logo
ಕನ್ನಡ ಸುದ್ದಿ  /  ಜೀವನಶೈಲಿ  /  ಸಮಯದ ಮಹತ್ವ ಅರಿತವ ಸದಾ ಸುಖಿ: ಸಂಪತ್ತು ಸೃಷ್ಟಿಯಲ್ಲಿ ರಿಸ್ಕ್ ಮತ್ತು ರಿಟರ್ನ್‌ನಷ್ಟೇ ವೇಳೆಯೂ ಮುಖ್ಯ -ರಂಗ ನೋಟ ಅಂಕಣ

ಸಮಯದ ಮಹತ್ವ ಅರಿತವ ಸದಾ ಸುಖಿ: ಸಂಪತ್ತು ಸೃಷ್ಟಿಯಲ್ಲಿ ರಿಸ್ಕ್ ಮತ್ತು ರಿಟರ್ನ್‌ನಷ್ಟೇ ವೇಳೆಯೂ ಮುಖ್ಯ -ರಂಗ ನೋಟ ಅಂಕಣ

D M Ghanashyam HT Kannada

Jul 13, 2024 05:13 PM IST

google News

ಸಂಪತ್ತು ಸೃಷ್ಟಿಯಲ್ಲಿ ರಿಸ್ಕ್ ಮತ್ತು ರಿಟರ್ನ್‌ನಷ್ಟೇ ವೇಳೆಯೂ ಮುಖ್ಯ. ರಂಗಸ್ವಾಮಿ ಮೂಕನಹಳ್ಳಿ ಬರಹ.

    • ರಂಗಸ್ವಾಮಿ ಮೂಕನಹಳ್ಳಿ ಬರಹ: ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ಮಾಡುವವರು ಔಟ್ ಆಗುವ ಭೀತಿಯಲ್ಲಿಯೇ ರನ್ ಗಳಿಸಬೇಕಾಗುತ್ತದೆ. ಹೆಚ್ಚು ರನ್ ಗಳಿಸುವಾಗ ಅಗ್ರೆಸಿವ್ ಆಗಿ ಆಡುತ್ತಾರೆ. ಕ್ರೀಸ್‌ನಲ್ಲಿರುವಷ್ಟು ಸಮಯ ರನ್ ಗಳಿಸಲು ಸಾಧ್ಯ. ನಮ್ಮ ಜೀವನದಲ್ಲಿಯೂ ಅಷ್ಟೇ ಅಲ್ಲವೇ? ಸಂಪತ್ತು ಸೃಷ್ಟಿ ಮತ್ತು ಸಮಯದ ನಡುವಣ ನಂಟಿನ ಬಗ್ಗೆ ಇಲ್ಲಿದೆ ವಿವರ.
ಸಂಪತ್ತು ಸೃಷ್ಟಿಯಲ್ಲಿ ರಿಸ್ಕ್ ಮತ್ತು ರಿಟರ್ನ್‌ನಷ್ಟೇ ವೇಳೆಯೂ ಮುಖ್ಯ. ರಂಗಸ್ವಾಮಿ ಮೂಕನಹಳ್ಳಿ ಬರಹ.
ಸಂಪತ್ತು ಸೃಷ್ಟಿಯಲ್ಲಿ ರಿಸ್ಕ್ ಮತ್ತು ರಿಟರ್ನ್‌ನಷ್ಟೇ ವೇಳೆಯೂ ಮುಖ್ಯ. ರಂಗಸ್ವಾಮಿ ಮೂಕನಹಳ್ಳಿ ಬರಹ.

ನೀವು ಕ್ರಿಕೆಟ್ ಆಟವನ್ನು ನೋಡಿರುತ್ತೀರಿ, ಬ್ಯಾಟ್ಸಮನ್ ಕ್ರಿಸ್‌ನಿಂದ ಹೊರಬಂದು ಬ್ಯಾಟ್ ಬೀಸುತ್ತಾನೆ. ಫೋರ್ ಅಥವಾ ಸಿಕ್ಸರ್ ಹೊಡೆದಾಗ ನೀವು ಗಮನಿಸಿ ನೋಡಿ, ಮುಕ್ಕಾಲು ಪಾಲು ತಾವು ನಿಂತ ಜಾಗದಿಂದ ಹೊರಬಂದು ಬ್ಯಾಟ್ ಬೀಸುವುದು ನಿಮಗೆ ತಿಳಿಯುತ್ತದೆ. ಎಲ್ಲೋ ಅಲ್ಲೊಮ್ಮೆ ಇಲ್ಲೊಮ್ಮೆ ನಿಂತ ಜಾಗದಿಂದ ಕದಲದೆ ಸಿಕ್ಸರ್ ಹೊಡೆಯಬಹುದು. ಆದರೆ ಬಹುತೇಕ ಬಾರಿ ಬ್ಯಾಟ್ಸಮನ್ ಆದವನು ಬಾಲಿನ ವೇಗ, ತಿರುವು ಇತ್ಯಾದಿಗಳನ್ನು ಅಂದಾಜಿಸಿ ನಿಂತ ಜಾಗದಿಂದ ಹೊರಬಂದು ಹೊಡೆಯಬೇಕಾಗುತ್ತದೆ. ಹೀಗೆ ಮಾಡುವ ಸಮಯದಲ್ಲಿ ರಿಸ್ಕ್, ಅಂದರೆ ಔಟ್ ಆಗುವ ಅಪಾಯ ಇದ್ದೆ ಇರುತ್ತದೆ. ಶೀಘ್ರಗತಿಯಲ್ಲಿ ರನ್ ಹೊಡೆಯಲು, ಜನಮಾನಸದಲ್ಲಿ ಶಾಶ್ವತವಾಗಿ ಉಳಿಯಲು ಅಷ್ಟರಮಟ್ಟಿನ ರಿಸ್ಕ್ ತೆಗೆದುಕೊಳ್ಳದೆ ಬೇರೆ ದಾರಿಯಿಲ್ಲ.

ಮೇಲಿನ ಉದಾಹರಣೆಯನ್ನು ನೀವು ಬದುಕಿನ ಎಲ್ಲಾ ಮಜಲುಗಳಿಗೂ ಅನ್ವಯಿಸಿಕೊಳ್ಳಬಹುದು. ವೇತನಕ್ಕೆ ದುಡಿಯುತ್ತ ಜೀವನ ಸವೆಸುವುದು ಒಂದು ಕಾಲದಲ್ಲಿ ಸೇಫ್ ಆಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಇವತ್ತು ಇದ್ದ ಕೆಲಸ ನಾಳೆಗೂ ಇರುತ್ತದೆ ಎನ್ನುವ ಗ್ಯಾರಂಟಿ ಕೂಡ ಇಲ್ಲ. ಹೀಗಾಗಿ ನಾವೆಲ್ಲರೂ ಒಂದಷ್ಟು ರಿಸ್ಕ್ ತೆಗೆದುಕೊಳ್ಳಬೇಕು. ಬೇರೆ ದಾರಿಯಿಲ್ಲ. ಸರಿ ರಿಸ್ಕ್ ತೆಗೆದುಕೊಳ್ಳಬೇಕು ಎನ್ನುವ ಒಂದೇ ಕಾರಣಕ್ಕಾಗಿ ನಾವು ರಿಸ್ಕ್ ತೆಗೆದುಕೊಳ್ಳಲು ಕೂಡ ಸಾಧ್ಯವಿಲ್ಲ. ಅಪಾಯದ ಅಂದಾಜಿನೊಂದಿಗೆ ಅದು ಮಾಡಬಹುದಾದ ಡ್ಯಾಮೇಜಿನ ಅಂದಾಜು ಸಹ ನಮಗೆ ಇರಬೇಕು. ಎಲ್ಲಿಯವರೆಗೆ ನಾವು ಆ ಅಪಾಯವನ್ನು ತಡೆದುಕೊಳ್ಳಬಲ್ಲೆವು ಎನ್ನುವುದು ಕೂಡ ತಿಳಿದುಕೊಂಡಿರಬೇಕು.

ಗಮನಿಸಿ ನೋಡಿ ರಿಲೈಯನ್ಸ್ ಗ್ರೂಪ್ನವರು ಎಲ್ಲೆಡೆ ಪೆಟ್ರೋಲ್ ಬಂಕ್ ತೆಗೆಯಬೇಕು ಎಂದು ಶುರು ಮಾಡಿದರು. ಆದರೆ ಅದು ಯಶಸ್ವಿಯಾಗಲಿಲ್ಲ. ಕೋಟ್ಯಂತರ ರೂಪಾಯಿ ನಷ್ಟವನ್ನು ಅನುಭವಿಸಿದರು. ಆದರೆ ಆ ನಷ್ಟವನ್ನು ತಡೆದುಕೊಳ್ಳುವ ಶಕ್ತಿ ಸಂಸ್ಥೆಗಿತ್ತು. ಹೀಗಾಗಿ ನಡೆಯುತ್ತಿದೆ. ಇನ್ನೊಂದು ಉದಾಹರಣೆ ನೋಡೋಣ. ಫೋರ್ಡ್ ಸಂಸ್ಥೆ ಅಮೇರಿಕಾ ದೇಶದ ಅಗ್ರಗಣ್ಯ ಕಾರು ತಯಾರಿಕಾ ಸಂಸ್ಥೆ. ಒಂದಲ್ಲ ಎರಡಲ್ಲ ಹತ್ತಿರತ್ತಿರ 130 ದೇಶದಲ್ಲಿ ತನ್ನ ಘಟಕಗಳನ್ನು ತೆಗೆದು ಅಲ್ಲೆಲ್ಲಾ ಯಶಸ್ವಿಯಾದ ಸಂಸ್ಥೆ. ಭಾರತದಲ್ಲೂ ಫೋರ್ಡ್ ದಶಕಗಳ ಕಾಲ ತನ್ನ ಘಟಕವನ್ನು ಹೊಂದಿತ್ತು. ತೀರಾ ಇತ್ತೀಚಿಗೆ ತನ್ನ ಘಟಕವನ್ನು ಮುಚ್ಚಿಬಿಟ್ಟಿತು. ಈ ಮಧ್ಯೆ ಅದು ಭಾರತದ ಮಾರುಕಟ್ಟೆಯಲ್ಲಿ ಸಾವಿರಾರು ಕೋಟಿ ರೂಪಾಯಿಯನ್ನು ಸುರಿದಿತ್ತು. ಫೋರ್ಡ್‌ನಂತಹ ದೊಡ್ಡ ಸಂಸ್ಥೆ ಭಾರತದ ಮಾರುಕಟ್ಟೆಯನ್ನು ಅರಿಯುವಲ್ಲಿ ಮಾಡಿಕೊಂಡ ಎಡವಟ್ಟು ಅದರ ಅವನತಿಗೆ ಕಾರಣವಾಯ್ತು. ಗಮನಿಸಿ ನೋಡಿ ಭಾರತದ ಕಾರು ಮಾರುಕಟ್ಟೆ ಉಚ್ರಾಯ ಸ್ಥಿತಿಯಲ್ಲಿದ್ದಾಗ ಕೂಡ ಫೋರ್ಡ್ ತನ್ನ ಪದಾರ್ಥವನ್ನು ಮಾರುವಲ್ಲಿ ವಿಫಲವಾಯ್ತು. ಕೊನೆಗೆ ತನ್ನ ಘಟಕವನ್ನು ಮುಚ್ಚಿ ಭಾರತದಿಂದ ಹೊರಹೋಗಬೇಕಾಯ್ತು.

ಅಯ್ಯೋ ಅದು ನನ್ನ ಕಾರ್ಯಕ್ಷೇತ್ರವಲ್ಲ ಎಂಬ ನಿರ್ಲಕ್ಷ್ಯ ಸಲ್ಲದು

ಮೇಲಿನ ಉದಾಹರಣೆ ಹೇಳಿದ ಅರ್ಥ ಸರಳ. ಕೇವಲ ಹಣ ಹೂಡಿಕೆ ಮಾಡುವುದರಿಂದ, ಕೇವಲ ಕಷ್ಟಪಡುವುದರಿಂದ ಯಶಸ್ಸು, ಶ್ರೀಮಂತಿಕೆ ಸಿಗುವುದಿಲ್ಲ. ಅದನ್ನು ಗಳಿಸಲು ಪೂರ್ಣ ಪ್ರಮಾಣದ ಅರಿವಿರಬೇಕು. ಅಂದರೆ ಸುತ್ತಮುತ್ತಲಿನ ಎಲ್ಲಾ ಆಗುಹೋಗುಗಳ ಮೇಲೆ ಸದಾ ಒಂದು ಕಣ್ಣಿರಬೇಕು. ಅಯ್ಯೋ ಅದು ನನ್ನ ಕಾರ್ಯಕ್ಷೇತ್ರವಲ್ಲ ಎಂದು ನಿರ್ಲಕ್ಷ ಮಾಡುವಂತಿಲ್ಲ.

ಹೂಡಿಕೆ ಕ್ಷೇತ್ರದಲ್ಲಿ ಒಂದು ಜನಜನಿತ ಮಾತಿದೆ. ಅಪಾಯ ಮತ್ತು ಲಾಭ ಜೊತೆಯಲ್ಲಿ ಹೆಜ್ಜೆ ಹಾಕುತ್ತವೆ ಎನ್ನುವುದು ಆ ಮಾತು. ಇದನ್ನು ಸ್ವಲ್ಪ ಕೊಲಂಕಶವಾಗಿ ವಿವೇಚಿಸಬೇಕು. ಮೊದಲೇ ಹೇಳಿದಂತೆ ಯೋಚಿಸದೆ, ಲೆಕ್ಕಾಚಾರ ಮಾಡದೆ ಅಪಾಯವನ್ನು ಮೇಲೆದುಕೊಳ್ಳುವುದು ಮೂರ್ಖತನವಾದೀತು. ಆದರೆ ಅಪಾಯವನ್ನು ತೆಗೆದುಕೊಳ್ಳದೆ ನಮಗೆ ಬೇಕಾದ ಫಲಿತಾಂಶವನ್ನು ಪಡೆಯಲು ಸಾಧ್ಯವಿಲ್ಲ ಎನ್ನುವುದು ಕೂಡ ಸತ್ಯ.

ನಮ್ಮಲ್ಲಿ ಅಂದರೆ ಹಿಂದೂ ಧರ್ಮದಲ್ಲಿ ಸಾವಿರಾರು ದೇವತೆಗಳು ಇದ್ದಾರೆ. ಆದರೆ ಮುಖ್ಯವಾಗಿ ನಾವು ಹೇಳುವುದು ತ್ರಿಮೂರ್ತಿಗಳ ಬಗ್ಗೆ ಮಾತ್ರ. ಬ್ರಹ್ಮ , ವಿಷ್ಣು ಮತ್ತು ಮಹೇಶ್ವರ. ಇವರನ್ನು ಸೃಷ್ಟಿ-ಸ್ಥಿತಿ-ಲಯ ಕ್ಕೆ ಕಾರಣರು ಎಂದು ನಂಬಲಾಗಿದೆ. ಅಂತೆಯೇ ಲಕ್ಷ್ಮಿ, ಪಾರ್ವತಿ, ಸರಸ್ವತಿಯರನ್ನು ಹಣ-ಶಕ್ತಿ -ಬುದ್ದಿಗೆ ಅಧಿ ದೇವತೆಗಳು ಎಂದು ನಾವು ನಂಬುತ್ತೇವೆ. ಇನ್ನು ಶ್ರೀಮಂತಿಕೆಯ ದಾರಿಯಲ್ಲಿ ಕೂಡ ಒಂದಲ್ಲ ಹತ್ತಾರು ಕಾರಣಗಳು, ಸವಾಲುಗಳು ಎದುರಾಗುತ್ತವೆ. ಇಲ್ಲಿ ಕೂಡ ನಾವು ಮುಖ್ಯವಾಗಿ ಮೂರು ಅಂಶಗಳನ್ನು ಮಾತ್ರ ಹೇಳುತ್ತೇವೆ. ಅದೆ ರಿಸ್ಕ್ -ರಿಟರ್ನ್ -ಟೈಮ್.

ಬದುಕಿನಲ್ಲಿ ಸಮಯಕ್ಕಿರುವ ಮಹತ್ವ ಇನ್ಯಾವುದಕ್ಕೂ ಇಲ್ಲ

ಬದುಕಿನಲ್ಲಿ ಟೈಮ್‌ಗೆ ಅಂದರೆ ವೇಳೆಗೆ ಇರುವ ಬೆಲೆ ಇನ್ಯಾವುದಕ್ಕೂ ಇಲ್ಲ. ಗಮನಿಸಿ ನೋಡಿ ಕಳೆದುಹೋದ ಸಂಪತ್ತು, ಘನತೆ ಇತ್ಯಾದಿಗಳನ್ನು ಮರಳಿ ಪಡೆದುಕೊಳ್ಳುವ ಅವಕಾಶವಿದೆ. ಆದರೆ ವೇಳೆಯನ್ನು ಒಮ್ಮೆ ಕಳೆದುಕೊಂಡರೆ ಎಂದಿಗೂ ಮರಳಿ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಜಗತ್ತಿನಲ್ಲಿ ಅತಿಹೆಚ್ಚು ಬೆಲೆಬಾಳುವ ಕರೆನ್ಸಿ ಯಾವುದು ಎಂದರೆ ಅದು ಡಾಲರ್, ಯೆನ್, ಯುರೋ ಅಥವಾ ಪೌಂಡ್ ಅಲ್ಲವೇ ಅಲ್ಲ; ಅದು ನಮ್ಮ ಸಮಯ. ನಮ್ಮ ವೇಳೆಯನ್ನು ನಮ್ಮ ಇಷ್ಟಕ್ಕೆ ತಕ್ಕಂತೆ ಕಳೆಯುವ ಶಕ್ತಿ ಪಡೆದುಕೊಂಡಿದ್ದೇವೆ ಎಂದರೆ ಅದು ನಿಜವಾದ ಆರ್ಥಿಕ ಸ್ವಾತಂತ್ರ್ಯ.

ಕೋಟ್ಯಂತರ ರೂಪಾಯಿ ಹಣವಿದ್ದು ಕೂಡ ಅದನ್ನು ಉಳಿಸಿಕೊಳ್ಳಲು, ಬೆಳಸಿಕೊಳ್ಳಲು ಹೆಣಗಾಟ ನಡೆಯುತ್ತಿದೆ ಎಂದರೆ ಇನ್ನೂ ಆರ್ಥಿಕ ಸ್ವಾತಂತ್ರ್ಯ್ರ ಸಿಕ್ಕಿಲ್ಲ ಎಂದು ಅರ್ಥ. ವೇಳೆಯ ಮೇಲೆ ಅಧಿಪತ್ಯ ಸಾಧಿಸಿದವನು ಮಾತ್ರ ಗೆಲುವನ್ನು ಸಾಧಿಸಲು ಸಾಧ್ಯ. ಯಾವುದೇ ಕೆಲಸವಿರಲಿ ಸರಿಯಾದ ಸಮಯಕ್ಕೆ ಮಾಡುವುದು ಬಹಳ ಮುಖ್ಯ. ಸಮಯಕ್ಕೆ ಮೊದಲು ಅಥವಾ ಬಹಳ ತಡವಾಗಿ ಕೆಲಸ ಮಾಡಿದರೆ ಪ್ರಯೋಜನವಿಲ್ಲ. ಸರಿಯಾದ ಸಮಯಕ್ಕೆ ಮಾಡುವ ವಿವೇಚನಾಯುಕ್ತ ಕೆಲಸ ಮಾತ್ರ ನಮ್ಮನ್ನು ಉನ್ನತಿಯ ಕಡೆಗೆ ಕರೆದೊಯ್ಯುತ್ತದೆ. ವೇಳೆಯನ್ನು ಸರಿಯಾಗಿ ಉಪಯೋಗಿಸಿಕೊಳ್ಳಲು ಕಲಿತವನು ಮಾತ್ರ ಬದುಕನ್ನು ಸುಂದರವಾಗಿ ಕಟ್ಟಿಕೊಳ್ಳಲು ಸಾಧ್ಯ. ರಿಸ್ಕ್ , ರಿಟರ್ನ್ ಇವುಗಳ ನಿರ್ಧಾರ ಮಾಡುವುದು ವೇಳೆ. ಬದುಕಿನಲ್ಲಿ ಎಲ್ಲವೂ ಮುಖ್ಯ. ವೇಳೆ ಎನ್ನುವುದು ಒಂದು ಗ್ರಾಮ್ ಹೆಚ್ಚು ಮುಖ್ಯ.

ಮೊಬೈಲ್ ಗೀಳು ಒಳ್ಳೆಯದಲ್ಲ: ರಂಗ ನೋಟ ಅಂಕಣ

ರಂಗಸ್ವಾಮಿ ಮೂಕನಹಳ್ಳಿ ಪರಿಚಯ

ಆಪ್ತರ ವಲಯದಲ್ಲಿ, ವಿದ್ಯಾರ್ಥಿಗಳಲ್ಲಿ 'ರಂಗಣ್ಣ' ಎಂದೇ ಖ್ಯಾತರಾದವರು ಹಣಕಾಸು ಸಮಾಲೋಚಕ ಮತ್ತು ಆರ್ಥಿಕ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸುವ ಬರಹಗಾರ ಶ್ರೀಯುತ ರಂಗಸ್ವಾಮಿ ಮೂಕನಹಳ್ಳಿ. ಬೆಂಗಳೂರಿನ ಪೀಣ್ಯದಲ್ಲಿ ಬಾಲ್ಯ ಕಳೆದವರು ರಂಗಸ್ವಾಮಿ. ತುಮಕೂರು ಜಿಲ್ಲೆ, ಶಿರಾ ತಾಲ್ಲೂಕು ಮೂಕನಹಳ್ಳಿ ಇವರ ಮೂಲ ಗ್ರಾಮ. ಹೀಗಾಗಿ ತಮ್ಮ ಹೆಸರಿನೊಂದಿಗೆ ಮೂಕನಹಳ್ಳಿ ಹೆಸರನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಶ್ರೀಮಂತಿಕೆ ಅಥವಾ ಪ್ರಭಾವದ ಯಾವುದೇ ಹಿನ್ನೆಲೆ ಇಲ್ಲದೆ ಬಹುಕಷ್ಟದಿಂದ ಜೀವನದಲ್ಲಿ ಮೇಲೆ ಬಂದವರು ರಂಗಸ್ವಾಮಿ ಮೂಕನಹಳ್ಳಿ. ಬ್ರಿಟನ್‌ನಲ್ಲಿ 'ಪ್ರಮಾಣೀಕೃತ ಆಂತರಿಕ ಲೆಕ್ಕಪರಿಶೋಧಕ' (Certified Internal Auditor) ಪ್ರಮಾಣಪತ್ರ ಪಡೆದಿದ್ದಾರೆ. ಕನ್ನಡದೊಂದಿಗೆ ಸ್ಪೇನಿಶ್, ಇಂಗ್ಲಿಷ್, ಹಿಂದಿ, ಪೂರ್ಚುಗೀಸ್ ಮತ್ತು ಇಟ್ಯಾಲಿಯನ್ ಭಾಷೆಗಳಲ್ಲಿ ಸಂವಹನ ನಡೆಸಬಲ್ಲರು. ಪ್ರಸ್ತುತ ಮೈಸೂರಿನಲ್ಲಿ ವಾಸವಿದ್ದಾರೆ. ಕನ್ನಡದಲ್ಲಿ 26 ಪುಸ್ತಕಗಳನ್ನು ಬರೆದಿದ್ದಾರೆ. ಪ್ರತಿದಿನ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಕಟಿಸುವ 'ದಿನಕ್ಕೊಂದು ಶುಭನುಡಿ' ವಿಡಿಯೊ ಸರಣಿ ಜನಪ್ರಿಯ. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ 'ರಂಗ ನೋಟ' ಪಾಕ್ಷಿಕ ಅಂಕಣ ಬರೆಯುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ