ಮಕ್ಕಳ ದಿನಾಚರಣೆ ವಿಶೇಷ: ಮಕ್ಕಳಲ್ಲಿ ಮಧುಮೇಹಕ್ಕೆ ಕಾರಣಗಳೇನು ಚಿಕಿತ್ಸೆ, ತಡೆಗಟ್ಟುವ ವಿಧಾನ-ಡಾ ಅಭಿಜಿತ್ ಭೋಗರಾಜ್ ಬರಹ
Nov 14, 2024 09:01 AM IST
ಮಕ್ಕಳಲ್ಲಿ ಕಾಣಿಸಿಕೊಳ್ಳುವ ಮಧುಮೇಹಕ್ಕೆ ಕಾರಣಗಳು ಮತ್ತು ಚಿಕಿತ್ಸೆಯ ಬಗ್ಗೆ ತಿಳಿಯೋಣ
- ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳದಂತೆ ಪೋಷಕರು ಎಚ್ಚರಿಕೆ ವಹಿಸಬೇಕಾಗುತ್ತದೆ. ಒಂದು ವೇಳೆ ಮಕ್ಕಳಲ್ಲಿ ಮಧುಮೇಹ ಕಾಣಿಸಿಕೊಂಡರೆ ಏನು ಮಾಡಬೇಕು, ಚಿಕಿತ್ಸೆ ವಿಧಾನ ಸೇರಿದಂತೆ ಹಲವು ಕ್ರಮಗಳ ಬಗ್ಗೆ ಬೆಂಗಳೂರಿನ ಹೆಬ್ಬಾಳದಲ್ಲಿರುವ ಮಣಿಪಾಲ ಆಸ್ಪತ್ರೆಯಲ್ಲಿ ಮಧುಮೇಹ ಮತ್ತು ಥೈರಾಯ್ಡ್ ವಿಭಾಗದ ಕನ್ಸಲ್ಟೆಂಟ್ ಡಾ ಅಭಿಜಿತ್ ಭೋಗರಾಜ್ ವಿವರಿಸಿದ್ದಾರೆ
ಕಳೆದ ದಶಕದಲ್ಲಿ ಮಕ್ಕಳು ಮತ್ತು ಹದಿಹರೆಯದವರು ಸೇರಿದಂತೆ ಯುವ ವಯಸ್ಕರಲ್ಲಿ ಮಧುಮೇಹದ ಆರಂಭವು ಗಮನಾರ್ಹವಾಗಿ ವಿಕಸನಗೊಂಡಿದೆ. ದೀರ್ಘ ಕಾಲದವರೆಗೆ ಮಕ್ಕಳಲ್ಲಿ ಟೈಪ್ 1 ಮಧುಮೇಹವು (ಇನ್ಸುಲಿನ್ ಉತ್ಪಾದಿಸಲು ದೇಹದ ಅಸಮರ್ಥತೆಯಿಂದಾಗಿ ಕಂಡುಬರುವ ಮಧುಮೇಹದ) ಪ್ರಧಾನವಾಗಿದ್ದು, ಇದನ್ನು ಜೀವನದುದ್ದಕ್ಕೂ ಇನ್ಸುಲಿನ್ ಪೂರೈಕೆಯ ಚಿಕಿತ್ಸೆಯೊಂದಿಗೆ ನಿರ್ವಹಿಸಲಗುತಿತ್ತು. ಚಿಂತಾಜನಕ ವಿಷಯವೆಂದರೆ ಇತ್ತೀಚಿನ ದಿನಗಳಲ್ಲಿ ಈ ವಯೋವರ್ಗದವರಲ್ಲಿ ಟೈಪ್ 2 ಮಧುಮೇಹದಲ್ಲಿ ಏರಿಕೆ ಕಂಡುಬಂದಿದೆ. 10 ರಿಂದ 18 ವರ್ಷ ವಯಸ್ಸಿನವರಲ್ಲಿಯೂ ಕೂಡ ಟೈಪ್ 2 ಮಧುಮೇಹ ಸಂಭವಿಸುತ್ತಿದೆ. ಬಾಲ್ಯದ ಸ್ಥೂಲಕಾಯತೆ, ಸಂಸ್ಕರಿಸಿದ ಸಕ್ಕರೆ ಇರುವ ಹೆಚ್ಚಿನ ಆಹಾರಗಳ ಸೇವನೆ ಮತ್ತು ಕಡಿಮೆ ದೈಹಿಕ ಚಟುವಟಿಕೆಯಂತಹ ಅಂಶಗಳು ಇದಕ್ಕೆ ಮುಖ್ಯ ಕಾರಣ ಎಂದು ಪರಿಗಣಿಸಲಾಗಿದೆ.
ಈ ಪ್ರವೃತ್ತಿಯನ್ನು ಪರಿಹರಿಸುವಲ್ಲಿ ತಡೆಗಟ್ಟುವಿಕೆ ಕ್ರಮಗಳನ್ನು ಅಳವಡಿಸಿಕೊಳ್ಳುವುದು ನಿರ್ಣಾಯಕವಾಗಿದೆ. ಹೇರಳವಾಗಿ ಪೌಷ್ಟಿಕಾಂಶಗಳು ಇರುವ ಧಾನ್ಯಗಳು, ಹಣ್ಣುಗಳು ಮತ್ತು ತರಕಾರಿಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರ ಸೇವನೆಯನ್ನು ಮತ್ತು ನಿಯಮಿತ ದೈಹಿಕ ಚಟುವಟಿಕೆಗಳಿಂದ ಟೈಪ್ 2 ಮಧುಮೇಹ ಮತ್ತು ಬೊಜ್ಜು ಬೆಳವಣಿಗೆಯ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ಶಾಲೆಗಳು ಮತ್ತು ಸಮುದಾಯಗಳು ಆರೋಗ್ಯಕರ ಊಟದ ಆಯ್ಕೆಗಳನ್ನು ಉತ್ತೇಜಿಸುವ ಮೂಲಕ ಮತ್ತು ಮಕ್ಕಳನ್ನು ಸಕ್ರಿಯವಾಗಿರಿಸುವ ಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಈ ಪ್ರವೃತ್ತಿಯನ್ನು ಬದಲಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತವೆ.
ಪರಿಣಾಮಕಾರಿ ನಿರ್ವಹಣೆಗೆ ಆರಂಭಿಕ ರೋಗನಿರ್ಣಯ ಅತ್ಯಗತ್ಯ. ಉಪವಾಸದ ರಕ್ತದಲ್ಲಿನ ಗ್ಲೂಕೋಸ್ ಮತ್ತು HbA1c ಮಾಪನಗಳು ಸೇರಿದಂತೆ ಆರಂಭಿಕ ಪರೀಕ್ಷೆಗಳು ಮಧುಮೇಹವನ್ನು ತ್ವರಿತವಾಗಿ ಪತ್ತೆಹಚ್ಚಲು ಸಹಾಯ ಮಾಡುತ್ತದೆ. ನಿರಂತರ ಗ್ಲೂಕೋಸ್ ಮಾನಿಟರಿಂಗ್ (CGM) ವ್ಯವಸ್ಥೆಗಳು ಅಮೂಲ್ಯವಾದ ಸಾಧನಗಳಾಗಿ ಮಾರ್ಪಟ್ಟಿವೆ. ಇವು ಗ್ಲೂಕೋಸ್ ಬಗ್ಗೆ ಸತತ ಮಾಹಿತಿಯನ್ನು ಒದಗಿಸುತ್ತವೆ. ಈ ಸಾಧನಗಳು ಆಹಾರ, ಚಟುವಟಿಕೆ ಮತ್ತು ಔಷಧಿಗಳಿಗೆ ಪೂರ್ವಭಾವಿ ಹೊಂದಾಣಿಕೆಗಳನ್ನು ಸಕ್ರಿಯಗೊಳಿಸುತ್ತವೆ, ಈ ಮೂಲಕ ಒಟ್ಟಾರೆ ಗ್ಲೈಸೆಮಿಕ್ ನಿಯಂತ್ರಣವನ್ನು ಸುಧಾರಿಸುತ್ತವೆ.
ತಾಂತ್ರಿಕ ಆವಿಷ್ಕಾರಗಳೊಂದಿಗೆ ಚಿಕಿತ್ಸಾ ತಂತ್ರಗಳು ಗಮನರ್ಹವಾಗಿ ಮುಂದುವರೆದಿವೆ. ಹೈಬ್ರಿಡ್ ಕ್ಲೋಸ್ಡ್-ಲೂಪ್ ವ್ಯವಸ್ಥೆಗಳು, ಸಾಮಾನ್ಯವಾಗಿ ಕೃತಕ ಮೇದೋಜ್ಜೀರಕ ಗ್ರಂಥಿಯ ಸಾಧನಗಳು ಎಂದು ಕರೆಯಲಾಗುತ್ತದೆ, ಸತತ ಗ್ಲೂಕೋಸ್ ರೀಡಿಂಗ್‌ಗಳ ಆಧಾರದ ಮೇಲೆ ಇನ್ಸುಲಿನ್ ವಿತರಣೆಯನ್ನು ಸ್ವಯಂಚಾಲಿತಗೊಳಿಸಲು ಇನ್ಸುಲಿನ್ ಪಂಪ್‌ಗಳೊಂದಿಗೆ CGM ಡೇಟಾವನ್ನು ಸಂಯೋಜಿಸುತ್ತದೆ. ಈ ವ್ಯವಸ್ಥೆಗಳು ಗ್ಲೈಸೆಮಿಕ್ ನಿಯಂತ್ರಣವನ್ನು ಸುಧಾರಿಸುತ್ತವೆ ಮತ್ತು ಮಕ್ಕಳಲ್ಲಿ ಹೈಪೊಗ್ಲಿಸಿಮಿಯಾವನ್ನು ಕಡಿಮೆ ಮಾಡುತ್ತವೆ ಎಂದು ಅಧ್ಯಯನಗಳು ತೋರಿಸಿವೆ. ಹೆಚ್ಚುವರಿಯಾಗಿ, ವಾರಕ್ಕೊಮ್ಮೆ ಬೇಸಲ್ ಇನ್ಸುಲಿನ್ ಸೂತ್ರೀಕರಣಗಳ ಅಭಿವೃದ್ಧಿಯು ಹೆಚ್ಚು ಅನುಕೂಲಕರವಾದ ಆಯ್ಕೆಯನ್ನು ನೀಡುತ್ತವೆ, ಇದು ಮಕ್ಕಳು ಮತ್ತು ಯುವ ರೋಗಿಗಳು ಚಿಕಿತ್ಸಾ ಕ್ರಮಗಳನ್ನು ರೂಢಿಸಿಕೊಳ್ಳುವುದಕ್ಕೆ ಮತ್ತು ಜೀವನದ ಗುಣಮಟ್ಟವನ್ನು ಸಂಭಾವ್ಯವಾಗಿ ಸುಧಾರಿಸುವಲ್ಲಿ ಸಹಕರಿಸುತ್ತವೆ.
ಸಂಭಾವ್ಯ ಚಿಕಿತ್ಸೆಗಳು ಮತ್ತು ಸುಧಾರಿತ ನಿರ್ವಹಣಾ ತಂತ್ರಗಳನ್ನು ಅನ್ವೇಷಿಸಲು ಸಂಶೋಧನೆ ನಡೆಯುತ್ತಿದೆ. ಇನ್ಸುಲಿನ್ ಉತ್ಪಾದಿಸುವ ಬೀಟಾ ಕೋಶಗಳನ್ನು ಸಂರಕ್ಷಿಸುವ ಗುರಿಯನ್ನು ಹೊಂದಿರುವ ಟೈಪ್ 1 ಮಧುಮೇಹದಲ್ಲಿ ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಮಾರ್ಪಡಿಸುವ ಸಾಮರ್ಥ್ಯಕ್ಕಾಗಿ ಮೊನೊಕ್ಲೋನಲ್ ಪ್ರತಿಕಾಯಗಳನ್ನು ತನಿಖೆ ಮಾಡಲಾಗುತ್ತಿದೆ. ಟೈಪ್ 2 ಡಯಾಬಿಟಿಸ್‌ಗೆ ಗಮನಾರ್ಹವಾದ ಅಪಾಯಕಾರಿ ಅಂಶವಾಗಿರುವ ಸ್ಥೂಲಕಾಯತೆಯನ್ನು ಪರಿಹರಿಸುವುದು ಪ್ರಮುಖ ಗುರಿಯಾಗಿದೆ, ಜೀವನಶೈಲಿಯ ಮಾರ್ಪಾಡುಗಳನ್ನು ಗುರಿಯಾಗಿಸುವ ಮಧ್ಯಸ್ಥಿಕೆಗಳು ಮತ್ತು ಕೆಲವು ಸಂದರ್ಭಗಳಲ್ಲಿ glp1 ಚಿಕಿತ್ಸೆಯ ಬಳಕೆಯನ್ನು ಸಹ ಸಂಶೋಧಿಸಲಾಗಿದೆ.
ಈ ಪ್ರಗತಿಗಳು ವ್ಯಾಪಕವಾಗಿ ಲಭ್ಯವಾಗುವವರೆಗೆ ಆರೋಗ್ಯಕರ ಅಭ್ಯಾಸಗಳನ್ನು ನಿರ್ಮಿಸುವುದು ಮತ್ತು ಸಕ್ರಿಯ ಜೀವನಶೈಲಿಯನ್ನು ಉತ್ತೇಜಿಸುವುದು ಅತ್ಯಗತ್ಯವಾಗಿರುತ್ತದೆ. ಈ ಮಕ್ಕಳ ದಿನ ಮತ್ತು ವಿಶ್ವ ಮಧುಮೇಹ ದಿನ, ಮಕ್ಕಳಲ್ಲಿ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಆರೋಗ್ಯಕರ, ಮಧುಮೇಹ ಮುಕ್ತ ಭವಿಷ್ಯವನ್ನು ನಿರ್ಮಿಸುವ ತಂತ್ರಗಳನ್ನು ಪ್ರತಿಪಾದಿಸುವುದು ಕಡ್ಡಾಯವಾಗಿದೆ.
ಬರಹ: ಡಾ ಅಭಿಜಿತ್ ಭೋಗರಾಜ್, ಬೆಂಗಳೂರಿನ ಹೆಬ್ಬಾಳದಲ್ಲಿರುವ ಮಣಿಪಾಲ ಆಸ್ಪತ್ರೆಯಲ್ಲಿ ಮಧುಮೇಹ ಮತ್ತು ಥೈರಾಯ್ಡ್ ವಿಭಾಗದ ಕನ್ಸಲ್ಟೆಂಟ್