ಕನ್ನಡ ಸುದ್ದಿ  /  ಜೀವನಶೈಲಿ  /  ಹೀಗೆ ಮಾಡಿದ್ರೆ ದುಡ್ಡು ಉಳಿಯಲ್ಲ ಕಣ್ರೀ: ನೆಲ ಮಾರಿ ಕೋಟ್ಯಧೀಶರಾಗಿದ್ದವರ ಕೈ ಏಕಾಏಕಿ ಖಾಲಿಯಾಗಲು ಕಾರಣವೇನು -ರಂಗ ನೋಟ

ಹೀಗೆ ಮಾಡಿದ್ರೆ ದುಡ್ಡು ಉಳಿಯಲ್ಲ ಕಣ್ರೀ: ನೆಲ ಮಾರಿ ಕೋಟ್ಯಧೀಶರಾಗಿದ್ದವರ ಕೈ ಏಕಾಏಕಿ ಖಾಲಿಯಾಗಲು ಕಾರಣವೇನು -ರಂಗ ನೋಟ

Personal Finance: ಸರಳವಾಗಿ ಹೇಳಬೇಕೆಂದರೆ ಹಣದ ಗಳಿಕೆ ಕಷ್ಟ. ಅದನ್ನು ಉಳಿಸಿಕೊಳ್ಳುವುದು ಇನ್ನೂ ಕಷ್ಟ. ಅದನ್ನು ವೃದ್ಧಿಸಲು ಮತ್ತಷ್ಟು ಶ್ರಮ ಪಡಬೇಕಾಗುತ್ತದೆ. ಆದರೆ ಕೈಲಿರುವ ಹಣವನ್ನು ಕಳೆದುಕೊಂಡು ಬೀದಿಗೆ ಬರುವುದು ಅತ್ಯಂತ ಸುಲಭ.

ನೆಲ ಮಾರಿ ಕೋಟ್ಯಧೀಶರಾಗಿದ್ದವರ ಕೈ ಏಕಾಏಕಿ ಖಾಲಿಯಾಗಲು ಕಾರಣವೇನು: ರಂಗಸ್ವಾಮಿ ಮೂಕನಹಳ್ಳಿ ಬರಹ
ನೆಲ ಮಾರಿ ಕೋಟ್ಯಧೀಶರಾಗಿದ್ದವರ ಕೈ ಏಕಾಏಕಿ ಖಾಲಿಯಾಗಲು ಕಾರಣವೇನು: ರಂಗಸ್ವಾಮಿ ಮೂಕನಹಳ್ಳಿ ಬರಹ

ಬಡತನ ಮತ್ತು ಸಿರಿತನ ಎನ್ನುವುದು ಇಂದಿನ ದಿನದ ಚರ್ಚೆಯಲ್ಲ. ಮನುಕುಲದ ಉದಯದ ದಿನದಿಂದ ಇದು ಇದ್ದೇ ಇದೆ. ಈ ಜಗತ್ತಿನಲ್ಲಿ ಕೆಲವರೇಕೆ ಸಿರಿವಂತರು ಎನ್ನಿಸಿಕೊಳ್ಳುತ್ತಾರೆ? ಮತ್ತೆ ಮೆಜಾರಿಟಿ ಜನರೇಕೆ ಸದಾ ಬಡತನದಲ್ಲಿ ಅಥವಾ 'ಹ್ಯಾಂಡ್ ಟು ಮೌತ್' ಎನ್ನುವ ರೀತಿಯಲ್ಲಿ ಬದುಕುತ್ತಾರೆ? ಎನ್ನುವ ಪ್ರಶ್ನೆಗಳಿಗೆ ಉತ್ತರ ಸರಳವಲ್ಲ. ಆದರೆ ಅದೇ ಸಮಯದಲ್ಲಿ ಸಂಕೀರ್ಣವೂ ಅಲ್ಲ. ನೀವೇ ಗಮನಿಸಿ ನೋಡಿ ಬೆಂಗಳೂರು ಸುತ್ತಮುತ್ತ ರಿಯಲ್ ಎಸ್ಟೇಟ್ ಇನ್ನಿಲ್ಲದ ಬೇಡಿಕೆ ಪಡೆದುಕೊಂಡ ಸಮಯದಲ್ಲಿ ಬೆಂಗಳೂರಿನ ಸುತ್ತಮುತ್ತಲ ರೈತರು ತಮ್ಮ ನೆಲವನ್ನು ಮಾರಿಕೊಂಡು ಕೋಟ್ಯಂತರ ರೂಪಾಯಿ ಹಣವನ್ನು ಕಂಡರು. ಇನ್ನು ಏರ್‌ಪೋರ್ಟ್‌ ಆಗುವ ಸಮಯದಲ್ಲಿ ದೇವನಹಳ್ಳಿ ಸಮೀಪದ ರೈತರು ಕೂಡ ಸಾಕಷ್ಟು ಹಣವನ್ನು ಗಳಿಸಿಕೊಂಡರು. ಮೈಸೂರು ಅಭಿವೃದ್ಧಿ ಹೆಸರಿನಲ್ಲಿ ಬೆಳೆಯಲು ಶುರು ಮಾಡಿದಾಗ ಕೂಡ ಇದೇ ಆದದ್ದು!

ನಿಮಗೆ ನೆನಪಿರಲಿ ಇದು ಮಾಹಿತಿ ಯುಗ. ರೈತರಿಗೂ ತಮ್ಮ ನೆಲಕ್ಕೆ ಬಂದಿರುವ ಬೆಲೆಯ ಅರಿವಿದೆ. ಎಲ್ಲೋ ಅಲ್ಲೊಬ್ಬರು ಇಲ್ಲೊಬ್ಬರು ಕಡಿಮೆ ಬೆಲೆಗೆ ಮಾರಿರಬಹುದು ಆದರೆ ಮೆಜಾರಿಟಿ ರೈತರು ಅಂದಿನ ದಿನಕ್ಕೆ ತಕ್ಕ ಬೆಲೆ ಪಡೆದು ಮಾರಿದ್ದಾರೆ ಇದರಲ್ಲಿ ಸಂಶಯವಿಲ್ಲ. ಆದರೆ ಇಂದಿಗೆ ಆ ರೈತರಲ್ಲಿ ಬಹುತೇಕರು ಮತ್ತೆ ಬರಿಗೈ ದಾಸರಾಗಿ ಕುಳಿತಿದ್ದಾರೆ. ಬದುಕಿನ ಬಂಡಿ ಎಳೆಯಲು ಮತ್ತೆ ಕೆಲಸ ಮಾಡಬೇಕಾದ ಸ್ಥಿತಿಗೆ ಬಂದಿದ್ದಾರೆ. ಹೀಗೇಕಾಯ್ತು? ಇಲ್ಲಿ ರೈತರನ್ನು ಉದಾಹರಣೆಯಾಗಿ ಮಾತ್ರ ತೆಗೆದುಕೊಂಡಿದ್ದೇನೆ. ಶ್ರಮಜೀವಿಗಳಾದ ರೈತರ ಬಗ್ಗೆ ನನಗೆ ಅಪಾರ ಗೌರವವಿದೆ. ಹಣಕಾಸು ನಿರ್ವಹಣೆಯಲ್ಲಿ ಎದುರಾಗುವ ಸಮಸ್ಯೆಗಳ ವಿವರಿಸುವುದು ಮಾತ್ರ ಈ ಬರಹದ ಉದ್ದೇಶ.

ಟ್ರೆಂಡಿಂಗ್​ ಸುದ್ದಿ

ಹಣವನ್ನು ನಡೆಸಿಕೊಳ್ಳುವ ರೀತಿ ಬಹಳ ಮುಖ್ಯ

ಇದ್ದಕ್ಕಿದ್ದಂತೆ, ಅನಿರೀಕ್ಷಿತವಾಗಿ ಹಣ, ಯಶಸ್ಸು, ಕೀರ್ತಿ ಬಂದ ಬಹಳಷ್ಟು ಜನರ ಕಥೆ ಇದೆ ರೀತಿ ಕೊನೆಗಾಣುತ್ತಿದೆ. ಇದಕ್ಕೆ ಕಾರಣ ಹಣ ಬಂದಾಗ ಅದನ್ನು ಅವರು ನಡೆಸಿಕೊಳ್ಳುವ ರೀತಿ. ಹಣ ಬಂದ ತಕ್ಷಣ ಜನಸಾಮಾನ್ಯರು ಮಾಡುವ ತಪ್ಪುಗಳ ಪಟ್ಟಿಯನ್ನು ಇಲ್ಲಿ ಕೊಟ್ಟಿದ್ದೇನೆ. ನಿಮ್ಮಲ್ಲಿ ಹಣ ಬಂದಾಗ ಸ್ವಲ್ಪ ಎಚ್ಚರ ವಹಿಸಿ. ಮೈಮರೆತರೆ ಎಲ್ಲಿಂದ ಪ್ರಯಾಣ ಪ್ರಾರಂಭವಾಗಿತ್ತೋ ಬದುಕು ಮತ್ತೆ ಅಲ್ಲಿಗೆ ತಂದು ಬಿಡುತ್ತದೆ. ಹುಷಾರು!

ಕೆಲವರು ಹಣ ಬಂದ ತಕ್ಷಣ ಜೀವನಶೈಲಿ ಬದಲಾಯಿಸಿಕೊಳ್ಳುತ್ತಾರೆ. ಹಣ ಬಂದ ತಕ್ಷಣ ಮನುಷ್ಯನ ಹಾವಭಾವ ಬದಲಾಗುತ್ತದೆ. ನಾನು ಸಾಹುಕಾರನಾದೆ, ಯಾರಿಗಿಂತ ಕಡಿಮೆಯಿಲ್ಲ ಎನ್ನುವ ಅಹಂಭಾವ ಬರುತ್ತದೆ. ದಶಕಗಳಿಂದ ಸಾಹುಕಾರರು ನಡೆಸುವ ಜೀವನ ಶೈಲಿಯನ್ನು ನೋಡುತ್ತಾ ಬಂದವರು ಅದೇ ಗುಂಗಿನಲ್ಲಿ ಅದೇ ರೀತಿಯ ಜೀವನಶೈಲಿಯನ್ನು ಅನುಕರಿಸಲು ಹೋಗುತ್ತಾರೆ. ದೊಡ್ಡಮನೆ ಕಟ್ಟಿಸುತ್ತಾರೆ, ಐಷಾರಾಮಿ ಕಾರುಗಳನ್ನು ಕೊಳ್ಳುತ್ತಾರೆ. ಶ್ರೀಮಂತಿಕೆಯನ್ನು ಬಿಂಬಿಸಿಕೊಳ್ಳುವ ಉಮೇದಿನಲ್ಲಿ ಕೈಲಿರುವ ಹಣವನ್ನು ದುಡಿಮೆಗೆ ಹಾಕದೆ ಕೇವಲ ಖರ್ಚು ಮಾಡುತ್ತಾರೆ. ಕೂತು ತಿನ್ನುವವನಿಗೆ ಕುಡಿಕೆ ಹೊನ್ನು ಸಾಲದು ಎನ್ನುವ ಪರಿಸ್ಥಿತಿ ಬರುತ್ತದೆ ಎನ್ನುವ ಸಾಮಾನ್ಯಜ್ಞಾನ ಇಲ್ಲವಾಗುತ್ತದೆ.

ಕೈಗೆ ಬಂದ ಹಣವನ್ನು ವೃದ್ಧಿಸುವ ಗೋಜಿಗೆ ಹೋಗುವುದಿಲ್ಲ. ಆ ಕ್ಷಣಕ್ಕೆ ಅದು ದೊಡ್ಡ ದುಡ್ಡು ಅಷ್ಟೇ. ಮುಂದಿನ ಐದಾರು ವರ್ಷದ ನಂತರ ನಾನೆಲ್ಲಿರುವೆ? ನನ್ನ ಆರ್ಥಿಕತೆ ಯಾವ ಸ್ಥಿತಿಯಲ್ಲಿರಬಹುದು ಎನ್ನುವ ಪ್ರಶ್ನೆಯನ್ನು ಕೈಯಲ್ಲಿ ಹಣವಿದ್ದಾಗ ಕೇಳಿಕೊಳ್ಳಬೇಕು.

ಕೆಲವರ ಕೈಲಿ ಹಣ ಏಕೆ ಉಳಿಯುವುದಿಲ್ಲ

ನಿಮ್ಮಲ್ಲೀಗ ಇನ್ನೊಂದು ಪ್ರಶ್ನೆ ಉದ್ಭವವಾಗಿರುತ್ತದೆ. ಸುತ್ತಮುತ್ತ ಕಷ್ಟಪಟ್ಟು ದುಡಿಯುತ್ತಿರುವ ಹಲವರನ್ನು ನೋಡಿ. ಅವರು ಸಹ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ ಆದರೂ ಅವರ ಕೈಲಿ ಹಣ ಏಕೆ ಉಳಿಸಲು ಸಾಧ್ಯವಾಗುತ್ತಿಲ್ಲ? ಇದಕ್ಕೆ ಉತ್ತರ ಸರಳವಾಗಿದೆ. ನೀವು ಅವರನ್ನು ಗಮನಿಸಿ ನೋಡಿ. ಹಣದ ಬಗ್ಗೆ ಅವರಲ್ಲಿ ಉಡಾಫೆ ಮನೋಭಾವವಿರುತ್ತದೆ. ಕೆಲ ಸಂದರ್ಭಗಳಲ್ಲಿ ಅವರು ಹಲವು ವ್ಯಸನಗಳ ದಾಸರಾಗಿರುತ್ತರೆ. ಹೀಗಾಗಿ ಅವರು ತಮ್ಮ ಸ್ಥಿತಿಯಿಂದ ಮೇಲೇರಲು ಆಗುವುದಿಲ್ಲ. ಅದೇ ಹೊತ್ತಿಗೆ, ಅವರ ಹಾಗೆಯೇ ಇದ್ದ ಹಲವರು ಇಂದು ಸ್ಥಿತಿವಂತರಾಗಿದ್ದರೆ. ಪ್ರಯತ್ನದಿಂದ ಪರಮಾತ್ಮನನ್ನೇ ಪಡೆಯಬಹುದು. ಇನ್ನು ಹಣ ಗಳಿಸುವುದು ಅದ್ಯಾವ ದೊಡ್ಡ ಲೆಕ್ಕ?

ಹಣ ಬಹಳ ಮುಖ್ಯ

ಹಣ ಗಳಿಸುವುದು ಬಹಳ ಮುಖ್ಯ. ಏಕೆಂದರೆ ನಾವೆಷ್ಟೇ ಒಳ್ಳೆಯವರಾಗಿದ್ದರೂ, ಎಷ್ಟೇ ಒಳ್ಳೆಯ ಕಾರ್ಯವನ್ನು ಮಾಡಲು ಬಯಸಿದರೂ ಹಣದ ಸಹಾಯವಿಲ್ಲದೆ, ಬೆಂಬಲವಿಲ್ಲದೆ ಅದನ್ನು ನಾವು ಸಾಧಿಸಲಾರೆವು. ರಾಮಾಯಣ ಯುದ್ಧಕಾಂಡದ (83-84) ಒಂದು ಶ್ಲೋಕ ಹೀಗಿದೆ;

ಅರ್ಥೇನ ಹಿ ವಿಯುಕ್ತಸ್ಯ ಪುರುಷಸ್ಯಾಲ್ಪತೇಜಸಂ |
ವ್ಯುಚ್ಛಿದ್ಯೇನೇ ಕ್ರಿಯಾಂ ಸರ್ವಾ ಗ್ರೀಷ್ಮೇ ಕುಸುರಿತೋ ಯಥಾ |

ಇದರರ್ಥ ಧನಹೀನನಾಗಿರುವ ಮನುಷ್ಯ ನಿಸ್ತೇಜನಾಗಿ ಕಾಣುತ್ತಾನೆ. ಆತನ ಎಲ್ಲ ಕಾರ್ಯಗಳೂ ಬೇಸಿಗೆಯಲ್ಲಿ ನೀರಿನ ಹೊಂಡಗಳು ಇಂಗಿ ಹೋಗುವಂತೆ ತಾವಾಗಿಯೇ ನಶಿಸಿ ಹೋಗುತ್ತವೆ. ಹೀಗಾಗಿ ಹಣವಂತರಾಗಬೇಕು. ಹಣವಂತರಾಗುವುದು, ಸ್ಥಿತಿವಂತರಾಗುವುದು ತಪ್ಪಲ್ಲ. ಇದೇ ಹೊತ್ತಿಗೆ ಹೇಳಬೇಕಾದ ಮತ್ತೊಂದು ಮಾತು ಎಂದರೆ; ಪ್ರಾಮಾಣಿಕ ಹಾದಿಯಲ್ಲಿಯೇ ಸ್ಥಿತಿವಂತರಾಗಲು ಸಾಕಷ್ಟು ಅವಕಾಶಗಳಿವೆ.

ಹಣ ಬಂದ ಮೇಲೆ ನೆಮ್ಮದಿ ಹೋಗಬಾರದು

ಹಣ ಗಳಿಸುವುದು ಒಂದು ಹಂತವಾದರೆ ಅದನ್ನ ಉಳಿಸುವುದು, ಬೆಳೆಸುವುದು ಮತ್ತು ರಕ್ಷಿಸಿಕೊಳ್ಳುವುದು ಅದಕ್ಕಿಂತ ದೊಡ್ಡದು. ಗಳಿಸಿದ ಹಣವನ್ನ ದೀರ್ಘಕಾಲ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ಹಣವಿದ್ದವನಿಗೆ ಸಿಗುವ ಗೌರವ, ದಾರಿಯಲ್ಲಿ ಬರುವ ಪ್ರಲೋಭನೆಗಳು ಆತನನ್ನ ನಾನು ಬಹಳ ಶಕ್ತಿಶಾಲಿ ನನ್ನಿಂದ ಅಸಾಧ್ಯವಾದುದು ಯಾವುದೂ ಇಲ್ಲ ಎನ್ನುವ ಭಾವನೆಯನ್ನ ಉಂಟು ಮಾಡುತ್ತದೆ. ಈ ಭಾವನೆಯು ಗಳಿಸಿದ ಹಣವನ್ನ ಕಳೆದುಕೊಳ್ಳಲು ಮೊದಲ ಹಂತವಾಗುತ್ತದೆ. ಗಳಿಸಿದ ಹಣವನ್ನು ರಕ್ಷಿಸಿಕೊಳ್ಳುವುದು ಅತ್ಯಂತ ಮುಖ್ಯ. ಆದರೆ ಗಳಿಸಿದ ಹಣವು ಎಲ್ಲಿ ದೊರಾಗುತ್ತದೆಯೋ ಎನ್ನುವ ಭಯ ಮತ್ತು ಅದನ್ನು ರಕ್ಷಿಸಿಕೊಳ್ಳಲು ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುವ ಹಂತಕ್ಕೆ ಮಾತ್ರ ಅದು ಹೋಗಬಾರದು.

ಯಾವೆಲ್ಲಾ ವಸ್ತುಗಳು ಅಥವಾ ಸೇವೆ ನಮಗೆ ಸಂತೋಷವನ್ನು ನೀಡುತ್ತವೆಯೋ ಅದು ಮಾತ್ರ 'ಅಸೆಟ್' (ಆಸ್ತಿ ಅಥವಾ ಸಂಪತ್ತು) ಎನ್ನಿಸಿಕೊಳ್ಳುತ್ತದೆ. ಯಾವೆಲ್ಲಾ ವಸ್ತು ಅಥವಾ ಸೇವೆಯು ನೋವು ನೀಡುತ್ತದೆ ಅದು 'ಲಯಬಿಲಿಟಿ' (ಬಾಧ್ಯತೆ) ಎನ್ನಿಸಿಕೊಳ್ಳುತ್ತದೆ.

ಹಣದ ಮೇಲಿನ ಮೋಹ ವಿಪರೀತವಾದರೆ ಅದರ ಸಂಗ್ರಹಣೆಯಲ್ಲಿ ಮನುಷ್ಯ ತೊಡಗಿಕೊಳ್ಳುತ್ತಾನೆ. ಹೀಗೆ ಸಂಗ್ರಹಸಿದ ಹಣ ಹೆಚ್ಚಾಗುತ್ತಾ ಹೋದಂತೆಲ್ಲಾ ಅದರ ರಕ್ಷಣೆಯೇ ಪರಮ ಗುರಿಯಾಗುತ್ತದೆ. ಬಂಧುಗಳು ಅಥವಾ ಮಿತ್ರರು ಅಥವಾ ಇನ್ನಿತರರು ನನ್ನ ಹಣವನ್ನ ಲಪಟಾಯಿಸಯಿಸಲು ಪ್ರಯತ್ನಿಸುತ್ತಿದ್ದಾರೆ ಎನ್ನುವ ಮನೋಭಾವ ಬಂದಿದೆ ಎಂದರೆ ಅಲ್ಲಿಗೆ ಹಣದ ರಕ್ಷಣೆಯ ಅತೀವ ಗೀಳಿನ ಒಡೆಯರಾಗಿದ್ದಾರೆ ಎಂದು ಅರ್ಥ. ಒಂದು ವಿಷಯ ಎಲ್ಲರಿಗೂ ನೆನಪಿರಬೇಕು. ಯಾವಾಗ ಸಂಗ್ರಹಣೆ ಮತ್ತು ರಕ್ಷಣೆಯ ಗೀಳು ಹೆಚ್ಚಾಗುತ್ತದೆಯೋ, ಆಗ ಮನುಷ್ಯ ಹಣದ ಸೃಷ್ಟಿಯಾಗಿದ್ದರ ಮೂಲ ಉದ್ದೇಶವಾದ ವಿನಿಮಯ ಅಥವಾ ಖರ್ಚು ಮಾಡುವುದನ್ನೇ ಮರೆಯುತ್ತಾನೆ. ಹಣವು ಸುಖ ಕೊಡುವುದು ಅದನ್ನು ವ್ಯಯಿಸಿದಾಗ ಮಾತ್ರ. ಕನ್ನಡದಲ್ಲಿ 'ಕೊಟ್ಟಿದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ' ಎನ್ನುವ ಒಂದು ಗಾದೆ ಇದೆ. ಈ ಮಾತು ನಮಗೆಲ್ಲರಿಗೂ ಸದಾ ನೆನಪಿರಬೇಕು. ಆದರೆ ಇದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದಿದ್ದರೆ ಅನಾಹುತವೇ ಆಗುತ್ತದೆ.

ಉಳಿಸಲು, ಬೆಳೆಸಲು ಶಿಸ್ತು ಅಗತ್ಯ

ಸರಳವಾಗಿ ಹೇಳಬೇಕೆಂದರೆ ಹಣದ ಗಳಿಕೆ ಕಷ್ಟ. ಅದನ್ನು ಉಳಿಸಿಕೊಳ್ಳುವುದು ಇನ್ನೂ ಕಷ್ಟ. ಅದನ್ನು ವೃದ್ಧಿಸಲು ಮತ್ತಷ್ಟು ಶ್ರಮ ಪಡಬೇಕಾಗುತ್ತದೆ. ಆದರೆ ಕೈಲಿರುವ ಹಣವನ್ನು ಕಳೆದುಕೊಂಡು ಬೀದಿಗೆ ಬರುವುದು ಅತ್ಯಂತ ಸುಲಭ. ಅದಕ್ಕೆ ಹೆಚ್ಚೇನೂ ಮಾಡುವುದು ಬೇಕಿಲ್ಲ. ಮೊದಲ ಸಾಲಿನಲ್ಲಿ ಹೇಳಿದಂತೆ ಜೀವನ ಶೈಲಿ ಬದಲಾವಣೆ ಮಾಡಿಕೊಂಡು ಚಿಂತನೆಯಿಲ್ಲದ ಖರ್ಚು ಮಾಡುತ್ತಾ ಹೋದರೆ ಮಿಕ್ಕದ್ದು ಆ ಜೀವನ ಶೈಲಿಯೇ ಮಾಡುತ್ತದೆ. ಗಳಿಕೆ -ಉಳಿಕೆ -ಹೂಡಿಕೆ ಬಗ್ಗೆ ನಾವೆಲ್ಲರೂ ಕಲಿಯಬೇಕಿದೆ.