ತೆಲುಗು ಭಾಷಿಗರಿಗೂ ಕಡಲೆಕಾಯಿ ಪರಿಷೆಗೂ ಇದೆ ನಂಟು; ಪರಿಷೆಯ ಐತಿಹ್ಯ, ಹಳೆ ನೆನಪುಗಳನ್ನ ತೆರೆದಿಟ್ಟ ಪತ್ರಕರ್ತ ಜಗದೀಶ ಕೊಪ್ಪ ಬರಹ
Nov 27, 2024 11:21 AM IST
ಬೆಂಗಳೂರು ಕಡಲೆಕಾಯಿ ಪರಿಷೆ
- ಜಗದೀಶ ಕೊಪ್ಪ ಬರಹ: ಮಾಲ್‌ಗೆ ಹೋಗುವುದು, ಅಥವಾ ಮಲ್ಟಿಪ್ಲೆಕ್ಸ್ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವುದು ಮುಖ್ಯವಲ್ಲ, ಬಸವನಗುಡಿಗೆ ಹೋಗಿ ತರಾವರಿ ಕಡ್ಲೆಕಾಯಿ ತಿನ್ನುವುದು, ಮನೆಗೆ ತರುವುದು ಸಹ ಮುಖ್ಯ. ಒಂದು ರೀತಿಯಲ್ಲಿ ಕಡ್ಲೆಕಾಯಿ ಪರಿಷೆ ಎಂದರೆ, ಕಣ್ಣಿಗೂ ಹಬ್ಬ, ಬಾಯಿಗೂ ಹಬ್ಬ. ಮಿಸ್ ಮಾಡಿಕೊಳ್ಳಬೇಡಿ.
ಬೆಂಗಳೂರಿನ ಪ್ರಸಿದ್ಧ ಆಚರಣೆಗಳಲ್ಲಿ ಬಸವನಗುಡಿಯಲ್ಲಿ ನಡೆಯುವ ಕಡಲೆಕಾಯಿ ಪರಿಷೆಯೂ ಒಂದು. ಹಲವು ವರ್ಷಗಳ ಐತಿಹ್ಯವಿರುವ ಪರಿಷೆ ಬೆಂಗಳೂರಿನ ಹೆಮ್ಮೆ ಎಂದರೂ ತಪ್ಪಾಗಲಿಕ್ಕಿಲ್ಲ. ಪ್ರತಿವರ್ಷ ಚಳಿಗಾಲದಲ್ಲಿ ಕಡ್ಲೇಕಾಯಿ ಪರಿಷೆ ನಡೆಯುತ್ತದೆ. ಈ ಕಡ್ಲೇಕಾಯಿ ಪರಿಷೆಗೂ ಬೆಂಗಳೂರಿನಲ್ಲಿ ನೆಲೆಸಿರುವ ತೆಲುಗು ಜನಾಂಗಕ್ಕೂ ವಿಶೇಷ ಅಂಟಿದೆ. ಈ ಕಡ್ಲೇಕಾಯಿ ಪರಿಷೆ ಎನ್ನುವುದು ಹಲವರ ನೆನಪಿನ ಬುತ್ತಿಯನ್ನು ತೆರೆದಿಡುವುದು ಸುಳ್ಳಲ್ಲ. ಇದೀಗ ಪರಿಷೆಯೊಂದಿಗಿನ ತಮ್ಮ ನೆನಪು, ತೆಲುಗು ಜನಾಂಗಕ್ಕೂ ಪರಿಷೆಗೂ ಇರುವ ನಂಟನ್ನು ಬಿಚ್ಚಿಟ್ಟಿದ್ದಾರೆ ಪತ್ರಕರ್ತ ಜಗದೀಶ್ ಕೊಪ್ಪ. ಅವರ ಬರಹವನ್ನು ನೀವೂ ಓದಿ.
ಜಗದೀಶ್ ಕೊಪ್ಪ ಬರಹ
ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಬೆಂಗಳೂರು ನಗರ ಕೂಡಾ ಒಂದಾಗಿದೆ. ಬಹು ಸಂಸ್ಕೃತಿ ಮತ್ತು ಬಹು ಭಾಷೆಗಳ ಮಹಾ ನಗರವಾಗಿರುವ ಬೆಂಗಳೂರಿನಲ್ಲಿ ಇಂದು ಕನ್ನಡ ಭಾಷೆ ಮತ್ತು ಸಂಸ್ಕೃತಿ ಸಹಜವಾಗಿ ಕ್ಷೀಣಿಸುತ್ತಿದೆ. ಜಾಗತೀಕರಣ ವ್ಯವಸ್ಥೆಗೆ ಭಾರತದ ಹೆಬ್ಬಾಗಿಲು ತೆರೆದುಕೊಂಡ ನಂತರ ಕಳೆದ ಮೂರು ದಶಕದಲ್ಲಿ ನಾವು ನಿರೀಕ್ಷಿಸಲಾಗದ ಬದಲಾವಣೆಯನ್ನು ಬೆಂಗಳೂರು ನಗರ ಕಂಡಿದೆ.
ಆದರೆ, ಅವಸರದ ಹಾಗೂ ಕೃತಕಮಯವಾದ ಈ ಸಮಾಜದಲ್ಲಿ ಬೆಂಗಳೂರು ನಗರದ ಸಾಂಸ್ಕೃತಿಕ ಲಕ್ಷಣ ಅಥವಾ ಅಸ್ಮಿತೆಗಳಾಗಿ ಬೆಂಗಳೂರು ಕರಗ ಮತ್ತು ಬೆಂಗಳೂರು ಕಡ್ಲೆಕಾಯಿ ಪರಿಷೆ ಇನ್ನೂ ಜೀವಂತವಾಗಿ ಉಳಿದುಕೊಂಡಿವೆ. ಆಶ್ಚರ್ಯಕರ ಸಂಗತಿ ಎಂದರೆ, ಈ ಎರಡೂ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಬಂದವರು ಬೆಂಗಳೂರು ನಗರದ ತೆಲುಗು ಭಾಷಿಕರು. ಬೆಂಗಳೂರು ನಗರದ ಧರ್ಮರಾಜ ದೇವಸ್ಥಾನದ ಸುತ್ತಮುತ್ತ ಇರುವ ಬಹುತೇಕ ಮಂದಿ ತೆಲುಗು ಭಾಷೆಯನ್ನಾಡುವ ತಿಗಳರು ಇದ್ದಾರೆ. ಈ ಕಾರಣದಿಂದಲೇ ತಿಗಳರಪೇಟೆ, ಸಂತೇಪೇಟೆ, ನಗರ್ತಪೇಟೆ, ಬಳೆಪೇಟೆ, ಅಕ್ಕಿ ಪೇಟೆ, ಸುಲ್ತಾನ್ ಪೇಟೆ ಮುಂತಾದ ಹೆಸರುಗಳು ಅಸ್ತಿತ್ವಕ್ಕೆ ಬಂದವು. ಬೆಂಗಳೂರಿನ ಕರಗ ಹೊರುವವರು ವೀರಮಕ್ಕಳು ಎಂದು ಕರೆಯುವ ತೆಲುಗು ಭಾಷಿಕರಾದ ತಿಗಳರು ಎಂಬುದು ವಿಶೇಷ.
ಬೆಂಗಳೂರು ಬಸವನಗುಡಿ ಬಳಿ ನಡೆಯುವ ಕಡ್ಲೆಕಾಯಿ ಪರಿಷೆಗೂ ಮತ್ತು ತೆಲುಗು ಭಾಷೆಯ ರೈತ ಬಾಂಧವರಿಗೂ ವಿಶೇಷವಾಗಿ ರೆಡ್ಡಿ ಸಮುದಾಯಕ್ಕೆ ಸಂಬಂಧವಿದೆ. ಹಲವು ವರ್ಷಗಳ ಹಿಂದೆ ಮಾವಳ್ಳಿ ಎಂದು ಕರೆಯುತ್ತಿದ್ದ ಲಾಲ್ ಬಾಗ್, ಸುಂಕೇನಹಳ್ಳಿ ಎಂದು ಕರೆಯುತ್ತಿದ್ದ ಬಸವನಗುಡಿ, ಜರಗನಹಳ್ಳಿ, ಪುಟ್ಟೇನಹಳ್ಳಿ ಎಂದು ಕರೆಯುತ್ತಿದ್ದ ಜೆ.ಪಿ.ನಗರ, ಮುನಿರೆಡ್ಡಿ ಪಾಳ್ಯ ಎಂದು ಕರೆಯುತ್ತಿದ್ದ ಜಗಜೀವನರಾಂ ನಗರ, ಗೆದ್ದಲಹಳ್ಳಿ ಎನ್ನುತ್ತಿದ್ದ ಸಂಜಯನಗರ, ಗಂಗೇನಹಳ್ಳಿ ಈಗ ಆರ್.ಟಿ. ನಗರವಾಗಿದೆ ಮತ್ತು ಕೋರಮಂಗಲ ಈ ಪ್ರದೇಶಗಳಲ್ಲಿ ಮಳೆಯಾಶ್ರಿತ ಬೆಳೆಯನ್ನಾಗಿ ರಾಗಿ ಮತ್ತು ಕಡ್ಲೆಕಾಯಿಯನ್ನು ನಮ್ಮ ರೆಡ್ಡಿ ಸಮುದಾಯದ ರೈತರು ಬೆಳೆಯುತ್ತಿದ್ದರು. ಇವರಲ್ಲಿ ಗವಿಪುರಂ ಗುಟ್ಟಳ್ಳಿಯ ನಮ್ಮ ಕನ್ನಡದ ರೈತರೂ ಸಹ ಇದ್ದರು.
ಪ್ರತಿ ವರ್ಷ ಕೊನೆಯ ಕಾರ್ತಿಕ ಸೋಮವಾರದಂದು ಆಗ ತಾನೇ ಬೆಳೆದ ಆ ವರ್ಷದ ಮೊದಲ ಫಸಲನ್ನು ಶಿವನಿಗೆ ಅರ್ಪಿಸುವುದರ ಜೊತೆಗೆ ತಮ್ಮ ಬೆಳೆಗಳಿಗೆ ಬಸವ ಮತ್ತು ಬೀಡಾಡಿ ದನಗಳ ಕಾಟ ಇರಬಾರದೆಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದರು. ಇವೆಲ್ಲಕ್ಕಿಂತ ಮುಖ್ಯವಾಗಿ ರೈತರು ಬೆಳೆಯುತ್ತಿದ್ದ ತರಾವರಿ ಶೇಂಗಾ ಅಥವಾ ಕಡ್ಲೆಕಾಯಿ ಬೀಜಗಳು ಈ ಪರಿಷೆಯಲ್ಲಿ ವಿನಿಮಯವಾಗುತ್ತಿತ್ತು. ಕಡ್ಲೆಕಾಯಿಯಲ್ಲಿ ಎಷ್ಟೊಂದು ಬಗೆಯ ತಳಿಗಳಿವೆ, ಎಷ್ಟೊಂದು ಬಗೆ ಬಗೆ ರುಚಿಗಳಿವೆ ಎಂಬುದನ್ನು ಅರಿಯಲು ನೀವು ಕಡ್ಡಾಯವಾಗಿ ಈ ಪರಿಷೆಗೆ ಭೇಟಿ ನೀಡಬೇಕು.
ಕೇವಲ ಎರಡು ಬೀಜಗಳಿರುವ ದುಂಡನೆಯ ಆಕಾರದಲ್ಲಿರುವ ಗೆಜ್ಜೆ ಶೇಂಗಾದ ರುಚಿಯನ್ನು ನೀವು ಒಮ್ಮೆ ನೋಡಬೇಕು. ನಾನು ಬೆಂಗಳೂರು ನಗರದಲ್ಲಿ ವಿ.ವಿ.ಪುರಂ ಕಾಲೇಜಿನಲ್ಲಿ ಡಿಗ್ರಿ ಓದುವಾಗ, ಬಹುತೇಕ ನನ್ನ ಸಹಪಾಠಿಗಳು ಕೋರಮಂಗಲದ ರೆಡ್ಡಿ ಸಮುದಾಯದವರಾಗಿದ್ದರು. ಇಡೀ ಕೋರಮಂಗಲ ಪ್ರದೇಶ, ಬೊಮ್ಮನಹಳ್ಳಿ, ಚಂದಾಪುರ, ಸರ್ಜಾಪುರ, ಹೊಂಗಸಂದ್ರ ಈ ಪ್ರದೇಶಗಳಲ್ಲಿ ರಾಗಿ ಮತ್ತು ಕಡ್ಲೆಕಾಯಿ ಬೆಳೆಯುತ್ತಿದ್ದರು. ಗೆಳೆಯರ ಮನೆಗೆ ಹೋದಾಗ, ಸಂಜೆಯ ವೇಳೆಯಲ್ಲಿ ಹುರಿದ ಶೇಂಗಾ ಬೀಜವನ್ನು ತಿನ್ನುವುದು, ಚಹಾ ಕುಡಿಯುವುದು ನನಗೆ ಸಾಮಾನ್ಯವಾಗಿತ್ತು. ಬೊಮ್ಮನಹಳ್ಳಿ ಪ್ರದೇಶದ ನನ್ನ ಮಿತ್ರ ರವಿಕೃಷ್ಣಾರೆಡ್ಡಿಯವರ ಕುಟುಂಬದ ಪ್ರಧಾನ ಕೃಷಿ ಅಥವಾ ಬೆಳೆ ಈಗಲೂ ಸಹ ರಾಗಿ ಮತ್ತು ಶೇಂಗಾ ಆಗಿದೆ.
ಮೂರು ದಿನದ ಕಡ್ಲೆಕಾಯಿ ಪರಿಷೆ ಈಗ ಬೆಂಗಳೂರಿನಲ್ಲಿ ಪ್ರಾರಂಭವಾಗಿದೆ. ನೀವು ಮಾಲ್‌ಗೆ ಹೋಗುವುದು, ಅಥವಾ ಮಲ್ಟಿಪ್ಲೆಕ್ಸ್ ಥಿಯೇಟರ್‌ಗೆ ಹೋಗಿ ಸಿನಿಮಾ ನೋಡುವುದು ಮುಖ್ಯವಲ್ಲ, ಬಸವನಗುಡಿಗೆ ಹೋಗಿ ತರಾವರಿ ಕಡ್ಲೆಕಾಯಿ ತಿನ್ನುವುದು ಮತ್ತು ಮನೆಗೆ ತರುವುದು ಸಹ ಮುಖ್ಯ. ಬೆಂಗಳೂರಿನ ಆ ದಿನಗಳಲ್ಲಿ ನಾವು ಗೆಳೆಯರು ಮೂರು ದಿನ ಕಡ್ಲೆಕಾಯಿ ಪರಿಷೆಯಲ್ಲಿ ಠಳಾಯಿಸುತ್ತಿದ್ದೆವು. ಕೈ ಎಣ್ಣೆ ಅಥವಾ ಹರಳೆಣ್ಣೆ ಹಾಕಿಕೊಂಡು ಜೋಡಿ ಜಡೆ ಹಾಕಿದ ಆ ಕಾಲದ ಲಂಗ, ಪ್ರಾಕ್‌ನ ಸುಂದರಿಯರು, ಅವರು ಜಡೆಯಲ್ಲಿ ಮುಡಿದ ಮಲ್ಲಿಗೆ ಮತ್ತು ಚೆಂಡು ಹೂವು ಇವರನ್ನು ಪರಿಷೆಯಲ್ಲಿ ನೋಡುತ್ತಾ, ಕಡ್ಲೆಕಾಯಿ ತಿನ್ನುತ್ತಾ ಬಸವನಗುಡಿ ದೇವಾಸ್ಥಾನದ ಮೆಟ್ಟಿಲುಗಳ ಮೇಲೆ ದಿನವಿಡೀ ತಳವೂರುತ್ತಿದ್ದೆವು. ಒಂದು ರೀತಿಯಲ್ಲಿ ಕಡ್ಲೆಕಾಯಿ ಪರಿಷೆ ಎಂದರೆ, ಕಣ್ಣಿಗೂ ಹಬ್ಬ, ಬಾಯಿಗೂ ಹಬ್ಬ. ಮಿಸ್ ಮಾಡಿಕೊಳ್ಳಬೇಡಿ.
ನವೆಂಬರ್ 24ರಂದು ಜಗದೀಶ್ ಅವರು ಈ ಪೋಸ್ಟ್ ಹಾಕಿದ್ದರು. ಇವರ ಈ ಪೋಸ್ಟ್ ಅನ್ನು 3 ಲಕ್ಷ 70 ಸಾವಿರಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಇವರ ಈ ಪೋಸ್ಟ್ ಅನ್ನು 390ಕ್ಕೂ ಹೆಚ್ಚು ಮಂದಿ ಶೇರ್ ಮಾಡಿದ್ದಾರೆ. 13 ಮಂದಿ ಕಾಮೆಂಟ್ ಮಾಡಿದ್ದಾರೆ.
ಜಗದೀಶ್ ಅವರ ಪೋಸ್ಟ್‌ಗೆ ಬಂದ ಕಾಮೆಂಟ್‌ಗಳು
ವಿಭಿನ್ನ ಜನ ಸಂಸ್ಕೃತಿ ಪರಿಚಯಿಸಿದ ಕಡಲೆಕಾಯಿ ಪರಿಷೆ ಮತ್ತು ಹರೋಹರ ಜಾತ್ರೆ: ‘ಬೆಂಗಳೂರಿನ ಬಸವನಗುಡಿ ಮಗ್ಗುಲಿನ ನರಸಿಂಹರಾಜ ಕಾಲೋನಿಯಲ್ಲಿ ಹುಟ್ಟಿಬೆಳೆದ ನನಗೂ ಕಡಲೆಕಾಯಿ ಪರಿಷೆ ಬಾಲ್ಯದ ಒಂದು ಸುಂದರ ನೆನಪು! ಆಚಾರ್ಯ ಪಾಠಶಾಲೆಯಲ್ಲಿ ಓದುತ್ತಿದ್ದ ನಾವೆಲ್ಲ ಗೆಳತಿಯರು ಪ್ರತೀವರ್ಷ ಪರಿಷೆಯಲ್ಲಿ ಸುತ್ತಾಡಿ ಕಡ್ಲೆಕಾಯಿ ಜೊತೆ ಬೆಂಡುಬತ್ತಾಸು ತಿಂದು, ರೋಲರ್ ಕೋಸ್ಟರ್‌ನಲ್ಲಿ ಕೂತು ಖುಷಿ ಪಡುತ್ತಿದ್ದೆವು.ಅಲ್ಲೇ ಪಕ್ಕದ ಸುಂಕೇನಹಳ್ಳಿಯ ನರಹರಿರಾಯನ ಗುಡ್ಡದ (ಮೌಂಟ್ ಜಾಯ್) ಮೇಲಿದ್ದ ದೇವರಿಗೆ ಪ್ರತಿವರ್ಷ ತಮಿಳರು ಕಾವಡಿ ಹೊರುವ ಹರೋಹರ ಜಾತ್ರೆ ನಡೆಯುತ್ತಿತ್ತು. ಕಡಲೆಕಾಯಿ ಪರಿಷೆ ಮತ್ತು ಹರೋಹರ ಜಾತ್ರೆ ಎರಡೂ ನಗರದಲ್ಲಿ ಹುಟ್ಟಿ ಬೆಳೆದ ನಮಗೆಲ್ಲ ವಿಭಿನ್ನ ಜನ ಸಂಸ್ಕೃತಿಯನ್ನು ಪರಿಚಯಿಸಿದವು. ನೀವೇ ಪುಸ್ತಕ ಬರೆದ ಬೆಂಗಳೂರು ನಾಗರತ್ನಮ್ಮ ಅವರಿಗೆ ಜಸ್ಟಿಸ್ ನರಹರಿರಾಯರು ಈ ಗುಡ್ಡದ ಮೇಲೇ ಮನೆ ಮಾಡಿಕೊಟ್ಟಿದ್ದರು‘ ಎಂದು ಪತ್ರಕರ್ತೆ ಆರ್. ಪೂರ್ಣಿಮಾ ಕಾಮೆಂಟ್ ಮಾಡುವ ಮೂಲಕ ತಮ್ಮ ಹಿಂದಿನ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ.
ತಿಗಳರ ಮನೆ ಭಾಷೆ ತಮಿಳು: ‘ತಿಗಳರ ಮನೆ ಭಾಷೆ ತೆಲುಗಲ್ಲ. ತಮಿಳಿನ ಬೇರೆ ರೂಪ.ನಮ್ಮ ಪಕ್ಕದ ಊರಿನಲ್ಲಿ ಈ ಜನಾಂಗವಿದ್ದು ಧ್ರೌಪದಿ ಕರಗ ಪ್ರತಿವರ್ಷ ಆಚರಣೆ ಮಾಡುತ್ತಾರೆ. ತೋಟಗಾರಿಕೆ ಕೆಲಸಗಳಲ್ಲಿ ಈ ಜನಾಂಗ ನಿಸ್ಸೀಮರು‘ ಎಂದು ಬಚ್ಚೇಗೌಡ ಎನ್ನುವವರು ಕಾಮೆಂಟ್ ಮಾಡಿದ್ದಾರೆ. ಅವರ ಕಾಮೆಂಟ್‌ಗೆ ರಿಪ್ಲೇ ಮಾಡಿರುವ ಜಗದೀಶ್ ಅವರು ‘ಗೌಡ್ರೇ, ತಿಗಳರನ್ನು ಮೂಲತಃ ಗಂಗರು ಇವರು ತಮಿಳುನಾಡಿನಿಂದ ಕೋಲಾರಕ್ಕೆ ವಲಸೆ ಬಂದವರು ಎಂಬ ವಾದ ಕೂಡಾ ಇದೆ. ಇವರ ಮನೆ ಮಾತು ತೆಲುಗು ಅಥವಾ ತಮಿಳು ಎಂಬುದು ಗೊತ್ತಾಗುವುದಿಲ್ಲ.
1970ಕ್ಕೆ ಮುಂಚೆ ಬೆಂಗಳೂರು ಚಿಕ್ಕಪೇಟೆ, ಅವಿನ್ಯೂರಸ್ತೆ, ಬಳೆಪೇಟೆ ಇಲ್ಲಿಗೆ ಗುಜರಾತ್ ಮಾರ್ವಾಡಿಗಳು ಬಂದು ತಳವೂರುವ ಮುನ್ನ ತೆಲುಗು ವ್ಯಾಪಾರಿಗಳು ಅಧಿಕ ಮಂದಿ ಇದ್ದರು‘ ಎಂದಿದ್ದಾರೆ. ಇವರ ಕಾಮೆಂಟ್‌ಗೆ ಭಾಗ್ಯ ಲಕ್ಷ್ಮೀ ಎನ್ನುವವರು ‘ಹೈದರಾಲಿ ಈ ತಿಗಳರನ್ನು ಲಾಲ್‌ಬಾಗ್ ತೋಟ ಮಾಡುವುದಕ್ಕೋಸ್ಕರ ತಮಿಳುನಾಡಿನಿಂದ ಕರೆತಂದದ್ದು ಅನ್ನುವ ಮಾತಿದೆ‘ ಎಂದು ಕಾಮೆಂಟ್ ಮಾಡಿದ್ದಾರೆ.
ತಿಗಳರ ಮನೆ ಮಾತು ತಮಿಳಲ್ಲವೇ?: ‘ಅಪರೂಪದ ಹೆಮ್ಮೆಯ ನೆನಪುಗಳ ಸೊಗಸಾದ ಚಿತ್ರಣ. ಸಂತೋಷ. ತಿಗಳರ ಮನೆ ಮಾತು ತಮಿಳು ಅಲ್ಲವೇ?!‘ ಎಂದು ಕಾಳೇಗೌಡ ನಾಗವಾರ ಎನ್ನುವವರು ಕಾಮೆಂಟ್ ಮಾಡಿದ್ದಾರೆ. ‘ಅವರು ಕ್ಷತ್ರಿಯ ಕುಲದವರು. ತಮಿಳು ತೆಲುಗು ಭಾಷೆಯನ್ನು ಆಡುತ್ತಾರೆ. ಜೊತೆಗೆ ಮಾಧ್ವಕುಲದಲ್ಲಿ ತಿಗಳರು ಎಂಬ ಉಪ ಪಂಗಡ ಇದೆ ಎಂದು ಕೇಳಿದ್ದೀನಿ‘ ಎಂದು ಜಗದೀಶ್ ಅವರ ಕಾಮೆಂಟ್‌ಗೆ ಉತ್ತರ ಬರೆದಿದ್ದಾರೆ.
ಫೇಸ್‌ಬುಕ್ ಬರಹದಲ್ಲಿ ದಾಖಲೆ ಬರೆದ ಲೇಖನ
‘ನನ್ನ ಹದಿನಾಲ್ಕು ವರ್ಷಗಳ ಫೇಸ್‌ಬುಕ್ ಬರಹದಲ್ಲಿ ಕಡ್ಲೆಕಾಯಿ ಪರಿಷೆ ಕುರಿತು ಬರೆದ ಲೇಖನ ದಾಖಲೆ ನಿರ್ಮಿಸಿತು. ಕೇವಲ ಮೂರು ದಿನಗಳ ಅವಧಿಯಲ್ಲಿ ಈ ಲೇಖನ ಈವರೆಗ ಮೂರು ಲಕ್ಷದ ನಾಲ್ಕು ಸಾವಿರ ಮಂದಿಗೆ ತಲುಪಿದೆ. (ಈಗ ಮೂರು ಲಕ್ಷ ಎಪ್ಪತ್ತು ಸಾವಿರ ದಾಟಿದೆ).
ಯಾವುದೇ ಸಿದ್ಧಾಂತ, ವಿದ್ವತ್ ಇವುಗಳ ಪ್ರದರ್ಶನ ಅಥವಾ ಆಡಂಬರವಿಲ್ಲದೆ ನಮ್ಮ ನೆಲದ ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಇಂತಹ ಸರಳ ಲೇಖನಗಳು ಎಲ್ಲಾ ಓದುಗರಿಗೆ ತಲುಪುತ್ತವೆ ಎಂಬುದಕ್ಕೆ ಈ ಬರಹ ಸಾಕ್ಷಿಯಾಯಿತು‘ ಎಂದು ಜಗದೀಶ್ ಅವರು ಇನ್ನೊಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.