ನವರಾತ್ರಿ ಹಬ್ಬದ ಖುಷಿ ಹೆಚ್ಚಿಸಲಿ ಬಗೆಬಗೆ ಹಣ್ಣಿನ ಪಾಯಸಗಳು; ಸೇಬುಹಣ್ಣು, ಬಾಳೆಹಣ್ಣು, ಮಿಶ್ರಹಣ್ಣಿನ ಪಾಯಸ ಮಾಡುವ ವಿಧಾನ ಇಲ್ಲಿದೆ
ಒಂಬತ್ತು ದಿನಗಳ ಕಾಲ ನಡೆಯುವ ನವರಾತ್ರಿ ಹಬ್ಬದ 3ನೇ ದಿನ ಇಂದು. ವಿಜಯದಶಮಿ ಸೇರಿ 10 ಹತ್ತುಗಳ ದಿನ ಆಚರಣೆಯಲ್ಲಿ ದುರ್ಗಾಮಾತೆಗೆ ಪೂಜೆ ಸಲ್ಲಿಸುವ ಜೊತೆಗೆ ಬಗೆ ಬಗೆಯ ಖಾದ್ಯಗಳನ್ನ ತಯಾರಿಸಿ ನೈವೇದ್ಯ ಮಾಡಲಾಗುತ್ತದೆ. ಈ ವರ್ಷದ ನವರಾತ್ರಿಗೆ ಹಣ್ಣಿನ ಪಾಯಸ ಮಾಡಿ ದೇವಿಗೆ ಸರ್ಮಪಿಸಿ. ಇಲ್ಲಿದೆ ಸೇಬುಹಣ್ಣು, ಬಾಳೆಹಣ್ಣಿನ ಪಾಯಸ ಮಾಡುವ ವಿಧಾನ.
ಭಾರತದಲ್ಲಿ ಆಚರಿಸುವ ಪ್ರಮುಖ ಹಬ್ಬಗಳಲ್ಲಿ ನವರಾತ್ರಿಯೂ ಒಂದು. ದುರ್ಗಾದೇವಿಯು ಒಂಬತ್ತು ದಿನಗಳ ಕಾಲ ಮಹಿಷಾಸುರನೊಂದಿಗೆ ಹೋರಾಡಿ 10ನೇ ದಿನ ಗೆಲುವು ಸಾಧಿಸುತ್ತಾಳೆ. ಇದನ್ನೇ ನವರಾತ್ರಿ ಎಂದು ಆಚರಿಸಿ, 10ನೇ ದಿನದಂದು ಎಂದರೆ ಮಹಿಷಾಸುರನ ವಿರುದ್ಧ ದುರ್ಗಾದೇವಿಯು ಗೆಲುವು ಸಾಧಿಸಿದ ದಿನವನ್ನು ವಿಜಯದಶಮಿ ಎಂದು ಆಚರಿಸಲಾಗುತ್ತದೆ.
ನವರಾತ್ರಿ ಹಬ್ಬದಲ್ಲಿ ಬಹುತೇಕರು 9 ದಿನಗಳ ಕಾಲವೂ ಉಪವಾಸ ಆಚರಿಸುತ್ತಾರೆ. ಈ ಸಂದರ್ಭದಲ್ಲಿ ಒಂಬತ್ತು ದಿನಗಳ ಕಾಲ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಜೊತೆಗೆ ವಿವಿಧ ಬಗೆಯ ಖಾದ್ಯಗಳನ್ನೂ ತಯಾರಿಸಿ ನೈವೇದ್ಯ ರೂಪದಲ್ಲಿ ಅರ್ಪಿಸಲಾಗುತ್ತದೆ. ಈ ವರ್ಷ ನವರಾತ್ರಿ ಸಂಭ್ರಮ ಹೆಚ್ಚಲು ನೀವು ಹಣ್ಣಿನ ಪಾಯಸವನ್ನು ಮಾಡಬಹುದು. ಸೇಬುಹಣ್ಣು ಹಾಗೂ ಬಾಳೆಹಣ್ಣಿನ ಪಾಯಸ ಮಾಡುವುದು ಹೇಗೆ ನೋಡಿ.
ಸೇಬುಹಣ್ಣಿನ ಪಾಯಸ
ಬೇಕಾಗುವ ಸಾಮಗ್ರಿಗಳು: ಸೇಬುಹಣ್ಣು – 1, ತುಪ್ಪ– 1 ಚಮಚ, ಹಾಲು – 3 ಕಪ್, ಕೇಸರಿ – ಕಾಲು ಚಮಚ, ಕಂಡೆನ್ಸ್‌ಡ್ ಮಿಲ್ಕ್ – ಕಾಲು ಕಪ್, ಏಲಕ್ಕಿ ಪುಡಿ – ಕಾಲು ಟೀ ಚಮಚ, ಒಣಹಣ್ಣು – ಸ್ವಲ್ಪ (ಚಿಕ್ಕದಾಗಿ ಹೆಚ್ಚಿಕೊಳ್ಳಿ) ಒಣ ದ್ರಾಕ್ಷಿ – 1 ಚಮಚ
ಸೇಬುಹಣ್ಣಿನ ಪಾಯಸ ಮಾಡುವ ವಿಧಾನ: ಸೇಬುಹಣ್ಣಿನ ಸಿಪ್ಪೆ ತೆಗೆದು ತುರಿದುಕೊಳ್ಳಿ. ಇದನ್ನು ಬಾಣಲಿಗೆ ಹಾಕಿ ಕೆಂಬಣ್ಣ ಬರುವವರೆಗೂ ಹುರಿದುಕೊಳ್ಳಿ. ನಂತರ ಅದಕ್ಕೆ ಒಂದು ಚಮಚ ತುಪ್ಪ ಹಾಕಿ ಕೈಯಾಡಿಸಿ. ನಂತರ ಸೇಬುಹಣ್ಣಿನಲ್ಲಿ ನೀರು ಚೆನ್ನಾಗಿ ಆವಿಯಾಗುವವರೆಗೂ ಕಲಕಿ, ನಂತರ ತಣ್ಣಗಾಗಲು ಬಿಡಿ.
ದೊಡ್ಡ ಕಡಾಯಿಯಲ್ಲಿ 3 ಕಪ್ ಹಾಲು ಬಿಸಿ ಮಾಡಿ. ಕಾಲು ಟೀ ಚಮಚ ಕೇಸರಿ ದಳ ಸೇರಿಸಿ ಕುದಿಯಲು ಬಿಡಿ. 10 ನಿಮಿಷಗಳ ಕಾಲ ಹಾಲು ದಪ್ಪವಾಗುವವರೆಗೂ ಕುದಿಸಿಕೊಳ್ಳಿ. ಅದಕ್ಕೆ ಕಾಲು ಚಮಚ ಏಲಕ್ಕಿ ಪುಡಿ ಸೇರಿಸಿ ಮಿಶ್ರಣ ಮಾಡಿ. ಇದನ್ನು ತಣ್ಣಗಾಗಲು ಬಿಡಿ. ನಂತರ ಮೊದಲೇ ತಯಾರಿಸಿಟ್ಟುಕೊಂಡ ಸೇಬು ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಕಲೆಸಿ. ಹಾಲು ಹಾಗೂ ಸೇಬು ಎರಡೂ ತಣ್ಣಗೆ ಇರಬೇಕು. ಇದನ್ನು ಅರ್ಧ ಗಂಟೆ ಫ್ರಿಜ್‌ನಲ್ಲಿಡಿ. ಕೊನೆಯಲ್ಲಿ ಕತ್ತರಿಸಿಟ್ಟುಕೊಂಡ ಒಣ್ಣಹಣ್ಣು ಹಾಕಿ ಹಾಗೂ ಒಣದ್ರಾಕ್ಷಿಯನ್ನು ತುಪ್ಪದಲ್ಲಿ ಹರಿದು ಸೇರಿಸಿ. ಈಗ ನಿಮ್ಮ ಮುಂದೆ ರುಚಿಯಾದ ಸೇಬುಹಣ್ಣಿನ ಪಾಯಸ ಸಿದ್ಧ.
ಬಾಳೆಹಣ್ಣಿನ ಪಾಯಸ
ಬೇಕಾಗುವ ಸಾಮಗ್ರಿಗಳು: ಬಾಳೆಹಣ್ಣು – 2, ತೆಂಗಿನಹಾಲು – 4 ಕಪ್, ಬೆಲ್ಲ – ಅರ್ಧ ಕಪ್, ಏಲಕ್ಕಿ – ಕಾಲು ಟೀ ಚಮಚ, ತೆಂಗಿನಕಾಯಿ – 4 ರಿಂದ 5 ತೆಳುವಾದ ಚಿಕ್ಕ ಹೋಳುಗಳು, ಗೋಡಂಬಿ – 1ಚಮಚ, ಒಣದ್ರಾಕ್ಷಿ – 1 ಚಮಚ, ತುಪ್ಪ– ಚಿಟಿಕೆ
ಬಾಳೆಹಣ್ಣಿನ ಪಾಯಸ ತಯಾರಿಸುವ ವಿಧಾನ: ಬೆಲ್ಲಕ್ಕೆ ಸ್ವಲ್ಪ ನೀರು ಸೇರಿಸಿ ಒಂದು ಪಾತ್ರೆಗೆ ಹಾಕಿ ಇದನ್ನು ಕುದಿಸಿ, ಬೆಲ್ಲ ಕರಗಿಸಿ ಪಾಕ ತಯಾರಿಸಿಟ್ಟುಕೊಳ್ಳಿ. ಬಾಳೆಹಣ್ಣನ್ನು ಚಿಕ್ಕದಾಗಿ ಕತ್ತರಿಸಿ ಇದನ್ನು ಪೋರ್ಕ್ ಸಹಾಯದಿಂದ ಸ್ಮ್ಯಾಶ್ ಮಾಡಿ. ಬಾಣಲಿಗೆ ತುಪ್ಪ ಹಾಕಿ ಬಿಸಿಯಾದ ಮೇಲೆ ಅದರಲ್ಲಿ ದ್ರಾಕ್ಷಿ ಹಾಗೂ ಗೋಡಂಬಿಯನ್ನು ಹುರಿದುಕೊಳ್ಳಿ. ತೆಂಗಿನಕಾಯಿ ಚೂರುಗಳನ್ನು ಸೇರಿಸಿ ಹೊಂಬಣ್ಣ ಬರುವವರೆಗೂ ಹುರಿಯಿರಿ. ಇದನ್ನು ತೆಗೆದು ಒಂದು ತಟ್ಟೆಯಲ್ಲಿ ಹಾಕಿಡಿ. ಅದೇ ಪ್ಯಾನ್‌ಗೆ ಸ್ಮ್ಯಾಶ್ ಮಾಡಿಕೊಂಡ ಬಾಳೆಹಣ್ಣು ಸೇರಿಸಿ, 2 ರಿಂದ 3 ನಿಮಿಷಗಳ ಕಾಲ ಕುದಿಸಿ. ನಂತರ ಬೆಲ್ಲದ ಪಾಕ ಸೇರಿಸಿ 15ರಿಂದ 20 ನಿಮಿಷಗಳ ಕುದಿಯಲು ಬಿಡಿ. ಅದಕ್ಕೆ ತೆಂಗಿನಕಾಯಿ, ಏಲಕ್ಕಿ ಪುಡಿ ಸೇರಿಸಿ. ಇದನ್ನು 5 ರಿಂದ 7 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿ. ತುಪ್ಪದಲ್ಲಿ ಹುರಿದಿಟ್ಟುಕೊಂಡ ದ್ರಾಕ್ಷಿ, ಗೋಡಂಬಿ ಹಾಗೂ ತೆಂಗಿನಕಾಯಿ ಚೂರುಗಳನ್ನು ಸೇರಿಸಿದರೆ ರುಚಿಯಾದ ಬಾಳೆಹಣ್ಣಿನ ಪಾಯಸ ತಿನ್ನಲು ಸಿದ್ಧ.
ಮಿಶ್ರ ಹಣ್ಣುಗಳ ಪಾಯಸ
ಬೇಕಾಗುವ ಸಾಮಗ್ರಿಗಳು: ಹಾಲು – 1 ಲೀಟರ್, ಗೋಡಂಬಿ – 10 (ನೀರಿನಲ್ಲಿ ನೆನೆಸಿದ್ದು), ಬಾದಾಮಿ – 10 (ನೀರಿನಲ್ಲಿ ನೆನೆಸಿದ್ದು), ಏಲಕ್ಕಿ ಪುಡಿ – ಕಾಲು ಚಮಚ, ಸಕ್ಕರೆ – ಅರ್ಧ ಕಪ್, ಹಣ್ಣಾದ ಬಾಳೆಹಣ್ಣು – 2, ಸೇಬು – 1 (ಸಿಪ್ಪೆ ತೆಗೆದಿದ್ದು), ಕಿತ್ತಳೆ ಹಣ್ಣು – 1, ಹಸಿರು ದ್ರಾಕ್ಷಿ – ಕಾಲು ಕಪ್, ಕಪ್ಪು ದ್ರಾಕ್ಷಿ – ಕಾಲು ಕಪ್, ದಾಳಿಂಬೆ ಕಾಳು – ಅರ್ಧ ಕಪ್, ಜೇನು ತುಪ್ಪ – 2
ಮಿಶ್ರಹಣ್ಣುಗಳ ಪಾಯಸ ತಯಾರಿಸುವ ವಿಧಾನ: ಗೋಡಂಬಿ ಹಾಗೂ ಬಾದಾಮಿಯನ್ನು 4 ರಿಂದ 5 ಗಂಟೆಗಳ ಕಾಲ ನೆನೆಸಿಡಿ. ಬಾದಾಮಿ ಸಿಪ್ಪೆ ಸುಲಿಯಿರಿ. ಇದನ್ನು ನುಣ್ಣಗೆ ರುಬ್ಬಿಕೊಳ್ಳಿ. ಬಾಣಲಿಗೆ ಹಾಲು ಸೇರಿಸಿ ಕುದಿಸಿಕೊಳ್ಳಿ. ಹಾಲು ಕುದಿಯಲು ಆರಂಭಿಸಿದಾಗ ಗೋಡಂಬಿ, ಬಾದಾಮಿ ಪೇಸ್ಟ್ ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಇದು ಮುಕ್ಕಾಲು ಭಾಗಕ್ಕೆ ಬರುವವರೆಗೂ ಕುದಿಸಬೇಕು. ಅಡಿ ಹಿಡಿಯದಂತೆ ಕೈಯಾಡಿಸುತ್ತಾ ಇರಬೇಕು. ಹಾಲು ಮುಕ್ಕಾಲು ಭಾಗಕ್ಕೆ ಬಂದಾಗ ಸಕ್ಕರೆ ಸೇರಿಸಬೇಕು. ಇದನ್ನು ಮತ್ತೆ ಕುದಿಸಿ ನಂತರ ಚಿಟಿಕೆ ಏಲಕ್ಕಿ ಪುಡಿ ಹಾಕಿ ಮಿಶ್ರಣ ಮಾಡಿ ಒಂದು ಕುದಿ ಬರಿಸಿ ಕೋಣೆಯ ಉಷ್ಣಾಂಶಕ್ಕೆ ತಕ್ಕಂತೆ ಹೊಂದಿಕೊಳ್ಳಲು ಬಿಡಿ. ಇದನ್ನು ಫ್ರಿಜ್‌ನಲ್ಲಿಡಿ. ಫ್ರಿಜ್‌ನಲ್ಲಿಡಿ ಇಡುವ ಮೊದಲು ಮೇಲೆ ಹೇಳಿದ ಎಲ್ಲಾ ಹಣ್ಣುಗಳನ್ನು ಚಿಕ್ಕದಾಗಿ ಕತ್ತರಿಸಿ ಸೇರಿಸಿ. ಮೇಲಿಗೆ ಜೇನುತುಪ್ಪ ಹಾಕಿ, ನಂತರ ಎಲ್ಲವನ್ನೂ ಮಿಶ್ರಣ ಮಾಡಿ. ಒಂದು ಗಂಟೆಗಳ ಕಾಲ ಫ್ರಿಶ್‌ನಲ್ಲಿ ಇಟ್ಟರೆ ಮಿಶ್ರ ಹಣ್ಣುಗಳ ಪಾಯಸ ತಿನ್ನಲು ಸಿದ್ಧ.
ವಿಭಾಗ