Ola S1 Air: ಓಲಾ ಎಸ್‌1 ಎಲೆಕ್ಟ್ರಿಕ್‌ ಸ್ಕೂಟರ್‌ ದರ 84,999 ರೂ.ನಿಂದ ಆರಂಭ ನಿರೀಕ್ಷೆ, ಇಲ್ಲಿದೆ ಓಲಾ ಹೊಸ ಸ್ಕೂಟರ್‌ನ ಟೆಸ್ಟ್‌ ವಿಡಿಯೋ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ola S1 Air: ಓಲಾ ಎಸ್‌1 ಎಲೆಕ್ಟ್ರಿಕ್‌ ಸ್ಕೂಟರ್‌ ದರ 84,999 ರೂ.ನಿಂದ ಆರಂಭ ನಿರೀಕ್ಷೆ, ಇಲ್ಲಿದೆ ಓಲಾ ಹೊಸ ಸ್ಕೂಟರ್‌ನ ಟೆಸ್ಟ್‌ ವಿಡಿಯೋ

Ola S1 Air: ಓಲಾ ಎಸ್‌1 ಎಲೆಕ್ಟ್ರಿಕ್‌ ಸ್ಕೂಟರ್‌ ದರ 84,999 ರೂ.ನಿಂದ ಆರಂಭ ನಿರೀಕ್ಷೆ, ಇಲ್ಲಿದೆ ಓಲಾ ಹೊಸ ಸ್ಕೂಟರ್‌ನ ಟೆಸ್ಟ್‌ ವಿಡಿಯೋ

Ola S1 Air electric scooter: ಓಲಾದ ಬಹುನಿರೀಕ್ಷಿತ ಎಸ್‌1 ಏರ್‌ ಸ್ಕೂಟರ್‌ ಜುಲೈನಲ್ಲಿ ಲಾಂಚ್‌ ಆಗಲಿದೆ. ಇದಕ್ಕೂ ಮೊದಲು ಓಲಾ ಎಲೆಕ್ಟ್ರಿಕ್‌ ಈ ಸ್ಕೂಟರ್‌ನ ಟೆಸ್ಟ್‌ಗೆ ಸಂಬಂಧಪಟ್ಟ ಪುಟ್ಟ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದೆ.

ಓಲಾ ಎಸ್‌1 ಎಲೆಕ್ಟ್ರಿಕ್‌ ಸ್ಕೂಟರ್‌
ಓಲಾ ಎಸ್‌1 ಎಲೆಕ್ಟ್ರಿಕ್‌ ಸ್ಕೂಟರ್‌

ಎಲೆಕ್ಟ್ರಿಕ್‌ ಸ್ಕೂಟರ್‌ ಪ್ರಿಯರು ಬಹುನಿರೀಕ್ಷೆಯಿಂದ ಕಾಯುತ್ತಿರುವ Ola S1 Air ಸ್ಕೂಟರ್‌ ಈ ತಿಂಗಳು ಲಾಂಚ್‌ ಆಗಲಿದೆ. ಇದಕ್ಕೆ ಮೊದಲು ಓಲಾ ಎಲೆಕ್ಟ್ರಿಕ್‌ ಕಂಪನಿಯು ತನ್ನ ಟ್ವಿಟ್ಟರ್‌ ಹ್ಯಾಂಡಲ್‌ನಲ್ಲಿ ಈ ಸ್ಕೂಟರ್‌ ಕುರಿತಾದ ವಿಡಿಯೋವೊಂದನ್ನು ಷೇರ್‌ ಮಾಡಿದೆ. ಇದು Ola S1 Air ಸ್ಕೂಟರ್‌ ಅನ್ನು ವಿವಿಧ ಕಡೆಗಳಲ್ಲಿ ಟೆಸ್ಟ್‌ ಮಾಡಿರುವುದಕ್ಕೆ ಸಂಬಂಧಪಟ್ಟ ವಿಡಿಯೋವಾಗಿದೆ. ಈ ವಿಡಿಯೋದಲ್ಲಿ ವಿವಿಧ ರೈಡರ್‌ಗಳು ಈ ಸ್ಕೂಟರ್‌ನಲ್ಲಿ ವೇಗವಾಗಿ ಸಾಗುತ್ತ, ಒಂದೊಂದು ರಸ್ತೆಯಲ್ಲಿ ಹೋಗುತ್ತ, ಮತ್ತೆ ಒಂದಾಗುತ್ತ ಸಾಗುವ ದೃಶ್ಯವಿದೆ.

ಜುಲೈ ತಿಂಗಳಿನಿಂದಲೇ ಈ ಸ್ಕೂಟರ್‌ನ ಟೆಸ್ಟ್‌ ರೈಡ್‌ ಆರಂಭವಾಗಲಿದೆ ಎಂದು ಓಲಾ ಎಲೆಕ್ಟ್ರಿಕ್‌ ಕಂಪನಿಯು ತಿಳಿಸಿದೆ. ಈಗಾಗಲೇ ಕಂಪನಿಯು ಈ ಸ್ಕೂಟರ್‌ನ ಬುಕ್ಕಿಂಗ್‌ ಕೂಡ ಆರಂಭಿಸಿದೆ. ಆದರೆ, ಖರೀದಿ ಕಿಟಕಿ ಇನ್ನೂ ತೆರೆದಿಲ್ಲ. ಆಸಕ್ತರು ಈಗಲೇ ಬುಕ್ಕಿಂಗ್‌ ಮಾಡಿಡುವ ಅವಕಾಶ ನೀಡಿದೆ. ಈ ಎಲೆಕ್ಟ್ರಿಕ್‌ ಸ್ಕೂಟರ್‌ನ ದರ 84,999 ರೂ.ನಿಂದ ಆರಂಭವಾಗುವ ನಿರೀಕ್ಷೆಯಿದೆ. 109,000 ರೂ.ವರೆಗೂ ದರ ಇರುವ ಸಾಧ್ಯತೆಯಿದೆ. ಇವು ಎಕ್ಸ್‌ಶೋರೂಂ ದರ ಅಂದಾಜಾಗಿದ್ದು, ಆನ್‌ರೋಡ್‌ ದರ ಇನ್ನಷ್ಟು ಹೆಚ್ಚಿರಲಿದೆ.

Ola S1 Air ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ಗಂಟೆಗೆ ಗರಿಷ್ಠ 85 ಕಿ.ಮೀ. ಸಾಗುವ ಅವಕಾಶವಿರುವ ನಿರೀಕ್ಷೆಯಿದೆ. ಒಂದು ಫುಲ್‌ ಚಾರ್ಜ್‌ಗೆ 165 ಕಿ.ಮೀ. ಸಾಗಬಹುದು ಎನ್ನಲಾಗಿದೆ. ವಿನ್ಯಾಸದ ವಿಷಯದಲ್ಲಿ ಇದು ಎಸ್‌1 ಮತ್ತು ಎಸ್‌1 ಪ್ರೊದಂತೆಯೇ ಇದೆ. ಇದು ಐದು ಬಣ್ಣಗಳಲ್ಲಿ ದೊರಕಲಿದೆ. ಅಂದರೆ, ಕೋರಲ್‌ ಗ್ಲಾಮ್‌, ನಿಯೋ ಮಿಂಟ್‌, ಪೊರ್ಸೆಲಿನ್‌ ವೈಟ್‌, ಜೆಟ್‌ ಬ್ಲಾಕ್‌ ಮತ್ತು ಲಿಕ್ವಿಡ್‌ ಸಿಲ್ವರ್‌ ಬಣ್ಣಗಳಲ್ಲಿ ದೊರಕಲಿದೆ.

ಓಲಾ ಕಂಪನಿಯು ಈ ಎಸ್‌1 ಏರ್‌ ಸ್ಕೂಟರ್‌ ಅನ್ನು ಕಳೆದ ವರ್ಷವೇ ದೇಶದಲ್ಲಿ ಲಾಂಚ್‌ ಮಾಡಲಾಗಿದೆ. ಸಾಕಷ್ಟು ಜನರು ಇದನ್ನು ಬುಕ್ಕಿಂಗ್‌ ಮಾಡಿದ್ದಾರೆ. ಈ ರೀತಿ ಬುಕ್ಕಿಂಗ್‌ ಮಾಡಿದವರಿಗೆ ಇದೇ ಜುಲೈ ತಿಂಗಳಿನಲ್ಲಿ ಓಲಾ ಸ್ಕೂಟರ್‌ಗಳನ್ನು ವಿತರಣೆ ಮಾಡಲಾಗುತ್ತದೆ. Ola S1 Air ಸ್ಕೂಟರ್‌ನಲ್ಲಿ 2.5KWh ಲಿಥಿಯಂ-ಐಯಾನ್ ಬ್ಯಾಟರಿ ಇದೆ. ಪೂರ್ತಿ ಚಾರ್ಜ್‌ ಆಗಲು ಸುಮಾರು 4.5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. Ola S1 Air ಸ್ಕೂಟರ್‌ 4.3 ಸೆಕೆಂಡುಗಳಲ್ಲಿ 0 ರಿಂದ 40 ಕಿ.ಮೀ. ವೇಗ ಪಡೆದುಕೊಳ್ಳುತ್ತದೆ. ಈ ಸ್ಕೂಟರ್‌ನಲ್ಲಿ ಗಂಟೆಗೆ ಗರೀಷ್ಠ 85 ಕಿಮೀ ವೇಗದಲ್ಲಿ ಸಾಗಬಹುದು. ಇಕೋ, ಸ್ಪೋರ್ಟ್‌ ಮತ್ತು ರಿವರ್ಸ್‌ ಎಂಬ ಮೂರು ಆಯ್ಕೆಗಳನ್ನು ಈ ಸ್ಕೂಟರ್‌ ಹೊಂದಿದೆ. ಇಕೋ ಮೋಡ್‌ನಲ್ಲಿ ಸುಮಾರು 100 ಕಿ.ಮೀ. ಪ್ರಯಾಣಿಸಬಹುದು ಎಂದು ಕಂಪನಿ ತಿಳಿಸಿದೆ.

ಓಲಾ ಎಲೆಕ್ಟ್ರಿಕ್‌ ಕಂಪನಿಯು ತನ್ನ ಎರಡನೇ ಘಟಕವನ್ನು ಭಾರತದಲ್ಲಿ ತೆರೆಯುತ್ತಿದೆ.ಓಲಾ ಎಲೆಕ್ಟ್ರಿಕ್‌ನ ಸೆಲ್‌ ಗಿಗಾಫ್ಯಾಕ್ಟರಿಯು ತಮಿಳುನಾಡಿನ ಕೃಷ್ಣಗಿರಿಯಲ್ಲಿ ನಿರ್ಮಾಣಗೊಳ್ಳುತ್ತಿದೆ. ಇಲ್ಲಿ ಪ್ರತಿ ತಿಂಗಳು 10 ಗಿಗಾ ವ್ಯಾಟ್‌ ಅವರ್ಸ್‌ (ಜಿಡಬ್ಲ್ಯುಎಂ) ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಈ ಫ್ಯಾಕ್ಟರಿಯಲ್ಲಿ ಎಲೆಕ್ಟ್ರಿಕ್‌ ವಾಹನಗಳಿಗೆ ಮಾತ್ರವಲ್ಲದೆ ಇತರೆ ಅವಶ್ಯಕತೆಯ ಬ್ಯಾಟರಿಗಳನ್ನೂ ಉತ್ಪಾದಿಸಲಾಗುತ್ತದೆ. ದೊಡ್ಡ ಮಟ್ಟದಲ್ಲಿ ಚೀನಾದಂತೆ ಭಾರತದಲ್ಲಿ ಇಲ್ಲಿಯವರೆಗೆ ಬ್ಯಾಟರಿ ಸೆಲ್‌ ತಯಾರಿಕೆ ಮಾಡಲಾಗುತ್ತಿರಲಿಲ್ಲ. ಚೀನಾ, ಥೈವಾನ್‌ ಮತ್ತು ದಕ್ಷಿಣ ಕೊರಿಯಾದಲ್ಲಿ ಬ್ಯಾಟರಿ ಕೋಶಗಳ ಉತ್ಪಾದನೆಗೆ ಬೃಹತ್‌ ಫ್ಯಾಕ್ಟರಿಗಳಿವೆ. ಭಾರತದಲ್ಲಿ ಇಂತಹ ದೊಡ್ಡ ಬ್ಯಾಟರಿ ಫ್ಯಾಕ್ಟರಿಗಳು ಇಲ್ಲ. ಇದೀಗ ಈ ನಿರ್ವಾತವನ್ನು ಓಲಾ ಎಲೆಕ್ಟ್ರಿಕ್‌ ತಗ್ಗಿಸಲಿದೆ. ಈ ಕುರಿತು ಓಲಾ ಎಲೆಕ್ಟ್ರಿಕ್‌ ಕಂಪನಿಯು ಈಗಾಗಲೇ ಮಾಹಿತಿ ನೀಡಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.