Parenting Tips: ಮಗ ಎಂದಿಗೂ ಅತ್ಯಾಚಾರಿ ಆಗಬಾರದು ಅಂದ್ರೆ ಪೋಷಕರಿಗೆ ಈ 7 ಅಂಶ ಗೊತ್ತಿರಬೇಕು; ಚಿಕ್ಕಂದಿನಲ್ಲೇ ಸರಿದಾರಿಗೆ ತನ್ನಿ -ಮನದ ಮಾತು-column manada mathu parenting tips how can i raise my child in a gender sensitive way gender equality tips bvy ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Parenting Tips: ಮಗ ಎಂದಿಗೂ ಅತ್ಯಾಚಾರಿ ಆಗಬಾರದು ಅಂದ್ರೆ ಪೋಷಕರಿಗೆ ಈ 7 ಅಂಶ ಗೊತ್ತಿರಬೇಕು; ಚಿಕ್ಕಂದಿನಲ್ಲೇ ಸರಿದಾರಿಗೆ ತನ್ನಿ -ಮನದ ಮಾತು

Parenting Tips: ಮಗ ಎಂದಿಗೂ ಅತ್ಯಾಚಾರಿ ಆಗಬಾರದು ಅಂದ್ರೆ ಪೋಷಕರಿಗೆ ಈ 7 ಅಂಶ ಗೊತ್ತಿರಬೇಕು; ಚಿಕ್ಕಂದಿನಲ್ಲೇ ಸರಿದಾರಿಗೆ ತನ್ನಿ -ಮನದ ಮಾತು

ಭವ್ಯಾ ವಿಶ್ವನಾಥ್: ಒಬ್ಬ ಗಂಡು ಅತ್ಯಾಚಾರಿಯಾಗಿಯಾಗುವುದಕ್ಕೆ ಅನೇಕ ಕಾರಣಗಳಿವೆ. ಆಕಸ್ಮಿಕವಾಗಿ ಯಾರೂ ಅತ್ಯಾಚಾರಿ ಆಗುವುದಿಲ್ಲ. ಮನೆಯ ವಾತಾವರಣ, ಶಾಲಾ ಮತ್ತು ಕಾಲೇಜುಗಳಲ್ಲಿ ಆದ ಪ್ರಭಾವ, ಪ್ರಚೋಚನೆಗಳು ಬಹುಕಾಲ ಮನಸ್ಸಿನಲ್ಲಿ ಉಳಿಯುತ್ತವೆ. ಗಂಡು ಮಕ್ಕಳ ಅಪ್ಪ-ಅಮ್ಮ ಏನು ಮಾಡಿದರೆ ನಮ್ಮ ಸಮಾಜದಲ್ಲಿ ಹೆಣ್ಮಕ್ಕಳು ನೆಮ್ಮದಿಯಾಗಿ ಬದುಕುತ್ತಾರೆ? ಇಲ್ಲಿದೆ ಉತ್ತರ.

ಗಂಡು ಮಕ್ಕಳನ್ನು ಹೇಗೆ ಬೆಳೆಸಬೇಕು? ಚಿಕ್ಕಂದಿನಲ್ಲೇ ಸರಿದಾರಿಗೆ ತನ್ನಿ -ಮನದ ಮಾತು ಅಂಕಣ
ಗಂಡು ಮಕ್ಕಳನ್ನು ಹೇಗೆ ಬೆಳೆಸಬೇಕು? ಚಿಕ್ಕಂದಿನಲ್ಲೇ ಸರಿದಾರಿಗೆ ತನ್ನಿ -ಮನದ ಮಾತು ಅಂಕಣ (pixabay | ಪ್ರಾತಿನಿಧಿಕ ಚಿತ್ರ)

ಪ್ರಶ್ನೆ: ನಮಸ್ಕಾರ ಮೇಡಂ, ಇತ್ತೀಚೆಗೆ ಕೊಲ್ಕತ್ತಾ ಆಸ್ಪತ್ರೆಯೊಂದರಲ್ಲಿ ನಡೆದ ಅತ್ಯಾಚಾರ, ಕೊಲೆ ಪ್ರಕರಣ ಓದಿ ಬಹಳ ಬೇಸರವಾಯಿತು. ನನ್ನ ಗೆಳತಿಯೊಬ್ಬಳಿಗೆ ಇಬ್ಬರು ಹೆಣ್ಮಕ್ಕಳಿದ್ದಾರೆ. ಆಕೆ ಮಕ್ಕಳ ಭವಿಷ್ಯದ ಬಗ್ಗೆ ತುಂಬಾ ಹೆದರಿದ್ದಾಳೆ. ನನಗೆ ಹೆಣ್ಮಕ್ಕಳು ಇಲ್ಲ. ಆದರೆ ನನಗೆ ಹೆಣ್ಮಕ್ಕಳು ಇಲ್ಲ. ಇರುವುದು ಒಬ್ಬ ಗಂಡು ಮಗ ಮಾತ್ರ. ಅವನನ್ನು ಸರಿಯಾಗಿ ಬೆಳೆಸಬೇಕು ಎನ್ನುವುದು ನನ್ನ ಆಸೆ. ಹೇಳಿ ಮೇಡಂ, ಮಗನನ್ನು ಬೆಳೆಸುವಾಗ ನಾನು ಏನೆಲ್ಲಾ ಎಚ್ಚರ ತೆಗೆದುಕೊಳ್ಳಬೇಕು? - ಮಹಾಲಕ್ಷ್ಮೀ, ತುಮಕೂರು

ಉತ್ತರ: ಇದು ಬಹಳ ಉತ್ತಮ ಪ್ರಶ್ನೆ. ಪೋಷಕರು ಹೀಗೆ ಆಲೋಚನೆ ಮಾಡುವುದೇ ಸಮಾಜಕ್ಕೊಂದು ಉತ್ತಮ ಕೊಡುಗೆ. ಯಾಕೆಂದರೆ, ಬಹುತೇಕ ಪೊಷಕರು ನಮ್ಮ ಮಗ ಅಂಥವನಲ್ಲ, ಅವನು ಹಾಗೆ ಮಾಡಲು ಅಸಾಧ್ಯ ಎಂದು ಅತಿಯಾದ ಭರವಸೆ ಮತ್ತು ನಂಬಿಕೆಯಿಂದ ಮಗನನ್ನು ಬೆಳೆಸುತ್ತಾರೆ. ನಮ್ಮ ಮಗ ಅತ್ಯಾಚಾರಿ ಆಗಬಹುದೆಂಬ ಆಲೋಚನೆಯು ತಂದೆ-ತಾಯಂದಿರಿಗೆ ಬರುವುದರಲಿ, ಊಹಿಸುವುದಕ್ಕೂ ಅಸಾಧ್ಯ. ಇಷ್ಟರಮಟ್ಟಿಗೆ ಅವರು ತಮ್ಮ ಮಗನನ್ನು ನಂಬಿರುತ್ತಾರೆ. ಆದ್ದರಿಂದ ನೀವು ಕೇಳಿರುವ ಈ ಪ್ರಶ್ನೆಯ ಹಿಂದಿರುವ ನಿಮ್ಮ ಆಲೋಚನೆ ಮತ್ತು ದೂರದೃಷ್ಟಿ ಪ್ರಶಂಸನೀಯ.

ಹಾಗಾದರೆ, ಪೋಷಕರಾಗಿ ಮಗನನ್ನು ನಂಬಲೇಬಾರದೇ? ಅವನ ಮೇಲೆ ಭರವಸೆ ಇರಿಸಿಕೊಳ್ಳುವುದೇ ತಪ್ಪೇ? ಅವನನ್ನು ಸಂಶಯದಿಂದಲೇ ನೋಡಬೇಕೆ? ನನ್ನ ಮಗ ಅಷ್ಟು ಕೆಟ್ಟವನೇ? ಇಂಥ ಹಲವು ಪ್ರಶ್ನೆಗಳು ನಿಮ್ಮನ್ನು ಕಾಡಬಹುದು. ನಿಮ್ಮ ತರಹದ ಇನ್ನೂ ಅನೇಕ ಗಂಡು ಮಕ್ಕಳ ಪೋಷಕರಲ್ಲಿ ಮಗನ ಕುರಿತು ಏಳುವ ಅನೇಕ ಪ್ರಶ್ನೆಗಳಿಗೆ ಈ ಬರಹದಲ್ಲಿ ಉತ್ತರ ನೀಡಲು ಪ್ರಯತ್ನಿಸಿದ್ದೇನೆ. ನಿಮ್ಮ ಮಗನ ಬಗ್ಗೆ ನನಗೆ ಖಂಡಿತ ಅನುಮಾನವಿಲ್ಲ. ಇಷ್ಟು ಒಳ್ಳೆಯ ಮನಸ್ಸಿರುವ ನಿಮ್ಮ ಮಗ ಸಹಜವಾಗಿಯೇ ಭವಿಷ್ಯದಲ್ಲಿ ಜವಾಬ್ದಾರಿಯುತ ಪ್ರಜೆಯಾಗಿ ಬೆಳೆಯುತ್ತಾನೆ.

ಒಬ್ಬ ಗಂಡು ಅತ್ಯಾಚಾರಿಯಾಗಿಯಾಗುವುದಕ್ಕೆ ಅನೇಕ ಕಾರಣಗಳಿವೆ. ದಿಢೀರಾಗಿ ಅಥವಾ ಆಕಸ್ಮಿkವಾಗಿ ಯಾರು ಅತ್ಯಾಚಾರಿಗಳಾಗುವುದಿಲ್ಲ. ಮಕ್ಕಳಿದ್ದಾಗ ಬೆಳೆದುಬಂದ ಮನೆಯ ವಾತಾವರಣ, ಶಾಲಾ ಮತ್ತು ಕಾಲೇಜುಗಳಲ್ಲಿ ಆದ ಅನುಭವಗಳು, ಪ್ರಭಾವಗಳು, ಸ್ನೇಹ ಮತ್ತು ಸಾಮಾಜಿಕ ಜಾಲತಾಣ, ಮಾಧ್ಯಮ ಮತ್ತು ಸಿನಿಮಾಗಳಿಂದಾದ ಪ್ರಚೋದನೆಗಳು ಶೋಷಿತನ ಮನಸ್ಸಿನ ಮೇಲೆ ಸಾಕಷ್ಚು ಪ್ರಭಾವ ಬೀರಿರುತ್ತವೆ. ಸಾಕಷ್ಟು ಸಮಯದಿಂದ ಸಂಗ್ರಹವಾದ ಮಾಹಿತಿ, ಪ್ರಚೋದನೆ, ಅನುಭವಗಳು ವ್ಯಕ್ತಿಯನ್ನು ಅತ್ಯಾಚಾರಿಯಾಗಿ ಬದಲು ಮಾಡುತ್ತದೆ. ಆದ್ದರಿಂದ ಲೈಂಗಿಕ ಅತ್ಯಾಚಾರವನ್ನು ದೀರ್ಘಕಾಲದಿಂದ ಬೆಳೆಸಿಕೊಂಡು ಬಂದಂತಹ ಒಂದು ಸಮಾಜಘಾತಕ ಮನಸ್ಥಿತಿಯುಳ್ಳ ವ್ಯಕ್ತಿತ್ವ ಮತ್ತು ಚಟ ಎಂದು ಹೇಳಬಹುದು.

ಕೆಲವು ಸಂದರ್ಭಗಳಲ್ಲಿ, ಬಾಲ್ಯದಲ್ಲಿ ಆದ ಲೈಂಗಿಕ ದೌರ್ಜನ್ಯದ ಅನುಭವದಿಂದಲೂ ಶೋಷಕನಾಗುವ ಸಾಧ್ಯತೆಯಿರುತ್ತದೆ. ಶೋಷಕನು ತನ್ನ ಬಾಲ್ಯದಲ್ಲಿ ಸತತವಾಗಿ (ಕುಟುಂಬದ ಸದಸ್ಯರಿಂದ ಅಥವಾ ಬಂಧು ಬಳಗದವರಿಂದ, ಶಾಲೆಯಲ್ಲಿ) ದೈಹಿಕ ಅಥವಾ ಲೈಂಗಿಕ ದೌಜ೯ನ್ಯಕ್ಕೆ (ಅತ್ಯಾಚಾರ) ಒಳಗಾಗಿದ್ದು ಅಥವಾ ಬೇರೆಯವರಿಗಾದ ಲೈಂಗಿಕ ದೌರ್ಜನ್ಯವನ್ನು ಪರೋಕ್ಷವಾಗಿ ನೋಡಿದ್ದು, ಈ ವಿಚಾರದ ಕುರಿತು ಯಾರ ಬಳಿಯೂ ಹೇಳಿಕೊಳ್ಳದೆ, ಚಿಕೆತ್ಸೆಯನ್ನು ಸಹ ಪಡೆಯದೆ ಮೌನವಾಗಿ ಸಹಿಸಿದ್ದರೆ, ದೊಡ್ಡವನಾಗಿ ಭವಿಷ್ಯದಲ್ಲಿ ಅತ್ಯಾಚಾರಿಯಾಗುವ ಸಾಧ್ಯತೆಯಿರುತ್ತದೆ.

ಸಾಮಾಜಿಕ ಅವ್ಯವಸ್ಥೆ, ಬಡತನ (ಆರ್ಥಿಕ ಸಮಸ್ಯೆ), ಕಾನೂನು ಕಠಿಣ ಶಿಕ್ಷೆಯ ಕೊರತೆ ಒಂದಿಷ್ಟು ಕಾರಣಗಳಾದರೆ, ಮನೆಯ ವಾತಾವರಣ, ಸಮಾಜದಲ್ಲಿರುವ ಲಿಂಗ ಪಕ್ಷಪಾತ ಮನೋಭಾವನೆ, ಹೆಣ್ಣಿನ ಮೇಲಿರುವ ಕೀಳು ದೃಷ್ಟಿಕೋನ ಲೈಂಗಿಕ ದೌರ್ಜನ್ಯವನ್ನು ಹೆಚ್ಚು ಪ್ರೋತ್ಸಾಹಿಸುತ್ತದೆ. ಹಾಗಾಗಿ ಪೋಷಕರು ಈ ಕೆಳಕಂಡ ಅಂಶಗಳನ್ನು ಪರಿಗಣಿಸಿ ಗಂಡು ಮಕ್ಕಳನ್ನು ಬೆಳೆಸಿದರೆ ಒಳ್ಳೆಯದು.

1) ಮನೆಯೇ ಮೊದಲ ಪಾಠಶಾಲೆ - ಪೋಷಕರೇ ಮಾದರಿ (role model): ಬಹುತೇಕ ಮಕ್ಕಳು ತಂದೆ ತಾಯಿ, ಗುರು ಹಿರಿಯರನ್ನು ಅನುಸರಿಸುತ್ತಾರೆ. ಮತ್ತು ಅನುಕರಣೆ ಮಾಡುತ್ತಾರೆ. ವಿಶೇಷವಾಗಿ, ಗಂಡು ಮಕ್ಕಳ ತಂದೆಯ ಸ್ಥಾನದಲ್ಲಿರುವ ವ್ಯಕ್ತಿಯು ತನ್ನ ಪತ್ನಿ, ತಾಯಿ ಮತ್ತು ಕುಟುಂಬದ ಇತರರನ್ನು ಗೌರವದಿಂದ ಕಾಣಬೇಕು. ಯಾವುದೇ ರೀತಿಯ ದೈಹಿಕ, ಮಾನಸಿಕ ದೌರ್ಜನ್ಯ ಮಾಡಬಾರದು. ಮಹಿಳೆಯರ ಭಾವನೆ, ಅಲೋಚನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಲು ಅವಕಾಶ ನೀಡಬೇಕು. ಎದುರಿಗೆ ಇರುವವರು ಯಾವುದೇ ಭಾವನೆ ಅಥವಾ ಅಭಿಪ್ರಾಯ ವ್ಯಕ್ತಪಡಿಸಿದಾಗ ಗೌರವ ಹಾಗೂ ಸಮಂಜಸದಿಂದ ಸ್ಪಂದಿಸಬೇಕು. ಹೀಗೆ ನಡೆದುಕೊಂಡಾಗ, ಗಂಡು ಮಕ್ಕಳಿಗೆ ಮಹಿಳೆಯರನ್ನು ಗೌರವಾನ್ವಿತವಾಗಿ ಕಾಣಲು ತಂದೆಯೇ ಮಾದರಿಯಾಗುತ್ತಾನೆ.

2) ಮಹಿಳೆಯರ ಗಡಿಯನ್ನು (boundary) ಗೌರವಿಸಿ: ಮಹಿಳೆಯರು “ನನಗೆ ಇದು ಇಷ್ಟವಿಲ್ಲ, ಬೇಡ”, “ನಾನು ಮಾಡುವುದಿಲ್ಲ”, “ನಾನು ನೀಡುವುದಿಲ್ಲ” ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದಾಗ ಮನೆಯಲ್ಲಿರುವ ಹಿರಿಯರು ಅದನ್ನು ಬಲವಂತ ಮಾಡದೆ, ಹಿಂಸಿಸದೆ, ತೇಜೋವಧೆ ಮಾಡದೆ ಗೌರವದಿಂದ ಒಪ್ಪಿಕೊಳ್ಳಬೇಕು. ಹೆಣ್ಣುಮಕ್ಕಳು ಹೊಂದಿಕೊಂಡು ಹೋಗಬೇಕು, ಹಟ ಮಾಡಬಾರದು, ತ್ಯಾಗಮಯಿಯಾಗಬೇಕು ಎನ್ನುವ ನಂಬಿಕೆಯನ್ನು ಹೆಣ್ಣುಮಕ್ಕಳ ಮೇಲೆ ಹೋರಿಸಬೇಡಿ. ಇಂತಹ ನಡೆನುಡಿಗಳು ಗಂಡು ಮಕ್ಕಳ ಮೇಲೆ ಆಳವಾಗಿ ಪ್ರಭಾವ ಬೀರಿ, ಅದನ್ನೇ ಅನುಸರಿಸಲು ಅನುಕೂಲ ಮಾಡಿಕೊಡುತ್ತದೆ.

3) ದೈಹಿಕ ದೌರ್ಜನ್ಯ: ಯಾರಾದರೂ ಸರಿ, ದೈಹಿಕ, ಲೈಂಗಿಕ, ಮಾನಸಿಕ ದೌರ್ಜನ್ಯ ಸಹಿಸಬಾರದು, ಖಂಡಿಸಬೇಕು ಎನ್ನುವುದನ್ನು ಮಕ್ಕಳಿಗೆ ತಿಳಿಸಿಕೊಡಿ. ಉದಾ: ಗಂಡು ಮಕ್ಕಳು ಹೆಣ್ಣು ಮಕ್ಕಳಿಗೆ ಗಿಲ್ಲುವುದು, ಕೂದಲು ಎಳೆದು ಕೀಟಲೆ ಮಾಡಿದಾಗ, ತಳ್ಳುವುದು, ಹೊಡೆಯುವುದು ಮಾಡಿದಾಗ ತಕ್ಷಣವೇ ಪೋಷಕರು ಖಂಡಿಸಿ, ಅದನ್ನು ತಿದ್ದಬೇಕು. ಇನ್ನೊಬ್ಬರಿಗೆ ಆಗುವ ನೋವು, ಬೇಸರ, ಅವಮಾನ, ಮುಜುಗರವನ್ನು ಅರ್ಥ ಮಾಡಿಕೊಂಡು ಅದಕ್ಕೆ ಸ್ಫಂದಿಸುವುದನ್ನು ಗಂಡುಮಕ್ಕಳಿಗೆ ಪೋಷಕರು ತಿಳಿ ಹೇಳಬೇಕು. ಉದಾ-1: ಹೆಣ್ಣುಮಕ್ಕಳಿಗೆ ದೌರ್ಜನ್ಯವನ್ನು ಸಹಿಸು ಎಂದಾಗ ಗಂಡು ಮಕ್ಕಳಿಗೆ ಪ್ರಚೋದನೆ ಕೊಟ್ಟಂತೆ ಆಗುತ್ತದೆ. ಉದಾ-2: ಕುಟುಂಬದವರೆಲ್ಲರೂ ಒಟ್ಟಿಗೆ ಸಿನಿಮಾ ವೀಕ್ಷಿಸುವ ಅಥವಾ ನ್ಯೂಸ್ ನೋಡುವ ಸಂಧಭ೯ದಲ್ಲಿ, ಲೈಂಗಿಕ ದೌರ್ಜನ್ಯದ ವಿಚಾರಗಳು ಉದ್ಭವಿಸಿದರೆ, ಅದರ ಬಗ್ಗೆ ಸೂಕ್ತವಾಗಿ ಅರಿವು ಮೂಡಿಸಬೇಕು. ಇದು ಘೋರ ಅಪರಾಧ, ಅದನ್ನು ಖಂಡಿಸಬೇಕು, ಸಹಿಸಬಾರದು, ಸಂತ್ರಸ್ತರನ್ನು ಬೆಂಬಲಿಸಬೇಕು ಎಂಬುದನ್ನು ಮನನ ಮಾಡಿಸಬೇಕು. ಹಾಗೆಯೇ, ಇದರ ಕುರಿತು ಗಂಡು ಮಕ್ಕಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವುದನ್ನು ಉತ್ತೇಜಿಸಿ. ಅವರ ಆಲೋಚನೆಗಳನ್ನು ತಿಳಿದುಕೊಳ್ಳಿ.

4) ಲಿಂಗ ತಾರತಮ್ಯ: ಪೋಷಕರ, ಸಮಾಜದ ದೃಷ್ಟಿಕೋನ ಬದಲಾಗಬೇಕು. ಗಂಡು ಮಕ್ಕಳು ಶ್ರೇಷ್ಠ (superior), ಹೆಣ್ಣು ಮಕ್ಕಳು ಕೀಳೆನ್ನುವ ಭೇದಭಾವವನ್ನು ಪೋಷಕರು ಮಾಡಬಾರದು. ಹೆಣ್ಣುಮಕ್ಕಳೆಂದರೆ ದುರ್ಬಲರು, ಅಸಹಾಯಕರು, ಶೋಷಣೆಗೆ ಒಳಗಾಗುವರು ಎನ್ನುವ ಭಾವನೆ ಸಲ್ಲದು. ಹೆಣ್ಣುಮಕ್ಕಳಿಗೆ ಅಯ್ಯೋ ಪಾಪವೆನ್ನುವ ಅನುಕಂಪ ಬೇಡ. ತನ್ನನ್ನು ತಾನು ರಕ್ಷಣೆಮಾಡಿಕೊಳ್ಳಲು ಅವಳಿಗೆ ಎಂದಿಗೂ ಸಾಧ್ಯವಿಲ್ಲ, ಹಾಗಾಗಿ ಪುರುಷರನ್ನು ಹೆಚ್ಚು ಅವಲಂಬಿಸಿರುತ್ತಾಳೆ ಎನ್ನುವ ನಂಬಿಕೆಯನ್ನು ಗಂಡು ಮಕ್ಕಳಲ್ಲಿ ಬೆಳೆಸಬೇಡಿ. ಉದಾ: ಪಾಪ ಹೆಣ್ಣು ಮಗು ಅವಳು, ಹೆಚ್ಚು ಸಾಮಥ್ಯ೯ವಿಲ್ಲ, ಅವಳಿಗೆ ಆಗಲ್ಲ, ನೀನು ಗಂಡು, ನಿನಗೆ ಸಾಮರ್ಥ್ಯ ಹೆಚ್ಚು, ನಿನಗೆ ಆಗುತ್ತೆ, ಮಾಡು”, “ಎಷ್ಟೇ ಆದರೂ ನೀನು ಒಂದು ಹೆಣ್ಣು, ನೀನೆ ತಗ್ಗಿ ಬಗ್ಗಿ ನಡೆದುಕೋ, ಸಮಾಜ ನಿನ್ನನ್ನು ಒಪ್ಪುವುದಿಲ್ಲ, ಮಾನ ಮಯಾ೯ದೆಗೆ ಅಂಜು, ಅವನು ಗಂಡಸು, ಸಮಾಜ ಅವನು ಏನು ಮಾಡಿದರೂ ಒಪ್ಪುತ್ತೆ” “ಗಂಡಸನ್ನು ಹೆಚ್ಚು ಕೆರಳಿಸಬೇಡ”.. ಇಂತಹ ಮಾತುಗಳನ್ನು ಮಕ್ಕಳ ಮುಂದೆ ಆಡದಿರಿ. ಉದಾ: ಗಂಡು ಮಕ್ಕಳು ಅತ್ತರೆ, ಹೆಣ್ಣು ಮಕ್ಕಳ ತರಹ ಅಳಬೇಡ, ಹೆಣ್ಣಿಗ ಅನ್ನಬೇಡಿ. ಇದರ ಅಥ೯ ಹೆಣ್ಣು ಮಾತ್ರ ಅಳಬೇಕು, ಅವಳನ್ನು ಅಳಿಸಬಹುದು ಎಂದಾಗುತ್ತದೆ. ಅತ್ತಾಗ, ನಮಗಾಗುವ ನೋವು, ಸಂಕಟ ಇನ್ನೊಬ್ಬರಿಗೂ ಆಗಬಹುದು ಎನ್ನುವ ಅರಿವು ಮೂಡುತ್ತದೆ.

5) ಸೌಂದರ್ಯದ ಮತ್ತು ಭೋಗದ ವಸ್ತು (stereotypical mind set): ತಂದೆ ಮತ್ತು ತಾಯಿ ಇಬ್ಬರೂ ಕೂಡಿ ಮಕ್ಕಳಲ್ಲಿ ಈ ಒಂದು ಮಹತ್ವದ ವಿಚಾರವನ್ನು ಮನನ ಮಾಡಿಸಬೇಕು. ಹೆಣ್ಣುಮಕ್ಕಳ ಸೌಂದರ್ಯವನ್ನು ಆಡಿಕೊಳ್ಳುವುದು, ಅವಮಾನಿಸುವುದು, ತಮಾಷೆ ಮಾಡುವುದನ್ನು (body shaming) ತಡೆಯಬೇಕು. ಹೆಣ್ಣು ಸೌಂದರ್ಯಕ್ರೆ ಮಾತ್ರ ಮೀಸಲು, ಅವಳಿರುವುದೇ ಸುಖ ನೀಡುವುದಕ್ಕೆ ಎನ್ನುವ ದೃಷ್ಟಿಕೋನವನ್ನು ಬದಲಾಯಿಸಬೇಕು. ಇದನ್ನು ಮಕ್ಕಳೇ ಮಾಡಿದರೂ, ಪೋಷಕರು ಮಕ್ಕಳನ್ನು ತಿದ್ದಬೇಕು. ಉದಾ 1- “ಅವಳು ನೋಡುವುದಕ್ಕೆ ಚೆನ್ನಾಗಿಲ್ಲ, ದಪ್ಪ, ಕಪ್ಪು, ಒಂದು ಹೆಣ್ಣೆ ಅಲ್ಲಾ ಅವಳು”, “ಗಂಡಸರ ಧ್ವನಿ ಇದೆ ಅವಳಿಗೆ, ಚೆನ್ನಾಗಿಲ್ಲ”, “ಗಂಡುಬೀರಿ”, “ಹೆಣ್ಣಿಗಿರಬೇಕಾದ ನಯ ನಾಜೂಕು ಸೂಕ್ಷವಿಲ್ಲ” ಹೀಗೆ ಅನೇಕ ರೀತಿಯಲ್ಲಿ ಗಂಡು ಮಕ್ಕಳ ಮುಂದೆ ಹೆಣ್ಣಿನ ಸೌಂದರ್ಯ ಮತ್ತು ಸ್ವಭಾವವನ್ನು ಆಡಿಕೊಳ್ಳುವುದು, ಹೀಗೆ ಇರಬೇಕೆಂದು ಅಪೇಕ್ಷಿಸುವುದು , ಹೆಣ್ಣಿನ ನಡತೆ, ಸೌಂದರ್ಯವನ್ನು ಕೆಟ್ಟದಾಗಿ ಜಡ್ಜ್ ಮಾಡಿದಾಗ ಗಂಡು ಮಕ್ಕಳು ಸಹ ಇದನ್ನೇ ಅನುಸರಿಸುತ್ತಾರೆ. ಆದ್ದರಿಂದ ಪೋಷಕರು ಇಂತಹ ಮನಸ್ಥಿಯನ್ನು ಬದಲಾಯಿಸಬೇಕು. ಉದಾ: 2- ಹೆಣ್ಣು ಮಕ್ಕಳಿಗೆ ಆಟ ಸಾಮಾನು ಬೊಂಬೆಗಳು, ಅಡುಗೆ ಸಾಮಾನು, ಒಡವೆ, ಬಟ್ಟೆಯನ್ನು ಉಡುಗೆಯಾಗಿ ಕೊಡುವುದು, ಗಂಡು ಮಕ್ಕಳಿಗೆ ಕಾರು, ಬೈಕ್, ಗನ್ , ಬ್ಯಾಟ್ ಬಾಲ್ ಕೊಡುವುದು ಅಭ್ಯಾಸವಾಗಿ ಹೋಗಿದೆ. ಇದರಿಂದ ಲಿಂಗ ತಾರತಮ್ಯಗಳು, stereotyped ಮನಸ್ಥಿತಿಗಳು ಹೆಚ್ಚಾಗುತ್ತವೆ. ಬದಲಾಯಿಸಿ.

6) ಪ್ರಾಪ್ತ ವಯಸ್ಸಿಗೆ ಬಂದ ಗಂಡು ಮಕ್ಕಳು: ಪೋಷಕರು ಪ್ರಾಪ್ತ ವಯಸ್ಸಿಗೆ ಬಂದ ಮಕ್ಕಳ ಬಳಿ ಲೈಂಗಿಕ ವಿಚಾರದ ಕುರಿತು ಮುಕ್ತವಾಗಿ ಮಾತನಾಡಬೇಕು. ಮಕ್ಕಳಿಗೆ ಸ್ವಾಭಾವಿಕವಾಗಿ ಈ ವಿಚಾರದ ಕುರಿತು ಆಸಕ್ತಿ ಬರುವುದುಂಟು. ಅದನ್ನು ಹೀಯಾಳಿಸದೇ, ನಿಂದಿಸದೇ ಮಕ್ಕಳಿಗೆ ಯಾವ ರೀತಿಯಲ್ಲಿ ನಿಭಾಯಿಸಬೇಕೆಂದು ಹೇಳಿಕೊಡಿ. ಉದಾ 1: ಲೈಂಗಿಕ ಪ್ರಚೋದನೆಯಾದಾಗ ಹೇಗೆ ನಡೆದುಕೊಳ್ಳಬೇಕು, ಹೇಗೆ ಇಂತಹ ಒತ್ಡಡವನ್ನು ನಿಭಾಯಿಸಬೇಕೆಂಬುದನ್ನು ವಿವರಿಸಿ. ಉದಾ 2- ಗಂಡು ಮಕ್ಕಳು ಸಹ ಸ್ನೇಹಿತರಿಂದ, ಬಂಧುಬಳಗ ಇತರರಿಂದ ದೈಹಿಕ, ಲೈಂಗಿಕ, ಮಾನಸಿಕ ದೌಜ೯ನ್ಯಕ್ಕೆ ಒಳಗಾಗುವ ಸಾಧ್ಯತೆಯಿರುತ್ತದೆ. ಇಂತಹ ಸನ್ನಿವೇಶವೇನಾದರೂ ಸಂಭವಿಸಿದರೆ ಮರೆಮಾಚದೆ, ನಿಸ್ಸಂಕೋಚದಿಂದ, ಧೈರ್ಯವಾಗಿ ಪೋಷಕರ ಬಳಿ ಮಾತನಾಡುವಂತೆ ಉತ್ತೇಜಿಸಿ. ಉದಾ: 3- ಸಮಾಜದಲ್ಲಿ ಗಂಡು ಮಕ್ಕಳು ಅನೇಕ ಕಾರಣ ಹಾಗೂ ಅನಿವಾ೯ಯತೆಗಳಿಂದ ಹೆಣ್ಣು ಮಕ್ಕಳ ಜೊತೆ ಸ್ನೇಹ ಮಾಡಬೇಕು, ಉದ್ಯೋಗ ಮಾಡಬೇಕು, ಇಂತಹ ಸನ್ನಿವೇಶಗಳಲ್ಲಿ ಗಂಡು ಮಕ್ಕಳು ಹೇಗೆ ಸಭ್ಯ ರೀತಿಯಲ್ಲಿ, ಗೌರವದಿಂದ ವತಿ೯ಸಬೇಕೆಂದು ತಿಳಿಸಿಕೊಡಿ. ಉದಾ: 2- ಒಂದು ವೇಳೆ, ಹೆಣ್ಣಿನ ಜೆೊತೆ ಭಿನ್ನಾಭಿಪ್ರಾಯಗಳಾದರೂ, ಪೈಪೋಟಿಯಿದ್ದರೂ ಹೇಗೆ ಗೌರವದಿಂದ ಅವರ ಬಳಿ ನಡೆದುಕೆೊಳ್ಳಬೇಕೆಂದು ಮಾಗ೯ದಶ೯ನವನ್ನು ನೀಡಿ.

7) ಗಮನಿಸಿ ಮತ್ತು ತಪ್ಪುಗಳನ್ನು ತಿದ್ದಿ: ಗಂಡು ಮಕ್ಕಳ ಸ್ನೇಹಿತರು, ಅಭ್ಯಾಸಗಳು, ಹವ್ಯಾಸಗಳು, ನಡತೆ, ಚಲನ ವಲನವನ್ನು ಗಮನಿಸಿ. ಒಂದು ಕಣ್ಣಿಟ್ಟಿರಿ. ಅವರ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು, ಸ್ನೇಹಿತರ ಬಗ್ಗೆ ಗಮನವಿರಲಿ. ಅತಿಯಾಗಿ ಕಾವಲುಕಾಯಬೇಡಿ, ನಿಂದಿಸಲೂ ಬೇಡಿ. ಅಂತರವನ್ನು ಕಾಯ್ದುಕೊಂಡು ಮಕ್ಕಳಿಗೂ ಕಿರಿಕಿರಿ ಮಾಡದೆ, ಮುಜುಗರ ಆಗದಂತೆ ಗಮನಿಸಿ. ಸಮಸ್ಯೆ ಏನಾದರು ಕಂಡು ಬಂದರೆ, ಸರಿಯಾದ ಸಮಯದಲ್ಲಿ, ಸಂಯಮದಿಂದ ನೇರವಾಗಿ ಮಾತನಾಡಿ ತಿದ್ದಿರಿ. ಕೆಟ್ಟ ಚಟಗಳು ಶುರುವಾದಲ್ಲಿ, ಸಹವಾಸಗಳು ಸರಿಯಿಲ್ಲವೆಂದೆನಿಸಿದರೆ, ನಡೆನುಡಿ ಅಸಭ್ಯವಾಗಿದೆಯೆಂದೆನಿಸಿದರೆ ದಯವಿಟ್ಚು ನಿಲ೯ಕ್ಷ್ಯ ಮಾಡಬೇಡಿ. ತಕ್ಷಣವೆ ಎಚ್ಚೆತ್ತುಕೊಳ್ಳಿ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬಂತೆ ಸಮಸ್ಯೆಗಳು ಬಲಿತರೆ ನಿಯಂತ್ರಣಕ್ಕೆ ಸಿಗುವುದಿಲ್ಲ. ನಮ್ಮ ಮಗನೆಂದು ಕುರುಡು ಪ್ರೀತಿಯಿಂದ ತಪ್ಪು ದಾರಿಯಲ್ಲಿ ಮುಂದುವರೆಯಲು ಬಿಡಬೇಡಿ. ತಪ್ಪು ಮಾಡಿದರೆ, ಮುಚ್ಚಿಹಾಕಲು ಪ್ರಯತ್ನಿಸಬೇಡಿ. ಅಗತ್ಯಬಿದ್ದರೆ, ಆಪ್ತಸಮಾಲೋಚಕರನ್ನು ಸಂಪಕಿ೯ಸಿ, ಮಕ್ಕಳನ್ನು ತಿದ್ದಲು , ಮಾಗ೯ದಶ೯ನ ಪಡೆಯಲು ಮರೆಯಬೇಡಿ. ಮಕ್ಕಳನ್ನು ಬೆಳೆಸುವಾಗ ಗಮನಕ್ಕೆ ಬರುವ ಕೆಲ ನಿರ್ದಿಷ್ಟ ವರ್ತನೆಗಳನ್ನು ಗಂಭೀರವಾಗಿ ತೆಗೆದುಕೊಂಡರೆ ಅಂಥವರು ಸಮಾಜ ಘಾತುಕ ವ್ಯಕ್ತಿಯಾಗದಂತೆ ತಡೆಯಬಹುದು.

ನೀವು ಈ ಪ್ರಶ್ನೆ ಕೇಳುವ ಮೂಲಕ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡಿದ್ದೀರಿ. ನಿಮ್ಮ ಮಗನ ಭವಿಷ್ಯ ಚೆನ್ನಾಗಿರಲಿ ಎಂದು ಹಾರೈಸುತ್ತೇನೆ.

ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು
ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು

ಭವ್ಯಾ ವಿಶ್ವನಾಥ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.