PM Kisan 18ನೇ ಕಂತು ಖಾತೆಗೆ ಜಮೆ ಆಗೋ ಟೈಮು, ಲಿಸ್ಟ್‌ನಲ್ಲಿ ನಿಮ್ಮ ಹೆಸರು ಇದೆಯಾ ಅಂತ ಈಗಲೇ ಹೀಗೆ ಚೆಕ್ ಮಾಡಿ
Oct 02, 2024 04:44 PM IST
ಪಿಎಂ ಕಿಸಾನ್ 18ನೇ ಕಂತು ಖಾತೆಗೆ ಜಮೆ ಆಗೋ ಟೈಮು, ಲಿಸ್ಟ್‌ನಲ್ಲಿ ನಿಮ್ಮ ಹೆಸರು ಇದೆಯಾ ಅಂತ ಈಗಲೇ ಹೀಗೆ ಚೆಕ್ ಮಾಡಿ. (ಸಾಂಕೇತಿಕ ಚಿತ್ರ)
ಭಾರತದ ಒಂಬತ್ತೂವರೆ ಕೋಟಿ ರೈತರು ಪಿಎಂ ಕಿಸಾನ್ ನಿಧಿಗಾಗಿ ಎದುರು ನೋಡುತ್ತಿದ್ದಾರೆ. ಸರ್ಕಾರ ಈಗಾಗಲೇ ಘೋಷಿಸಿದ ಪ್ರಕಾರ ಅಕ್ಟೋಬರ್ 5 ರಂದು ಹಣ ಜಮೆಯಾಗಲಿದೆ. ಪಿಎಂ ಕಿಸಾನ್ 18ನೇ ಕಂತು ಖಾತೆಗೆ ಜಮೆ ಆಗೋ ಟೈಮು, ಲಿಸ್ಟ್‌ನಲ್ಲಿ ನಿಮ್ಮ ಹೆಸರು ಇದೆಯಾ ಅಂತ ಈಗಲೇ ಹೀಗೆ ಚೆಕ್ ಮಾಡಿ. ಅದು ಹೇಗೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ನವದೆಹಲಿ: ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಕೋಟ್ಯಂತರ ಫಲಾನುಭವಿಗಳು ಕಾಯುತ್ತಿದ್ದ ಸುದ್ದಿ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 5 ರಂದು ದೇಶದ 9.50 ಕೋಟಿ ರೈತ ಕುಟುಂಬಗಳ ಖಾತೆಗಳಿಗೆ 2000 ರೂಪಾಯಿಯನ್ನು ಪಿಎಂ ಕಿಸಾನ್ ಪೋರ್ಟಲ್ ಮೂಲಕ ಜಮೆ ಮಾಡಲಿದ್ದಾರೆ. ಅಂದರೆ ಅಕ್ಟೋಬರ್ 5 ರಂದು ಕನಿಷ್ಠ 2.5 ಕೋಟಿ ರೈತರ ಖಾತೆಗೆ 2000 ರೂಪಾಯಿ ಜಮೆಯಾಗಲಿದೆ. ಈ ಯೋಜನೆಗಾಗಿ ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ 12 ಕೋಟಿಗೂ ಹೆಚ್ಚು ರೈತರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಸರ್ಕಾರಿ ವ್ಯವಸ್ಥೆಯಾಗಿರುವ ಕಾರಣ, ಯಾವಾಗ ಯಾರ ಹೆಸರು ಯಾಕೆ ಸೇರ್ಪಡೆಯಾಗುತ್ತೋ ಅಥವಾ ಡಿಲೀಟ್ ಆಗುತ್ತೋ ಗೊತ್ತಿರಲ್ಲ. ಆದ್ದರಿಂದ, ನೀವು ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಫಲಾನುಭವಿಯಾಗಿದ್ದರೆ, ನಿಮ್ಮ ಹೆಸರು ನಿಮ್ಮ ಗ್ರಾಮದ ಫಲಾನುಭವಿಗಳ ಪಟ್ಟಿಯಲ್ಲಿ ಇದೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಬೇಕು. ಇದಕ್ಕಾಗಿ ನೀವು ಯಾರ ಬಳಿಗೂ ಹೋಗಬೇಕಾಗಿಲ್ಲ. ನಿಮ್ಮ ಮೊಬೈಲ್ ಅಥವಾ ಲ್ಯಾಪ್‌ಟಾಪ್ ಅಥವಾ ಕಂಪ್ಯೂಟರ್‌ನಲ್ಲಿ ನೀವೇ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೇ ಎಂಬುದನ್ನು ಪರಿಶೀಲಿಸಬಹುದು. ಅದು ಹೇಗೆ ಎಂಬುದನ್ನು ನಾವು ಇಲ್ಲಿ ತಿಳಿಸಿಕೊಡುತ್ತೇವೆ.
ಪಿಎಂ ಕಿಸಾನ್ ಸಮ್ಮಾನ್ ನಿಧಿ ಗ್ರಾಮದ ಫಲಾನುಭವಿಗಳ ಪಟ್ಟಿ ಪರಿಶೀಲಿಸುವುದು ಹೀಗೆ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ, ನಿಮ್ಮ ಗ್ರಾಮದ ಎಲ್ಲಾ ಫಲಾನುಭವಿಗಳ ಪಟ್ಟಿಯನ್ನು ನೀವು ನೋಡಬಹುದು. ಇದಕ್ಕಾಗಿ, ನೀವು ಮೊದಲು ಪಿಎಂ ಕಿಸಾನ್ ಪೋರ್ಟಲ್‌ಗೆ ಹೋಗಬೇಕು. ಇದರ ನಂತರ, ಕೆಳಗೆ ನೀಡಲಾದ ಹಂತಗಳನ್ನು ಅನುಸರಿಸಿ.
ಹಂತ 1: ಪಿಎಂ ಕಿಸಾನ್ ಪೋರ್ಟಲ್ (https://pmkisan.gov.in/) ಗೆ ಹೋಗಿ. ಅಲ್ಲಿರುವ ಆಯತಾಕಾರದ ಬಾಕ್ಸ್‌ಗಳ ಪೈಕಿ ಕೆಳಗಿರುವ Beneficiary List ಅನ್ನು ಕ್ಲಿಕ್ ಮಾಡಿ.
ಹಂತ 2: ಕೂಡಲೇ ಒಂದು ಪುಟ ತೆರೆಯುತ್ತದೆ. ಅದರಲ್ಲಿ ನೀವು ಡ್ರಾಪ್ ಡೌನ್ ಮೆನುವಿನಿಂದ ನಿಮ್ಮ ರಾಜ್ಯ, ಜಿಲ್ಲೆ, ತಾಲೂಕು, ಬ್ಲಾಕ್ ಮತ್ತು ಗ್ರಾಮವನ್ನು ಆಯ್ಕೆ ಮಾಡಿ. ಅದಾಗಿ ಗೆಟ್ ರಿಪೋರ್ಟ್ ಕ್ಲಿಕ್ ಮಾಡಿ. ನಿಮ್ಮ ಇಡೀ ಗ್ರಾಮದ ಫಲಾನುಭವಿಗಳ ಪಟ್ಟಿ ಅಲ್ಲಿ ಕಾಣಸಿಗುತ್ತದೆ.
ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡೋದು ಹೀಗೆ
ಗ್ರಾಮದ ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದ್ದರೂ ಪಿಎಂ ಕಿಸಾನ್ ಕಂತು ಬರದಿದ್ದರೆ ನಿಮ್ಮ ಸ್ಟೇಟಸ್ ಅನ್ನು ಪರಿಶೀಲಿಸಿ. ಇದಕ್ಕಾಗಿ ಕೆಳಗೆ ನೀಡಿರುವ ಹಂತಗಳನ್ನು ಅನುಸರಿಸಿ…
ಹಂತ 1: ಪಿಎಂ ಕಿಸಾನ್ ಪೋರ್ಟಲ್‌ನ ಮುಖಪುಟದಲ್ಲಿ ಎರಡನೇ ಸಾಲಿನ ಆಯತಾಕಾರದ ಬಾಕ್ಸ್‌ಗಳಲ್ಲಿ Know Your Status ಬಾಕ್ಸ್ ಐದನೇ ಸ್ಥಾನದಲ್ಲಿದೆ. ಅದನ್ನು ಕ್ಲಿಕ್ ಮಾಡಿ.
ಹಂತ 2: ಇಲ್ಲಿ ಹೊಸ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ Enter Registration No. ಎಂದು ಬರೆದಿದೆ. ಅಲ್ಲಿ ನಂಬರ್ ದಾಖಲಿಸಿ. ಅದೇ ರೀತಿ ಕ್ಯಾಪ್ಷಾ ಕೋಡ್ ಕೂಡ ನಮೂದಿಸಿ. ಅದಾಗಿ Get OTP ಎಂಬುದರ ಮೇಲೆ ಕ್ಲಿಕ್ ಮಾಡಿ. ಒಂದೊಮ್ಮೆ ನಿಮ್ಮ ರಿಜಿಸ್ಟ್ರೇಶನ್ ನಂಬರ್ ಅಲ್ಲಿ ಇಲ್ಲ ಎಂದಾದರೆ ಮೇಲೆ ಹೋಗಿ Know your registration No. ಮೇಲೆ ಕ್ಲಿಕ್ ಮಾಡಿ.
ಹಂತ 2 (1): ಒಂದು ಹೊಸ ಪುಟ ತೆರೆದುಕೊಳ್ಳುತ್ತೆ. ಅದರಲ್ಲಿ ನಿಮ್ಮ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರ್ ಅಥವಾ ಆದಾರ್ ಸಂಖ್ಯೆ ನಮೂದಿಸಿ. Get OTP ಮೇಲೆ ಕ್ಲಿಕ್ ಮಾಡಿ.
ಹಂತ 2 (2): ನಿಮ್ಮ ಮೊಬೈಲ್‌ಗೆ ಒಟಿ ಬಂದಿರುತ್ತದೆ. ಅದನ್ನು ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ನಮೂದಿಸಿ ಸಬ್‌ಮಿಟ್ ಕ್ಲಿಕ್ ಮಾಡಿ. ನಿಮಗೆ ರಿಜಿಸ್ಟ್ರೇಶನ್ ನಂಬರ್ ಗೊತ್ತಾಗುತ್ತದೆ. ಅದನ್ನು ಕಾಪಿ ಮಾಡ್ಕೊಳ್ಳಿ. ಹಂತ 2 ರಲ್ಲಿ ಹೇಳಿದ Enter Registration No. ಎಂದು ಬರೆದಿರುವಲ್ಲಿ ನಂಬರ್ ನಮೂದಿಸಿ
ಹಂತ 3: ಇಲ್ಲಿ ನೋಂದಣಿ ಸಂಖ್ಯೆಯನ್ನು ನಮೂದಿಸಿದ ನಂತರ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ. OTP ಮೇಲೆ ಕ್ಲಿಕ್ ಮಾಡಿ.
ಹಂತ 4: OTP ಬಂದ ನಂತರ, ಕೊಟ್ಟಿರುವ ಬಾಕ್ಸ್‌ನಲ್ಲಿ ನಮೂದಿಸಿ ಮತ್ತು ಸಬ್‌ಮಿಟ್ ಮಾಡಿ.
ಹಂತ 5: ನಿಮ್ಮ ಸಂಪೂರ್ಣ ವಿವರ ನಿಮ್ಮ ಮುಂದೆ ಹೊಸ ಪುಟದಲ್ಲಿ ಗೋಚರಿಸುತ್ತವೆ. ವೈಯಕ್ತಿಕ ಮಾಹಿತಿ, ಎಲಿಜಿಬಿಲಿಟಿ ಸ್ಟೇಟಸ್, ಇತ್ತೀಚಿನ ಕಂತು ಮುಂತಾದ ವಿವರಗಳನ್ನು ಕಾಣಬಹುದು.
ಒಂದೊಮ್ಮೆ FTO processed ಎಂಬಲ್ಲಿ ಯೆಸ್ ಎಂದು ಬರೆದು ಟಿಕ್ ಬಾಕ್ಸ್‌ನಲ್ಲಿ ಟಿಕ್ ಮಾರ್ಕ್ ಬಂದಿದ್ದರೆ ಅಕ್ಟೋಬರ್ 5 ರಂದು ನಿಮ್ಮ ಖಾತೆಗೆ 2000 ರೂಪಾಯಿ ಜಮೆಯಾಗಲಿದೆ.