ಮನೆಯಲ್ಲಿ ಮಕ್ಕಳು ಮಾತಾಡಲ್ಲ ಅನ್ನೋ ಕೊರಗು ನಿಮಗೂ ಇದೆಯೇ? ಹಾಗಿದ್ರೆ ಇವಿಷ್ಟೂ ನಿಮಗೆ ಗೊತ್ತಿರಲೇಬೇಕು, ಮಕ್ಕಳನ್ನು ಮಾತನಾಡಿಸಿ -ಮನದ ಮಾತು-column manada mathu parenting tips how to make children talk in home all parents should follow these 3 suggestions dmg ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮನೆಯಲ್ಲಿ ಮಕ್ಕಳು ಮಾತಾಡಲ್ಲ ಅನ್ನೋ ಕೊರಗು ನಿಮಗೂ ಇದೆಯೇ? ಹಾಗಿದ್ರೆ ಇವಿಷ್ಟೂ ನಿಮಗೆ ಗೊತ್ತಿರಲೇಬೇಕು, ಮಕ್ಕಳನ್ನು ಮಾತನಾಡಿಸಿ -ಮನದ ಮಾತು

ಮನೆಯಲ್ಲಿ ಮಕ್ಕಳು ಮಾತಾಡಲ್ಲ ಅನ್ನೋ ಕೊರಗು ನಿಮಗೂ ಇದೆಯೇ? ಹಾಗಿದ್ರೆ ಇವಿಷ್ಟೂ ನಿಮಗೆ ಗೊತ್ತಿರಲೇಬೇಕು, ಮಕ್ಕಳನ್ನು ಮಾತನಾಡಿಸಿ -ಮನದ ಮಾತು

ಭವ್ಯಾ ವಿಶ್ವನಾಥ್: ನನ್ನ ಮಕ್ಕಳು ಶಾಲೆಯಲ್ಲಿ ಏನು ನಡೆಯಿತು ಎನ್ನುವುದನ್ನು ನಮ್ಮೊಂದಿಗೆ ಹಂಚಿಕೊಳ್ಳುವುದೇ ಇಲ್ಲ. ನಾವು ಬಲವಂತವಾಗಿ ಮಾತನಾಡಿಸಿದರೆ ಬೇಸರಿಸಿಕೊಳ್ಳುತ್ತಾರೆ. ಮಕ್ಕಳು ಮನೆಗಳಲ್ಲಿ ಖುಷಿಯಾಗಿ ಮಾತನಾಡುವಂತೆ ಮಾಡುವುದು ಹೇಗೆ? ನಿಮ್ಮಲ್ಲೂ ಈ ಪ್ರಶ್ನೆಯಿದ್ದರೆ ಈ ಬರಹವನ್ನು ನೀವು ಮಿಸ್ ಮಾಡದೆ ಓದಬೇಕು.

ಕೆಲವು ಮಕ್ಕಳು ಮನೆಯಲ್ಲಿ ಮಾತನಾಡಲು ಯಾಕೆ ಇಷ್ಟಪಡಲ್ಲ? ಮಕ್ಕಳು ಮನೆಯಲ್ಲಿ ಮಾತನಾಡುವಂತೆ ಮಾಡಲು ಪೋಷಕರು ಏನು ಮಾಡಬಹುದು?
ಕೆಲವು ಮಕ್ಕಳು ಮನೆಯಲ್ಲಿ ಮಾತನಾಡಲು ಯಾಕೆ ಇಷ್ಟಪಡಲ್ಲ? ಮಕ್ಕಳು ಮನೆಯಲ್ಲಿ ಮಾತನಾಡುವಂತೆ ಮಾಡಲು ಪೋಷಕರು ಏನು ಮಾಡಬಹುದು?

ಪ್ರಶ್ನೆ: ನಮಸ್ಕಾರ ಮೇಡಂ, ನನಗೆ ಇಬ್ಬರು ಮಕ್ಕಳಿದ್ದಾರೆ. ಮೊದಲು ಮಕ್ಕಳು ನನ್ನೊಂದಿಗೆ ಚೆನ್ನಾಗಿ ಮಾತನಾಡುತ್ತಿದ್ದರು. ಆದರೆ ಇತ್ತೀಚೆಗೆ ಅವರ ವರ್ತನೆಯಲ್ಲಿ ಏನೋ ವ್ಯತ್ಯಾಸವಾಗಿದೆ. ದಯವಿಟ್ಟು ನನಗೆ ನನ್ನ ಮಕ್ಕಳ ಮನಸ್ಸು ಅರ್ಥ ಮಾಡಿಕೊಳ್ಳಲು ನೆರವಾಗಿ. ಬಾಕ್ಸ್‌ಗೆ ಹಾಕಿಕೊಟ್ಟಿದ್ದನ್ನು ತಿಂದ್ರಾ? ಟೀಚರ್ ಏನು ಹೇಳಿದರು? ಹೋಮ್ ವರ್ಕ್‌ ಜಾಸ್ತಿ ಇದ್ಯಾ ಎನ್ನುವ ನಮ್ಮ ಪ್ರಶ್ನೆಗಳಿಗೂ ಅವರು ಸರಿಯಾಗಿ ಉತ್ತರ ಕೊಡುತ್ತಿಲ್ಲ. ಅವರ ವರ್ತನೆಯಿಂದ ನನಗೆ ಸಿಟ್ಟು ಬರುತ್ತೆ. ತೀರಾ ಬೇಜಾರೂ ಆಗುತ್ತೆ. ನಾನು ಏನು ಮಾಡಿದರೆ ಇದಕ್ಕೆ ಪರಿಹಾರ ಸಿಗುತ್ತೆ? ದಯವಿಟ್ಟು ಉತ್ತರಿಸಿ. -ವಿಮಲಾ, ಸಹಕಾರನಗರ, ಬೆಂಗಳೂರು

ಉತ್ತರ: ಈಗಿನ ಕಾಲದ ಬಹುತೇಕ ಪೋಷಕರು ಎದುರಿಸುತ್ತಿರುವ ಸಮಸ್ಯೆಯಿದು. ಶಾಲೆಯಿಂದ ಬಂದಾಕ್ಷಣವೆೇ ಪೋಷಕರು ಮಕ್ಕಳನ್ನು ಈ ದಿನ ಶಾಲೆಯಲ್ಲಿ ಏನಾಯಿತು ಎಂದು ಪ್ರಶ್ನಿಸಿದಾಗ ಸಾಮಾನ್ಯವಾಗಿ 'ಏನೂ ಆಗಿಲ್ಲ' ಎಂದೋ ಅಥವಾ 'ಏನೋ ಆಯ್ತು ಬಿಡು' ಎಂದೋ ಮನಸ್ಸಿಗೆ ಕಿರಿಕಿರಿ ಮಾಡಿಕೊಂಡು, ಕೋಪದಿಂದ ಉತ್ತರ ಕೊಡುತ್ತಾರೆ. ಇಲ್ಲವಾದರೆ, ಏನೊಂದೂ ಉತ್ತರ ಕೊಡದೆ ಮೌನವಾಗಿರುತ್ತಾರೆ. ಮಕ್ಕಳ ಇಂತಹ ವರ್ತನೆಯು ಪೋಷಕರಿಗೆ ಬೇಸರ ಮತ್ತು ಕೋಪ ಉಂಟುಮಾಡುತ್ತದೆ. ಕೆಲವು ಮನೆಗಳಲ್ಲಿ ಈ ಕಾರಣಕ್ಕೆ ಬಹಳ ಜಗಳಗಳೂ ಆಗುವುದು ಉಂಟು. ಮಕ್ಕಳಿಗೆ ಜಂಭ ಬಂದಂತಿದೆ, ಮಕ್ಕಳು ಬದಲಾಗಿದ್ದಾರೆ, ಇನ್ನು ಮಕ್ಕಳಿಗೆ ನಮ್ಮ ಅಗತ್ಯವಿಲ್ಲ. ನಮ್ಮೊಂದಿಗೆ ಮಕ್ಕಳು ಅಗೌರವದಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಭಾವಿಸಿ ಹಲವು ಪೋಷಕರು ಬೇಸರ ವ್ಯಕ್ತಪಡಿಸುತ್ತಾರೆ.

ಮುಂಜಾನೆ ಎಲ್ಲ ಜವಾಬ್ಧಾರಿಯನ್ನು ಹೊತ್ತು ಶಾಲೆಗೆ ಕಳಿಸಿಕೊಟ್ಚು, ಸಂಜೆಗೆ ಮಕ್ಕಳು ಮರಳಿ ಬರುತ್ತಾರೆಂದು ಖುಷಿಯಾಗಿ ಮನೆಯಲ್ಲಿ ಕಾದು ಕುಳಿತಿರುತ್ತೇವೆ, ಶಾಲೆಯಲ್ಲಿ ಏನಾಯಿತೋ ಅನ್ನುವ ಧಾವಂತ ಕಾಳಜಿ ಇರುತ್ತದೆ, ಇದನ್ನು ಅರ್ಥ ಮಾಡಿಕೊಂಡು ಮಕ್ಕಳು ನಮ್ಮ ಪ್ರಶ್ನೆಗಳಿಗೆ ಉತ್ತರ ನೀಡುವುದು ದೊಡ್ಡ ಕಷ್ಟವೇ? ಎಂದು ಪೋಷಕರು ಉದ್ವೇಗ ಮತ್ತು ಚಿಂತೆಗೆ ಒಳಗಾಗುತ್ತಾರೆ. ಪರಿಹಾರವಾಗಿ ಮಕ್ಕಳನ್ನು ನಿಂದಿಸಿ, ಹೊಡೆದು ನಿಯಂತ್ರಿಸುವುದಕ್ಕೆ ಪ್ರಯತ್ನಿಸುತ್ತಾರೆ (control).

ಹೀಗೆ ಮಾಡಿದರೆ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆಯೇ? ⁠ಮಕ್ಕಳು ನಿಜವಾಗಿಯೂ ನಿಯಂತ್ರಣಕ್ಕೆ ಸಿಗುತ್ತಾರಯೇ ⁠ಮತ್ತು ಪೋಷಕರನ್ನು ಗೌರವಿಸುತ್ತಾರೆಯೇ? ⁠ತಮ್ಮ ಮನಸ್ಸಿನಲ್ಲಿರುವುದನ್ನು ಹೇಳಿಕೊಳ್ಳುತ್ತಾರೆಯೇ? ⁠ಕೆೊನೆಯದಾಗಿ ಪೋಷಕರಿಗೆ ಇದು ಸಂತೋಷ ನೀಡುತ್ತದೆಯೇ?

ಯಾವುದೇ ಸಂಬಂಧವನ್ನು ಬಲವಂತದಿಂದ ನಿಯಂತ್ರಿಸಿದರೆ ಪ್ರೀತಿ ಗೌರವ ಹೆಚ್ಚಾಗುವುದಿಲ್ಲ, ಬದಲಿಗೆ ಕಡಿಮೆಯಾಗುತ್ತದೆ. ಮನಸ್ತಾಪಗಳು ಹೆಚ್ಚಾಗಿ, ಬಿರುಕುಗಳು ಮೂಡುತ್ತವೆ. ಆದ್ದರಿಂದ ಮಕ್ಕಳು ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸದಿದ್ದರೆ ಪೋಷಕರು ಬೇಸರ ಅಥವಾ ಉದ್ರೇಕದಿಂದ ವರ್ತಿಸಬಾರದು. ಕೆಳಕಂಡ ರೀತಿಯಲ್ಲಿ ಸ್ವಲ್ಪ ತಾಳ್ಮೆಯಿಂದ ಮಕ್ಕಳ ಜೊತೆ ವತಿ೯ಸಿದರೆ ಖಂಡಿತವಾಗಿಯೂ ಮಕ್ಕಳ ಮನಸ್ಥಿತಿಯನ್ನು ತಿಳಿಯಬಹುದು.

ಮಕ್ಕಳ ಮನಸ್ಸು ಅರಿಯಲು ಹೀಗೆ ಮಾಡಿ

1) ಸಾಕಷ್ಟು ಸಮಯ ನೀಡಿ: ಶಾಲೆಯಿಂದ ಬಂದ ತಕ್ಷಣವೇ ಮಕ್ಕಳನ್ನು ಪ್ರಶ್ನಿಸಬೇಡಿ. ಇಡೀ ದಿನ ಶಾಲೆಯಲ್ಲಿ ಕಲಿಯುವುದರ ಜೊತೆಗೆ ಹಲವಾರು ಸಿಹಿ ಮತ್ತು ಕಹಿ ಅನುಭವವನ್ನು ಅನುಭವಿಸಿರುತ್ತಾರೆ. ಕಲಿಕೆಯಲ್ಲಿ ಸವಾಲುಗಳು, ಪೈಪೋಟಿ, ಹೋಲಿಕೆ, ನಿಂದನೆ, ನಿರೀಕ್ಷೆ, ಹೀಗೆ ಅನೇಕ ಅನುಭವಗಳು ಆಗಿರುವ ಸಾಧ್ಯತೆಯಿರುತ್ತದೆ. ದೈಹಿಕ-ಮಾನಸಿಕವಾಗಿಯೂ ದಣಿದಿರುತ್ತಾರೆ. ಮನೆಗೆ ಮರಳಿದ ಮಕ್ಕಳಿಗೆ ಮೊದಲು ವಿಶ್ರಾಂತಿಯ ಅಗತ್ಯವಿರುತ್ತದೆ. ಬಳಿಕ ಸ್ವಲ್ಪ ಸಮಯದ ನಂತರ ನಿಧಾನವಾಗಿ ಪ್ರಶ್ನಿಸಿದರೆ ಮಕ್ಕಳೂ ಸಹ ಕಿರಿಕಿರಿ ಮಾಡಿಕೊಳ್ಳದೆ ಉತ್ತರಿಸುತ್ತಾರೆ.

2) ಸಮಗ್ರ ಕಲಿಕೆ: ಸಾಮಾನ್ಯವಾಗಿ ಪೋಷಕರು ಮಕ್ಕಳ ಶೈಕ್ಷಣಿಕ ಕಲಿಕೆಗೆ (academics) ಹೆಚ್ಚು ಪ್ರಾಶಸ್ತ್ಯ ಕೊಟ್ಚು ಪ್ರಶ್ನಿಸುತ್ತಾರೆ. ಉಳಿದ ಬೆಳವಣಿಗೆಗಳ ಬಗ್ಗೆ ಗಮನವಹಿಸುವುದಿಲ್ಲ. ಪ್ರಶ್ನೆಗಳು ಸಹ ಶಿಕ್ಷಣದ ಸುತ್ತಮುತ್ತಲೇ ಇರುತ್ತವೆ. ಕಲಿತು ಆಯಾಸಗೊಂಡ ಮಕ್ಕಳಿಗೆ ಮತ್ತೆ ಅದರ ಬಗ್ಗೆಯೇ ಪ್ರಶ್ನಿಸುವುದು ಇಷ್ಟವಾಗುವುದಿಲ್ಲ. ಮನೆಯು ಮತ್ತೊಂದು ಶಾಲೆಯೆಂದು ಅವರು ಬೇಸರಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಕಲಿಕೆಯ ಬಗ್ಗೆಯಷ್ಟೇ ಪ್ರಶ್ನಿಸದೇ ಮಕ್ಕಳ ಸಮಗ್ರ ಅನುಭವ ಮತ್ತು ಬೆಳವಣಿಗೆಯ ಕುರಿತು ಮಾತನಾಡಿ. ಶಾಲೆಯ ವಾತಾವರಣ, ಮಗುವಿನ ಮಾನಸಿಕ ಆರೋಗ್ಯ, ಸಂವಹನ ಕೌಶಲ, ಆತ್ಮವಿಶ್ವಾಸ, ಸಾಮಾಜಿಕ ಬೆಳವಣಿಗೆ, ಸ್ನೇಹಿತರ ಕುರಿತು ಪ್ರಶ್ನಿಸಿದರೆ ಮಕ್ಕಳು ಸಹ ಆಸಕ್ತಿಯಿಂದ ಉತ್ತರಿಸುತ್ತಾರೆ.

3) ಗಮನವಿಟ್ಟು ಆಲಿಸಿ: ಮಕ್ಕಳು ನಿಮ್ಮ ಬಳಿ ಮಾತಾನಾಡುವಾಗ, ಗಮನವಿಟ್ಟು ಆಲಿಸಿ. ಹೀಗೆ ಮಾಡಿದಾಗ, ಮಕ್ಕಳೂ ಸಹ ನೀವು ಅವರ ಮಾತಿಗೆ ಬೆಲೆ ಕೊಡುತ್ತೀರಿ ಎಂದು ಭಾವಿಸಿ ಮುಕ್ತವಾಗಿ ತಮ್ಮ ಮನಸ್ಸಿನೊಳಗಿರುವುದನ್ನು ಹಂಚಿಕೊಳ್ಳುತ್ತಾರೆ. ಅವರ ದೇಹದ ಭಂಗಿ, ಮೌನದಲ್ಲಿಯೂ ಸಂದೇಶಗಳಿರುತ್ತವೆ. ಜಾಣ ತಂದೆ-ತಾಯಿಯರು ಇದನ್ನು ಗ್ರಹಿಸಬಲ್ಲರು.

4) ಸ್ವತಂತ್ರ ಮತ್ತು ಮುಕ್ತ ವಾತಾವರಣ: ಮಕ್ಕಳಿಗೆ ಸಾಧ್ಯವಾದಷ್ಟು ಅವರ ಅನುಭವ, ಅನಿಸಿಕೆ ಮತ್ತು ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ಅವಕಾಶ ಮಾಡಿಕೊಡಿ. ವ್ಯಕ್ತಪಡಿಸಿದ ನಂತರ ನಿಲ೯ಕ್ಷ್ಯ, ವ್ಯಂಗ್ಯದ ಪ್ರತಿಕ್ರಿಯೆ ಕೊಡಬೇಡಿ. ಹೇಗೆಂದರೆ ಹಾಗೆ ಅವರನ್ನು ನಿರ್ಣಯಗಳನ್ನು (ಜಡ್ಜ್‌ಮೆಂಟ್) ಹೇರಬೇಡಿ. ಮಕ್ಕಳಿಗೆ ಮಾತನಾಡಲು ಅವಕಾಶ ಕೊಟ್ಟಷ್ಟೂ ಅವರು ನಿಮ್ಮ ಬಳಿ ಹೆಚ್ಚಿನ ವಿಷಯಗಳನ್ನು ಹಂಚಿಕೊಳ್ಳುತ್ತಾರೆ ಎನ್ನುವುದು ನೆನಪಿರಲಿ.

5) ಅನೌಪಚಾರಿಕ ಮಾತುಕತೆಗೆ ಇರಲಿ ಅವಕಾಶ: ಪೋಷಕರು ಪ್ರತಿದಿನ ಎಲ್ಲರೂ ಕುಳಿತು ಊಟ ಮಾಡುವ ವೇಳೆಯಲ್ಲೋ ಅಥವಾ ಮಲಗುವ ಮುನ್ನ ಈ ರೀತಿಯ ಪ್ರಶ್ನಾವಳಿಯನ್ನು ಅನೌಪಚಾರಿಕವಾಗಿ ಕೇಳಬಹುದು. ಇದನ್ನೊಂದು ಆಟದ ರೀತಿಯೂ ಆಡಬಹುದು. ಇದು ರೂಢಿಯಾದರೆ ಮಕ್ಕಳು ಯಾವುದೇ ಸಂಕೋಚವಿಲ್ಲದೆ ತಮ್ಮ ಅನುಭವ ಮತ್ತು ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಅದನ್ನು ಪೋಷಕರು ಸಹ ಪ್ರೋತ್ಸಾಹಿಸಬೇಕು.

ಮಕ್ಕಳಿಗೆ ಪೋಷಕರು ಕೇಳಬಹುದಾದ ಪ್ರಶ್ನೆಗಳು

1) ಹೂವು: ಇವತ್ತು ನಿನಗೆ ಖುಷಿಯಾದ ಸಂಗತಿ ಏನಾದರೂ ಆಯಿತೇ? ದಿನದ ಸಂತೋಷ, ಉತ್ಸಾಹ ಭರಿತ, ಮನಸ್ಸಿಗೆ ಉಲ್ಲಾಸ ಮತ್ತು ಮುದ ನೀಡುವ ವಿಚಾರಗಳ ಕುರಿತು ಪ್ರಶ್ನಿಸಿ

2) ⁠ಮುಳ್ಳು: ಇವತ್ತು ನಿನಗೆ ಬೇಸರ, ಮುಜುಗರ, ಭಯ ಅಥವಾ ಕಷ್ಟವೆನ್ನಿಸುವ ಅನುಭವ ಆಯಿತೇ? ದಿನದ ಕಷ್ಟಕರವಾದ ಮತ್ತು ಬೇಸರ ಸಂಗತಿಗಳನ್ನು ಮಕ್ಕಳು ಹೇಳಲು ಮುಂದಾದರೆ ಆಸಕ್ತಿಯಿಂದ ಕೇಳಿಸಿಕೊಳ್ಳಿ.

3) ⁠ಮೊಗ್ಗು: ಇವತ್ತು ವಿಭಿನ್ನವಾದ ಪ್ರಯತ್ನವೇನಾದರು ಮಾಡಿದೆಯಾ? ಹೊಸದೇನಾದರು ಕಲಿತೆಯಾ? ಹೇಗೆ ಅನಿಸಿತು? ದಿನದ ಕಲಿಯುವಂತಹ, ಬೆಳೆಸಿಕೊಳ್ಳುವಂತಹ ವಿಷಯಗಳನ್ನು ಹೇಳಿಕೊಳ್ಳಲು ಮಕ್ಕಳಿಗೆ ಪ್ರೋತ್ಸಾಹಿಸಿ.

ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು
ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು

ಭವ್ಯಾ ವಿಶ್ವನಾಥ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 98808 07003. ಬೆಳಿಗ್ಗೆ 10 ರಿಂದ ಸಂಜೆ 5 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.