ಇದೊಂದು ಸೂಪರ್ ಪುಸ್ತಕ: ನೇಮಿಚಂದ್ರ ಬರೆದ 'ಪೆರುವಿನ ಪವಿತ್ರ ಕಣಿವೆಯಲ್ಲಿ' ನೆನಪಿಸಿಕೊಂಡ ಮೇದಿನಿ ಕೆಸವಿನಮನೆ
ಕನ್ನಡ ಸುದ್ದಿ  /  ಜೀವನಶೈಲಿ  /  ಇದೊಂದು ಸೂಪರ್ ಪುಸ್ತಕ: ನೇಮಿಚಂದ್ರ ಬರೆದ 'ಪೆರುವಿನ ಪವಿತ್ರ ಕಣಿವೆಯಲ್ಲಿ' ನೆನಪಿಸಿಕೊಂಡ ಮೇದಿನಿ ಕೆಸವಿನಮನೆ

ಇದೊಂದು ಸೂಪರ್ ಪುಸ್ತಕ: ನೇಮಿಚಂದ್ರ ಬರೆದ 'ಪೆರುವಿನ ಪವಿತ್ರ ಕಣಿವೆಯಲ್ಲಿ' ನೆನಪಿಸಿಕೊಂಡ ಮೇದಿನಿ ಕೆಸವಿನಮನೆ

"ನನಗೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಬರುವ ನೇಮಿಚಂದ್ರನೆಂಬ ಕವಿಯ ಬಗ್ಗೆ ಮಾಹಿತಿ ಇತ್ತು. ಅದೇ ಹೆಸರನ್ನು ನೋಡಿದಾಗ ಇವರೂ ಲೇಖಕ ಎಂದೇ ಭಾವಿಸಿದ್ದೆ ನಾನು. ಆದರೆ ಈ ಕೃತಿ ಕೊಂಡಾಗಲೇ ಗೊತ್ತಾದದ್ದು, ಅವರು ಆತ ಅಲ್ಲ ಆಕೆ!". 'ಪೆರುವಿನ ಪವಿತ್ರ ಕಣಿವೆಯಲ್ಲಿ' ಪುಸ್ತಕದ ಕುರಿತು ಮೇದಿನಿ ಕೆಸುವಿನಮನೆ ನವಿರಾದ ಬರಹ ನಿಮ್ಮ ಓದಿಗೆ ಇಲ್ಲಿದೆ.

ಲೇಖಕಿ ಮೇದಿನಿ ಕೆಸವಿನಮನೆ (ಎಡಚಿತ್ರ), ಪೆರುವಿನ ಪವಿತ್ರ ಕಣಿವೆಯಲ್ಲಿ ಪುಸ್ತಕ (ಮಧ್ಯದ ಚಿತ್ರ), ಲೇಖಕಿ ನೇಮಿಚಂದ್ರ (ಬಲಚಿತ್ರ)
ಲೇಖಕಿ ಮೇದಿನಿ ಕೆಸವಿನಮನೆ (ಎಡಚಿತ್ರ), ಪೆರುವಿನ ಪವಿತ್ರ ಕಣಿವೆಯಲ್ಲಿ ಪುಸ್ತಕ (ಮಧ್ಯದ ಚಿತ್ರ), ಲೇಖಕಿ ನೇಮಿಚಂದ್ರ (ಬಲಚಿತ್ರ)

ಪ್ರವಾಸ ಕಥನ ಎಂದಾಗ ನನಗೆ ಮೊದಲು‌ ಮನಸ್ಸಿಗೆ ಬರುವುದೇ ನೇಮಿಚಂದ್ರರ ಪೆರುವಿನ‌ ಪವಿತ್ರ ಕಣಿವೆಯಲ್ಲಿ. ನಾನು‌ ಹೈಸ್ಕೂಲಿನಲ್ಲಿ‌ರುವಾಗ ಸುಧಾದಲ್ಲಿ ಧಾರಾವಾಹಿಯಾಗಿ ಬಂದಾಗ ಬಹಳ ಕುತೂಹಲದಿಂದ ಓದಿದ್ದೆ. ನಂತರ ಇದನ್ನು 2016 ರಲ್ಲಿ ಒಂದು ಪರೀಕ್ಷೆಯ ಕಾರಣಕ್ಕಾಗಿ ಓದಿದ್ದೆ. ವರ್ಷದ ಹಿಂದೆ ಹೀಗೇ ಸುಮ್ಮನೆ ‌ಓದಿದ್ದೆ.‌

ಅಧ್ಯಯನಕ್ಕಾಗಿ ಓದುವುದಕ್ಕೂ, ಖುಷಿಗಾಗಿ ಓದುವುದಕ್ಕೂ ವ್ಯತ್ಯಾಸವಿದೆ

ಅಧ್ಯಯನಕ್ಕಾಗಿ ಓದುವುದಕ್ಕೂ, ಖುಷಿಗಾಗಿ ಓದುವುದಕ್ಕೂ ವ್ಯತ್ಯಾಸವಿದೆ ನೋಡಿ! ಪರೀಕ್ಷೆಯ ದೃಷ್ಟಿಯಿಂದ ಪಾಯಿಂಟ್ ಮಾಡುತ್ತಾ ಓದುತ್ತಿದ್ದರೂ, ನಡುನಡುವೆ ಪಾಯಿಂಟ್ ಮಾಡಲು ಮರೆತು ಹೋಗಿಬಿಡುತ್ತಿತ್ತು. ಹತ್ತಿಪ್ಪತ್ತು ಪುಟಗಳನ್ನು ಓದಿದ ಬಳಿಕ ಇದ್ದಕ್ಕಿದ್ದಂತೆ ಓಹ್, ಟಿಪ್ಪಣಿ ಬರೆದುಕೊಳ್ಳಲಿಲ್ಲ ಎಂದು ನೆನಪಾಗುತ್ತಿತ್ತು. ಅಲ್ಲಿಯವರೆಗೆ ಪುಟಗಳು ಸಾಗಿದ್ದೇ ಗೊತ್ತಾಗುತ್ತಿರಲಿಲ್ಲ. ಅಷ್ಟು ತಲ್ಲೀನತೆ ಪ್ರತೀಪುಟದಲ್ಲೂ. ಕುತೂಹಲ ಹಾಗೂ ಆಕರ್ಷಕ ಶೈಲಿಯ ಕಾರಣಕ್ಕೆ ಬಹಳ ಇಷ್ಟವಾಗಿತ್ತು.

ಜೊತೆಗೆ ನನಗೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಬರುವ ನೇಮಿಚಂದ್ರನೆಂಬ ಕವಿಯ ಬಗ್ಗೆ ಮಾಹಿತಿ ಇತ್ತು. ಅದೇ ಹೆಸರನ್ನು ನೋಡಿದಾಗ ಇವರೂ ಲೇಖಕ ಎಂದೇ ಭಾವಿಸಿದ್ದೆ ನಾನು. ಆದರೆ ಈ ಕೃತಿ ಕೊಂಡಾಗಲೇ ಗೊತ್ತಾದದ್ದು, ಅವರು ಆತ ಅಲ್ಲ ಆಕೆ! ಎಂದು. ಆಗ ಅಂತರ್ಜಾಲದಲ್ಲಿ ಅವರ ಕುರಿತು ಹುಡುಕಿದೆ. "ನೇಮಿಚಂದ್ರ"

ಎಷ್ಟು ಚಂದದ ಹೆಸರು!

ಸಾಮಾನ್ಯವಾಗಿ ಪ್ರವಾಸವೆಂದರೆ, ಹೋಗುವುದು ಪ್ರಸಿದ್ಧ ಸ್ಥಳಕ್ಕಾಗಿರುತ್ತದೆ, ಜೊತೆಗೆ ಇತ್ತೀಚಿಗಂತೂ ವಿಶ್ರಾಂತಿ ಬಯಸಿ ಯಾವುದೋ ಐಷಾರಾಮಿ ರೆಸಾರ್ಟ್ ಹುಡುಕಿ ಹೋಗುತ್ತಾರೆ. ಅಲ್ಲಿ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡಿಕೊಂಡು, ಮೋಜು ಮಸ್ತಿ ಮಾಡಿಕೊಂಡು ಬರುತ್ತಾರೆ. ನಮ್ಮ‌ ಕಣ್ಣು ನೋಡುವುದಕ್ಕಿಂತ ಹೆಚ್ಚಾಗಿ ಕ್ಯಾಮೆರಾದ ಕಣ್ಣೇ ಕೆಲಸ‌ ಮಾಡುತ್ತದೆ. ಎಲ್ಲಿ ಹೋದರೂ ಅಲ್ಲಿನ ಜಾಗ, ಜನಜೀವನ, ಸಂಸ್ಕೃತಿಯನ್ನು ನೊಡುವುದು ಬಿಟ್ಟು ಫೋಟೊ, ರೀಲ್ಸ್ ಎಂದು ಮುಗಿಬೀಳುತ್ತಾರೆ.

ಆದರೆ ಈ ಲೇಖಕಿ ಆಯ್ದುಕೊಂಡದ್ದು ಅಂತಹ ಯಾವ ಸ್ಥಳವೂ ಅಲ್ಲ. ಜೊತೆಗೆ ಅವರಿಗೆ ಅಂತಹ ಹುಚ್ಚೂ ಇಲ್ಲ ಅನಿಸುತ್ತದೆ. ಪ್ರವಾಸವನ್ನು ಹೇಗೆ ಮಾಡಬೇಕು, ಅದನ್ನು ಹೇಗೆ ದಾಖಲಿಸಬೇಕೆಂಬುದು ಕೂಡಾ ಈ ಕೃತಿಯನ್ನು ಓದಿದಾಗ ಅರ್ಥವಾಗುತ್ತದೆ.

ಲೇಖಕಿ ಹಾಗೂ ಅವರ ಸ್ನೇಹಿತೆ ಹೋದ ಜಾಗವಾದ ಪೆರು ದಕ್ಷಿಣ ಅಮೇರಿಕಾದ ಸ್ಥಳ. ಎಲ್ಲರೂ ಹೋಗಿ ಬರುವ ಕ್ಯಾಲಿಫೋರ್ನಿಯಾ, ಯೂರೋಪು, ಆಸ್ಟ್ರೇಲಿಯಾದಂತಹ ಸರ್ವಸೌಲಭ್ಯದ ಸ್ಥಳವಲ್ಲ. ಅದರದ್ದೇ ಹೆಸರಿನ ಬಿಲ್ಡಿಂಗುಗಳ ನಗರವಾದ ಉತ್ತರ ಅಮೇರಿಕಾವೂ ಅಲ್ಲ. ಪ್ರವಾಸಕ್ಕೆ ಪ್ರಸಿದ್ಧವಾದ, ಹೆಸರಾಂತ ಜಾಗವೂ ಅಯ್ದುಕೊಂಡ ಸ್ಥಳದ ಹೆಸರೇ ವಿಶಿಷ್ಟವಾಗಿದೆ. ಈ ಕೃತಿಯನ್ನು ಓದಿದಾಗ ಅಲ್ಲಿನ ಅಮೇಜಾನ್ ನದಿಯಲ್ಲಿ ತೇಲಬೇಕು, ಆ ದೊಡ್ಡ ದೊಡ್ಡ ತಾವರೆಯಂತಹ ಎಲೆಗಳ ಮೇಲೆ ಕಾಲಿಟ್ಟು ನಡೆಯುಂತಾದರೆ ಎಷ್ಟು ಚಂದ! ಆ ಜನರು ಧರಿಸುತ್ತಿದ್ದ ಪ್ರಾದೇಶಿಕ ಆಭರಣಗಳು ನನಗೂ ಸಿಕ್ಕಿದರೆ ಎಂಥಾ ಮಜ! ಎಂದೆಲ್ಲ ಅನಿಸುತ್ತದೆ.

ಮಾಚುಪಿಚು, ವೀರಕೋಚ, ನಾಸ್ಕಾದ ಗೆರೆಗಳಿರುವ ಪಂಪಾ ಕೊಲೆರಡ, ದೊಡ್ಡ ನಗರವಾದ ಲೀಮಾ, ಆಂಡಿಸ್ ಪರ್ವತ, ಅವರ ಬಸ್ಸಿನ ಪ್ರಯಾಣ ಇವನ್ನು ಓದುವಾಗ ಮೈ ರೋಮಾಂಚನವಾಗುತ್ತದೆ. ಆ ಗೆರೆಗಳ ವರ್ಣನೆ ನೋಡುವಾಗ ನನಗೆ ಚಕ್ರವ್ಯೂಹದ ನೆನಪಾಯಿತು. ಮರಿಯಾ ರೇಖಿಯ ಬಗ್ಗೆ ಹೆಮ್ಮೆ ಎನಿಸಿತು. ಮತ್ತೊಂದು ರೋಮಾಂಚಕ ಸಂಗತಿಯೆಂದರೆ, ಪರವಾನಗಿ ಇಲ್ಲದ ಅಕ್ಕಪಕ್ಕದ ದೇಶದಲ್ಲೂ ಲೇಖಕಿ‌ ಹಾಗೂ ಅವರ ಸ್ನೇಹಿತೆ‌ ಒಂದು ಸುತ್ತು ಹಾಕಿಬಿಡುತ್ತಾರೆ! ನಾನು ಮೇಘಾಲಯದ ಡೌಕಿಯಲ್ಲಿ ಇದೇ ಕೆಲಸ‌ಮಾಡಲು ಹೊರಟಿದ್ದೆ.‌ ಒಂದು ಕಾಲು ಎತ್ತಿಟ್ಟರೆ ಬಾಂಗ್ಲಾ ದೇಶ. ಅಲ್ಲಿ ಹೋದರೆ? ಸೈನಿಕರು ತಡೆದರು.

ಲೇಖಕಿಯ ಬರೆವಣಿಗೆಯ ಶಕ್ತಿ ನಮ್ಮನ್ನೂ ಅಲ್ಲಿಗೆ ಕರೆದೊಯ್ಯುತ್ತದೆ

ಅಲ್ಲಿಗೆ ಇವರು ಬಸ್ಸಿನಲ್ಲಿ ಹೋಗುವ ಪ್ರಯಾಣವೂ ಬಲು ಸೊಗಸು. ಆ ದಟ್ಟ ಕಾಡು, ಪ್ರಪಂಚದ ಅಗಲವಾದ ನದಿಯಾದ ಅಮೇಜಾನ್, ಇನ್ಕಾ ನಾಗರೀಕತೆಯ ವಿಚಾರಗಳು, ಅಲ್ಲಿನ ಜನರ ಜೀವನ ಶೈಲಿಯನ್ನು ಓದುವಾಗ ನಾವೇ ಅಲ್ಲಿದ್ದಂತೆ ಭಾಸವಾಗುವಂತೆ ಮಾಡುವುದು ಲೇಖಕಿಯ ಬರೆವಣಿಗೆಯ ಶಕ್ತಿ.

ಅಲ್ಲಿ ಅವರು ಮಾಂಸ ರಹಿತ ಊಟಕ್ಕಾಗಿ ಓಡಾಡಿದ ಸನ್ನಿವೇಶ, ಜಡ್ಡುಕಟ್ಟಿದ ಕಾಲುಗಳನ್ನು,‌ ಮುಖವನ್ನು ತಿಕ್ಕಿಸಿಕೊಳ್ಳಲು ಹೋದ ಬ್ಯೂಟಿ ಪಾರ್ಲರ್ ಪ್ರಹಸನ ಓದುವಾಗ ಬಿದ್ದು ಬಿದ್ದು ನಕ್ಕಿದ್ದೆ. ಕೆಚುವಾ ಭಾಷೆ ಬಾರದಿದ್ದರೂ ಅವರಿಬ್ಬರು ಅಷ್ಟೂ ದಿನಗಳನ್ನು ಯಾವುದೇ ಸಮಸ್ಯೆಯಾಗದಂತೆ ನಿಭಾಯಿಸಿದ್ದು , "ನೋ ಕಾರ್ನೆ" ಎಂಬ ಪದವನ್ನು ಕಲಿತು ಮಾಂಸರಹಿತ ಊಟ ಮಾಡಲು ಶುರು ಮಾಡಿದ್ದನ್ನು ಓದುವಾಗ, ಭಾಷೆಯ ಕಲಿಕೆ‌ ಎಷ್ಟು ಮುಖ್ಯ ಎಂದು ಅನಿಸಿತು.

ಈಗಾದರೆ ಸ್ಮಾರ್ಟ್ ಫೋನ್ ಕೈಯಲ್ಲಿ ಇರುತ್ತದೆ. ತಕ್ಷಣವೇ ಗೂಗಲ್ ಟ್ರಾನ್ಸ್ಲೇಷನ್ ಮಾಡಿಕೊಂಡು ಏನು ಬೇಕಾದರೂ ತಿಳಿದುಕೊಂಡು ಮಾತಾಡಬಹುದು. ಆದರೆ ಅವರು ಪ್ರವಾಸ ಮಾಡಿದ ಕಾಲದಲ್ಲಿ ಇದಾವುದೂ ಕೈಗೆಟುವ ಹಾಗೆ ಇರಲಿಲ್ಲ. ಹಾಗಾಗಿ ಭಾಷೆ ಬಾರದ ನಾಡಿನಲ್ಲಿ ಪ್ರವಾಸ ಮಾಡುವುದು ಸುಲಭವಲ್ಲ. ನಾನು ಭಾರತದೊಳಗಿನ ಮೇಘಾಲಯಕ್ಕೆ ಹೋದಾಗಲೇ ಈ ಸಮಸ್ಯೆಯನ್ನು ನೋಡಿದ್ದೆ. ಅಂತದ್ದರಲ್ಲಿ ದಕ್ಷಿಣ ಅಮೇರಿಕಾದ ಅಪರಿಚಿತ ನಾಡಿನಲ್ಲಿ ಇವರು ಅದು ಹೇಗೆ ಸಂವಹನ‌ ಮಾಡಿದರೋ‌ ಏನೋ.

ತಾವು ಹೋಗಿ ಬಂದ ಒಂದು ಸ್ಥಳವನ್ನು ವರ್ಣಿಸಿ ಬರೆಯುವುದು ಕಷ್ಟವೇನಲ್ಲ. ಆದರೆ ಅದು ಮೊದಲ‌ ಪುಟದಿಂದ ಕೊನೆಯ ತನಕವೂ ಆಕರ್ಷಕವಾಗಿ ಓದಿಸಿಕೊಳ್ಳುವಂತೆ ಮಾಡುವುದಿದೆಯಲ್ಲ,‌ಅದು ಬಹಳ ಕಷ್ಟ. ಆ ನಿಟ್ಟಿನಲ್ಲಿ ಈ ಕೃತಿ ಸೂಪರ್ ಸೂಪರ್ ಸೂಪರ್. ಹಿಡಿದ ಪುಸ್ತಕವನ್ನು ಕೆಳಗಿಡಲು ಮನಸ್ಸೇ ಬರುವುದಿಲ್ಲ. ಇನ್ನೂ ಹೇಳಬೇಕೆಂದರೆ, ಇದನ್ನು ಓದಿದ ಆ ಕಾಲದಿಂದಲೂ ನನಗೆ ಪೆರುವಿಗೆ ಹೋಗಬೇಕೆಂದು ತೀವ್ರವಾಗಿ ಅನಿಸಿದೆ. ಕನಸುಗಳಿಗೆ ರೆಕ್ಕೆ ಬಂದರೆಷ್ಟು ಚೆನ್ನ! ಅಲ್ಲವೇ?

ಹೀಗಿತ್ತು ಕಾಮೆಂಟ್ಸ್‌

ಇಬ್ಬರು ಕನ್ನಡಿಗ ಮಹಿಳೆಯರ ಸಾಹನ ಪ್ರವಾಸ ಕಥನ ಸದಾ ನೆನಪಿನಲ್ಲಿ ಉಳಿದಿದೆ ಎಂದು ಅರುಣ್ ಪ್ರಸಾದ್ ಕಾಮೆಂಟ್‌ ಮಾಡಿದ್ದಾರೆ

ಮೇಡಂ ನಾನು ಸಹ ಮೇಘಾಲಯದ ಚಿರಪುಂಜಿ ಟೈಗರ್ ಫಾಲ್ಸ್ ಎಲ್ಲವನ್ನು ನೋಡಿದ್ದೇನೆ ಬೆಟ್ಟದ ಮೇಲೆ ನಿಂತು ಕಲ್ಲನ್ನು ಎಸೆದರೆ ಅದು ಬಾಂಗ್ಲಾದೇಶದ ಮತ್ತೊಂದು ಬೆಟ್ಟಕ್ಕೆ ತಾಗುತ್ತದೆ. ಪೆರುವಿನ ಸುಂದರ ಕಣಿವೆಯಲ್ಲಿ ಪ್ರವಾಸಿ ಕಥನವನ್ನು ಓದಿದ ಮೇಲೆ ನನಗೂ ಸಹ ಬಿರು ದೇಶವನ್ನು ನೋಡಬೇಕೆಂಬ ಆಸೆ ಆಗುತ್ತಿದೆ ಮೇಡಂ ಅಲ್ಲಿ ಸ್ಪೇನ್ ದೇಶದವರು ಬಂದು ಇನ್ಕಾನಾಗರಿಕತೆಯನ್ನು ಸರ್ವನಾಶ ಮಾಡಿದ್ದನ್ನು ಸಹ ತುಂಬಾ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಅರುಣ್ ಕುಮಾರ್ ಕಾಮೆಂಟ್ ಮಾಡಿದ್ದಾರೆ.

ಬರಹ: ಮೇದಿನಿ ಕೆಸವಿನಮನೆ, ಶಿಕ್ಷಕಿ

Whats_app_banner