಗಿಂತ ವಿದ್ಯುತ್ ಕಡಿಮೆ ದರದಲ್ಲಿ ದೊರಕುತ್ತದೆ. ಹೀಗಾಗಿ, ಸಾಕಷ್ಟು ಜನರು ಪೆಟ್ರೋಲ್ ಸ್ಕೂಟರ್‌ಗಳಿಗೆ ಗುಡ್‌ಬೈ ಹೇಳುತ್ತಿದ್ದಾರೆ.
- ಸೈಲೆಂಟ್: ರಸ್ತೆಯಲ್ಲಿ ವಾಹನಗಳ ಶಬ್ದ ಮಾಲಿನ್ಯ ಅತಿಯಾಗುತ್ತಿದೆ. ಪೆಟ್ರೋಲ್ ಸ್ಕೂಟರ್‌ಗಳಿಗೆ ಹೋಲಿಸಿದರೆ ಇ-ವಾಹನಗಳು ಕಡಿಮೆ ಶಬ್ದ ಮಾಡುತ್ತವೆ. ಕೆಲವೊಮ್ಮೆ ನಮ್ಮ ಸುತ್ತ ವಾಹನ ಪಾಸ್ ಆಗಿರುವುದೇ ಗೊತ್ತಾಗುವುದಿಲ್ಲ. ಸೈಲೆಂಟ್ ಆಗಿ ಇವಾಹನಗಳು ಸಾಗುತ್ತವೆ.
- ಕಡಿಮೆ ನಿರ್ವಹಣೆ: ಪೆಟ್ರೋಲ್ ಎಂಜಿನ್ ಸ್ಕೂಟರ್‌ಗಳನ್ನು ರಿಪೇರಿ ಮಾಡಲು ಆಗಾಗ ಗ್ಯಾರೇಜ್‌ಗೆ ಹೋಗುತ್ತಿರಬೇಕಾಗುತ್ತದೆ. ಆದರೆ, ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಇಷ್ಟೊಂದು ನಿರ್ವಹಣೆ ಅಗತ್ಯವಿಲ್ಲ. ಪೆಟ್ರೋಲ್ ಸ್ಕೂಟರ್‌ಗಳಲ್ಲಿ ಇರುವಷ್ಟು ಬಿಡಿಭಾಗಗಳು ಇ-ಸ್ಕೂಟರ್‌ಗಳಲ್ಲ ಇರುವುದಿಲ್ಲ.
- ಚಾರ್ಜ್ ಮಾಡುವುದು ಸುಲಭ: ಮೊಬೈಲ್ ಚಾರ್ಜ್ ಮಾಡಿದಂತೆ ಎಲೆಕ್ಟ್ರಿಕ್ ಸ್ಕೂಟರ್ ಚಾರ್ಜ್ ಮಾಡಬಹುದು. ಈಗ ಅಲ್ಲಲ್ಲಿ ಎಲೆಕ್ಟ್ರಿಕ್ ಚಾರ್ಜಿಂಗ್ ಪಾಯಿಂಟ್‌ಗಳೂ ಲಭ್ಯ ಇವೆ.
- ಹೆಚ್ಚು ರೇಂಜ್: ಒಂದು ಪೂರ್ತಿ ಚಾರ್ಜ್‌ಗೆ ಸುಮಾರು 100 ಕಿ.ಮೀ.ಯಷ್ಟು ಎಲೆಕ್ಟ್ರಿಕ್ ಸ್ಕೂಟರ್‌ಗಳು ಸಾಗುತ್ತವೆ. ಅಂದರೆ, ಎರಡು ಮೂರು ಲೀಟರ್ ಪೆಟ್ರೋಲ್ ವೆಚ್ಚ ಉಳಿತಾಯವಾಗುತ್ತದೆ. ಇಷ್ಟು ದೂರ ಕಿ.ಮೀ. ಸಾಗುವುದರಿಂದ ಸುಮಾರು 40-50 ಕಿ.ಮೀ. ದೂರದ ಸ್ಥಳಗಳಿಗೆ ನಿಶ್ಚಿಂತೆಯಿಂದ ಹೋಗಿ ಬರಬಹುದು.
- ಇಂಧನ ಸೋರಿಕೆ ಭಯವಿಲ್ಲ: ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಇಂಧನ ಟ್ಯಾಂಕ್ ಇರುವುದಿಲ್ಲ. ಹೀಗಾಗಿ, ಇಂಧನ ಲೀಕೇಜ್ ಭಯವಿಲ್ಲ.
- ಅತ್ಯುತ್ತಮ ಟಾರ್ಕ್: ಎಲೆಕ್ಟ್ರಿಕ್ ಸ್ಕೂಟರ್‌ಗಳು ಇನ್‌ಸ್ಟಾಂಟ್ ಟಾರ್ಕ್ ಹೊಂದಿವೆ. ಸ್ಟಾರ್ಟ್ ಮಾಡಿ ಆಕ್ಸಿಲರೇಟರ್ ತಿರುಗಿಸಿದರೆ ಸಾಕು ವೇಗ ಪಡೆದುಕೊಳ್ಳುತ್ತವೆ. ಇದರಿಂದ ಸಿಟಿಯಲ್ಲಿ ಸ್ಕೂಟರ್ ಸವಾರಿ ಸ್ಮೂತಾಗಿರುತ್ತದೆ.
- ಸ್ಮೂತ್ ಸವಾರಿ: ಪೆಟ್ರೋಲ್ ಸ್ಕೂಟರ್‌ಗಳಂತೆ ಎಲೆಕ್ಟ್ರಿಕ್ ಸ್ಕೂಟರ್‌ಗಳು ವೈಬ್ರೆಷನ್ ಅಥವಾ ಅಲ್ಲಾಡುವುದಿಲ್ಲ. ಸ್ಮೂತಾಗಿ ಚಾಲನೆ ಮಾಡಬಹುದು.
- ಬಳಕೆ ಸುಲಭ: ಪೆಟ್ರೋಲ್ ಎಂಜಿನ್‌ನಂತೆ ಮ್ಯಾನುಯಲ್ ಟ್ರಾನ್ಸ್‌ಮಿಷನ್, ಕ್ಲಚ್ ಹೊಂದಿರುವುದಿಲ್ಲ. ಇದರಿಂದ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಬಳಸುವುದು ಸುಲಭ. ಎಕ್ಸಿಲರೇಟರ್ ಕೊಟ್ಟರೆ ಮುಂದಕ್ಕೆ ಹೋಗುತ್ತದೆ. ಬಹುತೇಕ ಇಸ್ಕೂಟರ್‌ಗಳು ರಿವರ್ಸ್ ಕೂಡ ಸಾಗುತ್ತವೆ.
- ಖರೀದಿಯೂ ಸುಲಭ: ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಆನ್‌ಲೈನ್‌ನಲ್ಲಿಯೂ ಖರೀದಿಸಬಹುದು.
- ದರ ಕಡಿಮೆ: ಈಗ ಕಡಿಮೆ ದರಕ್ಕೆ ಎಲೆಕ್ಟ್ರಿಕ್ ಸ್ಕೂಟರ್‌ಗಳು ದೊರಕುತ್ತವೆ. ಪೆಟ್ರೋಲ್ ಸ್ಕೂಟರ್‌ಗಳ ದರ 1 ಲಕ್ಷ ರೂಪಾಯಿಗಿಂತ ಹೆಚ್ಚಿದೆ. ಕೆಲವು ಎಲೆಕ್ಟ್ರಿಕ್ ಸ್ಕೂಟರ್‌ಗಳ ದರ ಪೆಟ್ರೋಲ್ ಸ್ಕೂಟರ್‌ಗಿಂತ ತುಸು ಹೆಚ್ಚಿರಬಹುದು. ಆದರೆ, ಕಡಿಮೆ ದರದ ಇಸ್ಕೂಟರ್‌ಗಳು ಸಾಕಷ್ಟಿವೆ.
- ಫೀಚರ್‌ಗಳು: ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಈಗ ಸಾಕಷ್ಟು ಫೀಚರ್‌ಗಳಿವೆ. ಅಂದರೆ, ಮೊಬೈಲ್‌ನಲ್ಲಿರುವಂತೆ ಹಲವು ಕನೆಕ್ಟಿವ್, ಕಮ್ಯುನಿಕೇಷನ್ ಫೀಚರ್‌ಗಳಿವೆ. ಹೀಗಾಗಿ, ಪೆಟ್ರೋಲ್ ಸ್ಕೂಟರ್‌ಗಳಿಗಿಂತ ಎಲೆಕ್ಟ್ರಿಕ್ ಸ್ಕೂಟರ್‌ಗಳು ಹೆಚ್ಚು ಸ್ಮಾರ್ಟ್ ಆಗಿವೆ.
ಇದನ್ನೂ ಓದಿ: World EV Day: ಭಾರತಕ್ಕೆ ಆಗಮಿಸಲಿರುವ 10 ಎಲೆಕ್ಟ್ರಿಕ್ ಕಾರುಗಳಿವು, ವಿದ್ಯುತ್ ಕಾರುಪ್ರಿಯರು ಕಾದರೆ ಲಾಭವುಂಟು