ಪುಸ್ತಕ ಪರಿಚಯ: ನಮಗೆ ಗೊತ್ತಿರುವುದೇ ಬೇರೆ, ನಾವು ಮಾಡೋದೇ ಬೇರೆ; ಗಿಫ್ಟ್ ಕೊಡೋಕೆ ಒಳ್ಳೇ ಬುಕ್ - ಮುತ್ನಂತ ಮಾತು
ಮುತ್ನಂತ ಮಾತು ಪುಸ್ತಕ: ಎಂಥ ಸಂದರ್ಭಕ್ಕಾದರೂ ಗಿಫ್ಟ್ ಆಗಿ ಕೊಡುವಂಥ ಪುಸ್ತಕ ಬೇಕು ಎಂದು ಕೆಲವರು ಹುಡುಕುತ್ತಿರುತ್ತಾರೆ. ಪಾಸಿಟಿವ್ ಎನರ್ಜಿ ಕೊಡುವ, ಮಾನಸಿಕವಾಗಿ ಕುಸಿದಾಗ ಬೆನ್ನು ತಟ್ಟಿ ಬದುಕಿಗೆ ಭರವಸೆ ತುಂಬುವ ಪುಸ್ತಕವೊಂದರ ಪರಿಚಯ ಇಲ್ಲಿದೆ.
ಪುಸ್ತಕ ಪರಿಚಯ: ಸಾಮಾನ್ಯವಾಗಿ ಮೇಷ್ಟ್ರ ಮಾತುಗಳಲ್ಲಿ ಒಂದು ಪಾಸಿಟಿವ್ ಎನರ್ಜಿ ಇರುತ್ತದೆ. ಅವರಿಗೆ ಜಗತ್ತಿನಲ್ಲಿರುವವರೆಲ್ಲರೂ ತಮ್ಮ ವಿದ್ಯಾರ್ಥಿಗಳಂತೆ ಕಾಣಿಸುತ್ತಿರುತ್ತಾರೆ. ಹೀಗಾಗಿಯೇ ಬೆನ್ನು ತಟ್ಟಿ ಭರವಸೆ ತುಂಬುವ ಸ್ವಭಾವ ಎಷ್ಟೋ ಮೇಷ್ಟ್ರುಗಳಿಗೆ ಸಹಜವಾಗಿ ಬಂದಿರುತ್ತದೆ. "ಮುತ್ನಂತ ಮಾತು" ಪುಸ್ತಕ ಬರೆದಿರುವ ಉಮೇಶ್ ಹುಲಿಕುಂಟೆ ಅವರು ಸಹ ಬಹುಶಃ ಇಂಥದ್ದೇ ಮನಃಸ್ಥಿತಿಯವರು ಎನ್ನಿಸುತ್ತದೆ. ಸಮಾಜವನ್ನು ಉತ್ಕಟವಾಗಿ ಪ್ರೀತಿಸುವ, ಒಳಿತಿನೆಡೆಗೆ ತಿದ್ದುವ, ತಪ್ಪುಗಳನ್ನು ನವಿರಾಗಿ ಮನಗಾಣಿಸಿ ಬದಲಾವಣೆಗೆ ಪ್ರೇರಣೆ ಕೊಡುವ 36 ಅಧ್ಯಾಯಗಳನ್ನು ಮುತ್ತುಗಳಂತೆ ಜೋಡಿಸಿ ಈ ಪುಸ್ತಕವೆಂಬ ಮಾಲೆಯನ್ನು ಸಿದ್ಧಪಡಿಸಿದ್ದಾರೆ.
ಸುಮ್ಮನೆ ಈ ಪುಸ್ತಕದಲ್ಲಿರುವ ಅಧ್ಯಾಯದ ಹೆಸರುಗಳನ್ನು ಒಮ್ಮೆ ಪರಿಶೀಲಿಸಿ; ಯಶಸ್ಸಿನ ಗುಟ್ಟು, ನಮ್ಮ ತಪ್ಪುಗಳು ನಮಗೇಕೆ ತಿಳಿಯುವುದಿಲ್ಲ, ಆಸ್ತೀನೆಲ್ಲಾ ಏನ್ಮಾಡ್ಲಿ, ನಾಲಿಗೆ ಎಂಬ ಭವಿಷ್ಯದ ದಿಕ್ಸೂಚಿ, ನೆನಪಿರಲಿ ಕಟ್ಟಿದ ಬುತ್ತಿ, ಹುಸಿ ವರ್ಚಸ್ಸು ಬೇಕಾ?, ಮನಸ್ಸು ನಿರ್ಮಲವಾಗಿರಬೇಕೆಂದರೆ, ಪ್ರಶಂಸೆ ಎಂಬ ಪ್ರಶಸ್ತಿ, ದಾಕ್ಷಿಣ್ಯದ ದಾಳಿಗಳು, ಕ್ಷಣ ಹೊತ್ತು ಸಾಕು ಬದುಕು ಬದಲಾಗಲು, ಅಪ್ಪ ಐ ಲವ್ ಯೂ, ಸಂತೋಷ ಪಡೋದನ್ನು ಮುಂದೂಡಬೇಡಿ ಪ್ಲೀಸ್... ಹೀಗೆ ಇಂಥವೇ ಹೆಸರುಗಳ ಒಟ್ಟು 36 ಅಧ್ಯಾಯಗಳು ಈ ಪುಸ್ತಕದಲ್ಲಿವೆ.
ಲೇಖಕರಿಗೆ ಸಮಾಜದ ಬಗ್ಗೆ ಇರುವ ಪ್ರೀತಿಯು ಈ ಪುಸ್ತಕದಲ್ಲಿ ಸಾಕಷ್ಟು ಸಲ ಎದ್ದು ಕಾಣುತ್ತದೆ. "ಜೀವ ಎಂಬುದು ಅತ್ಯಮೂಲ್ಯವಾದುದು. ಒಮ್ಮೆ ಕಳೆದುಕೊಂಡರೆ ಮತ್ತೆ ಮರಳಿ ದೊರಕಲಾರದು. ನಮ್ಮ ಸಂಗಾತಿ ಇರಬಹುದು, ಯಾವುದೇ ಸಂಬಂಧಿ ಇರಬಹುದು, ಸಹಪಾಠಿ, ಸಹೋದ್ಯೋಗಿ ಆಗಿರಬಹುದು... ಅವರ ಪ್ರೀತಿಯು ಬೆಲೆ ಕಟ್ಟಲಾರದಂಥದ್ದು. ಯಕಃಶ್ಚಿತ್ ಒಂದು ವಸ್ತುವಿನ ಅಥವಾ ಇತರೆ ಕ್ಷುಲ್ಲಕ ಕಾರಣಗಳಿಗಾಗಿ ಆತ್ಮೀಯವಾದ ಜೀವಗಳನ್ನು ಅಮೂಲ್ಯವಾದ ಸಂಬಂಧಗಳನ್ನು ಕಳೆದುಕೊಳ್ಳುವುದೆಂದರೆ ಅದಕ್ಕಿಂಥ ದೌರ್ಭಾಗ್ಯ ಇನ್ನೊಂದಿಲ್ಲ" ಎಂಬ ಸಾಲುಗಳನ್ನು 'ಅಪ್ಪ ಐ ಲವ್ ಯೂ' ಅಧ್ಯಾಯದ ಕೊನೆಯಲ್ಲಿ ನೀಡಲಾಗಿದೆ. ಎರಡೇ ಪುಟಗಳ ಈ ಅಧ್ಯಾಯದಲ್ಲಿರುವ ಅಪ್ಪ-ಮಗುವಿನ ಕಥೆ ಓದಿ ಹನಿಗಣ್ಣಾದ ಓದುಗರಿಗೆ ಈ ಸಾಲುಗಳ ಮಹತ್ವ ಮನದಟ್ಟಾಗುತ್ತವೆ.
"ನಾವು ಕೇವಲ ವಸ್ತುಗಳನ್ನು ಮಾತ್ರ ಪ್ರೀತಿಸಬೇಕೋ ಅಥವಾ ಮನುಷ್ಯ ಸಂಬಂಧಗಳನ್ನೋ? ನಮ್ಮ ಜೀವನದಲ್ಲಿ ವಸ್ತುಗಳಿಗೆ ಪ್ರಾಮುಖ್ಯತೆಯನ್ನು ಕೊಡಬೇಕೋ ಅಥವಾ ಮಾನವ ಪ್ರೀತಿಗೋ? ಆಯ್ಕೆ ನಿಮಗೆ ಬಿಟ್ಟಿದ್ದು" ಎನ್ನುತ್ತಾರೆ ಲೇಖಕರು. ಆದರೆ ಹೀಗೆ ಹೇಳುವಾಗಲೂ, "ನೀವು ಆಯ್ದುಕೊಳ್ಳಬೇಕಾದ್ದು ಮನುಷ್ಯರನ್ನು, ಮನುಷ್ಯ ಸಂಬಂಧಗಳನ್ನು" ಎನ್ನುವ ಸಹೃದಯ ಒತ್ತಾಯವನ್ನು ಓದುಗರಿಗೆ ಸದ್ದಿಲ್ಲದೆ ದಾಟಿಸಿರುತ್ತಾರೆ. ಅದು ಈ ಪುಸ್ತಕದ ಮೇಲ್ಮೆ. ಮರುಮುದ್ರಣ ಮಾಡುವ ಮೊದಲು ಸರಿಯಾಗಿ ಒಮ್ಮೆ ಕರಡು ತಿದ್ದಿದರೆ ಪುಸ್ತಕದ ಮೌಲ್ಯ ಮತ್ತಷ್ಟು ಹೆಚ್ಚಾಗಬಲ್ಲದು.
'ಮುತ್ನಂತ ಮಾತು' ಪುಸ್ತಕದ ನಾಲ್ಕು ಸೂತ್ರಗಳೊಂದಿಗೆ ಈ ಬರಹ ಮುಗಿಸುತ್ತೇನೆ.
ಸೂತ್ರ 1: ಮಾಡಬೇಕಾದ್ದನ್ನು ಮಾಡಿದೆ = ಒಳಿತು ಆಯಿತು
ಸೂತ್ರ 2: ಮಾಡಬೇಕಾದ್ದನ್ನು ಮಾಡಲಿಲ್ಲ = ಕೆಡಕು ಆಯಿತು
ಸೂತ್ರ 3: ಮಾಡಬಾರದ್ದನ್ನು ಮಾಡಿದೆ = ಕೆಡುಕು ಆಯಿತು
ಸೂತ್ರ 4: ಮಾಡಬಾರದ್ದನ್ನು ಮಾಡಲಿಲ್ಲ = ಒಳಿತು ಆಯಿತು.
ಇಲ್ಲಿರುವ ಪ್ರತಿ ಸೂತ್ರಕ್ಕೂ ಒಪ್ಪುವ ಕಥೆಗಳನ್ನೂ ಲೇಖಕರು ಕೊಟ್ಟಿದ್ದರೆ, ಅವನ್ನು ಗಣಿತದ ಸೂತ್ರಗಳೊಂದಿಗೆ ಸೊಗಸಾಗಿ ಸಮೀಕರಿಸಿದ್ದಾರೆ. ಯಾವುದೇ ಸಂದರ್ಭಕ್ಕೆ ಸರಿಹೊಂದುವ, ಒಂದಲ್ಲ ಒಂದು ರೀತಿಯಲ್ಲಿ ವ್ಯಕ್ತಿತ್ವ ವಿಕಸನಕ್ಕೆ ನೆರವಾಗುವ, ಗಂಡ-ಹೆಂಡತಿ ಸಂಬಂಧ, ಅತ್ತೆ-ಸೊಸೆ ಸಂಬಂಧ, ಗೆಳೆತನ ಅಷ್ಟೇಕೆ ಹರೆಯದ ಪ್ರೇಮಿಗಳಿಗೂ ಒಪ್ಪುವ ಎಷ್ಟೋ ಸಂಗತಿಗಳು ಈ ಪುಸ್ತಕದಲ್ಲಿವೆ. ನಿಮಗೆ ಪುಸ್ತಕಗಳನ್ನು ಗಿಫ್ಟ್ ಕೊಡುವ ಅಭ್ಯಾಸವಿದ್ದರೆ ಇದು ಉತ್ತಮ ಆಯ್ಕೆ ಆಗಬಲ್ಲದು.
ಪುಸ್ತಕದ ಹೆಸರು: ಮುತ್ನಂತ ಮಾತು, ಲೇಖಕರು: ಉಮೇಶ್ ಹುಲಿಕುಂಟೆ, ಪ್ರಕಾಶಕರು: ಕೃತಿ ಪ್ರಿಂಟರ್ಸ್ ಅಂಡ್ ಪಬ್ಲಿಕೇಷನ್ಸ್, ನಂ 5, ಕಲಾ ಭಾರತಿ, 4ನೇ ಕ್ರಾಸ್, ಎಂ.ಜಿ.ರಸ್ತೆ, ತುಮಕೂರು. ಸಂಪರ್ಕ ಸಂಖ್ಯೆ: 99808 01103.
(ಬರಹ: ಡಿ.ಎಂ.ಘನಶ್ಯಾಮ)
ಲೇಖಕರು ಪ್ರಕಾಶಕರ ಗಮನಕ್ಕೆ: ಪರಿಚಯಕ್ಕಾಗಿ ಪುಸ್ತಕಗಳನ್ನು ಕಳಿಸುವಂತಿದ್ದರೆ ನಮ್ಮನ್ನು ಸಂಪರ್ಕಿಸಿ. ಇಮೇಲ್: ht.kannada@htdigital.in, ವಾಟ್ಸಾಪ್: 95991 30861
(This copy first appeared on Hindustan Times Kannada. For latest updates on Karnataka, Entertainment, Lifestyle, Food etc please visit kannada.hindustantimes.com )