logo
ಕನ್ನಡ ಸುದ್ದಿ  /  ಜೀವನಶೈಲಿ  /  ಸಣ್ಣ ಕಾರುಗಳನ್ನು ಎಸ್‌ಯುವಿ ನುಂಗಿತ್ತಾ! ಸೆಪ್ಟೆಂಬರ್‌ ವಾಹನ ಮಾರಾಟದಲ್ಲಿ ಎಸ್‌ಯುವಿಗಳದ್ದೇ ಮೇಲುಗೈ, ಸಣ್ಣಕಾರುಗಳಿಗೆ ಸಂಕಷ್ಟದ ಕಾಲ

ಸಣ್ಣ ಕಾರುಗಳನ್ನು ಎಸ್‌ಯುವಿ ನುಂಗಿತ್ತಾ! ಸೆಪ್ಟೆಂಬರ್‌ ವಾಹನ ಮಾರಾಟದಲ್ಲಿ ಎಸ್‌ಯುವಿಗಳದ್ದೇ ಮೇಲುಗೈ, ಸಣ್ಣಕಾರುಗಳಿಗೆ ಸಂಕಷ್ಟದ ಕಾಲ

Praveen Chandra B HT Kannada

Oct 03, 2024 11:15 AM IST

google News

ಸೆಪ್ಟೆಂಬರ್‌ ತಿಂಗಳ ವಾಹನ ಮಾರಾಟದಲ್ಲಿ ಎಸ್‌ಯುವಿಗಳದ್ದೇ ಮೇಲುಗೈ

    • ಸೆಪ್ಟೆಂಬರ್‌ ತಿಂಗಳ ಕಾರು ಮಾರಾಟ ವರದಿಗಳನ್ನು ನೋಡಿದರೆ ಅಚ್ಚರಿಯಾಗದೆ ಇರದು. ಪ್ರಮುಖ ಕಂಪನಿಗಳ ಸಣ್ಣಕಾರುಗಳ ಮಾರಾಟಕ್ಕಿಂತ ಎಸ್‌ಯುವಿಗಳ ಮಾರಾಟವೇ ಹೆಚ್ಚಾಗಿದೆ. ಸಣ್ಣ ಕಾರುಗಳನ್ನು ಎಸ್‌ಯುವಿ ನುಂಗಿತ್ತಾ? ಎಂದೆನಿಸಿದೆ ಇರದು.
ಸೆಪ್ಟೆಂಬರ್‌ ತಿಂಗಳ  ವಾಹನ ಮಾರಾಟದಲ್ಲಿ ಎಸ್‌ಯುವಿಗಳದ್ದೇ ಮೇಲುಗೈ
ಸೆಪ್ಟೆಂಬರ್‌ ತಿಂಗಳ ವಾಹನ ಮಾರಾಟದಲ್ಲಿ ಎಸ್‌ಯುವಿಗಳದ್ದೇ ಮೇಲುಗೈ

ಬೆಂಗಳೂರು: ಭಾರತದಲ್ಲಿ ಸೆಪ್ಟೆಂಬರ್‌ 2024ರಲ್ಲಿ ಮಾರುತಿ ಸುಜುಕಿ, ಹ್ಯುಂಡೈ, ಟಾಟಾ ಮೋಟಾರ್ಸ್‌ ಸೇರಿದಂತೆ ಪ್ರಮುಖ ಕಂಪನಿಗಳ ದೇಶಿಯ ಕಾರು ಮಾರಾಟ ಇಳಿಕೆ ಕಂಡಿದೆ. ಮಾರುತಿ ಮತ್ತು ಟಾಟಾ ಮೋಟಾರ್ಸ್‌ ಕಂಪನಿಯ ದೇಶೀಯ ಮಾರಾಟ ವರ್ಷದಿಂದ ವರ್ಷಕ್ಕೆ ಶೇಕಡ 3.9 ಮತ್ತು ಶೇಕಡ 8ರಷ್ಟು ಇಳಿಕೆ ಕಂಡಿದೆ. ಇದೇ ಸಂದರ್ಭದಲ್ಲಿ ಹ್ಯುಂಡೈನ ರಿಟೇಲ್‌ ಮಾರಾಟವು ಕಳೆದ ತಿಂಗಳು ಶೇಕಡ 5.8ರಷ್ಟು ಇಳಿಕೆ ಕಂಡಿದೆ.

ಭಾರತೀಯ ವಾಹನ ತಯಾರಕರ ಸೊಸೈಟಿಯ (ಎಸ್‌ಐಎಎಂ) ಪ್ರಕಾರ ಈ ವರ್ಷದ ಏಪ್ರಿಲ್‌ನಿಂದ ಆಗಸ್ಟ್‌ ತಿಂಗಳವರೆಗೆ ಪ್ರಯಾಣಿಕ ವಾಹನ ಮಾರಾಟವು ಇಳಿಕೆ ಕಂಡಿದೆ. ಕಳೆದ ವರ್ಷದ ಇದೇ ಅವಧಿಯ ವಾಹನ ಮಾರಾಟಕ್ಕೆ ಹೋಲಿಸಿದರೆ ಇದು ಸುಮಾರು ಶೇಕಡ 8ರಷ್ಟು ಇಳಿಕೆಯಾಗಿದೆ. ಈ ಹಿಂದಿನ ಎರಡು ವರ್ಷಗಳ ಅತ್ಯುತ್ತಮ ಪ್ರಗತಿಗೆ ಹೋಲಿಸಿದರೆ ಈಗ ಪ್ರಯಾಣಿಕ ವಾಹನಗಳ ಬೇಡಿಕೆ ತುಸು ಇಳಿಕೆ ಕಂಡಿದೆ ಎಂದು ಎಸ್‌ಐಎಎಂ ತಿಳಿಸಿದೆ.

ಆಗಸ್ಟ್‌ ತಿಂಗಳಲ್ಲಿ ಮಾರಾಟವಾಗದ ಕಾರುಗಳ ಪ್ರಮಾಣವು 70-75 ದಿನಗಳಿಗೆ ತಲುಪಿದೆ. ಅಂದರೆ, ಕಾರುಗಳ ದಾಸ್ತಾನು ಹೆಚ್ಚಾಗಿದೆ. ಹಣದುಬ್ಬರ ಹೆಚ್ಚಳ. ಆರ್ಥಿಕ ಅಭದ್ರತೆ, ವಾಹನ ಮಾಲೀಕತ್ವದ ವೆಚ್ಚ ಹೆಚ್ಚಳ ಸೇರಿದಂತೆ ಅನೇಕ ಕಾರಣಗಳಿಂದ ವಾಹನ ಮಾರಾಟ ಕಡಿಮೆಯಾಗಿದೆ. ಪ್ರಯಾಣಿಕ ವಾಹನಗಳಿಗೆ ಬೇಡಿಕೆ ಕಡಿಮೆಯಾಗಿರುವುದರಿಂದ ಡೀಲರ್‌ಷಿಪ್‌ಗಳಲ್ಲಿ ದಾಸ್ತಾನು ಹೆಚ್ಚಾಗಿದೆ.

ಸಣ್ಣ ಕಾರುಗಳ ಮಾರಾಟ ಇಳಿಕೆ

ದೇಶದಲ್ಲಿ ಈಗ ಬಹುತೇಕರು ಎಸ್‌ಯುವಿ, ಮಧ್ಯಮ ಗಾತ್ರದ ಎಸ್‌ಯುವಿ, ಸಣ್ಣಗಾತ್ರದ ಎಸ್‌ಯುವಿಗಳ ಖರೀದಿಗೆ ಆದ್ಯತೆ ನೀಡುತ್ತಿದ್ದಾರೆ. ಭಾರತದ ಸಣ್ಣ ಕಾರುಗಳ ಮಾರಾಟ ಸೆಪ್ಟೆಂಬರ್‌ನಲ್ಲಿ ಕಡಿಮೆಯಾಗಿದೆ. ಈ ಬಾರಿ ಸಣ್ಣ ಕಾರುಗಳ ಮಾರಾಟವನ್ನು ಎಸ್‌ಯುವಿಗಳು ಮತ್ತು ಕ್ರಾಸೋವರ್‌ಗಳು ಹಿಂದಿಕ್ಕಿವೆ. ಮಾರುತಿ ಸುಜುಕಿ ಕಂಪನಿಯ ಪ್ರಯಾಣಿಕ ವಾಹನಗಳ ಮಾರಾಟ (ದೇಶೀಯ) ಶೇಕಡ 11ರಷ್ಟು ಇಳಿಕೆ ಕಂಡಿದೆ. ಭಾರತದಲ್ಲಿ ಮಾರುತಿಯ ಒಟ್ಟು ಮಾರಾಟದಲ್ಲಿ ಸಣ್ಣ ಕಾರುಗಳು ಮತ್ತು ಮಧ್ಯಮ ಗಾತ್ರದ ಕಾರುಗಳ ಕೊಡುಗೆ ಶೇಕಡ 50ರಷ್ಟಿದೆ.

ಇವಿ ತೆರಿಗೆ ನಿಯಮ ಬದಲಾವಣೆ- ಟಾಟಾ ಮಾರಾಟದ ಮೇಲೆ ಪರಿಣಾಮ

ಎಲೆಕ್ಟ್ರಿಕ್‌ ವಾಹನಗಳಿಗೆ ಸಂಬಂಧಪಟ್ಟಂತೆ ಕೆಲವೊMದು ನಿಯಮಗಳು ಬದಲಾವಣೆಯಾಗಿರುವುದು ಟಾಟಾ ಮೋಟಾರ್ಸ್‌ನ ಸೆಪ್ಟೆಂಬರ್‌ ತಿಂಗಳ ಮಾರಾಟದ ಮೇಲೆ ಪರಿಣಾಮ ಬೀರಿದೆ. ಸರಕಾರದ ಎಫ್‌ಎಎಂಇ ಸ್ಕೀಮ್‌ ಎಕ್ಸ್‌ಪೈರಿ ಆಗಿರುವುದು ಕೂಡ ವಾಹನಗಳ ದಾಸ್ತಾನು ಖಾಲಿಯಾಗದೆ ಇರುವುದುಕ್ಕೆ ಪ್ರಮುಖ ಕಾರಣ ಎಂದು ಟಾಟಾ ತಿಳಿಸಿದೆ.

ಎಸ್‌ಯುವಿ ಮಾರಾಟದಲ್ಲಿ ಏರಿಕೆ

ಭಾರತದಲ್ಲಿ ಸೆಪ್ಟೆಂಬರ್‌ ತಿಂಗಳಲ್ಲಿ ಎಸ್‌ಯುವಿಗಳ ಮಾರಾಟ ಗಣನೀಯವಾಗಿ ಹೆಚ್ಚಾಗಿದೆ. ಹಬ್ಬದ ಋತುವಿನಲ್ಲಿ ಎಸ್‌ಯುವಿಗಳ ಬೇಡಿಕೆ ಹೆಚ್ಚಿರಲಿದೆ ಎಂದು ಡೀಲರ್‌ಗಳು ಹೇಳಿದ್ದಾರೆ. ಅಕ್ಟೋಬರ್‌ ಮತ್ತು ನವೆಂಬರ್‌ನಲ್ಲೂ ವಾಹನ ಮಾರಾಟ ಹೆಚ್ಚಿರುವ ನಿರೀಕ್ಷೆಯನ್ನು ಇವರು ವ್ಯಕ್‌ತಪಡಿಸಿದ್ದಾರೆ. ಮಹೀಂದ್ರ ಕಂಪನಿಯು ಎಸ್‌ಯುವಿ ಮಾರಾಟ ವರ್ಷದಿಂದ ವರ್ಷಕ್ಕೆ ಸೆಪ್ಟೆಂಬರ್‌ ತಿಂಗಳಲ್ಲಿ ಶೇಕಡ 24ರಷ್ಟು ಹೆಚ್ಚಾಗಿದೆ. ಇದೇ ಸಮಯದಲ್ಲಿ ಟೊಯೊಟಾ ಮತ್ತು ಕಿಯಾದ ಎಸ್‌ಯುವಿ ಮಾರಾಟ ಶೇಕಡ 14 ಮತ್ತು ಶೇಕಡ 17ರಷ್ಟು ಹೆಚ್ಚಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ