logo
ಕನ್ನಡ ಸುದ್ದಿ  /  ಜೀವನಶೈಲಿ  /  ಇಂದಿನಿಂದಲೇ ಪಿಪಿಎಫ್‌, ಆಧಾರ್‌ ಮತ್ತು ವಿಮಾ ನಿಯಮದಲ್ಲಿ ಭಾರಿ ಬದಲಾವಣೆ; ಏನದು- ಇಲ್ಲಿದೆ ವಿವರ

ಇಂದಿನಿಂದಲೇ ಪಿಪಿಎಫ್‌, ಆಧಾರ್‌ ಮತ್ತು ವಿಮಾ ನಿಯಮದಲ್ಲಿ ಭಾರಿ ಬದಲಾವಣೆ; ಏನದು- ಇಲ್ಲಿದೆ ವಿವರ

Umesh Kumar S HT Kannada

Oct 07, 2024 10:26 AM IST

google News

ಇಂದಿನಿಂದಲೇ ಪಿಪಿಎಫ್‌, ಆಧಾರ್‌ ಮತ್ತು ವಿಮಾ ನಿಯಮದಲ್ಲಿ ಭಾರಿ ಬದಲಾವಣೆ ಜಾರಿಗೆ ಬಂದಿದೆ. (ಸಾಂಕೇತಿಕ ಚಿತ್ರ)

  • ಪ್ರತಿ ತಿಂಗಳು ಶುರುವಾಗುವುದೇ ಹೊಸ ನಿಯಮಗಳೊಂದಿಗೆ ಅಥವಾ ಪರಿಷ್ಕೃತ ನಿಯಮಗಳ ಜಾರಿಯೊಂದಿಗೆ. ಅಕ್ಟೋಬರ್ ಶುರುವಾಗಿದೆ. ಇಂದಿನಿಂದಲೇ ಪಿಪಿಎಫ್‌, ಆಧಾರ್‌ ಮತ್ತು ವಿಮಾ ನಿಯಮದಲ್ಲಿ ಭಾರಿ ಬದಲಾವಣೆ ಆಗುತ್ತಿದ್ದು, ಅವುಗಳ ವಿವರ ಇಲ್ಲಿದೆ.

ಇಂದಿನಿಂದಲೇ ಪಿಪಿಎಫ್‌, ಆಧಾರ್‌ ಮತ್ತು ವಿಮಾ ನಿಯಮದಲ್ಲಿ ಭಾರಿ ಬದಲಾವಣೆ ಜಾರಿಗೆ ಬಂದಿದೆ. (ಸಾಂಕೇತಿಕ ಚಿತ್ರ)
ಇಂದಿನಿಂದಲೇ ಪಿಪಿಎಫ್‌, ಆಧಾರ್‌ ಮತ್ತು ವಿಮಾ ನಿಯಮದಲ್ಲಿ ಭಾರಿ ಬದಲಾವಣೆ ಜಾರಿಗೆ ಬಂದಿದೆ. (ಸಾಂಕೇತಿಕ ಚಿತ್ರ) (canva)

ನವದೆಹಲಿ: ಹೊಸ ತಿಂಗಳು, ಹೊಸ ನಿಯಮ!. ಅಕ್ಟೋಬರ್ ತಿಂಗಳು ಶುರುವಾಗಿದ್ದು, ಹಲವು ನಿಯಮ ಬದಲಾವಣೆಗಳೊಂದಿಗೆ ಮೊದಲ ದಿನ ಆರಂಭವಾಗಿದೆ. ಪಿಪಿಎಫ್‌, ಆಧಾರ್, ವಿಮೆ ಸೇರಿ ಹಲವು ನಿಯಮಗಳಲ್ಲಿ ಇಂದು ಬದಲಾವಣೆ ಜಾರಿಗೆ ಬಂದಿದೆ. ಸುಕನ್ಯಾ ಸಮೃದ್ಧಿ ಯೋಜನೆಗೆ ಸಂಬಂಧಿಸಿದ ನಿಯಮವೂ ಬದಲಾಗಿದೆ. ಇದಲ್ಲದೆ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024 ರ ಕೇಂದ್ರ ಬಜೆಟ್‌ನಲ್ಲಿ ಆದಾಯ ತೆರಿಗೆಗೆ ಸಂಬಂಧಿಸಿ ಹಲವು ನಿಯಮಗಳಲ್ಲಿ ಬದಲಾವಣೆಗಳನ್ನು ಘೋಷಿಸಿದ್ದರು. ಈ ಬದಲಾವಣೆಗಳಲ್ಲಿ ಕೆಲವನ್ನು ಈಗಾಗಲೇ ಕಾರ್ಯಗತಗೊಳಿಸಲಾಗಿದೆ. ಇನ್ನು ಕೆಲವು ಅಕ್ಟೋಬರ್ 1 ರಿಂದ ಅಂದರೆ ಇಂದೇ ಜಾರಿಗೆ ಬರುತ್ತಿವೆ. ಈ ಬದಲಾವಣೆಗಳ ಪೈಕಿ ಆಧಾರ್ ಕಾರ್ಡ್, ಎಸ್‌ಟಿಟಿ, ಟಿಡಿಎಸ್‌ ದರ ಮತ್ತು ನೇರ ತೆರಿಗೆ ವಿವಾದ್ ಸೆ ವಿಶ್ವಾಸ್ ಯೋಜನೆ ಒಳಗೊಂಡಿವೆ. ಅಕ್ಟೋಬರ್ 1 ರಿಂದ ಜಾರಿಗೆ ಬಂದಿರುವ ಹೊಸ ನಿಯಮಗಳ ವಿವರ ಹೀಗಿದೆ-

ಇಂದಿನಿಂದ ಜಾರಿಗೆ ಬರುವ ಹೊಸ ನಿಯಮಗಳಿವು

1) ಸುಕನ್ಯಾ ಸಮೃದ್ಧಿ ಯೋಜನೆ ಖಾತೆ - ಒಂದಕ್ಕಿಂತ ಹೆಚ್ಚು ಸುಕನ್ಯಾ ಸಮೃದ್ಧಿ ಯೋಜನೆ ಖಾತೆಗಳನ್ನು ಹೊಂದಿರುವವರ ಗಮನಕ್ಕೆ ಈ ವಿವರ. ಅಪ್ರಾಪ್ತ ವಯಸ್ಕರ ಹೆಸರಿನಲ್ಲಿ ತೆರೆದಿರುವ ಅನಿಯಮಿತ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಗಳಿದ್ದರೆ ಅವರಿಗೆ 18 ವರ್ಷ ತುಂಬುವವರೆಗೆ ಉಳಿತಾಯ ಖಾತೆಯ ಬಡ್ಡಿ ಮಾತ್ರ ಸಿಗಲಿದೆ ಎಂಬುದನ್ನು ಗಮನಿಸಬೇಕು. ಒಂದಕ್ಕಿಂತ ಹೆಚ್ಚು ಸುಕನ್ಯಾ ಸಮೃದ್ಧಿ ಯೋಜನೆ ಖಾತೆಗಳಿದ್ದರೆ, ಒಂದರ ಮೇಲೆ ಮಾತ್ರ ಬಡ್ಡಿ ಲಭ್ಯವಿರುತ್ತದೆ. ಉಳಿದಂತೆ, ಇತರ ಸುಕನ್ಯಾ ಸಮೃದ್ಧಿ ಯೋಜನೆ ಖಾತೆಗಳಲ್ಲಿ ಠೇವಣಿ ಮಾಡಿದ ಮೊತ್ತಕ್ಕೆ ಯಾವುದೇ ಬಡ್ಡಿ ಸಿಗಲ್ಲ. ಇದಲ್ಲದೆ, ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆಗೆ ಸಂಬಂಧಿಸಿದ ಹೊಸ ನಿಯಮಗಳ ಪ್ರಕಾರ, ಹುಡುಗಿಯ ಪೋಷಕರು ಅಥವಾ ಕಾನೂನು ಪಾಲಕರು ತೆರೆಯದ ಅಂತಹ ಖಾತೆಗಳನ್ನು ಈಗ ಹೊಸ ಮಾರ್ಗಸೂಚಿಗಳ ಪ್ರಕಾರ ಪೋಷಕರು ಅಥವಾ ಕಾನೂನು ಪಾಲಕರ ಹೆಸರಿಗೆ ವರ್ಗಾಯಿಸಬೇಕಾಗುತ್ತದೆ.

2) ಪ್ಯಾನ್ ಮತ್ತು ಆಧಾರ್ ಕಾರ್ಡ್‌ಗೆ ಸಂಬಂಧಿಸಿದ ನಿಯಮ: ಕೇಂದ್ರ ಬಜೆಟ್ 2024 ರಲ್ಲಿ ಆಧಾರ್ ಸಂಖ್ಯೆಯ ಬದಲಿಗೆ ಆಧಾರ್ ನೋಂದಣಿ ಐಡಿಯನ್ನು ನಮೂದಿಸಲು ಅನುಮತಿಸುವ ನಿಬಂಧನೆಯನ್ನು ರದ್ದುಗೊಳಿಸುವುದಾಗಿ ಪ್ರಸ್ತಾಪಿಸಲಾಗಿದೆ. ಪ್ಯಾನ್‌ನ ದುರ್ಬಳಕೆಯನ್ನು ತಡೆಯುವುದು ಈ ನಿಯಮದ ಉದ್ದೇಶ. ಇದರ ಪ್ರಕಾರ, ಇಂದಿನಿಂದ, ಪ್ಯಾನ್ ಹಂಚಿಕೆಯ ಅರ್ಜಿ ನಮೂನೆಯಲ್ಲಿ ಮತ್ತು ಆದಾಯ ತೆರಿಗೆ ರಿಟರ್ನ್‌ನಲ್ಲಿ ಒಬ್ಬನು ತನ್ನ ಆಧಾರ್ ನೋಂದಣಿ ಐಡಿಯನ್ನು ನಮೂದಿಸಲು ಸಾಧ್ಯವಾಗುವುದಿಲ್ಲ. ಆಧಾರ್ ಸಂಖ್ಯೆಯನ್ನೇ ನಮೂದಿಸಬೇಕು.

3) ಮೊಬೈಲ್ ಬಳಕೆದಾರರಿಗೆ ಹೆಚ್ಚಿದ ಅನುಕೂಲ: ಟ್ರಾಯ್‌ನ ಹೊಸ ನಿಯಮದ ಪ್ರಕಾರ, ಈಗ ಮೊಬೈಲ್ ಬಳಕೆದಾರರು ತಮ್ಮ ಪ್ರದೇಶದಲ್ಲಿ ಲಭ್ಯವಿರುವ ನೆಟ್‌ವರ್ಕ್ ಕುರಿತು ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ಸ್ಪ್ಯಾಮ್ ಅಥವಾ ಮೋಸದ ಫೋನ್ ಕರೆಗಳು ಕಡಿಮೆಯಾಗುತ್ತವೆ. ಸ್ಪ್ಯಾಮ್ ಕರೆಗಳ ಪಟ್ಟಿಯನ್ನು ಮಾಡಲು ಮತ್ತು ಸಂದೇಶಗಳಲ್ಲಿ ಸುರಕ್ಷಿತ ಯುಆರ್‌ಎಲ್‌ ಅಥವಾ OTP ಲಿಂಕ್ ಅನ್ನು ಮಾತ್ರ ಕಳುಹಿಸಲು ಟ್ರಾಯ್‌ ಈಗಾಗಲೇ ಟೆಲಿಕಾಂ ಕಂಪನಿಗಳಿಗೆ ಸೂಚನೆ ನೀಡಿದೆ. ಈ ಕ್ರಮಗಳು ಆನ್‌ಲೈನ್ ವಂಚನೆಯನ್ನು ತಡೆಯಲು ಸಹಾಯ ಮಾಡುತ್ತದೆ.

4) ಬಾಂಡ್ ಮೇಲೆ ಟಿಡಿಎಸ್ ಪಾವತಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್‌ 2024ರಲ್ಲಿ ಮೂಲದಲ್ಲಿ ಕಡಿತಗೊಳಿಸಲಾದ ತೆರಿಗೆ (ಟಿಡಿಎಸ್) ನಿಯಮಗಳಲ್ಲಿ ಬದಲಾವಣೆಗಳನ್ನು ಘೋಷಿಸಿದ್ದರು. ಅದು ಅಕ್ಟೋಬರ್ 1 ರಿಂದ ಜಾರಿಗೆ ಬರಲಿದೆ ಎಂದು ಪ್ರಕಟಿಸಿದ್ದರು. ಇದರಂತೆ, ನೀವು ಕೇಂದ್ರ ಅಥವಾ ರಾಜ್ಯ ಸರ್ಕಾರದ ಬಾಂಡ್‌ಗಳಿಂದ ವರ್ಷದಲ್ಲಿ 10,000 ರೂಪಾಯಿಗಿಂತ ಹೆಚ್ಚು ಲಾಭ ಅಥವಾ ಡಿವಿಡೆಂಡ್‌ ಗಳಿಸುತ್ತಿದ್ದರೆ, ನೀವು 10 ಪ್ರತಿಶತ ಟಿಡಿಎಸ್ ಪಾವತಿಸಬೇಕಾಗುತ್ತದೆ.

5) ವಿಮೆ ಸರಂಡರ್‌ ನಿಯಮ: ವಿಮಾ ಪಾಲಿಸಿಯ ಸರೆಂಡರ್‌ಗೆ ಸಂಬಂಧಿಸಿದ ಹೊಸ ಮಾರ್ಗಸೂಚಿಗಳು ಮಂಗಳವಾರದಿಂದ ಜಾರಿಯಾಗುತ್ತಿವೆ. ಇದು ವಿಮಾ ಕಂತುಗಳ ಮೊತ್ತವನ್ನು ಹೆಚ್ಚಿಸಬಹುದು ಅಥವಾ ವಿಮಾ ಏಜೆಂಟ್‌ಗಳ ಕಮಿಷನ್ ಅನ್ನು ಕಡಿಮೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ