ಕೇಕ್ ಇಲ್ಲದೆ ಕ್ರಿಸ್‌ಮಸ್ ಪೂರ್ಣವಾಗುವುದುಂಟೇ; ಮನೆಯಲ್ಲೇ ತಯಾರಿಸಿ ಸ್ಟ್ರಾಬೆರಿ ಪೇಸ್ಟ್ರಿ, ಇಲ್ಲಿದೆ ಪಾಕವಿಧಾನ
Dec 23, 2024 12:24 PM IST
ಮನೆಯಲ್ಲೇ ತಯಾರಿಸಿ ಸ್ಟ್ರಾಬೆರಿ ಪೇಸ್ಟ್ರಿ, ಇಲ್ಲಿದೆ ಪಾಕವಿಧಾನ
ಕ್ರಿಸ್‌ಮಸ್‌ಗೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಕೇಕ್ ಅಥವಾ ಪೇಸ್ಟ್ರಿಗಳಿಲ್ಲದೆ ಕ್ರಿಸ್ಮಸ್ ಹಬ್ಬ ಆಚರಣೆ ಮಾಡಲಾಗುತ್ತದೆಯೇ. ಕೇಕ್ ಅನ್ನು ಹೊರಗಿನಿಂದ ತರುವ ಬದಲು ಮನೆಯಲ್ಲಿಯೇ ಮಾಡಬಹುದು. ಮಕ್ಕಳಂತೂ ಸ್ಟ್ರಾಬೆರಿ ಇಷ್ಟಪಡುತ್ತಾರೆ. ಹೀಗಾಗಿ ಸ್ಟ್ರಾಬೆರಿ ಪೇಸ್ಟ್ರಿ ಕೇಕ್‌ಗಳನ್ನು ತಯಾರಿಸಿ, ಹಬ್ಬದ ಸಂತೋಷವನ್ನು ದ್ವಿಗುಣಗೊಳಿಸಿ.
ಕ್ರಿಸ್‌ಮಸ್‌ಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಪ್ರಪಂಚದಾದ್ಯಂತ ಜನರು ತಮ್ಮ ಈ ಹಬ್ಬವನ್ನು ಪರಸ್ಪರ ಉಡುಗೊರೆಗಳನ್ನು ನೀಡುವ ಮೂಲಕ, ಸಿಹಿತಿಂಡಿಗಳನ್ನು ಹಂಚುವ ಮೂಲಕ ಆಚರಿಸುತ್ತಾರೆ. ಸಿಹಿತಿಂಡಿಗಳನ್ನು ಹೆಚ್ಚಾಗಿ ಬೇಕರಿಗಳಿಂದ ತರುವುದೇ ಹೆಚ್ಚು. ಅದರಲ್ಲೂ ಕ್ರಿಸ್ಮಸ್ ಅಂದ್ರೆ ನೆನಪಾಗುವುದು ಕೇಕ್. ಇದನ್ನು ಹೊರಗಿನಿಂದ ತರುವ ಬದಲು ಮನೆಯಲ್ಲಿಯೇ ಮಾಡಿದರೆ, ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಸಂತೋಷವನ್ನು ಪಡೆಯಬಹುದು. ಈ ವಿಶೇಷ ಸಂದರ್ಭದಲ್ಲಿ ಮಕ್ಕಳಿಗೆ ರುಚಿಕರವಾದ ಏನನ್ನಾದರೂ ಮಾಡಬೇಕು ಎಂದು ನೀವು ಬಯಸಿದರೆ, ಕೇಕ್ ಮತ್ತು ಪೇಸ್ಟ್ರಿಗಳನ್ನು ತಯಾರಿಸಬಹುದು. ಅದರಲ್ಲೂ ಮಕ್ಕಳಿಗೆ ಸ್ಟ್ರಾಬೆರಿ ಫ್ಲೇವರ್ (ಸುವಾಸನೆಯುಳ್ಳ) ಪೇಸ್ಟ್ರಿಗಳೆಂದರೆ ಇಷ್ಟ. ಹೀಗಾಗಿ ಮಕ್ಕಳಿಗೆ ಇಷ್ಚವಾಗುವಂತಹ ಈ ಸ್ಟ್ರಾಬೆರಿ ಕೇಕ್‍ಗಳನ್ನು ಮಾಡಿ ಕೊಡಬಹುದು. ಖಂಡಿತಾ ಮಕ್ಕಳು ಇಷ್ಟಪಟ್ಟು ತಿಂತಾರೆ. ಮನೆಯಲ್ಲಿ ಸುಲಭವಾಗಿ ಈ ಪೇಸ್ಟ್ರಿಗಳನ್ನು ಹೇಗೆ ಮಾಡಬಹುದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಇಲ್ಲಿದೆ ಸ್ಟ್ರಾಬೆರಿ ಪೇಸ್ಟ್ರಿ ಪಾಕವಿಧಾನ.
ಸ್ಟ್ರಾಬೆರಿ ಪೇಸ್ಟ್ರಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು - 1/2 ಕಪ್, ಬೇಕಿಂಗ್ ಪೌಡರ್- 3 ಟೀ ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಬೆಣ್ಣೆ - 1/2 ಕಪ್, ನೀರು- 250 ಗ್ರಾಂ, ಸಕ್ಕರೆ- 50 ಗ್ರಾಂ, ಮೊಸರು- 1 ಟೀ ಚಮಚ, ಆಪಲ್ ಸೈಡರ್ ವಿನೆಗರ್ - 1/2 ಟೀ ಚಮಚ, ಅಡುಗೆ ಸೋಡಾ- 1/4 ಟೀ ಚಮಚ, ವೆನಿಲ್ಲಾ ಸಾರ- 1 ಟೀ ಚಮಚ, ವಿಪ್ಪಿಂಗ್ ಕ್ರೀಮ್- 1 ಟೀ ಚಮಚ, ಕ್ಯಾರಮೆಲ್- ಸ್ವಲ್ಪ.
ಸ್ಟ್ರಾಬೆರಿ ಪೇಸ್ಟ್ರಿ ಮಾಡುವ ವಿಧಾನ: ಈ ಪೇಸ್ಟ್ರಿ ಮಾಡಲು, ಹಿಟ್ಟು, ಬೇಕಿಂಗ್ ಪೌಡರ್, ಚಿಟಿಕೆ ಉಪ್ಪು ತೆಗೆದುಕೊಳ್ಳಿ.
- ಒಂದು ಪಾತ್ರೆಯಲ್ಲಿ ಈ ಮೂರನ್ನೂ ಸೇರಿಸಿ ಮತ್ತು ನಂತರ ಈ ಮಿಶ್ರಣಕ್ಕೆ ಮೊಸರು, ನೀರು, ಸಕ್ಕರೆ, ಆಪಲ್ ಸೈಡರ್ ವಿನೆಗರ್ ಮತ್ತು ವೆನಿಲ್ಲಾ ಸಾರವನ್ನು ಸೇರಿಸಿ.
- ಇವೆಲ್ಲವೂ ಚೆನ್ನಾಗಿ ಮಿಶ್ರಣವಾಗುವವರೆಗೆ, ಎಲ್ಲಾ ಸಕ್ಕರೆ ಕರಗುವ ತನಕ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದಕ್ಕೆ ಚಿಟಿಕೆ ಅಡುಗೆಗೆ ಸೋಡಾವನ್ನು ಸೇರಿಸಿ ಮಿಶ್ರಣ ಮಾಡಿ.
- ಈಗ ಹಿಟ್ಟಿನ ಮಿಶ್ರಣಕ್ಕೆ ಮೊಸರು ಮತ್ತು ಬೆಣ್ಣೆಯನ್ನು ಸೇರಿಸಿ, ಮಿಶ್ರಣ ಮಾಡಿ. ಈಗ ಬೇಕಿಂಗ್ ಪ್ಯಾನ್ ತೆಗೆದುಕೊಂಡು ಸ್ವಲ್ಪ ಬೆಣ್ಣೆ ಅಥವಾ ತುಪ್ಪ ಸವರಿ ಅದಕ್ಕೆ ಈ ಮಿಶ್ರಣವನ್ನು ಹಾಕಿ.
- ಪ್ಯಾನ್ ಅನ್ನು ಗಾಳಿಯಾಡದ ಮುಚ್ಚಳದಿಂದ ಮುಚ್ಚಿ. ಮೇಕ್ರೋವೇವ್‍ನಲ್ಲಿ 180 ಡಿಗ್ರಿ ಸೆಲ್ಸಿಯಸ್‌ನಲ್ಲಿ 15 ನಿಮಿಷಗಳ ಕಾಲ ಬಿಸಿ ಮಾಡಿ.
- ಈಗ 7 ರಿಂದ 8 ಇಂಚಿನ ಚೌಕದ ತಟ್ಟೆಯನ್ನು ತೆಗೆದುಕೊಂಡು ಅದಕ್ಕೆ ಬಟರ್ ಪೇಪರ್ ಹಾಕಿ ಟ್ರೇ ಮೇಲೂ ಬೆಣ್ಣೆ ಹಚ್ಚಿ.
- ಈಗ ಕೇಕ್ ಪ್ಯಾನ್ ಅನ್ನು ಪೂರ್ವಭಾವಿಯಾಗಿ ಕಾಯಿಸಲ್ಪಟ್ಟಿರುವ ಮೈಕ್ರೋವೇವ್‍ನಲ್ಲಿ ಇರಿಸಿ. 30 ರಿಂದ 35 ನಿಮಿಷಗಳ ಕಾಲ ಬೇಕ್ ಮಾಡಿ. ಮೈಕ್ರೋವೇವ್‍ನಿಂದ ಹೊರತೆಗೆದು ತಣ್ಣಗಾದ ನಂತರ, ಮಧ್ಯದಲ್ಲಿ ಕತ್ತರಿಸಿ ಕ್ಯಾರಮೇಲ್ ಹಾಕಿ.
- ನಂತರ ಅದರ ಮೇಲೆ ವಿಪ್ಪಿಂಗ್ ಕ್ರೀಮ್ ಮತ್ತು ಕತ್ತರಿಸಿದ ಸ್ಟ್ರಾಬೆರಿಗಳನ್ನು ಹಾಕಿ ಮುಚ್ಚಿ. ಅದರ ಮೇಲೆ ಕ್ರೀಮ್ ಅನ್ನು ಚೆನ್ನಾಗಿ ಹರಡಿ, ಮತ್ತೆ ಕತ್ತರಿಸಿದ ಸ್ಟ್ರಾಬೆರಿ ಹಣ್ಣುಗಳನ್ನು ಸೇರಿಸಿ. ಅದರ ಮೇಲೆ ಸ್ಟ್ರಾಬೆರಿ ಜಾಮ್ ಅನ್ನು ಸಹ ಹಾಕಬಹುದು. ಅಷ್ಟು ಮಾಡಿದರೆ ರುಚಿಕರವಾದ ಸ್ಟ್ರಾಬೆರಿ ಪೇಸ್ಟ್ರಿ ಕೇಕ್ ಸವಿಯಲು ಸಿದ್ಧ.
ಸ್ಟ್ರಾಬೆರಿ ಪೇಸ್ಟ್ರಿಯನ್ನು ಬಹಳ ಸರಳವಾಗಿ ತಯಾರಿಸಲಾಗುತ್ತದೆ. ಕ್ರಿಸ್‌ಮಸ್ ದಿನದಂದು ಮನೆಯಲ್ಲೇ ಮಾಡಿ ಈ ರೆಸಿಪಿಯನ್ನು ಎಲ್ಲರಿಗೂ ಹಂಚಬಹುದು, ಸಂಬಂಧಿಕರು, ಸ್ನೇಹಿತರು ಮಾತ್ರವಲ್ಲ ಮಕ್ಕಳು ಕೂಡ ಇಷ್ಟಪಟ್ಟು ತಿನ್ನುವುದರಲ್ಲಿ ಡೌಟಿಲ್ಲ.
ವಿಭಾಗ