logo
ಕನ್ನಡ ಸುದ್ದಿ  /  ಜೀವನಶೈಲಿ  /  ಪುಸ್ತಕ ಪರಿಚಯ: ನಮ್ಮೊಳಗಿನ ಶಕ್ತಿಯನ್ನು ಮನಗಂಡರೆ ಸಾಧನೆಯ ಹಾದಿಗೆ ಕಂಡೀತು ಬೆಳಕು, ತಿಳಿಯೋಣ ಬನ್ನಿ ಮನಸ್ಸಿನ ಮ್ಯಾಜಿಕ್

ಪುಸ್ತಕ ಪರಿಚಯ: ನಮ್ಮೊಳಗಿನ ಶಕ್ತಿಯನ್ನು ಮನಗಂಡರೆ ಸಾಧನೆಯ ಹಾದಿಗೆ ಕಂಡೀತು ಬೆಳಕು, ತಿಳಿಯೋಣ ಬನ್ನಿ ಮನಸ್ಸಿನ ಮ್ಯಾಜಿಕ್

D M Ghanashyam HT Kannada

Nov 13, 2024 06:10 AM IST

google News

ಅಡ್ಡೂರು ಕೃಷ್ಣರಾವ್ ಅವರ ಮನಸ್ಸಿನ ಮ್ಯಾಜಿಕ್ ಪುಸ್ತಕ ಪರಿಚಯ

    • ಮನಸ್ಸಿನ ಮ್ಯಾಜಿಕ್ ಪುಸ್ತಕ: ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಸುಲಭವಲ್ಲ. ಹಾಗಂತ, ಹತಾಶರಾಗಿ ಸಾಧನೆಯ ಹಾದಿಯಿಂದ ವಿಮುಖರಾಗಬೇಕಿಲ್ಲ. ಸಾಧನೆಯ ಹಾದಿಯನ್ನು ಕಂಡುಕೊಳ್ಳಲು ಮತ್ತು ಧೃತಿಗೆಡದೆ ಮುಂದುವರಿಯಲು ಬೇಕಿರುವ ಆರಂಭಿಕ ಮಾರ್ಗದರ್ಶನವನ್ನು ಈ ಪುಸ್ತಕ ಒದಗಿಸಬಲ್ಲದು.
ಅಡ್ಡೂರು ಕೃಷ್ಣರಾವ್ ಅವರ ಮನಸ್ಸಿನ ಮ್ಯಾಜಿಕ್ ಪುಸ್ತಕ ಪರಿಚಯ
ಅಡ್ಡೂರು ಕೃಷ್ಣರಾವ್ ಅವರ ಮನಸ್ಸಿನ ಮ್ಯಾಜಿಕ್ ಪುಸ್ತಕ ಪರಿಚಯ

ಮನಸ್ಸಿನ ಮ್ಯಾಜಿಕ್ ಪುಸ್ತಕ: ಮನಸ್ಸಿಗೆ ಇರುವ ಸಾಮರ್ಥ್ಯಕ್ಕೆ ಗಡಿಯೇ ಇಲ್ಲ. ಆದರೂ ನಾವು ನೂರೆಂಟು ಕೃತಕ ನಿರ್ಬಂಧಗಳ ಬೇಡಿಯಲ್ಲಿ ಮನಸ್ಸನ್ನು ಕಟ್ಟಿಹಾಕಿರುತ್ತೇವೆ. ನಮ್ಮನ್ನು ಆವರಿಸಿಕೊಂಡಿರುವ ಇಂಥ ಸಂಕೋಲೆಗಳನ್ನು ಗುರುತಿಸಲು ಸಹಾಯ ಮಾಡುವುದರೊಂದಿಗೆ ಬಂಧನಗಳಿಂದ ನಾವಾಗಿಯೇ ಹೇಗೆ ಬಿಡಿಸಿಕೊಳ್ಳಬಹುದು ಎನ್ನುವುದನ್ನು ಮನವರಿಕೆ ಮಾಡಿಕೊಡುವ ಅಪರೂಪದ ಪುಸ್ತಕ 'ಮನಸ್ಸಿನ ಮ್ಯಾಜಿಕ್'. ಸಣ್ಣ ಕಥೆಗಳು, ನಿಜ ಜೀವನದ ಉದಾಹರಣೆಗಳು, ವಿದ್ವಾಂಸರ ಒಳನೋಟಗಳನ್ನು ಮನಗಾಣಿಸುವ ಮಾತುಗಳು ಈ ಪುಸ್ತಕದಲ್ಲಿ ಎದ್ದು ಕಾಣುವಂತಿದೆ.

ಮನಸ್ಸಿನ ಮ್ಯಾಜಿಕ್ ಪುಸ್ತಕದ ಲೇಖಕರಾದ ಅಡ್ಡೂರು ಕೃಷ್ಣರಾವ್ ಅವರು ನಿವೃತ್ತ ಬ್ಯಾಂಕ್ ಅಧಿಕಾರಿ. ಬಳಕೆದಾರರ ವೇದಿಕೆಯ ಮೂಲಕ ಜನಜಾಗೃತಿ ಮತ್ತು ಜನಸೇವೆಗೂ ಮುಂದಾದವರು. ಈಗಾಗಲೇ ಅವರ ಹಲವು ಪುಸ್ತಕಗಳು, ನೂರಾರು ಲೇಖನಗಳು ಪ್ರಕಟವಾಗಿವೆ. ತಮ್ಮ ಜೀವನಾನುಭವವನ್ನು ಅಳವಾದ ಅಧ್ಯಯನದಿಂದ ಗಳಿಸಿದ ಜ್ಞಾನದೊಂದಿಗೆ ಮೇಳೈಸಿ ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಗಟ್ಟಿ ವಿಚಾರಗಳ ಜೊತೆಗೆ ಈ ಪುಸ್ತಕದ ಶೈಲಿಯೂ ಗಮನ ಸೆಳೆಯುತ್ತದೆ. ಹೇಳುವುದು ಗಹನ ವಿಚಾರವೇ ಆದರೂ, ಚಿಕ್ಕ ಅಧ್ಯಾಯಗಳು, ಆಕರ್ಷಕ ಶೀರ್ಷಿಕೆ, ಚಿಕ್ಕ ವಾಕ್ಯಗಳು, ಕಥೆ, ಉದಾಹರಣೆಗಳೊಂದಿಗೆ ಈ ಪುಸ್ತಕವು ಓದುಗರ ಮನಸ್ಸಿಗೆ ನಾಟುತ್ತದೆ.

"ನಮ್ಮ ಮನಸ್ಸು ಮ್ಯಾಜಿಕ್ ಮಾಡುತ್ತಲೇ ಇರುತ್ತದೆ. ಅಸಾಧ್ಯವೆಂದು ತೋರುವ ಕನಸುಗಳನ್ನು ಹುಟ್ಟುಹಾಕುತ್ತದೆ. ಅನಂತರ ಅವನ್ನು ನನಸು ಮಾಡುವ ದಾರಿಗಳನ್ನು ತೋರುತ್ತಲೂ ಇರುತ್ತದೆ. ಆ ದಾರಿಗಳಲ್ಲಿ ಸೂಕ್ತವಾದದ್ದನ್ನು ಆಯ್ಕೆ ಮಾಡುತ್ತ, ಹೆಜ್ಜೆಯ ಮೇಲೆ ಹೆಜ್ಜೆಯಿಡುತ್ತ, ಸಾಧನೆ ಮಾಡುವುದು ನಮ್ಮ ಕೈಯಲ್ಲಿದೆ. ಇಂಥ ಸಾಧನೆಯ ಹಾದಿಯಲ್ಲಿ ಮುನ್ನಡೆಯಬೇಕಾದರೆ, ನಾವು ಬದಲಾಗಬೇಕಾಗುತ್ತದೆ. ಯಾವಾಗ ಎಂದರೆ ಈಗ, ಈ ಕ್ಷಣದಲ್ಲಿ. ಇಲ್ಲವಾದರೆ, ನಾಗಾಲೋಟದ ಬದುಕಿನಲ್ಲಿ ನಮ್ಮ ಪ್ರತಿಭೆ ಹಾಗೂ ತಾಕತ್ತುಗಳು ಕೆಲಸಕ್ಕೆ ಬಾರದೆ ಹೋದಾವು" ಎಂದು ಆರಂಭದಲ್ಲಿಯೇ ಲೇಖಕರು ಎಚ್ಚರಿಸುತ್ತಾರೆ. ಇದು ಪುಸ್ತಕ ಏಕೆ ಬರೆದಿದ್ದೀರಿ ಎನ್ನುವ ಪ್ರಶ್ನೆಗೆ ಲೇಖಕರು ಕೊಟ್ಟ ಉತ್ತರದಂತೆ ಭಾಸವಾಗುತ್ತದೆ.

"ಜೀವನದಲ್ಲಿ ಏನಾದರೂ ಸಾಧಿಸಬೇಕೆಂಬ ಆಶೆ ನಿಮಗೆಲ್ಲರಿಗೂ ಇದೆ" ಎನ್ನುವುದು ಈ ಪುಸ್ತಕದ ಮೊದಲ ಅಧ್ಯಾಯದ ಮೊದಲ ವಾಕ್ಯ. ಈ ಪುಸ್ತಕವನ್ನು ಓದುವುದರಿಂದ ಏನೆಲ್ಲಾ ಲಾಭ ಎನ್ನುವುದನ್ನು ಸೂಚಿಸುತ್ತಲೇ, "ನಾವೆಲ್ಲರೂ ಅಸಾಮಾನ್ಯರು, ನಮಗೆಲ್ಲರಿಗೂ ಸಾಧಿಸುವ ಅವಕಾಶ ಸಮಾನವಾಗಿ ಇದೆ" ಎಂಬ ಭರವಸೆಯನ್ನೂ ಹುಟ್ಟಿಸುತ್ತದೆ. ಅಡ್ಡೂರು ಕೃಷ್ಣರಾವ್ ಅವರ ಬರಹದ ಶೈಲಿಯ ಸೊಗಸು ಇದು.

ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಸುಲಭವಲ್ಲ. ಹಾಗಂತ, ಹತಾಶರಾಗಿ ಸಾಧನೆಯ ಹಾದಿಯಿಂದ ವಿಮುಖರಾಗಬೇಕಿಲ್ಲ. (ಸಾಧನೆಯ ಹಾದಿಯಲ್ಲಿ) ದೀರ್ಘ ಪಯಣ ಅನಿವಾರ್ಯ. ಈ ಅವಧಿಯಲ್ಲಿ ನಿಮ್ಮ ಮನಸ್ಸು ಚಂಚಲವಾಗುವುದು ಸಹಜ. ಹಾಗಾದರೆ, ದಿನದಿನವೂ ಗುರಿಯತ್ತ ಹೆಜ್ಜೆಯಿಡಲಿಕ್ಕಾಗಿ ನಿಮ್ಮ ಮನಸ್ಸನ್ನು ಪಳಗಿಸುವುದು ಹೇಗೆ? ಅದಕ್ಕಾಗಿ ಅನುಸರಿಸಬೇಕಾದ ವಿಧಾನಗಳೇನು ಎನ್ನುವುದನ್ನು ಈ ಪುಸ್ತಕದಲ್ಲಿ ವಿವರಿಸಲಾಗಿದೆ.

ನಾಯತ್ವದ ಗುಣಗಳನ್ನು ರೂಢಿಸಿಕೊಳ್ಳಲು ಇಷ್ಟಪಡುವವರಿಗೆ, ವ್ಯಕ್ತಿತ್ವದ ದೋಷಗಳನ್ನು ಅರಿತುಕೊಂಡು ತಮ್ಮನ್ನು ತಾವು ಸುಧಾರಿಸಿಕೊಳ್ಳಲು ಇಚ್ಛಿಸುವವರಿಗೆ, ಜೀವನದಲ್ಲಿ ಏನಾದರೂ ಸಾಧಿಸಲೇಬೇಕು ಎನ್ನುವ ಆಸೆಯಿರುವವರಿಗೆ, ಮನಸ್ಸಿಗೆ ನಾವೇ ಹೇರಿಕೊಂಡ ಮಿತಿಗಳನ್ನು ಮೀರಬೇಕು ಎಂದು ಹಂಬಲಿಸುವವರಿಗೆ ಕಲಿಯಲು, ಅನುಸರಿಸಲು, ಅಳವಡಿಸಿಕೊಳ್ಳಲು ಈ ಪುಸ್ತಕದಲ್ಲಿ ಸಾಕಷ್ಟು ಮಾಹಿತಿ ಇದೆ.

ಗೂಟ ಕಿತ್ತು ಹಾರಿದ ಗಿಡುಗ

'ಮನಸ್ಸಿನ ಮ್ಯಾಜಿಕ್' ಪುಸ್ತಕದಲ್ಲಿರುವ ಪ್ರೇರಣಾದಾಯಕ ಕಥೆಗಳು ಹೇಗಿವೆ ಎಂದು ತಿಳಿಯಲು ಒಂದು ಉದಾಹರಣೆ ಗಮನಿಸಬಹುದು. ಇದರಲ್ಲಿ 'ಆಕಾಶಕ್ಕೇರಿದ ಮರಿಗಿಡುಗ' ಎನ್ನುವ ಕಥೆ ಇದೆ.

"ಒಬ್ಬಾತ ಗಿಡುಗನ ಮರಿಯನ್ನು ಅದರ ಗೂಡಿನಿಂದ ಎತ್ತಿ ತಂದ. ಅದರ ಕಾಲಿಗೆ ಹಗ್ಗ ಬಿಗಿದು, ನೆಲದ ಗೂಟವೊಂದಕ್ಕೆ ಕಟ್ಟಿದ. ದಿನದಿನವೂ ತಿನ್ನಲು ಕೊಟ್ಟು, ನೀರು ಕುಡಿಸಿ ಅದನ್ನು ಬೆಳೆಸಿದ. ಆ ಗಿಡುಗನ ಮರಿ ಒಂದು ದಿನವೂ ರೆಕ್ಕೆ ಬಿಚ್ಚಿ ಹಾರಲಿಲ್ಲ. ಹಗ್ಗದ ಬಂಧನವೇ ತನ್ನ ಬದುಕೆಂದು ಭಾವಿಸಿ ಬೆಳೆಯುತ್ತಿತ್ತು. ಅದೊಂದು ದಿನ ನೀಲಾಕಾಶದಲ್ಲಿ ದೊಡ್ಡ ಗಿಡುಗವೊಂದು ಕಾಣಿಸಿತು - ಚಿಕ್ಕ ಚುಕ್ಕಿಯಂತೆ. ಅನಂತರ ಪ್ರತಿದಿನವೂ ಅಲ್ಲಿ ಆ ದೊಡ್ಡ ಗಿಡುಗದ ದರ್ಶನ. ಮರಿಗಿಡುಗದ ನೆತ್ತಿಯ ಮೇಲೆಯೇ ಐದಾರು ಬಾರಿ ಸುತ್ತಿ ಕಣ್ಮರೆಯಾಗುವ ವಿಚಿತ್ರ ಆಟ. ದಿನದಿಂದ ದಿನಕ್ಕೆ ಅದರ ಹಾರಾಟ ಮರಿಗಿಡುಗಕ್ಕೆ ಹತ್ತಿರಹತ್ತಿರ. ಕೊನೆಗೊಂದು ದಿನ, ಆ ದೊಡ್ಡ ಗಿಡುಗ ತೀರಾ ಕೆಳಕ್ಕಿಳಿದು, ಮರಿಗಿಡುಗಕ್ಕೆ ತನ್ನ ರೆಕ್ಕೆ ಚಕ್ಕನೆ ತಗಲಿಸಿತು. ತಕ್ಷಣ ಅದು ಗಗನಕ್ಕೇರಿ ಮಾಯವಾಯಿತು. ಆ ಕ್ಷಣದಲ್ಲಿ ಮರಿಗಿಡುಗದ ಮೈಯಲ್ಲಿ ವಿದ್ಯುತ್ ಸಂಚಾರ. ಒಮ್ಮೆಲೇ ಅದು ತನ್ನ ರೆಕ್ಕೆಗಳನ್ನು ಹರಡಿ, ರಪರಪನೆ ಬಡಿಯುತ್ತ ನೆಲದಿಂದ ಮೇಲಕ್ಕೆ ಚಿಮ್ಮಿತು. ಆ ರಭಸಕ್ಕೆ ಕಿತ್ತು ಬಂತು ನೆಲದ ಗೂಟ. ಆಕಾಶಕ್ಕೇರಿದ ಮರಿಗಿಡುಗ ಹೊಸ ಬದುಕಿನತ್ತ ಹಾರಿತು".

"ನಮ್ಮನ್ನು ನೆಲದ ಗೂಟಕ್ಕೆ ಬಿಗಿದವರು ಯಾರು? ಯಾರೇ ಬಿಗಿದಿರಿ, ಆ ಗೂಟ ಕಿತ್ತೊಗೆಯಬಲ್ಲ ಚೇತನ ನಮ್ಮಲ್ಲಿದೆ, ಅಲ್ಲವೇ" ಎನ್ನುವ ಪ್ರಶ್ನೆಗಳೊಂದಿಗೆ ಈ ಕಥೆ ಕೊನೆಯಾಗುತ್ತದೆ. ಓದಿದವರನ್ನು ಬಹುಕಾಲ ಚಿಂತನೆಗೆ ಹಚ್ಚುವ, ತಮ್ಮದೇ ಬದುಕಿನ ಬಗ್ಗೆ ಆಲೋಚಿಸುವಂತೆ ಮಾಡುವ ಕಥೆಯಿದು.

ಹತ್ತಾರು ಕಥೆಗಳು, ದೃಷ್ಟಾಂತಗಳು, ಉದಾಹರಣೆಗಳು

120 ಪುಟಗಳ ಈ ಪುಟ್ಟ ಪುಸ್ತಕದಲ್ಲಿ ನಿಜ ಜೀವನದ ಕ್ರಮ ಸರಿಗಾಣಿಸುವ ಹತ್ತಾರು ಕಥೆ, ದೃಷ್ಟಾಂತ, ಉದಾಹರಣೆಗಳಿವೆ. ಸೃಜನಶೀಲ ಆಲೋಚನೆಗಳನ್ನು ರೂಢಿಸಿಕೊಳ್ಳಲು ಹತ್ತಾರು ಸಾಧ್ಯತೆಗಳನ್ನು ಲೇಖಕರು ಓದುಗರ ಮುಂದಿಡುತ್ತಾರೆ. "ಗಣಿತ ಕಷ್ಟ, ಆದರೆ ಚಿಟ್ಟೆ ಇಷ್ಟ" ಎನ್ನುವ ಮಗುವಿಗೆ ಚಿಟ್ಟೆಯ ಮೂಲಕವೇ ಶಿಕ್ಷಕಿ ಗಣಿತದ ಪಾಠ ಮಾಡುತ್ತಾರೆ. ರಸ್ತೆಯ ಮೇಲೆ ಅಡ್ಡಬಂದ ಕುರಿಗಳ ಬಗ್ಗೆ ಆಂಬುಲೆನ್ಸ್ ಚಾಲಕ ಚಿಂತೆ ಮಾಡುತ್ತಾ ಕೂರದೆ ಜಾಣತನದಿಂದ ದಾರಿ ಸುಗಮ ಮಾಡಿಕೊಳ್ಳುತ್ತಾನೆ. ಹಿರಿಯರ ಅನುಭವವನ್ನು ಕಿರಿಯರು ಹೇಗೆ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವುದೂ ಸೇರಿದಂತೆ ಹೀಗೆ ನಿತ್ಯ ಜೀವನದಲ್ಲಿ ಎದುರಾಗುವ ಎಷ್ಟೋ ಸಮಸ್ಯೆಗಳಿಗೆ ಹೊಸ ರೀತಿಯಲ್ಲಿ ಸಮರ್ಥ ಉತ್ತರ ಕಂಡುಕೊಂಡ ಉದಾಹರಣೆಗಳು 'ಮನಸ್ಸಿನ ಮಾತು' ಪುಸ್ತಕದಲ್ಲಿದೆ.

ಪರಿವಿಡಿಯನ್ನೊಮ್ಮೆ ಗಮನಿಸಿ

ಮನಸ್ಸಿನ ಮ್ಯಾಜಿಕ್ ಪುಸ್ತಕದಲ್ಲಿ 20 ಅಧ್ಯಾಯಗಳಿವೆ. ಈ ಅಧ್ಯಾಯಗಳ ಹೆಸರು ತಿಳಿದರೆ ವೈಯಕ್ತಿಕವಾಗಿ ನಮಗೆಲ್ಲರಿಗೂ ಅದು ಹೇಗೆ ಕನೆಕ್ಟ್ ಆಗಬಲ್ಲದು ಎಂದು ಅಂದಾಜಾದೀತು. ಈ ಪುಸ್ತಕದ ಅಧ್ಯಾಯಗಳು ಹೀಗಿವೆ.

ವ್ಯಕ್ತಿತ್ವ ವಿಕಸನಕ್ಕಾಗಿ ಮನಸ್ಸಿನ ಮ್ಯಾಜಿಕ್, ಸಾಧನೆಯ ಚಿಮ್ಮುಹಲಗೆ, ಬದುಕು ಬೆಳಗಿಸುವ ಕ್ಷಣಗಳು, ಆಂತರಿಕ ಶಕ್ತಿಯ ಖಜಾನೆಗಳು, ನಿಮ್ಮ ಸುಪ್ತ ಮನಸ್ಸಿನ ಕೀಲಿಕೈ, ಸಮಸ್ಯಾ ಪರಿಹಾರಕ್ಕಾಗಿ ಭಿನ್ನ ಚಿಂತನೆ, ನಿಮ್ಮ ಮಾನಸಿಕ ತಡೆ ತೊಲಗಿಸಿ, ನಾನು ಯಾರದೋ ಪಡಿಯಚ್ಚಲ್ಲ -ನಾನು ನಾನೇ, ಅನುಕರಣೆ ಹಾದಿಯಲ್ಲಿ ನಿಮ್ಮತನ ಅಳಿಯದಿರಲಿ, ನಿಮ್ಮ ಮಿತಿಗಳನ್ನು ಮೆಟ್ಟಿ ನಿಲ್ಲಬಲ್ಲಿರಿ, ಬದುಕಿನ ಗೆಲುವಿನ ಬಾಗಿಲು ಪ್ರಜ್ಞೆ, ಉತ್ತಮ ಸಂಬಂಧಗಳಿಗಾಗಿ ಎಂಪಥಿ, ಏಕಾಗ್ರತೆಯ ಸಾಧನೆ, ನಿಮ್ಮ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸಲಿಕ್ಕಾಗಿ, ಆಶಾವಾದಿಗಳಾಗಿ -ಚೆನ್ನಾಗಿ ಬದುಕಿ, ನಿಮ್ಮಲ್ಲಿ ನಿಮಗೆ ನಂಬಿಕೆಯಿರಲಿ, ನೆಮ್ಮದಿಯ ಬದುಕಿಗಾಗಿ ಮೂರು ದಾರಿಗಳು, ತನ್ನ ತಾನರಿಯಲು ಏಕಾಂತ ಚಿಂತನೆ, ಧ್ಯಾನದಿಂದ ಹೊಸ ಬದುಕು, ನಿತ್ಯ ಬದುಕಿನ ಧ್ಯಾನ.

ಸಾಧನೆಯ ಹಾದಿಗೆ ಕೈದೀವಿಗೆ

ಮನಸ್ಸಿನ ಮ್ಯಾಜಿಕ್ ಪುಸ್ತಕದಲ್ಲಿ 'ನೀವು ಯಾರೆಂದು ಯೋಚಿಸುತ್ತೀರೋ ಅವರೇ ಅಗುತ್ತೀರಿ' ಎನ್ನುವ ಉಪಶೀರ್ಷಿಕೆಯೊಂದು ಇದೆ. "ನೀವು ಈಗ ಏನಾಗಿದ್ದೀರಿ ಎಂಬುದು ನಿಮ್ಮ ಯೋಚನೆಗಳ, ನಿರ್ಧಾರಗಳ ಮತ್ತು ಕ್ರಿಯೆಗಳ ಫಲ. ಹಾಗಾದರೆ, ಇನ್ನು ಐದು ವರುಷಗಳಲ್ಲಿ ಏನಾಗುತ್ತೀರಿ ಎಂಬುದು ನಿಮ್ಮನ್ನೇ ಅವಲಂಬಿಸಿದೆ" ಎಂದು ಲೇಖಕರು ಭರವಸೆ ತುಂಬುತ್ತಾರೆ. ಅಷ್ಟೇ ಅಲ್ಲದೆ ಅದಕ್ಕಾಗಿ ಮಾರ್ಗದರ್ಶನವನ್ನೂ ಮಾಡುತ್ತಾರೆ. "ನಿಮ್ಮ ಜೀವನದ ಸಾಧನೆಗಳ ಬಗ್ಗೆ ಅಭಿಮಾನವಿರಲಿ, ಅದು ನಿಮ್ಮ ಬಗ್ಗೆ ನಿಮ್ಮ ನಂಬಿಕೆಯನ್ನು ಹೆಚ್ಚಿಸುತ್ತದೆ. ಯಾರನ್ನಾದರೂ ಕೇಳಿ, "ನಿಮ್ಮ ಜೀವನದಲ್ಲಿ ನಿಮ್ಮ ಸಾಧನೆ ಏನು" ಉತ್ತರ ನೀಡಲು ಅವರು ಹಿಂಜರಿಯುತ್ತಾರೆ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದೇ ನಮ್ಮ ಸಾಧನೆಗೆ ಏಣಿಯಾಗಬಲ್ಲದು ಎನ್ನುವುದು ಮನಮುಟ್ಟುವಂತೆ ವಿವರಿಸುತ್ತಾರೆ.

ಬದುಕಿನಲ್ಲಿ ಮಹತ್ವದ್ದೇನಾದರೂ ಸಾಧಿಸಬೇಕು ಎಂದು ಹಾತೊರೆಯುವವರಿಗೆ, ವಿದ್ಯಾರ್ಥಿಗಳಿಗೆ ಕೈದೀವಿಗೆಯಾಗಬಲ್ಲ ಪುಸ್ತಕವಿದು. ಶುಭ ಸಮಾರಂಭಗಳಲ್ಲಿ ಗಿಫ್ಟ್‌ ಕೊಡಲೂ ಇದು ಉತ್ತಮ ಆಯ್ಕೆಯಾಗಬಲ್ಲದು.

ಪುಸ್ತಕದ ಹೆಸರು: ಮನಸ್ಸಿನ ಮ್ಯಾಜಿಕ್, ಲೇಖಕರು: ಅಡ್ಡೂರು ಕೃಷ್ಣರಾವ್
ಬೆಲೆ: 80/-, ಪುಟಗಳು: 120
ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಶನ್ಸ್, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಬೆಂಗಳೂರು- 560 001.
ದೂರವಾಣಿ: 080 2216 1900, 2216 1901

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ