ಪುಸ್ತಕ ಪರಿಚಯ: ಅಭಿವೃದ್ಧಿ ಕುರಿತ ಸಿನಿಕ ಪ್ರಶ್ನೆಗಳಿಗೆ ಅನುಭವ ಕೊಟ್ಟ ದಿಟ್ಟ ಉತ್ತರ -ಹಳ್ಳಿಗಳನ್ನು ಕಟ್ಟುವ ಕಷ್ಟಸುಖ
ಕನ್ನಡ ಸುದ್ದಿ  /  ಜೀವನಶೈಲಿ  /  ಪುಸ್ತಕ ಪರಿಚಯ: ಅಭಿವೃದ್ಧಿ ಕುರಿತ ಸಿನಿಕ ಪ್ರಶ್ನೆಗಳಿಗೆ ಅನುಭವ ಕೊಟ್ಟ ದಿಟ್ಟ ಉತ್ತರ -ಹಳ್ಳಿಗಳನ್ನು ಕಟ್ಟುವ ಕಷ್ಟಸುಖ

ಪುಸ್ತಕ ಪರಿಚಯ: ಅಭಿವೃದ್ಧಿ ಕುರಿತ ಸಿನಿಕ ಪ್ರಶ್ನೆಗಳಿಗೆ ಅನುಭವ ಕೊಟ್ಟ ದಿಟ್ಟ ಉತ್ತರ -ಹಳ್ಳಿಗಳನ್ನು ಕಟ್ಟುವ ಕಷ್ಟಸುಖ

ಹಳ್ಳಿಗಳ ಪರಿಸರವನ್ನು ಕೇಂದ್ರವಾಗಿಸಿಕೊಂಡು ಭಾರತದ ಬಗ್ಗೆ, ಮಹಿಳೆಯರನ್ನು ಕೇಂದ್ರವಾಗಿಸಿಕೊಂಡು ಹಳ್ಳಿಗಳ ಬಗ್ಗೆ ಆಲೋಚಿಸಿದರೆ, ಯೋಜನೆಗಳನ್ನು ರೂಪಿಸಿದರೆ ಹೇಗಿರುತ್ತದೆ? ಈ ಪ್ರಶ್ನೆಗೆ ಉತ್ತರ ಎನ್ನುವಂತೆ ಮೂಡಿ ಬಂದಿದೆ ‘ಹಳ್ಳಿಗಳನ್ನು ಕಟ್ಟುವ ಕಷ್ಟಸುಖ’ ಪುಸ್ತಕ. ಗ್ರಾಮೀಣ ಬದುಕಿನ ಬಗ್ಗೆ ಆಸಕ್ತಿಯಿರುವವರು ಓದಲೇಬೇಕಾದ ಪುಸ್ತಕ ಇದು.

ಮಾನವ ಕೇಂದ್ರಿತ ಗ್ರಾಮೀಣಾಭಿವೃದ್ಧಿಯ ಹಲವು ಸಾಧ್ಯತೆ ತೆರೆದಿಡುವ ಡಾ ಪ್ರಕಾಶ ಭಟ್ ಅವರ ಪುಸ್ತಕ 'ಹಳ್ಳಿಗಳನ್ನು ಕಟ್ಟುವ ಕಷ್ಟಸುಖ'
ಮಾನವ ಕೇಂದ್ರಿತ ಗ್ರಾಮೀಣಾಭಿವೃದ್ಧಿಯ ಹಲವು ಸಾಧ್ಯತೆ ತೆರೆದಿಡುವ ಡಾ ಪ್ರಕಾಶ ಭಟ್ ಅವರ ಪುಸ್ತಕ 'ಹಳ್ಳಿಗಳನ್ನು ಕಟ್ಟುವ ಕಷ್ಟಸುಖ'

ಹಳ್ಳಿಗಳನ್ನು ಕಟ್ಟುವ ಕಷ್ಟಸುಖ ಪುಸ್ತಕ ಪರಿಚಯ: "ಭಾರತವೇಕೆ ಬಡ ದೇಶ? ಯಾಕೆಂದರೆ ಭಾರತದ ಹಳ್ಳಿಗಳು ಬಡವಾಗಿವೆ. ಹಳ್ಳಿಗಳೇಕೆ ಬಡವಾಗಿವೆ? ಯಾಕೆಂದರೆ ಹಳ್ಳಿಗರು ತೀವ್ರವಾದ ಉದ್ಯೋಗದ ಕೊರತೆಯಿಂದ ಬಳಲಿದ್ದಾರೆ". ಮಹಾತ್ಮಾ ಗಾಂಧಿ ಅವರ ಈ ಮಾತು 'ಹಳ್ಳಿಗಳನ್ನು ಕಟ್ಟುವ ಕಷ್ಟಸುಖ' ಪುಸ್ತಕದಲ್ಲಿ ದಾಖಲಾಗಿದೆ. ಇಡೀ ಪುಸ್ತಕದ ಜೀವಧಾತು ಆಶಯವೋ ಎನ್ನುವಂತೆ ಹಲವೆಡೆ ಪರೋಕ್ಷವಾಗಿ, ಅಲ್ಲಲ್ಲಿ ಪ್ರತ್ಯಕ್ಷವಾಗಿ ಕಾಣಿಸಿಕೊಂಡಿದೆ. ಮಹಾತ್ಮ ಗಾಂಧಿಯವರು ಅಂದು ಕೇಳಿದ್ದ ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹಳ್ಳಿಗಳಿಗೆ ಹಿಂದಿರುಗಿದವರು ಸಾವಿರಾರು ಮಂದಿ. ಅವರೆಲ್ಲರ ಸಕ್ರಿಯ ಮತ್ತು ತ್ಯಾಗದ ಪ್ರಯತ್ನಗಳ ಮೂರ್ತರೂಪ ಎನ್ನುವಂತೆ ಬೈಫ್‌ನಂಥ ಒಂದು ಸಮರ್ಥ ಸಂಸ್ಥೆಯು ಹೊರಹೊಮ್ಮಿತು. ಈ ಸಂಸ್ಥೆಯ ಒಂದು ಯೋಜನೆಯ ಅನುಷ್ಠಾನ ಮತ್ತು ಫಲಿತಾಂಶಗಳ ಸೃಜನಾತ್ಮಕ ಮತ್ತು ಸತ್ಯನಿಷ್ಠ ದಾಖಲಾತಿ ಪ್ರಯತ್ನವಾಗಿ 'ಹಳ್ಳಿಗಳನ್ನು ಕಟ್ಟುವ ಕಷ್ಟಸುಖ' ಪುಸ್ತಕ ಮೈದಾಳಿದೆ.

ಈ ಪುಸ್ತಕ ಗಮನ ಸೆಳೆಯುವುದು ಸಮಾಜ ಸೇವೆಯಲ್ಲಿ ಹತ್ತಾರು ವರ್ಷ ದುಡಿದ ಡಾ ಪ್ರಕಾಶ ಭಟ್ ಅವರ ಗಾಢ ಗ್ರಾಮೀಣ ಅನುಭವ ವೈವಿಧ್ಯಗಳಿಂದ. ಗ್ರಾಮೀಣ ಬದುಕಿನಲ್ಲಿ ಆಸಕ್ತಿ ಹೊಂದಿರುವವರಿಗೆ ಈ ಪುಸ್ತಕದ ಪ್ರತಿ ಪುಟದಲ್ಲಿಯೂ ಪಾಠಗಳಿವೆ. ಹಳ್ಳಿಗಳೆಂದರೆ ಏನು? ಗ್ರಾಮೀಣ ಜನರು ಹೇಗೆ ಯೋಚಿಸುತ್ತಾರೆ? ಬಡವರು ಹೇಗಿರುತ್ತಾರೆ? ಗ್ರಾಮೀಣ ಪ್ರದೇಶದಲ್ಲಿ ಬಡತನ ಹೋಗಲಾಡಿಸಲು ಏನು ಮಾಡಬೇಕು? ಬಡವರ ಉದ್ಧಾರಕರು ನಿಜವಾದ ಉದ್ಧಾರಕರು ಯಾರು? ಸರ್ಕಾರಗಳು ಏನು ಮಾಡಬಾರದು? (ಹೌದು, ಏನು ಮಾಡಬಾರದು) ಕೃಷಿ ಮತ್ತು ಮಣ್ಣಿನ ಸಂರಕ್ಷಣೆಯೊಂದಿಗೆ ಗ್ರಾಮೀಣ ಆರ್ಥಿಕತೆ ಹೊಂದಿರುವ ನಂಟು ಎಂಥದ್ದು? ಇಂಥ ಎಷ್ಟೋ ಪ್ರಶ್ನೆಗಳಿಗೆ ಈ ಪುಸ್ತಕದಲ್ಲಿ ಉತ್ತರಗಳಿವೆ.

ಗ್ರಾಮೀಣ ಅಭಿವೃದ್ಧಿ, ಸಮಾಜಶಾಸ್ತ್ರವನ್ನು ಚೆನ್ನಾಗಿ ಓದಿಕೊಂಡ ವ್ಯಕ್ತಿಗೆ ಸಮಾಜದ ಒಡನಾಟವೂ ಇದ್ದರೆ ಮಾತ್ರ ಇಂಥದ್ದೊಂದು ಪುಸ್ತಕ ಬರೆಯಲು ಸಾಧ್ಯ ಎಂದು ಪುಸ್ತಕ ಓದುವಾಗ ಹಲವು ಬಾರಿ ಅನ್ನಿಸುತ್ತದೆ. ಅರ್ಥಶಾಸ್ತ್ರಜ್ಞರು, ಸಮಾಜಶಾಸ್ತ್ರಜ್ಞರ ಹಲವು ಹೇಳಿಕೆಗಳನ್ನು ಪ್ರಾಸಂಗಿಕವಾಗಿ ಉದ್ಧರಿಸಿದ್ದರೂ, ಎಲ್ಲಿಯೂ ಇದು ಒಂದು ಒಣ ಅಕಡೆಮಿಕ್ ಸರ್ಕಸ್‌ನಂಥ ಪುಸ್ತಕ ಎನ್ನಿಸುವುದಿಲ್ಲ. ಪುಸ್ತಕದ ಓದನ್ನು ಸಮಾಜದ ಬದುಕಿನಲ್ಲಿ ಪರಿಶೀಲಿಸುವ ತುಡಿತ, ಅಂಥ ಪರಿಶೀಲನೆಯಿಂದ ದಕ್ಕಿದ ಒಳನೋಟ ತಣ್ಣಗೆ ಹರಿಯುತ್ತದೆ. ಹೀಗಾಗಿಯೇ ಈ ಪುಸ್ತಕವು ಜನಜೀವನದ ವಿಶಿಷ್ಟ ಸಾಂಸ್ಕೃತಿಕ ದಾಖಲಾತಿಯೂ ಹೌದು ಎನಿಸುತ್ತದೆ.

ನಗರಗಳಿಗೆ ಹೋಲಿಸಿದರೆ ಹಳ್ಳಿಗಳನ್ನು ನಿರ್ಲಕ್ಷಿಸಲಾಗಿದೆ, ಹಳ್ಳಿಗಳಲ್ಲಿ ಶ್ರೀಮಂತರಿಗೆ ಹೋಲಿಸಿದರೆ ಬಡವರನ್ನು ನಿರ್ಲಕ್ಷಿಸಲಾಗಿದೆ, ಭೂಮಿ ಇರುವ ಬಡವರಿಗೆ ಹೋಲಿಸಿದರೆ ಭೂಮಿ ಇಲ್ಲದ ಬಡವರ ಬದುಕು ಕಷ್ಟ, ಭೂಮಿ ಇಲ್ಲದ ಬಡವರಲ್ಲಿಯೂ ಜಾತಿಸ್ತರದಲ್ಲಿ ಕೆಳಗೆ ಹೋದಂತೆ ಅವರ ಬದುಕು ಕಷ್ಟ, ಇವರಲ್ಲಿಯೂ ಮಹಿಳೆಯರ ಬದುಕು ಕಷ್ಟಸ್ಯಕಷ್ಟ. ಬಿಡುಗಡೆಗಾಗಿ ಹಂಬಲಿಸುತ್ತಾ ಹತಾಶೆಗಾಗಿ ಜಾರುವ ಮಹಿಳೆಯರ ಕಣ್ಣೀರು ಓದುವವರ ಹೃದಯವನ್ನೂ ಆರ್ದ್ರಗೊಳಿಸುತ್ತದೆ.

ಮಕ್ಕಳನ್ನು ಹೊಡೆಯುತ್ತೇವೆ ಎನ್ನುವ ಮಹಿಳೆಯರ ಹತಾಶೆ

ಹಳ್ಳಿಗಳನ್ನು ಕಟ್ಟುವ ಕಷ್ಟಸುಖ ಪುಸ್ತಕದಲ್ಲಿ 'ಮಹಿಳೆಯರು' ಎನ್ನುವ ಪ್ರತ್ಯೇಕ ಅಧ್ಯಾಯವೇನೋ ಇದೆ. ಆದರೆ ಮಹಿಳೆಯರು ಅದೊಂದು ಅಧ್ಯಾಯಕ್ಕಷ್ಟೇ ಸೀಮಿತರಾಗಿಲ್ಲ. ಪುಸ್ತಕದ ಎಲ್ಲ 23 ಅಧ್ಯಾಯಗಳನ್ನೂ ಮಹಿಳೆಯರೇ ಆವರಿಸಿಕೊಂಡಿದ್ದಾರೆ. ಮಹಿಳೆಯರನ್ನು ಅಭಿವೃದ್ಧಿಯ ಮತ್ತು ಅದರ ಕಥನದ ಕೇಂದ್ರವಾಗಿಸಿಕೊಳ್ಳುವ ಪ್ರಯತ್ನ ಇಲ್ಲಿ ಸಾಕಾರವಾಗಿದೆ. ಪುಸ್ತಕದಲ್ಲಿ ಬರುವ ಕೆಲ ಸನ್ನಿವೇಶಗಳನ್ನು ಓದುಗರ ಮನಸ್ಸನ್ನು ಕಲಕಿಬಿಡುತ್ತವೆ.

ಒಮ್ಮೆ ಮಹಿಳೆಯರ ಗುಂಪು ಸೇರಿಸಿ ಅವರ ಬದುಕು, ದಿನಚರಿ ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವ ಯೋಜನಾಧಿಕಾರಿ (ಲೇಖಕರು) 'ನೀವು ಮನೋರಂಜನೆಗಾಗಿ ಏನು ಮಾಡುತ್ತೀರಿ' ಎಂದು ಪ್ರಶ್ನಿಸುತ್ತಾರೆ. ಸಭೆಗೆ ಬಂದಿದ್ದವರಿಗೆ ಈ ಪ್ರಶ್ನೆ ಅರ್ಥವಾಗುವುದಿಲ್ಲ. ಅವರು 'ಹಾಗೆಂದರೇನ್ರೀ?' ಎಂದು ಮರುಪ್ರಶ್ನಿಸುತ್ತಾರೆ. 'ಇಷ್ಟೆಲ್ಲ ಕೆಲಸಗಳ ನಡುವೆ ಬೇಸರ ಕಳೆಯಲು ಏನು ಮಾಡುತ್ತೀರಿ?' ಎಂದು ಪ್ರಶ್ನೆಯನ್ನು ವಿಸ್ತರಿಸುತ್ತಾರೆ.

ಆಗ ಗುಂಪಿನಲ್ಲಿದ್ದವರೊಬ್ಬರು, 'ನಾವು ಮಕ್ಕಳಿಗೆ ಹೊಡೆಯುತ್ತೇವೆ. ಮಕ್ಕಳು ಅಳುತ್ತಾ ಮಲಗುತ್ತಾರೆ. ನಾವೂ ಅಳುತ್ತೇವೆ' ಎಂದು ಹೇಳುತ್ತಾರೆ. 'ಅದಕ್ಕಿಂತ ಹೆಚ್ಚಿನ ವಿವರಣೆ ಕೇಳಲು ನನಗೆ ಸಾಧ್ಯವಾಗಲಿಲ್ಲ. ಅವರ ಮನಸ್ಸಿನಲ್ಲಿ ಎಂತಹ ಹತಾಶೆಯಿತ್ತು ಎನ್ನುವುದನ್ನು ಅದು ಅನ್ಯೋಕ್ತಿಯಲ್ಲಿ ಹೇಳಿತು. ನಾನೆಂದೂ ಮರೆಯಲಾರದ ಮಾತಾಗಿ ನನ್ನ ಮನಸ್ಸಿನಲ್ಲಿ ಉಳಿಯಿತು' ಎಂದು ಲೇಖಕರು ಆ ಪ್ರಸಂಗವನ್ನು ದಾಖಲಿಸುತ್ತಾರೆ.

ಹಳ್ಳಿಗಳನ್ನು ಕಟ್ಟುವ ಕಷ್ಟಸುಖ ಚೌಕಟ್ಟಿನೊಂದಿಗೆ ಲೇಖಕ ಡಾ ಪ್ರಕಾಶ ಭಟ್
ಹಳ್ಳಿಗಳನ್ನು ಕಟ್ಟುವ ಕಷ್ಟಸುಖ ಚೌಕಟ್ಟಿನೊಂದಿಗೆ ಲೇಖಕ ಡಾ ಪ್ರಕಾಶ ಭಟ್ (ಕೃಪೆ: avadhimag.in)

ನಾಯಕತ್ವದ ವಿಚಾರದಲ್ಲಿ ಮಹಿಳೆಯರೇ ಬೆಸ್ಟ್

ಬಾಲ್ಯ ವಿವಾಹದ ಅಡ್ಡಪರಿಣಾಮ ಎನ್ನುವಂತೆ ಪರಿತ್ಯಕ್ತ ಮಹಿಳೆಯರು ಕೆಲ ಹಳ್ಳಿಗಳಲ್ಲಿ ಇರುತ್ತಿದ್ದ ಸಂದರ್ಭ ಅದು. ಚಿಕ್ಕವಯಸ್ಸಿಗೆ ಆದ ಮದುವೆಯನ್ನು ಗಂಡು ಮಾನ್ಯ ಮಾಡದಿದ್ದಾಗ ಹೆಣ್ಣು 'ಪರಿತ್ಯಕ್ತೆ'ಯಾಗಿ ಜೀವನ ದೂಡಬೇಕಿತ್ತು. ಸಾಮಾಜಿಕ ಕಳಂಕವನ್ನೂ ಹೊರಬೇಕಾಗಿತ್ತು. ಇಂಥವರಿಗಾಗಿ ರೂಪಿಸಿದ 'ಶಕ್ತಿ' ಕಾರ್ಯಕ್ರಮವು ಹಲವು ಮಹಿಳೆಯರಿಗೆ ಹೊಸ ಬದುಕು ಕೊಟ್ಟಿತು. ಈ ಪ್ರಯತ್ನಕ್ಕೆ ಗಂಡಸರಿಂದ ಬಂದ ಆಕ್ಷೇಪವನ್ನು ಬೈಫ್ ಸಂಸ್ಥೆಯ ಕಾರ್ಯಕರ್ತರು ಜಾಣತನದಿಂದ ಪರಿಹರಿಸಿದ ಉದಾಹರಣೆ ಈ ಪುಸ್ತಕದಲ್ಲಿ ದಾಖಲಾಗಿದೆ.

"ಸರ್, ಈ ಹೆಣ್ಣುಗಳು ಅಷ್ಟು ಸರಳರಲ್ಲ, ಕೆಲವರು ಕುಟುಂಬಗಳನ್ನು ಹಾಳು ಮಾಡಿದ್ದಾರೆ" ಎಂದು ಒಬ್ಬರು ತಕರಾರು ಮಾಡುತ್ತಾರೆ. ಆಗ ಯೋಜನಾಧಿಕಾರಿಗಳು, "ಅವರು ಎರಡು ಊಟಕ್ಕೆ ಬೇರೆಯವರನ್ನು ಅವಲಂಬಿಸಬಾರದು, ಸ್ವಾಭಿಮಾನದಿಂದ ಬದುಕುವಂತಾಗಬೇಕು. ಆಗ ನೀವೆಂದ ಸಂದರ್ಭಗಳು ಇರುವುದಿಲ್ಲ" ಎಂದು ಗಂಡಸರ ಅಹಂಕಾರದ ಅಸಹ್ಯ ಆಕ್ಷೇಪವನ್ನು ಅವರೆಡೆಗೇ ತಿರುಗಿಸುತ್ತಾರೆ. ಲೇಖಕರು ಮಹಿಳೆಯರ ಪರ ಹೊಂದಿರುವ ನಿಲುವಿಗೂ ಈ ಪ್ರಸಂಗ ಸಾಕ್ಷಿಯಾಗುತ್ತದೆ.

ಒಮ್ಮೆ ಸಂಘದ ಸದಸ್ಯೆಯೊಬ್ಬರು ಯಾವುದೋ ಕಾರಣಕ್ಕೆ ಸಾಲ ತೀರಿಸಲು ಸಾಧ್ಯವಾಗದೆ ನೋವು ಅನುಭವಿಸುತ್ತಿರುತ್ತಾರೆ. ಅವರು ಸರಿಯಾಗಿ ಊಟವನ್ನೂ ಮಾಡಿರಲಿಲ್ಲ. ಸಂಘದ ಇತರ ಸದಸ್ಯೆಯರು ಅವರ ಮನೆಗೆ ಹೋಗಿ, "ಸಾಲ ಹೋಗಲಿ ಬಿಡು, ನೀನು ಚೆನ್ನಾಗಿರಬೇಕು" ಎಂದು ಸಂಘದ ಸಭೆಗೆ ಕರೆದುಕೊಂಡು ಸಾಂತ್ವನ ಹೇಳುವ ಪ್ರಸಂಗವಂತೂ ಹಣದ ಲೆಕ್ಕದಲ್ಲಿ ಸಂತೋಷವನ್ನು ಅಳೆಯುವ ಮೌಲ್ಯವನ್ನೇ ಪ್ರಶ್ನಿಸುವಷ್ಟು ಸಶಕ್ತವಾಗಿ ಮೂಡಿ ಬಂದಿದೆ. ಇದನ್ನು ಗಮನಿಸಿದ ಲೇಖಕರು, "ವ್ಯವಹಾರದಲ್ಲಿ ಇಂಥ ಸೂಕ್ಷ್ಮಪ್ರಜ್ಞೆ ಕಾಣಿಸಿಕೊಳ್ಳುವುದು ಭಾವನಾತ್ಮಕ ತುಡಿತ ಜಾಗೃತವಾದಾಗ ಮಾತ್ರ ಸಾಧ್ಯ. ಅದನ್ನು ಸ್ವಸಹಾಯ ಸಂಘಗಳನ್ನು ಬಿಟ್ಟು ಬೇರೆಲ್ಲಿಯೂ ನಿರೀಕ್ಷಿಸಲಾಗದು. ಇದು ಭಾವನಾತ್ಮಕತೆಯ ಸೂಚಿ (Emotional Quotient) ನಾಯಕತ್ವದ ಮುಖ್ಯ ಗುಣ" ಎಂದು ಉಲ್ಲೇಖಿಸುತ್ತಾರೆ. ನಾಯಕತ್ವ ಮತ್ತು ಹೊಂದಾಣಿಕೆಯ ವಿಚಾರಕ್ಕೆ ಬಂದರೆ 'ಮಹಿಳೆಯರೇ ಬೆಸ್ಟ್' ಎನ್ನುವುದೂ ಲೇಖಕರ ಅನುಭವ.

ಇದೆಲ್ಲಾ ಗಂಡಸರ ಬಳಿ ಹೇಳುವ ವಿಷಯ ಅಲ್ಲರಿ

ಈ ಪುಸ್ತಕದ ಲೇಖಕ ಡಾ ಪ್ರಕಾಶ ಭಟ್ ಅವರು ಹಳ್ಳಿಗಳಲ್ಲಿ ಮಹಿಳೆಯರ ಸಭೆಗಳಲ್ಲಿ ಮಾತನಾಡುವಾಗಲೂ, "ನಾವು ಮಹಿಳೆಯರು ಇದ್ದೇವಲ್ಲಾ" ಎಂದು ಮಾತನಾಡುವುದನ್ನು ರೂಢಿಸಿಕೊಂಡಿದ್ದವರು. ಇವರ ಮನಸ್ಥಿತಿ ಮತ್ತು ಕಳಕಳಿ ಅರಿತಿದ್ದ ಮಹಿಳೆಯರು ಭಟ್ಟರ ಎದುರು ಮುಕ್ತವಾಗಿ ಎಲ್ಲವನ್ನೂ ಹೇಳಿಕೊಳ್ಳುತ್ತಿದ್ದರು, ಮಾತನಾಡುತ್ತಿದ್ದರು. ಯೋಜನಾಧಿಕಾರಿಯೊಬ್ಬರು ಮಹಿಳೆಯರ ವಿಶ್ವಾಸವನ್ನು ಎಷ್ಟರಮಟ್ಟಿಗೆ ಗಳಿಸಿರಬಹುದು ಎನ್ನುವುದಕ್ಕೆ ಮಾನಕ ಎನ್ನುವಂಥ ಪ್ರಸಂಗವೊಂದು 'ಹಳ್ಳಿಗಳನ್ನು ಕಟ್ಟುವ ಕಷ್ಟಸುಖ' ಪುಸ್ತಕದಲ್ಲಿ ದಾಖಲಾಗಿದೆ. (ಉಲ್ಲೇಖ: ಪೂರ್ಣಪ್ರಜ್ಞ ಬೇಳೂರು, ಬಯಲು)

ಬಯಲುಸೀಮೆಯಲ್ಲಿ ಮನೆಗಳಿಗೆ ಹೋದರೆ ಹೆಣ್ಣುಮಕ್ಕಳು ಹೊರಗೆ ಬರುವುದೇ ಇಲ್ಲ. ಪರಿಚಿತರಾಗಿ ಮನೆಯವರೇ ಆದ ಮೇಲೆ ಹೊರಬಂದು ಒಂದೋ ಎರಡೋ ಮಾತನಾಡುತ್ತಾರೆ. ಆದರೆ ನಮಗೆ ಮನೆಯಲ್ಲಿ ಗಂಡಸರು ಇಲ್ಲದಿದ್ದರೂ ಅಡುಗೆಮನೆಯಲ್ಲೇ ಊಟವೂ ಸಿಗುತ್ತಿತ್ತು. ಮಾತುಕತೆ ನಡೆಯುತ್ತಿತ್ತು. ಓರ್ವ ಹೆಣ್ಣುಮಗಳು ಅತ್ಯಂತ ಸಹಜವಾಗಿ ಮೂತ್ರದ್ವಾರದ ಬಳಿ ಏನೋ ಒತ್ತಿದಂತೆ ಆಗುವುದನ್ನು, ಸೊಂಟನೋವು, ಆಗಾಗ ಸುಸ್ತಾಗುವಿಕೆಗಳನ್ನೆಲ್ಲಾ ವಿವರಿಸಿದರು. ಅದು ಗರ್ಭಕೋಶ ಜಾರುವಿಕೆ ಸಮಸ್ಯೆ ಎಂದು ಭಟ್ ಅವರ ಆಕೆಗೆ ತಿಳಿಸಿದರು. 'ಇದನ್ನು ನಿಮ್ಮ ಯಜಮಾನರಿಗೆ ಹೇಳಿದ್ದೀರಾ? ಡಾಕ್ಟರ್‌ಗೆ ತೋರಿಸಿದ್ದೀರಾ' ಎಂದು ಕೇಳಿದಾಗ ಆಕೆಯು, 'ಇದೆಲ್ಲ ಗಂಡಸರ ಬಳಿ ಹೇಳುವ ವಿಷಯ ಅಲ್ಲರಿ. ಡಾಕ್ಟರ್ ಹತ್ರ ಹೋಗಲಿಕ್ಕೆ ರೊಕ್ಕಾನೂ ಇಲ್ಲ ರೀ' ಎನ್ನುತ್ತಾರೆ. ಗಂಡನ ಬಳಿ ಹೇಳಿಕೊಳ್ಳಲು ಸಾಧ್ಯವಾಗದ ವಿಷಯವನ್ನು ಈಕೆ ಒಬ್ಬ ಯೋಜನಾಧಿಕಾರಿಯ ಬಳಿ ಹೇಳಿಕೊಂಡಿದ್ದರು. ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಇಂಥ ಹಲವು ಮಹಿಳೆಯರಿಗೆ ಮುಂದೆ ಅಗತ್ಯ ಚಿಕಿತ್ಸೆ ದೊರೆಯಲು ಬೈಫ್ ಶ್ರಮಿಸಿತು.

ಹೆಜ್ಜೆಹೆಜ್ಜೆಗೂ ಸುಸ್ಥಿರ ಅಭಿವೃದ್ಧಿಯ ಪಾಠ

ಯಾರ ಬದುಕು ಪ್ರಭಾವಿಸಲು ನಾವು ಹೊರಟಿದ್ದೇವೋ ಮೊದಲು ಅವರ ಮಾತು ಕೇಳಿಸಿಕೊಳ್ಳಬೇಕು, ಅವರೊಂದಿಗೆ ಬದುಕಬೇಕು, ಅವರ ಜೀವನ ತಿಳಿಯಬೇಕು ಎನ್ನುವುದನ್ನು ಲೇಖಕರು ಒತ್ತಿ ಹೇಳುತ್ತಾರೆ. ಉತ್ಪನ್ನಕ್ಕಿಂತಲೂ ಅಥವಾ ಉತ್ಪನ್ನದಷ್ಟೇ ಪ್ರಕ್ರಿಯೆಯೂ ಮುಖ್ಯವಾಗಬೇಕು ಎನ್ನುವುದು ಅವರ ಇನ್ನೊಂದು ಮುಖ್ಯ ಮಾತು. ಇದನ್ನೇ ನಾವು ಫಲಿತಾಂಶದಷ್ಟೇ ಪ್ರಯತ್ನವೂ ಮುಖ್ಯ ಎಂದು ಅರ್ಥ ಮಾಡಿಕೊಳ್ಳಬಹುದು. “ನಾವು ಯಂತ್ರಗಳೊಂದಿಗೆ ಅಲ್ಲ, ಮನುಷ್ಯರೊಂದಿಗೆ ವ್ಯವಹರಿಸುತ್ತಿದ್ದೇವೆ” ಎನ್ನುವ ಎಚ್ಚರವನ್ನು ಪ್ರತಿಹಂತದಲ್ಲಿ ಎಲ್ಲರಲ್ಲಿಯೂ ತುಂಬುವ, ಅಪ್ಪಟ ಮನುಷ್ಯಪ್ರೀತಿಯ ನೂರಾರು ತಾಜಾ ಉದಾಹರಣೆಗಳನ್ನು ಹೊತ್ತ ಪುಸ್ತಕ ಇದು. ಪರಿಸರ, ಮಣ್ಣು, ನೀರು, ಸಮಾಜ, ಹಳ್ಳಿಗಳು, ಅಲ್ಲಿರುವವರ ಮನಸ್ಸುಗಳು ಬೇರೆಬೇರೆ ಅಲ್ಲ ಎಂದು ಲೇಖಕರು ತಮ್ಮದೇ ಬದುಕಿನ ಕಥನದ ಮೂಲಕ ಅರ್ಥ ಮಾಡಿಸುತ್ತಾರೆ.

ಎಲ್ಲಕ್ಕಿಂತ ಮುಖ್ಯ ಎನ್ನಿಸುವುದು ಈ ಪುಸ್ತಕ ಹೇಳುವುದು ನಮ್ಮ ತಲೆಮಾರಿನ ಕಥೆಯನ್ನು. ಅಂದರೆ 1997 ರ ನಂತರದ ಕಥೆ. ಮಹಾತ್ಮ ಗಾಂಧಿ ಎಂದರೆ ಎಂದೋ, ಎಲ್ಲೋ ಇದ್ದವರಲ್ಲ. ಇಂದಿಗೂ ನಮ್ಮ ನಡುವೆಯೂ ಜೀವಿಸಿದ್ದಾರೆ. ಅವರ ಮಾರ್ಗದಲ್ಲಿ ಹೆಜ್ಜೆ ಹಾಕಿದರೆ ಭಾರತದ ಭವಿಷ್ಯ ಬಂಗಾರವಾದೀತು ಎನ್ನುವ ಭರವಸೆಯನ್ನು ಗಟ್ಟಿ ಮಾಡುವ ಪುಸ್ತಕ 'ಹಳ್ಳಿಗಳನ್ನು ಕಟ್ಟುವ ಕಷ್ಟಸುಖ'.

ನಿಮಗೆ ಭಾರತದ ಬಗ್ಗೆ, ಕರ್ನಾಟಕದ ಬಗ್ಗೆ, ಗ್ರಾಮೀಣ ಬದುಕಿನ ಬಗ್ಗೆ, ಸಂಸ್ಕೃತಿಯ ಬಗ್ಗೆ, ಮಹಿಳೆಯರ ಬಗ್ಗೆ, ಬಡತನದ ಬಗ್ಗೆ, ಅಸಮಾನತೆಯ ಬಗ್ಗೆ, ನಾಯಕತ್ವದ ಬಗ್ಗೆ, ವ್ಯಕ್ತಿತ್ವ ವಿಕಸನದಲ್ಲಿ ಆಸಕ್ತಿಯಿದ್ದರೆ ಈ ಪುಸ್ತಕ ಓದುವುದು ಮಿಸ್ ಮಾಡಬೇಡಿ. ಮತ್ತೆಮತ್ತೆ ಓದಬೇಕಾದ, ಮೆಲುಕು ಹಾಕಬೇಕಾದ ಅಪರೂಪದ ಪುಸ್ತಕ ಇದು.

ಹಳ್ಳಿಗಳನ್ನು ಕಟ್ಟುವ ಕಷ್ಟಸುಖ ಪುಸ್ತಕದ ವಿವರ

ಪುಸ್ತಕದ ಹೆಸರು: ಹಳ್ಳಿಗಳನ್ನು ಕಟ್ಟುವ ಕಷ್ಟಸುಖ, ಲೇಖಕರು: ಡಾ ಪ್ರಕಾಶ ಭಟ್, ಪುಟಗಳು: 280, ಬೆಲೆ: 300, ಪ್ರಕಾಶಕರು: ಬಹುರೂಪಿ ಪ್ರಕಾಶನ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು, ಮೊ: 70191 82729, ಲೇಖಕರ ಸಂಪರ್ಕ: ಇಮೇಲ್-bhatps@gmail.com, ಮೊ: 90084 52447.

-ಬರಹ: ಡಿ.ಎಂ.ಘನಶ್ಯಾಮ

(ಲೇಖಕರು ಪ್ರಕಾಶಕರ ಗಮನಕ್ಕೆ: ಪರಿಚಯಕ್ಕಾಗಿ ಪುಸ್ತಕಗಳನ್ನು ಕಳಿಸುವಂತಿದ್ದರೆ ನಮ್ಮನ್ನು ಸಂಪರ್ಕಿಸಿ. ಇಮೇಲ್: ht.kannada@htdigital.in, ವಾಟ್ಸಾಪ್: 95991 30861)

Whats_app_banner