ಆನ್‌ಲೈನ್ ಶಾಪಿಂಗ್ ಫೆಸ್ಟ್ ಶುರುವಾಗಿದೆ ಅಲ್ವ, ಅಯ್ಯೋ ಆಫರ್ ಮಿಸ್ಸಾದ್ರೆ ಅನ್ನೋ ಆತಂಕ ಕಾಡಿದೆಯಾ? ಅದೇ ಫೋಮೋ ಅಂತಾರಲ್ಲ ಅದು..
Sep 26, 2024 06:28 PM IST
ಆನ್‌ಲೈನ್ ಶಾಪಿಂಗ್ ಫೆಸ್ಟಿವಲ್ ಶುರುವಾಗಿದೆ ಅಲ್ವ, ಫೋಮೋ ಕಾಡೋದು ಸಹಜ. (ಸಾಂಕೇತಿಕವಾಗಿ ಎಐ ಚಿತ್ರ ಬಳಸಲಾಗಿದೆ)
ದೇಶಾದ್ಯಂತ ನವರಾತ್ರಿ, ದೀಪಾವಳಿ ಹಬ್ಬದ ಸಂಭ್ರಮ ನಿಧಾನವಾಗಿ ಆವರಿಸತೊಡಗಿದೆ. ಇದರೊಂದಿಗೆ ಆನ್‌ಲೈನ್ ಶಾಪಿಂಗ್ ಫೆಸ್ಟಿವಲ್‌ಗಳೂ ಶುರುವಾಗುತ್ತಿವೆ. ಅನೇಕರು ಅಯ್ಯೋ ಆಫರ್ ಮಿಸ್ಸಾದ್ರೆ ಅನ್ನೋ ಆತಂಕ ಎದುರಿಸಲಾರಂಭಿಸಿದ್ದಾರೆ. ಈ ಆತಂಕವನ್ನು ಫೋಮೋ ಎನ್ನುತ್ತಾರಾದರೂ, ಇದರ ಬಗ್ಗೆ ಕೊಂಚ ತಿಳಿದುಕೊಂಡರೆ ಈ ಬಾರಿ ಅದ್ಭುತ ಶಾಪಿಂಗ್ ಅನುಭವ ನಿಮ್ಮದಾಗಿಸಿಕೊಳ್ಳಬಹುದು.
ನವರಾತ್ರಿ, ಅದಾಗಿ ದೀಪಾವಳಿ ಹಬ್ಬ ಸೀಸನ್ ಹತ್ತಿರ ಬಂತು ನೋಡಿ. ಆನ್‌ಲೈನ್ ಶಾಪಿಂಗ್ ಫೆಸ್ಟ್ ಕೂಡ ಶುರುವಾಗಿದೆ. ಅಮೆಜಾನ್, ಅಜಿಯೋ, ಫ್ಲಿಪ್‌ಕಾರ್ಟ್, ಮಿಂತ್ರಾ, ಸ್ವಿಗ್ಗಿ ಮಾರ್ಟ್ ಹೀಗೆ ಹಲವು ಇ ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಭಾರಿ ರಿಯಾಯಿತಿಯ ಶಾಪಿಂಗ್ ಫೆಸ್ಟಿವಲ್ ಶುರುವಾಗಿದೆ. ಇಂತಹ ಶಾಪಿಂಗ್ ಫೆಸ್ಟಿವಲ್ ಅನ್ನು ಸೂಕ್ಷವಾಗಿ ಗ್ರಾಹಕ ನಡವಳಿಕೆಯ ದೃಷ್ಟಿಯಿಂದ ನೋಡಿದಾಗ ಹಲವು ಅಂಶಗಳು ಗಮನಸೆಳೆಯುತ್ತವೆ. ಈ ವರ್ಷ, ಮೆಸೇಜಿಂಗ್ ಅಪ್ಲಿಕೇಶನ್‌ಗಳು 'ಚೀಟ್ ಶೀಟ್‌ಗಳಿಂದ' ಅಂದರೆ ರಿಯಾಯಿತಿ, ಪ್ರಯೋಜನಗಳ ವಿವರಗಳಿಂದ ತುಂಬಿಕೊಂಡಿದೆ. ಮೊಬೈಲ್ ಫೋನ್‌ಗಳು, ಎಲೆಕ್ಟ್ರಾನಿಕ್ಸ್, ಉಪಕರಣಗಳು, ಬಟ್ಟೆಗಳು ಮತ್ತು ಪೀಠೋಪಕರಣಗಳ ಮೇಲಿನ ದೊಡ್ಡ ರಿಯಾಯಿತಿಗಳ ಅತ್ಯುತ್ತಮ ಡೀಲ್‌ಗಳ ಆಯ್ಕೆ ಮುಂತಾದ ವಿವರಗಳಿವೆ ಅದರಲ್ಲಿ. ಆದಾಗ್ಯೂ, ರಿಯಾಯಿತಿಗಳು ಮತ್ತು ಡೀಲ್‌ಗಳ ರೋಚಕತೆಯ ನಡುವೆ ಇರುವ ಸಂಭಾವ್ಯ ಅಪಾಯಗಳ ಬಗ್ಗೆ' ತಿಳಿದುಕೊಂಡಿರುವುದು ಅವಶ್ಯ. ಈಗ ವಿಷಯಕ್ಕೆ ಬರೋಣ. ಆನ್‌ಲೈನ್ ಶಾಪಿಂಗ್ ಫೆಸ್ಟ್ ಶುರುವಾಗಿದೆ ಅಲ್ವ, ಅಯ್ಯೋ ಆಫರ್ ಮಿಸ್ಸಾದ್ರೆ ಅನ್ನೋ ಆತಂಕ ಕಾಡಿದೆಯಾ?" ಹಾಗಾದ್ರೆ ಅದೇ ಫೋಮೋ (FOMO).
ಫೋಮೋ (FOMO) ಎಂದರೇನು?
ಇ-ಕಾಮರ್ಸ್ ಶಾಪಿಂಗ್ ಫೆಸ್ಟಿವಲ್‌ಗಳು ಶುರುವಾಗುತ್ತಿರುವಂತೆ, ಗ್ರಾಹಕರಲ್ಲಿ ಕಾಡುವ “ಅಯ್ಯೋ ಆಫರ್ ಮಿಸ್ಸಾದ್ರೆ" ಅನ್ನೋ ಆತಂಕ ಇದೆಯಲ್ಲ ಅದುವೇ ಫೋಮೋ (FOMO) ಅರ್ಥಾತ್ ದ ಫಿಯರ್ ಆಫ್ ಮಿಸ್ಸಿಂಗ್ ಔಟ್ (The Fear of Missing Out). ಈ ವಿದ್ಯಮಾನವು ಗ್ರಾಹಕರ ನಡವಳಿಕೆಯ ಮೇಲೆ ಗಮನಾರ್ಹ ಪ್ರಭಾವ ಬೀರುತ್ತದೆ. ಲೆಕ್ಕವಿಲ್ಲದಷ್ಟು ಪ್ರಚಾರಗಳು, ಫ್ಲಾಶ್ ಮಾರಾಟಗಳು ಮತ್ತು ಸೀಮಿತ-ಸಮಯದ ಕೊಡುಗೆಗಳೊಂದಿಗೆ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಪ್ರವಾಹ ಮಾಡುವುದರಿಂದ, ಶಾಪರ್‌ಗಳು ಉತ್ತಮ ಡೀಲ್‌ಗಳನ್ನು ಪದೇಪದೆ ಗ್ರಾಹಕರ ಮುಂದಿರಿಸುತ್ತಾರೆ. ಹೀಗಾಗಿ, ಅದು ಮಿಸ್ ಆಗಬಹುದು ಎಂಬ ಭಯದಿಂದ ಅನೇಕರು ತಕ್ಷಣವೇ ಖರೀದಿಸಬೇಕಾದ ತೀವ್ರ ಒತ್ತಡವನ್ನು ಮನಸ್ಸಿನೊಳಗೆ ಅನುಭವಿಸುತ್ತಾರೆ.
ಫೋಮೋ ಪರಿಣಾಮ ಮತ್ತು ತಡೆಗೆ ಏನು ಕ್ರಮ
1) ಪ್ರಚೋದನೆಯ ಖರೀದಿ: ಕೌಂಟ್‌ಡೌನ್ ಟೈಮರ್‌ಗಳು ಮತ್ತು ಪ್ರಚಾರದ ಎಚ್ಚರಿಕೆಗಳಿಂದ ಸೃಷ್ಟಿಯಾದ ತುರ್ತುಸ್ಥಿತಿಯು ಕ್ಷಿಪ್ರ ನಿರ್ಧಾರಗಳಿಗೆ ಕಾರಣವಾಗಬಹುದು. ಪರಿಣಾಮ ನಿಜವಾಗಿಯೂ ಅಗತ್ಯವಿಲ್ಲದ ವಸ್ತುಗಳನ್ನು ಖರೀದಿಸಲು ಕಾರಣವಾಗುತ್ತದೆ. ಇದು ಆಗಾಗ್ಗೆ ವಿಷಾದವನ್ನು ಉಂಟುಮಾಡುತ್ತದೆ.
2) ಖರ್ಚು ಹೆಚ್ಚು ಮಾಡುತ್ತೆ: ಗ್ರಾಹಕರು ತಮ್ಮ ಬಜೆಟ್ ಮೀರಿ ಖರ್ಚು ಮಾಡುವಂತೆ ಪ್ರೇರೇಪಿಸುತ್ತದೆ. ಮುಂದೆ ಇದುವೇ ಆರ್ಥಿಕ ಬಿಕ್ಕಟ್ಟು, ಸಮಸ್ಯೆಗಳಿಗೆ ಕಾರಣವಾಗುತ್ತದೆ.
3) ಭಾವನಾತ್ಮಕ ನಿರ್ಧಾರಗಳಿಂದ ತಪ್ಪು: ಶಾಪಿಂಗ್ ಬಗ್ಗೆ ಅತ್ಯುತ್ಸಾಹಗೊಂಡು ಮಾಡಿದ ಖರೀದಿ ಬಳಿಕ ತಪ್ಪು ಆಯ್ಕೆಗಳಿಗೆ, ತಪ್ಪು ಖರೀದಿಗಳಿಗೆ ಖೇದ ಪಡುವಂತೆ ಮಾಡುತ್ತದೆ.
ಫೋಮೋ ಪರಿಣಾಮದಿಂದ ಪಾರಾಗುವುದಕ್ಕೆ ಮತ್ತು ಅದನ್ನು ತಡೆಯೋದಕ್ಕೆ ಕೆಲವು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವುದು ಒಳಿತು.
1) ಮುಂಚಿತವಾಗಿಯೇ ಯೋಜನೆ ರೂಪಿಸಿ: ಶಾಪಿಂಗ್ ಉತ್ಸವ ಪ್ರಾರಂಭವಾಗುವ ಮೊದಲು, ನೀವು ನಿಜವಾಗಿಯೂ ಬಯಸುವ ಅಥವಾ ಅಗತ್ಯವಿರುವ ವಸ್ತುಗಳ ಪಟ್ಟಿಯನ್ನು ಮಾಡಿ. ಇದು ನಿಮ್ಮ ಗಮನವನ್ನು ಉಳಿಸಿಕೊಳ್ಳಲು ಮತ್ತು ಉದ್ವೇಗದ ಮೇಲೆ ಖರೀದಿಸುವ ಪ್ರಚೋದನೆಯನ್ನು ತಗ್ಗಿಸಲು ಸಹಾಯ ಮಾಡುತ್ತದೆ.
2) ಶಾಪಿಂಗ್‌ಗೆ ಎಂದು ಬಜೆಟ್: ಫೆಸ್ಟಿವಲ್‌ನಲ್ಲಿ ಶಾಪಿಂಗ್ ಮಾಡುವುದಕ್ಕೆಂದೇ ಒಂದಿಷ್ಟು ನಿರ್ದಿಷ್ಟ ಮೊತ್ತದ ಬಜೆಟ್ ಅನ್ನು ಮೀಸಲಿಡಿ. ಇದು ಮಿತಿ ಮೀರಿ ಖರ್ಚು ಮಾಡುವುದನ್ನು ತಡೆಯುತ್ತದೆ. ವಿವೇಚನೆಯ ನಿರ್ಧಾರ ತೆಗೆದುಕೊಳ್ಳಲು ಸಹಕಾರಿ.
3) ಉತ್ಪನ್ನಗಳನ್ನು ಪರಿಶೀಲಿಸಿ: ದರಗಳನ್ನು ಗಮನಿಸಿ. ಗ್ರಾಹಕರ ರಿವ್ಯೂ ತಿಳ್ಕೊಳ್ಳಿ. ಫೆಸ್ಟಿವಲ್ ಆರಂಭವಾಗುತ್ತಿದ್ದಂತೆ ಆ ಉತ್ಪನ್ನ ಖರೀದಿಸಲು ಇಂತಹ ಮುನ್ನಂದಾಜಿನ ಕೆಲಸಗಳು ನೆರವಿಗೆ ಬರುತ್ತವೆ. ಫೋಮೋ ಭೀತಿಯನ್ನು ತಗ್ಗಿಸುತ್ತವೆ.
4) ರಿಯಾಯಿತಿಗೆ ಮರುಳಾಗಬೇಡಿ: ಅಗತ್ಯ ಇಲ್ಲದ ರಿಯಾಯಿತಿ ತೋರುವ ಇಮೇಲ್, ಸೋಷಿಯಲ್ ಮೀಡಿಯಾ ಮೆಸೇಜ್‌ಗಳನ್ನು ಕಡೆಗಣಿಸಿ.
5) ತರಾತುರಿಯಲ್ಲಿ ಖರೀದಿಸಬೇಡಿ: ಯಾವುದನ್ನೇ ಆದರೂ ತರಾತುರಿಯಲ್ಲಿ ಖರೀದಿಸಬೇಡಿ. ಅದರ ಬೇಕು ಬೇಡಗಳನ್ನು, ಸಾಧಕ ಬಾಧಕಗಳನ್ನು ತಿಳಿದುಕೊಂಡು ವಿವೇಚನೆಯಿಂದ ಖರೀದಿಮಾಡಿ.
ಇ-ಕಾಮರ್ಸ್ ಶಾಪಿಂಗ್ ಉತ್ಸವಗಳಲ್ಲಿ ಪಾಲ್ಗೊಳ್ಳುವಾಗ ಫೋಮೋ ಮತ್ತು ಅದರ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವುದು ಒಳ್ಳೆಯದು. ಇದು ಬುದ್ಧಿವಂತಿಕೆಯಿಂದ ಶಾಪಿಂಗ್ ಮಾಡಲು ಗ್ರಾಹಕರಿಗೆ ನೆರವಾಗುತ್ತದೆ. ವಿಷಾದವಿಲ್ಲದೆ ಶಾಪಿಂಗ್‌ನ ಥ್ರಿಲ್ ಅನ್ನು ಆನಂದಿಸಬಹುದು. ಈ ಋತುವಿನಲ್ಲಿ, ನಿಮ್ಮ ಶಾಪಿಂಗ್ ಅನುಭವವನ್ನು ನಿಯಂತ್ರಿಸಿ ಮತ್ತು ನಿಮಗೆ ನಿಜವಾಗಿಯೂ ಮುಖ್ಯವಾದುದನ್ನು ಗುರುತಿಸಿ ಅದಕ್ಕೆ ಆದ್ಯತೆ ನೀಡಿ.
ವಿಭಾಗ