17 ವರ್ಷಗಳಲ್ಲಿ 33 ಲಕ್ಷ ಹ್ಯುಂಡೈ i10 ಕಾರು ಮಾರಾಟ, ಬರೋಬ್ಬರಿ 27 ಕಿಮೀ ಮೈಲೇಜ್ ಕೊಡುವ ಕಾರಿಗೆ ಗ್ರಾಹಕರ ಬಹುಪರಾಕ್
Hyundai i10 Sales: ದೇಶದಲ್ಲಿ ಕೆಲವೊಂದು ಕಾರುಗಳು ಮಾರಾಟದಲ್ಲಿ ದಾಖಲೆ ನಿರ್ಮಿಸಿವೆ. ಆದರೆ, ಕೆಲವು ಕಾರುಗಳು ಹತ್ತು ಲಕ್ಷ ಯೂನಿಟ್ ಮಾರಾಟವಾಗಲು ಹಲವು ವರ್ಷಗಳು ಬೇಕಾಗುತ್ತವೆ. ಆದರೆ, ಹ್ಯುಂಡೈ ಐ10 ಕಾರು ಬಿಡುಗಡೆಯಾದ ನಂತರ ಸಾಕಷ್ಟು ಮಾರಾಟವನ್ನು ಮಾಡಿದೆ.
ಕೆಲವೊಂದು ಕಾರುಗಳು ವಾಹನ ಪ್ರಿಯರಿಗೆ ಅಚ್ಚುಮೆಚ್ಚು. ಮಾರುಕಟ್ಟೆಗೆ ಆಗಮಿಸಿ ಹತ್ತು ಹಲವು ವರ್ಷಗಳು ಕಳೆದರೂ ಆ ಕಾರುಗಳ ಬೇಡಿಕೆ ತಗ್ಗುವುದೇ ಇಲ್ಲ. ಇಂತಹ ವಿಶ್ವಾಸಾರ್ಹತೆಯನ್ನು ಕೆಲವು ಕಾರುಗಳು ಮಾತ್ರ ಪಡೆದುಕೊಂಡಿವೆ. ಮಾರುತಿ ಸುಜುಕಿ ಆಲ್ಟೋ ಕೂಡ ಇದೇ ರೀತಿ ಜನಪ್ರಿಯತೆ ಪಡೆದಿದೆ. ಇದೇ ರೀತಿ ಹ್ಯುಂಡೈನ ಐ10 ಕೂಡ ಕಾರು ಪ್ರೇಮಿಗಳಿಗೆ ಇಷ್ಟದ ಕಾರು. ಹ್ಯುಂಡೈ ಐ10 ಮಾರಾಟದಲ್ಲೂ ಹಲವು ದಾಖಲೆ ಮಾಡಿದೆ. ಹ್ಯುಂಡೈ ಐ20 ಕೂಡ ಉತ್ತಮ ಮಾರಾಟದೊಂದಿಗೆ ಮುಂಚೂಣಿಯಲ್ಲಿರಲಿದೆ. ಬಿಡುಗಡೆಯಾದಾಗಿನಿಂದ 3.3 ದಶಲಕ್ಷ ಯುನಿಟ್‌ಗಳ ಮಾರಾಟದ ಅಂಕಿಅಂಶವನ್ನು ದಾಟಿದ ಕಂಪನಿಯ ಏಕೈಕ ಹ್ಯಾಚ್‌ಬ್ಯಾಕ್ ಇದಾಗಿದೆ. ಇದನ್ನು 2007 ರಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿತ್ತು. i10 ಕುಟುಂಬವು ಗ್ರಾಂಡ್ i10 ಮತ್ತು ಹ್ಯುಂಡೈ ಗ್ರಾಂಡ್ i10 ನಿಯೋಸ್‌ನಂತಹ ಮಾದರಿಗಳನ್ನು ದೇಶದಲ್ಲಿ ಮಾರಾಟ ಮಾಡುತ್ತಿದೆ. ಸ್ಯಾಂಟ್ರೊ, ಐ20 ಮತ್ತು ಕ್ರೆಟಾದಂತಹ ಮಾದರಿಗಳು ಈ ಮೈಲಿಗಲ್ಲನ್ನು ತಲುಪಲು ಸಾಧ್ಯವಾಗಲಿಲ್ಲ ಎಂಬುದು ಗಮನಾರ್ಹ. ಈಗಲೂ ಪ್ರತಿತಿಂಗಳು ಸಾವಿರಾರು ಸಂಖ್ಯೆಯಲ್ಲಿ ಐ10 ಕಾರುಗಳು ಮಾರಾಟವಾಗುತ್ತಿವೆ.
ಹುಂಡೈ i10 ಎಂಜಿನ್, ಫೀಚರ್‌ಗಳು
ಹ್ಯುಂಡೈ i10 ನಿಯೋಸ್ 1.2-ಲೀಟರ್ ಕಪ್ಪಾ ಪೆಟ್ರೋಲ್ ಮೋಟರ್‌ನಿಂದ ಚಾಲಿತವಾಗಿದೆ. ಇದು ಗರಿಷ್ಠ 83bhp ಪವರ್ ಮತ್ತು 113.8Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. 5-ಸ್ಪೀಡ್ ಮ್ಯಾನುವಲ್, ಸ್ಮಾರ್ಟ್ ಆಟೋ ಎಎಂಟಿ ಗಿಯರ್ ಬಾಕ್ಸ್ ಆಯ್ಕೆಯಲ್ಲಿ ಈ ಕಾರು ಲಭ್ಯವಿದೆ. ಸಿಎನ್‌ಜಿ ಆವೃತ್ತಿಯು ಪ್ರತಿಲೀಟರ್‌ಗೆ 27 ಕಿ.ಮೀ. ಇಂಧನ ದಕ್ಷತೆ/ಮೈಲೇಜ್ ನೀಡುತ್ತದೆ. ಕಾರು ಮೊನೊಟೋನ್ ಟೈಟಾನ್ ಗ್ರೇ, ಪೋಲಾರ್ ವೈಟ್, ಫೆರ್ರಿ ರೆಡ್, ಟೈಫೂನ್ ಸಿಲ್ವರ್, ಸ್ಪಾರ್ಕ್ ಗ್ರೀನ್, ಟೀಲ್ ಬ್ಲೂ ಬಣ್ಣಗಳಲ್ಲಿ ಲಭ್ಯವಿದೆ. ಡ್ಯುಯಲ್ ಟೋನ್ ಬಣ್ಣದ ಆಯ್ಕೆಗಳಲ್ಲಿ ಪೋಲಾರ್ ವೈಟ್ ಜೊತೆಗೆ ಫ್ಯಾಂಟಮ್ ಬ್ಲ್ಯಾಕ್ ರೂಫ್, ಸ್ಪಾರ್ಕ್ ಗ್ರೀನ್ ಜೊತೆಗೆ ಫ್ಯಾಂಟಮ್ ಬ್ಲ್ಯಾಕ್ ರೂಫ್ ಇವೆ.
ಐ10ನಲ್ಲಿ ಆಕರ್ಷಕ ಫೀಚರ್‌ಗಳು ಇವೆ. ಸೈಡ್ ಮತ್ತು ಕರ್ಟೈನ್ ಏರ್ ಬ್ಯಾಗ್‌ಗಳು, ಫೂಟ್ ವೆಲ್ ಲೈಟಿಂಗ್, ಟೈಪ್ ಸಿ ಫ್ರಂಟ್ ಯುಎಸ್‌ಬಿ ಚಾರ್ಜರ್, ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್ ಮುಂತಾದ ಫೀಚರ್‌ಗಳು i10 ನಿಯೋಸ್‌ನಲ್ಲಿ ಲಭ್ಯವಿದೆ. ಗ್ಲಾಸ್ ಬ್ಲ್ಯಾಕ್ ಫ್ರಂಟ್ ರೇಡಿಯೇಟರ್ ಗ್ರಿಲ್, ಹೊಸ ಎಲ್‌ಇಡಿ ಡಿಆರ್‌ಎಲ್‌ಗಳು ಮತ್ತು ಎಲ್‌ಇಡಿ ಟೇಲ್ ಲ್ಯಾಂಪ್‌ಗಳು ಇವೆ. ಕಾರಿನ ಇಂಟೀರಿಯರ್ ಕೂಡ ಆಕರ್ಷಕವಾಗಿದೆ.
ಐ10 ನಿಯೋಸ್‌ನಲ್ಲಿ ಅತ್ಯುತ್ತಮ-ಇನ್-ಸೆಗ್ಮೆಂಟ್ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ ಕ್ರೂಸ್ ಕಂಟ್ರೋಲ್ ಕೂಡ ಇದೆ. ಇದು ಇಕೋ ಕೋಟಿಂಗ್ ತಂತ್ರಜ್ಞಾನ, ಹಿಂಭಾಗದ ಎಸಿ ವೆಂಟ್‌ಗಳು, ತುರ್ತು ನಿಲುಗಡೆ ಸಿಗ್ನಲ್, ಹಿಂಭಾಗದ ಪವರ್ ಔಟ್‌ಲೆಟ್, ಕೂಲ್ಡ್ ಗ್ಲೋವ್ ಬಾಕ್ಸ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ವೆಹಿಕಲ್ ಸ್ಟೆಬಿಲಿಟಿ ಮ್ಯಾನೇಜ್ಮೆಂಟ್, ಹಿಲ್ ಅಸಿಸ್ಟ್ ಕಂಟ್ರೋಲ್ ಮುಂತಾದ ಸೇಫ್ಟಿ ಫೀಚರ್‌ಗಳು ಇವೆ. ಎಕ್ಸ್ ಶೋ ರೂಂ ದರ 5.92 ಲಕ್ಷ ರೂಪಾಯಿಯಿಂದ 8.56 ಲಕ್ಷ ರೂಪಾಯಿವರೆಗೆ ಇದೆ.
ಹ್ಯುಂಡೈ ಐ10 ಕಾರು ದೇಶದ ರಸ್ತೆಗೆ ಇಳಿದು 17 ವರ್ಷಗಳು ಕಳೆದಿವೆ. ಇಷ್ಟು ವರ್ಷಗಳಲ್ಲಿ ಒಟ್ಟು 33 ಲಕ್ಷ ಐ10 ಕಾರುಗಳು ಮಾರಾಟಗೊಂಡಿವೆ. ಹೊಸ ಐ10 ಮಾದರಿಗಳು ಸುಧಾರಿತ ಫೀಚರ್‌ಗಳನ್ನು ಹೊಂದಿದ್ದು, ಗ್ರಾಹಕರಿಗೆ ಅಚ್ಚುಮೆಚ್ಚಿನ ಕಾರಾಗಿ ಪರಿಣಮಿಸಿವೆ.