Parenting Tips: ಮಗಳನ್ನು ಸುರಕ್ಷಿತವಾಗಿ ಬೆಳೆಸುವುದು ಹೇಗೆ? ಹೆಣ್ಣು ಮಕ್ಕಳ ಹೆಮ್ಮೆಯ ಹೆತ್ತವರಿಗೆ ಕಿವಿಮಾತು- ಮನದ ಮಾತು ಅಂಕಣ
Sep 13, 2024 09:18 AM IST
Parenting Tips: ಮಗಳನ್ನು ಸುರಕ್ಷಿತವಾಗಿ ಬೆಳೆಸುವುದು ಹೇಗೆ? ಮನದ ಮಾತು ಅಂಕಣ
- Parenting Tips: ಹೆಣ್ಣುಮಕ್ಕಳ ಸುರಕ್ಷೆ ಯಾರ ಜವಾಬ್ಧಾರಿ? ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಸುರಕ್ಷಿತವಾಗಿ ಹೇಗೆ ಬೆಳೆಸಬೇಕು? ಪೋಷಕರ ಪಾತ್ರವೇನು? ಸ್ವತಃ ಹೆಣ್ಣು ಮಕ್ಕಳು ಹೇಗೆ ತಮ್ಮ ಸುರಕ್ಷತೆಗೆ ಗಮನ ನೀಡಬೇಕು ? ಇತ್ಯಾದಿ ಪ್ರಶ್ನೆಗಳಿಗೆ ಮಾನಸಿಕ ಆರೋಗ್ಯ ತಜ್ಞೆ ಭವ್ಯ ವಿಶ್ವನಾಥ್ ಮನದ ಮಾತು ಅಂಕಣದಲ್ಲಿ ಉತ್ತರಿಸಿದ್ದಾರೆ.
ಪ್ರಶ್ನೆ: ನನಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಸದಾ ಅವರ ಬಗ್ಗೆಯೇ ಚಿಂತೆ ಮಾಡುತ್ತಿರುತ್ತೇನೆ. ಒಮೊಮ್ಮೆ ಬಹಳ ಭಯ ಆತಂಕವೂ ಆಗುವುದುಂಟು. ತಾಯಿಯಾಗಿ ಅವರನ್ನು ಸುರಕ್ಷಿತವಾಗಿ ಹೇಗೆ ಬೆಳೆಸಬೇಕು? ತಿಳಿಸಿ ಮೇಡಂ
ಅನುರಾಧ | ಬೆಂಗಳೂರು
ಉತ್ತರ: ಎಲ್ಲಾ ಹೆಣ್ಣು ಮಕ್ಕಳ ಹೆತ್ತವರಿಗೆ ಉಪಯುಕ್ತವಾದ ಪ್ರಶ್ನೆ ಕೇಳಿದ್ದಕ್ಕೆ ಧನ್ಯವಾದಗಳು. ಸಮಾಜದ ಸದ್ಯದ ಪರಿಸ್ಥಿತಿಯಲ್ಲಿ ನಿಮ್ಮ ಚಿಂತೆ ಭಯ ಆತಂಕ ಎಲ್ಲವೂ ಸಹಜ. ವಿಶೇಷವಾಗಿ ಹೆಣ್ಣು ಮಕ್ಕಳ ಪೋಷಕರಿಗರಿಗೆ ಮಕ್ಕಳ ಸುರಕ್ಷಣೆಯೇ ಒಂದು ದೊಡ್ಡ ಸವಾಲಾಗಿ ಎದುರಾಗಿ ನಿಂತಿದೆ. ಆದರೆ, ಚಿಂತೆ ಮತ್ತು ಭಯಪಟ್ಟು ಪ್ರಯೋಜನವಿಲ್ಲ, ಪೋಷಕರಾಗಿ ನೀವು ಏನು ಮಾಡಬಹುದು, ನಿಮ್ಮ ಮಕ್ಕಳು ಏನು ಮಾಡಬಹುದೆಂದು ಆಲೋಚಿಸಿ.
ಹಾಗಾದರೆ, ಹೆಣ್ಣುಮಕ್ಕಳ ಸುರಕ್ಷೆ ಯಾರ ಜವಾಬ್ಧಾರಿ? ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಸುರಕ್ಷಿತವಾಗಿ ಹೇಗೆ ಬೆಳೆಸಬೇಕು? ಪೋಷಕರ ಪಾತ್ರವೇನು? ಸ್ವತಃ ಹೆಣ್ಣು ಮಕ್ಕಳು ಹೇಗೆ ತಮ್ಮ ಜವಾಬ್ಧಾರಿ ತೆಗೆದುಕೊಳ್ಳಬೇಕು? ಹೆಣ್ಣು ಮಕ್ಕಳ ಸುರಕ್ಷಣೆ ಸಮಾಜದ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವೂ ಹೌದು. ಅಧಿಕೃತವಾಗಿ ಹೆಣ್ಣುಮಕ್ಕಳ ಪೋಷಕರು, ಸ್ವತಃ ಹೆಣ್ಣು ಮಕ್ಕಳು ಮತ್ತು ಶಿಕ್ಷಣ ಸಂಸ್ಥೆಗಳ ವೈಯಕ್ತಿಕ ಜವಾಬ್ಧಾರಿಯಾಗಬೇಕು. ನಂತರ ಪೋಲಿಸ್ ಮತ್ತು ಕಾನೂನಿನ ಚೌಕಟ್ಚಿನ ಕರ್ತವ್ಯಗಳು ಮತ್ತು ವ್ಯವಸ್ಥೆಯ ಕುರಿತು ಆಲೋಚಿಸೋಣ.
ಪೋಷಕರು ಈ ಕೆಳಕಂಡ ಅಂಶಗಳನ್ನು ಗಮನಿಸಿ
1. ಆತ್ಮ ರಕ್ಷಣೆ (Self Defence)
ಹೆಣ್ಣು ಮಕ್ಕಳಿಗೆ ತಂದೆಯ, ಅಣ್ಣನ, ತಮ್ಮನ, ಒಳ್ಳೆಯ ಸ್ನೇಹಿತರ ಬೆಂಬಲ ಮತ್ತು ರಕ್ಷಣೆಯ ಅಗತ್ಯವಿದೆ. ಇಷ್ಟಿದ್ದರೆ ಸಾಕಾಗದು, ಆತ್ಮರಕ್ಷಣೆಯ ಕುರಿತು ತಿಳಿದಿರುವುದು ಅತ್ಯಂತ ಅಗತ್ಯ. ಆದ್ದರಿಂದ ನಿಮ್ಮ ಹೆಣ್ಣು ಮಕ್ಕಳಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳುವಂತಹ ಸಾಮಥ್ಯ೯ವನ್ನು ಬೆಳೆಸಿಕೊಳ್ಳಲು ಉತ್ತೇಜಿಸಿ. ಹೆಣ್ಣಿಗೆ ಸಂಗೀತ, ನೃತ್ಯ, ಅಡುಗೆ, ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದದ್ದು ಆತ್ಮರಕ್ಷಣೆ ಕಲೆ. ಇದು ಒಂದು ಪ್ರಮುಖವಾದ ಜೀವನ ಕೌಶಲ್ಯವೆಂದು ಕರೆಯಬಹುದು. ಆತ್ಮರಕ್ಷಣೆಯ ತರಬೇತಿಯಿಂದ ತಮ್ಮನ್ನು ತಾವು ಶೋಷಕರಿಂದ ಹೇಗೆ ರಕ್ಷಿಸಿಕೊಳ್ಳಬೇಕೆಂದು ಕಲಿತುಕೊಳ್ಳಬಹುದು. ಸ್ವಯಂ ರಕ್ಷಣೆ ಕಲಿಕೆಯಿಂದ ತಮ್ಮ ಜೀವನದ ಕುರಿತು ನಿಯಂತ್ರಣ ಹೊಂದಬಹುದು. ಸಮಸ್ಯೆಗಳಲ್ಲಿ ಸಿಲುಕುವುದರಿಂದ ಪಾರಾಗಬಹುದು. ಭವಿಷ್ಯದಲ್ಲಿ ನಿಮ್ಮ ಹೆಣ್ಣು ಮಕ್ಕಳು ಯಾವುದೇ ರೀತಿಯ ದೈಹಿಕ, ಲೈಂಗಿಕ ಶೋಷಣೆಗೆ ಒಳಗಾಗುವುದನ್ನು ತಡೆಗಟ್ಟಲು ಆತ್ಮರಕ್ಷಣೆ ವಿದ್ಯೆ ಸಹಾಯಕವಾಗುತ್ತದೆ. ಹೆಣ್ಣು ಮಕ್ಕಳಿಗೆ ದೈಹಿಕ ಬಲವಿದ್ದರೆ, ತನ್ನನ್ನು ತಾನು ರಕ್ಷಿಸಿಕೊಳ್ಳುವ ಕೌಶಲ್ಯವಿದ್ದರೆ, ಆತ್ಮ ವಿಶ್ವಾಸ, ಆತ್ಮಗೌರವವು ಕೂಡ ಹೆಚ್ಚಾಗುತ್ತದೆ. ದೌಜ೯ನ್ಯ ಶೋಷಣೆಗಳಿಂದ ಮುಕ್ತಿಯೂ ಸಿಗುತ್ತದೆ.
ಉದಾ: ಕರಾಟೆ, ಕುಸ್ತಿ, ಬಾಕ್ಸಿಂಗ್ ಇತ್ಯಾದಿಗಳನ್ನು ಕಲಿಯಿರಿ. ವಿದ್ಯಾಸಂಸ್ಥೆಗಳಲ್ಲಿ ಇಂತಹ ಆತ್ಮರಕ್ಷಣೆಯ ತರಬೇತಿಗಳನ್ನು ವಿದ್ಯಾರ್ಥಿನಿಯರಿಗೆ ಕಡ್ಡಾಯವಾಗಿ ನೀಡಬೇಕು.
2. ಮನಸ್ಥಿತಿ ಬದಲಾವಣೆ
ಹೆಣ್ಣು ಮಕ್ಕಳನ್ನು ಮಾನಸಿಕವಾಗಿ ಸದೃಢಗೊಳಿಸಿ. ನಾವು ದುರ್ಬಲರು, ಅವಲಂಬಿತರು ಎಂಬ ಅಸಹಾಯಕ ಅಶಕ್ತ ಮನಸ್ಥಿತಿಯಿಂದ ಹೊರತನ್ನಿ. ನಮ್ಮ ಸಾಮರ್ಥ್ಯವನ್ನು ಅರಿತರೆ, ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು, ಶ್ರಮಪಟ್ಟರೆ ಸ್ವಾವಲಂಬಿಯಾಗಬಹುದು ಎಂಬುದನ್ನು ತೋರಿಸಿಕೊಡಿ. ಪ್ರಯತ್ನ ಮತ್ತು ಸಧೃಢ ಮನಸ್ಥಿತಿಯಿಂದ ಏನ್ನನಾದರೂ ಗೆಲ್ಲಬಹುದೆಂಬ ಆಶಾಭಾವನೆಯನ್ನು ತುಂಬಿ. ಶೋಷಣೆಗೆ ನಾನು ಬಲಿಯಾಗುವುದಿಲ್ಲ, ಬಲಿಯಾಗಬಾರದು ಎಂಬ ಸಂಕಲ್ಪ ಇರಲಿ. ಇದಕ್ಕೆ ತಕ್ಕಂತಹ ಮಾನಸಿಕ ಸಿದ್ಧತೆ, ದೈಹಿಕ ಸಾಮರ್ಥ್ಯ ಶೋಷಣೆ ತಡೆಗಟ್ಟಲು ನೆರವಾಗುತ್ತದೆ.
3. ಸಣ್ಣಪುಟ್ಟ ಕಿರುಕುಳ , ಶೋಷಣೆಯ ಕುರಿತು ಹೇಳಿದಾಗ ನಿರ್ಲಕ್ಷ್ಯ ಮಾಡಬೇಡಿ
ಎಷ್ಟೇ ಸಣ್ಣ ಕಿರುಕುಳವಾದರೂ ಸರಿ ಮತ್ತು ಯಾರಿಂದ ಕಿರುಕುಳವಾದರೂ ಸರಿ,ಸಂಕೋಚವಿಲ್ಲದೆ ಮಕ್ಕಳು ಕೂಡಲೇ ಪೋಷಕರ ಬಳಿ ಹಂಚಿಕೊಳ್ಳುವುದಕ್ಕೆ ಪ್ರೋತ್ಸಾಹಿಸಿ. ಉದಾಹರಣೆಗೆ ಎಷ್ಟೋ ಸಲ ದಾರಿಯಲ್ಲಿ, ಶಾಲೆ ಮತ್ತು ಕಾಲೇಜಿನಲ್ಲಿ, ಅಂಗಡಿಯಲ್ಲಿ, ಹೆಣ್ಣು ಮಕ್ಕಳನ್ನು ಅಹಿತಕರವಾಗಿ ಗುರಾಯಿಸುತ್ತಾರೆ, ಕಣ್ಣು ಹೊಡೆಯುತ್ತಾರೆ, ಮೆಲ್ಲನೆ ಗೊತ್ತಾಗದ ಹಾಗೆ ತಾಕಿಸಿಕೊಂಡು ಹೋಗುತ್ತಾರೆ . ಇಂತಹ ಪರಿಸ್ಥಿಯನ್ನು ಬಹುತೇಕ ಹೆಣ್ಣುಮಕ್ಕಳು ಸಂಕೋಚದಿಂದ, ಭಯದಿಂದ ಮೌನವಾಗಿ ಸಹಿಸಿಬಿಡುತ್ತಾರೆ, ಇಲ್ಲವೇ ಕಿರಿಕಿರಿ ಅನ್ನಿಸಿದರೂ ನಿರ್ಲಕ್ಷ್ಯ ಮಾಡುತ್ತಾರೆ. ಪೋಷಕರ ಬಳಿ ಹೇಳುವುದಿಲ್ಲ. ಹೇಳಿದರೂ ಪೋಷಕರು ಸಹ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ, ತೆಗೆದುಕೊಂಡರೂ ತಮ್ಮ ಮಕ್ಕಳಿಗೇ ಬುದ್ಧಿವಾದ ಹೇಳಿ ಸುಮ್ಮನಾಗುತ್ತಾರೆ, ಸಹಿಸಿಕೆೊಳ್ಳುವ ನಿರೀಕ್ಷೆಯಲ್ಲೂ ಇರುತ್ತಾರೆ. ಇಂತಹ ಪ್ರಮೇಯವನ್ನು ಆದಷ್ಟು ತಡೆಯಬೇಕು. ಇಲ್ಲದಿದ್ದರೆ ಸಣ್ಣ ಶೋಷಣೆಯು ದೊಡ್ಢದಾಗಿ ಬೆಳೆಯುತ್ತದೆ, ಶೋಷಕರು ಬೆಳೆಯುತ್ತಾರೆ.
5. ಬೇಡ ಮತ್ತು ನನಗೆ ಇಷ್ಟವಿಲ್ಲ ಎಂದು ಹೇಳಲು ಕಲಿಸಿ
ನೋ ಎಂದು ಹೇಳಲು ಕಲಿಯುವುದು ಅತ್ಯಂತ ಅಗತ್ಯ. ನಿಮ್ಮ ಮಗಳು ಇನ್ನೊಬ್ಬರ ಕೆಲವು ವರ್ತನೆಗಳನ್ನು ನನಗೆ ಇಷ್ಟವಿಲ್ಲವೆಂದು ಹೇಳಿದರೆ ಅಥವ ಕೆಲವು ವ್ಯಕ್ತಿಗಳನ್ನು, ಗುಣಗಳನ್ನು ಬೇಡವೆಂದು ನಿರಾಕರಿಸಿದರೆ, ನೀವು ಅದನ್ನು ತಿರಸ್ಕರಿಸದೆ ಒಪ್ಪಿಕೊಳ್ಳಿ. ಮಗಳಿಗೆ ಇಷ್ಟವಿಲ್ಲದನ್ನು ಒಪ್ಪಿಕೊಳ್ಳಲು ಬಲವಂತ ಮಾಡಬೇಡಿ. ಅವಳಿಗೆ ಇಷ್ಟವಿಲ್ಲದ್ದನ್ನು ಬೇಡವೆಂದು ಹೇಳಲು ಅಭ್ಯಾಸ ಮಾಡಿ. ಹೌದು’ (yes), ಮತ್ತು ‘ಬೇಡ’ (no ಎಂದು ಹೇಳಲು ಕಲಿಸಿಕೊಡಿ.
ಪೋಷಕರಿಗೆ ಕಿವಿಮಾತು
- ಶೋಷಕ/ಕಿ - ನೆನಪಿಡಿ ಶೋಷಕರು ನಿಮ್ಮ ಚಲನವಲನವನ್ನು ಗಮನಿಸುತ್ತಿರುತ್ತಾರೆ. ( good observers). ನಿಮ್ಮ ಗಮನಕ್ಕೆ ಯಾರಾದರೂ ನಿಮ್ಮನ್ನು ಗಮನಿಸುತ್ತಿದ್ದಾರೆಂದು ಅನಿಸಿದರೆ, ನಿರ್ಲಕ್ಷ್ಯ ಮಾಡಬೇಡಿ,
- ಶೋಷಕರು ಅಪರಿಚಿತರೇ ಆಗಬೇಕಿಲ್ಲ - ಪರಿಚಿತರು ಕೂಡ ಶೋಷಕರಾಗಿರಬಹುದು
- ವಿರೋಧ ವ್ಯಕ್ತಪಡಿಸದಿದ್ದರೆ ಅಪರಾಧ/ ಶೋಷಣೆ ಮುಂದುವರೆಸುತ್ತಾರೆ. (Repeat).
- ಸಾಕ್ಷಿ ಪುರಾವೆಗಳು ಅಥವ ಗುರುತುಗಳು ಇದ್ದರೆ ಮಾತ್ರ ಶೋಷಣೆ , ಇಲ್ಲವಾದಲ್ಲಿ ಶೋಷಣೆಯಲ್ಲ ಎನ್ನುವ ಅಭಿಪ್ರಾಯ ತಪ್ಪು.
- ಅಸಹಾಯಕರು - ಮಕ್ಕಳು ಅಧಿಕೃತವಾಗಿ ಚಿಕ್ಕ ವಯ್ಯಸ್ಸಿನ ಹೆಣ್ಣು ಮಕ್ಕಳು ಅಸಹಾಯಕರು, ಅಮಾಯಕರು, ಸುಲಭವಾಗಿ ಶೋಷಣೆ ಮಾಡಬಹುದೆಂದು, ಶೋಷಣೆಗೆ ಒಳಗಾದರೆ ಕ್ರಮ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲವೆಂದು ಪೋಷಕರು ಸುಮ್ಮನಾಗಬೇಡಿ.
- ನೆನಪಿಡಿ, ಗಂಡಸು ಮತ್ತು ಹೆಂಗಸು ಇಬ್ಬರೂ ಕೂಡ ಶೋಷಕರಾಗಿರಬಹುದು!
ಭವ್ಯಾ ವಿಶ್ವನಾಥ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.