logo
ಕನ್ನಡ ಸುದ್ದಿ  /  ಜೀವನಶೈಲಿ  /  ಹುಡುಗಿಯರೇಕೆ ರಗಡ್ ಸ್ವಭಾವದ ಹುಡುಗರಿಗೆ ಬೇಗ ಒಲಿಯುತ್ತಾರೆ: ಹುಡುಗೀರ ಮನಸ್ಸು ಹೇಗೆ ವರ್ಕ್ ಆಗುತ್ತೆ? -ಕಾಳಜಿ ಅಂಕಣ

ಹುಡುಗಿಯರೇಕೆ ರಗಡ್ ಸ್ವಭಾವದ ಹುಡುಗರಿಗೆ ಬೇಗ ಒಲಿಯುತ್ತಾರೆ: ಹುಡುಗೀರ ಮನಸ್ಸು ಹೇಗೆ ವರ್ಕ್ ಆಗುತ್ತೆ? -ಕಾಳಜಿ ಅಂಕಣ

D M Ghanashyam HT Kannada

Jul 13, 2024 04:05 PM IST

google News

ಹರೆಯದ ಹುಡುಗಿಯರ ಮನಸ್ಸು ಹೇಗೆ ವರ್ತಿಸುತ್ತೆ? ಇಲ್ಲಿದೆ ಸಮಗ್ರ ವಿವರ

    • ಡಾ ರೂಪಾ ರಾವ್ ಬರಹ: ಈ ಬರಹ ಓದುತ್ತಿರುವ ನೀವು ಹೆಂಗಸರಾಗಿದ್ದರೆ, ನೀವು ಪ್ರೀತಿ ಒಪ್ಪಿಕೊಂಡ ದಿನದ ಬಗ್ಗೆ ಒಮ್ಮೆ ನೆನಪಿಸಿಕೊಳ್ಳಿ. ನಿಮ್ಮ ಮನೆಯಲ್ಲಿ ಹರೆಯದ ಹೆಣ್ಣುಮಕ್ಕಳಿದ್ದರೆ ಅವರಿಂದ ಇದನ್ನು ಮರೆಯದೇ ಓದಿಸಿ, ಅವರ ಪ್ರಶ್ನೆಗಳಿಗೆ ತಾಳ್ಮೆಯಿಂದ ಉತ್ತರಿಸಿ. ಮಕ್ಕಳು ಅಯೋಗ್ಯರ ಕೈಗೆ ಸಿಕ್ಕಿ ನರಳುವುದನ್ನು ತಪ್ಪಿಸಿ.
ಹರೆಯದ ಹುಡುಗಿಯರ ಮನಸ್ಸು ಹೇಗೆ ವರ್ತಿಸುತ್ತೆ? ಇಲ್ಲಿದೆ ಸಮಗ್ರ ವಿವರ
ಹರೆಯದ ಹುಡುಗಿಯರ ಮನಸ್ಸು ಹೇಗೆ ವರ್ತಿಸುತ್ತೆ? ಇಲ್ಲಿದೆ ಸಮಗ್ರ ವಿವರ

ಪ್ರಶ್ನೆ: ಮೇಡಂ ನನಗೊಂದು ಪ್ರಶ್ನೆಯಿದೆ. ಹುಡುಗಿಯರು, ಹೆಂಗಸರು ರೌಡಿಗಳತ್ತ, ಪುಂಡರತ್ತ ಅಥವಾ ರಗಡ್ ಕರೆಯುವ ಒರಟು ಸ್ವಭಾವದವರತ್ತ ಏಕೆ ಬೇಗ ಆಕರ್ಷಿತರಾಗುತ್ತಾರೆ? ನಿಮ್ಮ ಅನುಭವದಲ್ಲಿ ನೀವು ನೋಡಿರಬಹುದು ಅಥವಾ ಕೇಳಿರಬಹುದು. ಹೂವಿನಂತಹ ಹುಡುಗಿ ಒರಟ, ರೌಡಿ, ಪುಂಡ ಪೋಕರಿ ಹುಡುಗರ ಸೆಳೆತಕ್ಕೆ ಸುಲಭವಾಗಿ ಒಳಪಡುತ್ತಾರೆ. ಪ್ರೀತಿಸಿದ ವರ್ಷಗಳ ನಂತರ ತಮ್ಮ ತಪ್ಪು ಅರ್ಥ ಮಾಡಿಕೊಳ್ಳುತ್ತಾರೆ. ಸಿನಿಮಾ ನಟರ ವಿಚಾರದಲ್ಲಿಯೂ ಅಷ್ಟೇ, ರೌಡಿಗಳಂಥ ಭಾಷೆ ಉಪಯೋಗಿಸುವವರಿಗೆ, ಹಾಗೆ ವರ್ತಿಸುವವರಿಗೇ ಹೆಚ್ಚಿನ ಮಹಿಳಾಭಿಮಾನಿಗಳು. ಅಂಥವರನ್ನು ಕದ್ದು ಮನಸಲ್ಲಿಯೇ ಪ್ರೀತಿಸುವವರಿಗೂ ಕಡಿಮೆ ಏನಿಲ್ಲ. ಏಕೆ ಹೀಗೆ? ಹುಡುಗಿಯರು ಅಷ್ಟೇಕೆ ಮಿತಿವಿಹೀನರಾಗುತ್ತಾರೆ? -ರಾಘವೇಂದ್ರ, ಕೆಂಗೇರಿ

ಉತ್ತರ: ನಿಜಕ್ಕೂ ಇದೊಂದು ಒಳ್ಳೆಯ ಪ್ರಶ್ನೆ. ಈ ಪ್ರಶ್ನೆಗೆ ಉತ್ತರವು ಮೇಲ್ನೋಟಕ್ಕೆ ಕಾಣಿಸುವಷ್ಟು ಸರಳವಾಗಿಲ್ಲ. ಅಥವಾ ಅಷ್ಟೆಲ್ಲ ಸುಲಭವಾಗಿ ಯಾರನ್ನೂ ಜಡ್ಜ್‌ ಮಾಡಲೂ ಸಾಧ್ಯವಿಲ್ಲ. ಹೆಣ್ಣುಮಕ್ಕಳ ಇಂಥ ವರ್ತನೆಗೆ ಕಾರಣಗಳು ಏನಿರಬಹುದು ಎಂದು ವಿವರಿಸುವ ಹಲವು ಥಿಯರಿಗಳಿವೆ. ಅದರಲ್ಲಿ ಮೊದಲನೆಯದು ನಿಮ್ಮೆಲ್ಲರಿಗೂ ಗೊತ್ತಿರುವುದೇ. ಅಂಥ ಕೆಲವು ಥಿಯರಿಗಳನ್ನು ಈ ಪ್ರಶ್ನೆಗೆ ಉತ್ತರವಾಗಿ ವಿವರಿಸಿದ್ದೇನೆ.

ಹುಡುಗಿಯರ ಮನಸ್ಸು ಪ್ರಭಾವಿಸುವ ವಿಕಾಸವಾದದ ಥಿಯರಿ

ನೀವು ನೋಡಿರಬಹುದು, ಪ್ರಾಣಿಗಳಲ್ಲಿ ಬಲಿಷ್ಠ ಗಂಡು ಪ್ರಾಣಿಯೇ ಹೆಣ್ಣನ್ನು ಜಯಿಸುವುದು (ಒಲಿಸುವುದು). ಹಾಗೆಯೇ ಶಿಲಾಯುಗದಲ್ಲಿ ಹೆಣ್ಣು ಬಲಿಷ್ಠ ಗಂಡಿನತ್ತ ವಾಲುತ್ತಿದ್ದ ಕಾರಣವೆಂದರೆ ತನ್ನ ಸಂತಾನಕ್ಕೆ, ತನಗೆ ರಕ್ಷಣೆ ಕೊಡಬಹುದು ಎಂಬ ನಿರೀಕ್ಷೆ. ಇದು ಬಹುತೇಕ ಎಲ್ಲರಿಗೂ ಗೊತ್ತಿರುವ ಥಿಯರಿ. ಎರಡನೆಯದು ರೌಡಿಯನ್ನು ಮದುವೆ ಆಗಿ ಅವನನ್ನು ಸರಿದಾರಿಗೆ ತರಬಹುದು ಏನೋ ಎಂಬ ತಾಯಿಯ ಮನಸು . ಇದೂ ಒಂದು ಥಿಯರಿ.

ಆದರೆ ನಾನು ಹೇಳಹೊರಟಿರುವುದು ಇನ್ನೊಂದು ಬಹಳ ಮುಖ್ಯವಾದ ಥಿಯರಿ. ನಾನೀಗ ಹೇಳ ಹೊರಟಿರುವುದು ಪ್ರತೀ ಹೆಣ್ಣಿಗೂ ಹಾಗು ಪೋಷಕರಿಗೂ, ಗಂಡಿಗೂ ಅವಶ್ಯವಾಗಿ ಗೊತ್ತಾಗಲೇಬೇಕಾದ್ದು. ಇದನ್ನು ಅರಿತರೆ ಹೆಣ್ಣುಮಕ್ಕಳು ಅನವಶ್ಯಕವಾಗಿ ಅಯೋಗ್ಯರ ಕಡೆಗೆ ಆಕರ್ಷಿತರಾಗುವುದರಿಂದ ತಪ್ಪಿಸಿಕೊಳ್ಳಬಹುದು.

ಒಂದು ಪ್ರಯೋಗದ ಮೂಲಕ ಇದರ ವಿವರಣೆ ಪ್ರಾರಂಭಿಸೋಣ. ಅದೊಂದು ವಿಶ್ವವಿದ್ಯಾನಿಲಯದ ಪ್ರಯೋಗಾಲಯ. ಅಲ್ಲಿ ಸೂಸಾನ್ ಎಂಬ 21 ವರ್ಷದ ತರುಣಿಗೆ ಒಂದು ಪ್ರಯೋಗದ ಭಾಗವಾಗಲು ಹೇಳಿದ್ದರು. ಅದು ಎರಡು ಹಂತಗಳ ಪ್ರಯೋಗ. ಪ್ರಯೋಗ ಅಂದರೆ ಮತ್ತೇನಲ್ಲ. ಅವಳು ಎರಡು ಜೋಡಿ ಅವಳಿ-ಜವಳಿ ಗಂಡುಗಳೊಂದಿಗೆ ಮಾತನಾಡಬೇಕು. ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಅವರು ಈಕೆಯನ್ನು ತಮ್ಮೊಡನೆ ಡೇಟಿಂಗ್‌ಗೆ ಕರೆಯಬಹುದು. ಅವಳು ಅವರೊಡನೆ ಡೇಟಿಂಗ್‌ಗೆ ಏಕೆ ಹೋಗಬಹುದು ಎಂಬುದಕ್ಕೆ ಕಾರಣಗಳನ್ನು ವಿವರಿಸಬಹುದು. ಇದಕ್ಕೆ ಬದಲಾಗಿ ಸೂಸಾನ್ ಅವರಲ್ಲಿ ತಾನು ಗಮನಿಸಿದ ಅಂಶಗಳನ್ನು ಪ್ರಯೋಗ ಮಾಡಿದವರೊಡನೆ ಹೇಳಬೇಕು.

ಆ ಎರಡೂ ಜೋಡಿ ಅವಳಿ-ಜವಳಿ (4 ಜನ) A1, A2 ಹಾಗೂ B1, B2 ಅಂತಿಟ್ಟುಕೊಳ್ಳೊಣ. ಎರಡು ವಾರಗಳ ಹಿಂದೆ A1 ಮತ್ತು B2 ರೊಂದಿಗೆ ಆಕೆ ಮಾತಾಡಿ ಮೊದಲ ಹಂತದ ಪ್ರಯೋಗ ಮುಗಿಸಿದ್ದಳು. ಈಗ ಎರಡನೇಯ ಹಂತ ಆರಂಭವಾಯಿತು. ಮೊದಲು B1 ಜೊತೆಗೆ ವಿಡಿಯೊ ಕಾನ್‌ಫರೆನ್ಸ್ ಮೂಲಕ ಮಾತು ಶುರುವಾಯಿತು. ಸೂಸಾನ್ ಮತ್ತು B1 ಅವರಿಬ್ಬರೇ ಅಲ್ಲಿದ್ದರು. B1 ತನ್ನ ಪರಿಚಯ ಮಾಡಿಕೊಂಡ. ಅವನು ಕೊಂಚ ನಾಚಿಕೆ ಸ್ವಭಾವದವನು ಹಾಗೂ ಪ್ರಾಮಾಣಿಕ. ಒಟ್ಟಿನಲ್ಲಿ ಒಂದು ಹುಡುಗಿಯ ಅಪ್ಪ-ಅಮ್ಮ ಸುಲಭವಾಗಿ ಒಪ್ಪಿಬಿಡುವ ಗುಣಗಳಿರುವವ. ಡೇಟಿಂಗ್‌ ವಿಚಾರದಲ್ಲಿ ಅಂತಹ ನುರಿತವನಲ್ಲ. ಒಂದೊಳ್ಳೆ ಕಮಿಟೆಡ್ ಸಂಬಂಧಕ್ಕಾಗಿ ಎದುರು ನೋಡುವವ. ಆದರೂ ನೀವು ಒಪ್ಪಿದರೆ ನಾವಿಬ್ಬರೂ ಒಳ್ಳೆಯ ಜೋಡಿ ಆಗಬಹುದು, ಎಂದೇ ಮಾತು ಶುರು ಮಾಡಿದ.

ಹೀಗೇ ಮಾತಾಡಿದ ಬಳಿಕ ಪ್ರಯೋಗಾಲಯದವನು ಸೂಸಾನ್‌ಗೆ ಕೇಳಲೆಂದು ಕೊಟ್ಟಿದ್ದ ಪ್ರಶ್ನೆಗಳನ್ನು ಆತ ಕೇಳಲು ಶುರು ಮಾಡಿದ. ಟಿಪಿಕಲ್ ಪ್ರಶ್ನೆಗಳು ಅವು.

ಸೂಸಾನ್‌ಗೆ ಏನಿಷ್ಟ? ಬಿಡುವಿನ ಸಮಯದಲ್ಲಿ ಅವಳು ಏನು ಮಾಡುತ್ತಾಳೆ? ಎಲ್ಲಾದರೂ ಯಾರೊಡನೆಯಾದರೂ ದೂರ ಪ್ರದೇಶಗಳಿಗೆ ಹೋಗಿದ್ದಾಳೆಯೇ? ತನಗೆ ಇಷ್ಟವಾದ ಗಂಡನ್ನು ಯಾವ ರೀತಿ ಸೆಳೆಯುತ್ತಾಳೆ? ಇತ್ಯಾದಿ ಪ್ರಶ್ನೆಗಳಿದ್ದವು. ಸೂಸಾನ್ ಆ ಎಲ್ಲಾ ಪ್ರಶ್ನೆಗಳಿಗೂ ಒಂದೆರೆಡು ವಾಕ್ಯದಲ್ಲಿ ಉತ್ತರಿಸಿದಳು. ಆದಷ್ಟೂ ಕಡಿಮೆ ಮಾತುಗಳಲ್ಲಿ ಮುಗಿಸಿದಳು. ತನ್ನ ಬಾಯ್‌ಫ್ರೆಂಡ್‌ನೊಂದಿಗೆ ಲಾಂಗ್‌ಟ್ರಿಪ್‌ಗೆ ಹೋಗಿ ಬಂದಿದ್ದನ್ನೂ ಹೇಳಿದಳು. ಹಾಗೆಯೇ ತನಗೆ ಬಾಯ್‌ಫ್ರೆಂಡ್ ಇರುವುದನ್ನೂ ಸಹ ಹೇಳಿದಳು.

ಅವರಿಬ್ಬರ ಮಾತು ಮುಗಿಯಿತು. ಸ್ವಲ್ಪಹೊತ್ತಿನ ನಂತರ ಸೂಸಾನ್ A2 ಹುಡುಗನ ಜೊತೆ ಮಾತನಾಡಬೇಕಿತ್ತು. A2 ಅತ್ತ ವಿಡಿಯೊ ಕಾನ್‌ಫರೆನ್ಸ್‌ಗೆ ಬಂದ. ಆತನೂ ನೋಡಲು ಚೆನ್ನಾಗಿದ್ದ. ಅವನೂ ಒಳ್ಳೆಯ ಕ್ಷೇತ್ರದಲ್ಲಿಯೇ ಕೆಲಸಮಾಡುವವ. ತಮಾಷೆಯಾಗಿ, ಪಟಪಟ ಮಾತನಾಡುವುದು ಅವನ ಗುಣ. ಖಡಕ್ ಹಾಗೂ ರಗಡ್ ಆಗಿ ಮಾತನಾಡುವ ವ್ಯಕ್ತಿ ಅವನು.

'ನೀನು ಯಾವಾಗಲೂ ಸರಿಯಾದ ಸಮಯಕ್ಕೆ ಬರುವವ, ಪ್ರಾಮಾಣಿಕ, ಕಮಿಟೆಡ್ ಹುಡುಗನನ್ನು ಬಯಸಿದಲ್ಲಿ ನನ್ನೊಡನೆ ಡೇಟ್ ಮಾಡಬೇಡ. ನಾನು ಯಾವುದೇ ರೀತಿಯ ಸ್ಪೆಷಲ್ ದಿನಗಳನ್ನು ನೆನಪಿಟ್ಟುಕೊಳ್ಳಲಾರೆ. ನಾನೊಂದು ತರಹ ಒರಟೊರಟು. ಮನಸಿಗೆ ಏನು ಬರುತ್ತೋ ಅದನ್ನೇ ಹೇಳಿ ಬಿಡುವೆ' ಎಂದೇ ಮಾತು ಶುರು ಮಾಡಿದ. ನಂತರ ಪ್ರಶ್ನೆಗಳನ್ನು ಕೇಳಲಾರಂಭಿಸಿದ.

ಇದೀಗ ಸುಸಾನ್‌ A2 ಕೇಳುವ ಪ್ರಶ್ನೆಗಳಿಗೆ ಬಹಳ ಆಸಕ್ತಿ ಇಂದ ಕಣ್ಣುಗಳನ್ನು ಹೊರಳಿಸುತ್ತಾ, ವಾರೆಗಣ್ಣಲ್ಲಿ ನೋಡುತ್ತಾ ಆಗಾಗ ಸಣ್ಣ ಮುಗುಳ್ನಗೆ ಬೀರುತ್ತಾ ಮುಂಗುರುಳನ್ನು ಬಾರಿಬಾರಿಗೆ ಸರಿಸುತ್ತಾ, ಸೀದಾ ಕೂತು ಅವನ ಗಮನವನ್ನು ತನ್ನೆಡೆಗೆ ಸೆಳೆಯಲು ಯತ್ನಿಸುತ್ತಾ ಉತ್ತರಿಸಲಾರಂಭಿಸಿದಳು. ಅವಳ ದೇಹ ಚಲನೆಯಿಂದಲೇ ಆಕೆ ಅವನೆಡೆಗೆ ಸಂಪೂರ್ಣ ಆಕರ್ಷಿತಳಾಗಿದ್ದು ತಿಳಿಯಿತು. ಅಷ್ಟೇ ಅಲ್ಲ ತಾನು ದೂರದ ಟ್ರಿಪ್‌ಗೆ ಹೋಗಿದ್ದು ಫ್ರೆಂಡ್ ಜೊತೆ ಎಂದು ಹೇಳಿದಳು. (ಹಿಂದಿನ ಮಾತುಕತೆಯಲ್ಲಿ ಬಾಯ್ ಫ್ರೆಂಡ್ ಅಂತ ಹೇಳಿದ್ದಳು) ಬೇಕಾಗಿಯೇ ತನಗೆ ಬಾಯ್ ಫ್ರೆಂಡ್ ಇರುವುದನ್ನು ಮರೆಮಾಚಿದಳು. ಅವನಿಗೆ ಗೊತ್ತಾಗಬಾರದು ಎಂಬಂತೆ.

ಯಾಕೆ ಏನಾಗಿ ಹೋಯಿತು ಸೂಸಾನ್‌ಗೆ? ಅವಳು ಚಂಚಲೆಯೇ? ತನ್ನ ಬಾಯ್‌ಫ್ರೆಂಡ್‌ಗೆ ಮೋಸ ಮಾಡಿದಳೇ?

ಸೂಸಾನ್ ಬದಲಾಗಿದ್ದು ಏಕೆ?

ಈ ಪ್ರಯೋಗದ ಮೊದಲ ಹಂತದಲ್ಲಿಯೂ ಹೀಗೆಯೇ ಇದೇ ರೀತಿಯ ಪ್ರಶ್ನೋತ್ತರ ಭೇಟಿ ನಡೆದಿತ್ತು. ಆಗ A1 ಬಹಳ ಸೌಮ್ಯ ಹಾಗೂ ಪ್ರಾಮಾಣಿಕ ಹುಡುಗ. B1 ತರಹ ಮತ್ತು B2 A2 ರೀತಿ ಒರಟು, ತಮಾಷೆ. ಆದರೆ ಆಗ ಸೂಸಾನ್ ಯಾವುದೇ ಭಾವಾದ್ವೇಗ ಅಥವಾ ದೇಹಚಲನೆ, ಮುಖಭಾವಗಳನ್ನು, ಆಕರ್ಷಣೆಯನ್ನು ಪ್ರದರ್ಶಿಸದೆ ಸೌಮ್ಯಳಾಗಿ ಉತ್ತರಿಸಿದ್ದಳು. ಆಗ ಇರದ ಚಲನೆ ಈಗೇಕಾಯಿತು?

ಈಗ ಆ ಪ್ರಯೋಗದ ದೊಡ್ಡ ಗುಟ್ಟುಗಳನ್ನು ತಿಳಿದುಕೊಳ್ಳೊಣ. ಆ ಅವಳಿ-ಜವಳಿಗಳು A1, A2, B1, B2 ಎಲ್ಲವೂ A ಮತ್ತು B ಎಂಬ ಇಬ್ಬರು ನಟರು. ಸೂಸಾನ್ ಈ ಎರಡೂ ವಾರಗಳಲ್ಲಿ 4 ಜನರೊಂದಿಗೆ ಮಾತನಾಡಿದೆ ಎಂದುಕೊಂಡಿದ್ದಳು. ಆದರೆ A1 ಮತ್ತು A2 ಇಬ್ಬರೂ A ಎಂಬ ನಟ ವಹಿಸಿದ ಪಾತ್ರ ಹಾಗೂ B1 ಮತ್ತು B2 ಇಬ್ಬರೂ B ಎಂಬ ನಟನ ಪಾತ್ರಗಳು. ನಾಚಿಕೆ ಇರುವವ ಹಾಗು ಒರಟ ಎರಡೂ ಪಾತ್ರಗಳನ್ನು ಒಬ್ಬನೇ ನಟಿಸಿದ್ದ.

ಎರಡು ವಾರಗಳ ಹಿಂದೆಯೂ ನಾಚಿಕೆ ಸ್ವಭಾವದ ಹುಡುಗ ಹಾಗೂ ಒರಟು ಹುಡುಗನ ಜತೆ ಮಾತಾಡಿದಾಗ ಸೂಸಾನ್‌ಗೆ ಯಾವ ರೀತಿಯ ಬದಲಾವಣೆ ಇರಲಿಲ್ಲ. ಆದರೆ ಈ ಸಲ ಒರಟು ಹುಡುಗನೊಂದಿಗೆ ಮಾತನಾಡಿದಾಗ ಆಕೆ ತನ್ನ ಬಾಯ್ ಫ್ರೆಂಡ್ ಬಗ್ಗೆ ಮುಚ್ಚಿಟ್ಟಿದ್ದಷ್ಟೇ ಅಲ್ಲ, ಆದಷ್ಟೂ ಆ ಒರಟು ಹುಡುಗನನ್ನು ಆಕರ್ಷಿಸಲು ಪ್ರಯತ್ನಿಸಿದಳು. ಯಾಕೆ ಹೀಗೆ?

ಹುಡುಗಿಯರ ಮನಸ್ಸಿನ ವರ್ತನೆ ಬದಲಾಗುವುದು ಏಕೆ? ಉತ್ತರ ಹೀಗಿದೆ

ಸೂಸಾನ್ ಈ ಬಾರಿ ತನ್ನ ಫಲೋತ್ಪತ್ತಿ ಅಂದರೆ ಅಂಡೋತ್ಪತ್ತಿಯ ಸಮಯದಲ್ಲಿದ್ದಳು. ಮಾಸಿಕ ಋತುಚಕ್ರದ ಮೊದಲ ದಿನದಿಂದ ಹದಿನಾಲ್ಕು ಅಥವಾ ಹದಿನೈದನೇ ದಿನವನ್ನು ಅಂಡೋತ್ಪತ್ತಿಯ ದಿನ ಎನ್ನುತ್ತಾರೆ, ಕೆಲವೊಮ್ಮೆ ಹೆಚ್ಚು ಕಡಿಮೆ ಆಗಬಹುದು ಈ ಸಮಯದಲ್ಲಿ ಅಂಡಾಣು ವೀರ್ಯದ ಸಮಾಗಮಕ್ಕೆ ಕಾಯುತ್ತಿರುತ್ತದೆ. ಆ ಸಮಯದಲ್ಲಿ ಅವಳ ಇಡೀ ದೇಹ ಗರ್ಭಧಾರಣೆಯನ್ನು ಎದುರು ನೋಡುತ್ತಾ ಸಜ್ಜಾಗಿರುತ್ತದೆ. ಬಹಳಷ್ಟು ಹಾರ್ಮೋನ್‌ಗಳು ಬದಲಾಗುತ್ತವೆ. ಈ ಒಂದು ಸಮಯದಲ್ಲಿ ಮಾತ್ರ ಹೆಣ್ಣು ಗರ್ಭಿಣಿಯಾಗಬಹುದು. ಇದನ್ನು ಅವಳ ಮಿದುಳೂ ಅರಿತಿರುತ್ತದೆಯೋ ಏನೋ ಎಂಬಂತೆ ಅವಳು ಸೂಕ್ತ ಗಂಡನ್ನು ಆಕರ್ಷಿಸಲು ಅವಳ ವರ್ತನೆಯನ್ನು ಪ್ರಚೋದಿಸುತ್ತದೆ. ಈ ಸಮಯದಲ್ಲಿ ಮಿದುಳಿಗೆ ಗೊತ್ತಿರುವುದೊಂದೇ ಬಲಿಷ್ಠ ಹಾಗು ರಗಡ್ ವ್ಯಕ್ತಿಯಿಂದ ಮಾತ್ರ ಈ ದೇಹಕ್ಕೆ ಉತ್ತಮ ಸಂತಾನವಾಗಲು ಹಾಗೂ ರಕ್ಷಣೆ ಸಿಗಲು ಸಾಧ್ಯ. ಬಹುತೇಕ ಹೆಣ್ಣುಗಳು ಇಂತಹ ರೌಡಿ, ರಗಡ್ ವ್ಯಕ್ತಿಗಳ ಬಲೆಗೆ ಬೀಳುವುದು ಇಂಥದ್ದೇ ಸಮಯದಲ್ಲಿ.

ಪ್ರಯೋಗಗಳು ಪುಷ್ಟೀಕರಿಸಿದ ಸತ್ಯವಿದು

ಈ ಮೇಲಿನ ಅಂಶವನ್ನು ಹಲವು ಪ್ರಯೋಗಗಳು ಪುಷ್ಟೀಕರಿಸುತ್ತವೆ. ಅಷ್ಟೆಲ್ಲಾ ಬೇಡ; ಹೆಂಗಸರು ನಿಮಗೆ ಯಾರ ಮೇಲಾದರೂ ತಾತ್ಕಾಲಿಕ ಕ್ರಶ್ ಅಥವಾ ಪ್ರೇಮ ಉಂಟಾಗಿದ್ದ ದಿನಗಳನ್ನು ನೆನಪಿಸಿಕೊಳ್ಳಿ. ಇದು ಆ ದಿನಗಳ ಸುತ್ತಲೇ ಇರುತ್ತದೆ. ಆದ್ದರಿಂದ ದಯವಿಟ್ಟು ನೆನಪಿಡಿ, ಈ ದಿನಗಳಲ್ಲಿ ಮೂಡುವ ಸೆಳೆತ ಆಕರ್ಷಣೆಗೆ ತಾತ್ಕಾಲಿಕ ಭಾವನೆಗಳು ಮಾತ್ರ ಕಾರಣ. ಅದರಲ್ಲಿ ಬುದ್ಧಿಯ ಕೆಲಸ ಹೆಚ್ಚು ಇರುವುದಿಲ್ಲ. ಹಾಗಾಗಿ ಯಾವುದೇ ಪ್ರೀತಿಪ್ರೇಮ ಕುರಿತ ನಿರ್ಧಾರವನ್ನು ಈ ಸಮಯದಲ್ಲಿ ತೆಗೆದುಕೊಳ್ಳುವುದು ದೀರ್ಘಾವಧಿ ಭವಿಷ್ಯದ ದೃಷ್ಟಿಯಿಂದ ಹಿತವಲ್ಲ. ಮನೆಯ ಹೆಣ್ಣು ಮಕ್ಕಳಿಗೆ, ಹುಡುಗಿಯರಿಗೆ ಈ ಬಗ್ಗೆ ಹೇಳಿ ಎಜುಕೇಟ್ ಮಾಡಿದರೆ ಅಯೋಗ್ಯರ ಕೈಗೆ ಸಿಕ್ಕಿ ನರಳುವುದು ತಪ್ಪುತ್ತದೆ.

ಕಾಳಜಿ ಅಂಕಣ. ಡಾ ರೂಪಾ ರಾವ್

ಮನಃಶಾಸ್ತ್ರಜ್ಞೆ ಡಾ ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ