logo
ಕನ್ನಡ ಸುದ್ದಿ  /  ಜೀವನಶೈಲಿ  /  10ನೇ ಕ್ಲಾಸ್ ಫೇಲ್ ಆಗಿ ಅಪ್ಪ-ಅಮ್ಮನಿಗೆ ಬುದ್ಧಿ ಕಲಿಸ್ತೀನಿ ಎನ್ನುತ್ತಾಳೆ ಈ ಮಗಳು, ಇವಳ ಭವಿಷ್ಯಕ್ಕೆ ಏನು ಒಳ್ಳೆಯದು? -ಮನದ ಮಾತು

10ನೇ ಕ್ಲಾಸ್ ಫೇಲ್ ಆಗಿ ಅಪ್ಪ-ಅಮ್ಮನಿಗೆ ಬುದ್ಧಿ ಕಲಿಸ್ತೀನಿ ಎನ್ನುತ್ತಾಳೆ ಈ ಮಗಳು, ಇವಳ ಭವಿಷ್ಯಕ್ಕೆ ಏನು ಒಳ್ಳೆಯದು? -ಮನದ ಮಾತು

D M Ghanashyam HT Kannada

May 09, 2024 06:00 AM IST

10ನೇ ಕ್ಲಾಸ್ ಫೇಲ್ ಆಗಿ ಅಪ್ಪ-ಅಮ್ಮನಿಗೆ ಬುದ್ಧಿ ಕಲಿಸ್ತೀನಿ ಎನ್ನುತ್ತಾಳೆ ಈ ಮಗಳು, ಇವಳ ಭವಿಷ್ಯಕ್ಕೆ ಏನು ಒಳ್ಳೆಯದು? -ಮನದ ಮಾತು

    • ಭವ್ಯಾ ವಿಶ್ವನಾಥ್: 10ನೇ ತರಗತಿ ಪರೀಕ್ಷೆಯನ್ನು ವಿದ್ಯಾರ್ಥಿ ಜೀವನದ ಅತ್ಯಂತ ಮುಖ್ಯ ಘಟ್ಟ ಎಂದು ಹೇಳಲಾಗುತ್ತದೆ. ಓದುವ ಮಕ್ಕಳಿರುವ ಮನೆಗಳಲ್ಲಿ ಅಪ್ಪ-ಾಮ್ಮನ ನಡುವೆ ವೈಮನಸ್ಯ ಇದ್ದರೆ ಮಕ್ಕಳ ಮಾನಸಿಕ ಪರಿಸ್ಥಿತಿ ಹೇಗಿರುತ್ತೆ ಎನ್ನುವುದಕ್ಕೆ ಈ ಪ್ರಶ್ನೆಯೇ ಸಾಕ್ಷಿ. ಅಪ್ಪ-ಅಮ್ಮನಿಗೆ ಬುದ್ಧಿ ಕಲಿಸಲು ಫೇಲ್ ಆಗುತ್ತೇನೆ ಎನ್ನುವ ಈ ಮಗಳಿಗೆ ಸಮಾಧಾನದ ಮಾತು ಇಲ್ಲಿದೆ.
10ನೇ ಕ್ಲಾಸ್ ಫೇಲ್ ಆಗಿ ಅಪ್ಪ-ಅಮ್ಮನಿಗೆ ಬುದ್ಧಿ ಕಲಿಸ್ತೀನಿ ಎನ್ನುತ್ತಾಳೆ ಈ ಮಗಳು, ಇವಳ ಭವಿಷ್ಯಕ್ಕೆ ಏನು ಒಳ್ಳೆಯದು? -ಮನದ ಮಾತು
10ನೇ ಕ್ಲಾಸ್ ಫೇಲ್ ಆಗಿ ಅಪ್ಪ-ಅಮ್ಮನಿಗೆ ಬುದ್ಧಿ ಕಲಿಸ್ತೀನಿ ಎನ್ನುತ್ತಾಳೆ ಈ ಮಗಳು, ಇವಳ ಭವಿಷ್ಯಕ್ಕೆ ಏನು ಒಳ್ಳೆಯದು? -ಮನದ ಮಾತು

ಪ್ರಶ್ನೆ: ಮೇಡಂ ನಾನು ಈ ಸಲ 10 ನೇ ಕ್ಲಾಸಿಗೆ ಹೋಗಬೇಕು. ಮನೆಯಲ್ಲಿ ಅಪ್ಪ-ಅಮ್ಮ ಯಾವಾಗಲೂ ಜಗಳ ಆಡ್ತಾ ಇರ್ತಾರೆ. ನನ್ನನ್ನು ಕೇರ್ ಮಾಡಲ್ಲ. ಏನಾದರೂ ಹೇಳಲು ಹೋದರೆ ಸುಮ್ನಿರು, ನೀನಿನ್ನೂ ಚಿಕ್ಕೋಳು ಅಂತ ಗದರ್ತಾರೆ. ತುಂಬಾ ಒಂಟಿ ಅನ್ನಿಸತ್ತೆ. ನಿಮಗೆ ಗೊತ್ತಾ, ನನ್ನ ಅಪ್ಪ-ಅಮ್ಮನಿಗೆ ನನ್ನ ಬರ್ತ್‌ಡೇ ಕೂಡ ನೆನಪಿರಲ್ಲ. ನನಗೆಷ್ಟು ಬೇಜಾರಾಗಬಹುದು ಅಂತ ಯೋಚನೆ ಮಾಡಿ. ಸ್ಕೂಲಿನಲ್ಲಿ ನನ್ನ ಫ್ರೆಂಡ್ಸ್ ಎಲ್ಲ ಚೆನ್ನಾಗಿದ್ದಾರೆ. ನಾನೊಬ್ಳೇ ಹೀಗೆ. ನನಗೆ ಅಂತ ಯಾರೂ ಇಲ್ಲ. ಯಾಕಾದ್ರೂ ಹುಟ್ಟಿದ್ನೋ ಅನ್ಸತ್ತೆ. ಓದಬೇಕು ಅಂತ ಆಸೆಯೇನೋ ಇದೆ. ಆದರೆ ಯಾರಿಗೋಸ್ಕರ ಓದಬೇಕು. 10 ನೇ ಕ್ಲಾಸ್ ಫೇಲ್ ಆದ್ರೆ ಅಪ್ಪ-ಅಮ್ಮನಿಗೆ ಬುದ್ಧಿ ಬರಬಹುದು ಅಂದ್ಕೊಂಡೆ. ನಾನು ದಡ್ಡಿ ಅಲ್ಲ ಮೇಡಂ. ಆರಾಮಾಗಿ ಪಾಸ್ ಆಗ್ತೀನಿ, ಇವರಿಗೆ ಬುದ್ಧಿ ಕಲಿಸೋಕೆ ಏನಾದರೂ ಮಾಡಬೇಕು. ನನಗೆ ಐಡಿಯಾ ಕೊಡಿ ಮೇಡಂ, ಪ್ಲೀಸ್ ಹೆಲ್ಪ್ ಮಾಡಿ. -ಹೆಸರು ಮತ್ತು ಊರು ಬೇಡ

ಟ್ರೆಂಡಿಂಗ್​ ಸುದ್ದಿ

ಪ್ರತಿನಿತ್ಯ ಕೇವಲ 10 ನಿಮಿಷ ಧ್ಯಾನ ಮಾಡಿದ್ರೆ ಸಾಕು, ನಿಮಗೆ ಈ 10 ರೀತಿಯ ಆರೋಗ್ಯ ಲಾಭಗಳು ಸಿಗಲಿದೆ

Mango Recipe: ಇಲ್ಲಿದೆ ಮ್ಯಾಂಗೋ ಮಲೈ ಖಾಂಡ್ವಿ ರೋಲ್‌ ರೆಸಿಪಿ; ಹೆಸರಷ್ಟೇ ಅಲ್ಲ ಈ ತಿಂಡಿಯ ರುಚಿಯೂ ಡಿಫ್ರೆಂಟ್‌

ಗಂಡು ಹೆಣ್ಣಿನ ಲಿಂಗ ತಾರತಮ್ಯ ನಿವಾರಣೆಗೆ ಪೋಷಕರ ವ್ಯಕ್ತಿತ್ವ, ಆಲೋಚನಾ ಕ್ರಮ ಹೇಗಿರಬೇಕು? ಮಕ್ಕಳ ಉತ್ತಮ ಮನಸ್ಥಿತಿಗೆ ಅಗತ್ಯ ವಿಧಾನಗಳಿವು

ಹಾಲು-ಮೀನು, ಪಾಲಕ್‌-ಪನೀರ್‌ ಆಯುರ್ವೇದದ ಪ್ರಕಾರ ಯಾವೆಲ್ಲಾ ಪದಾರ್ಥಗಳನ್ನು ಒಟ್ಟಿಗೆ ಸೇವಿಸಬಾರದು, ಇದರ ಪರಿಣಾಮ ಏನಾಗುತ್ತೆ ನೋಡಿ

ಉತ್ತರ: ಖಂಡಿತವಾಗಿಯೂ ನಿನಗೆ ಸಹಾಯ ಮಾಡಲು ನಾವು ಸಿದ್ಧರಿದ್ದೇವೆ. ನೀನು ಒಂಟಿಯೆಂದು ಭಾವಿಸಬೇಡ. ನಿನ್ನ ನೆರವಿಗೆ ಮನಃಶಾಸ್ರಜ್ಞರು ಮತ್ತು ಆಪ್ತಸಮಾಲೋಚಕರಿದ್ದಾರೆ. ನೀನು ಇಷ್ಟು ಧೈರ್ಯವಹಿಸಿ ನಿನ್ನ ಸಂಕಷ್ಟವನ್ನು ನಮ್ಮ ಬಳಿ ಹಂಚಿಕೊಂಡಿದ್ದಕ್ಕೆ ನಿನ್ನ ಬಗ್ಗೆ ಹೆಮ್ಮೆ ಎನ್ನಿಸುತ್ತಿದೆ. ನಿನ್ನ ಪೋಷಕರು ನಿನ್ನ ಧೈರ್ಯ, ಬುದ್ಧಿಯ ಕಡೆ ಹೆಚ್ಚಿನ ಗಮನಕೊಡದೆ, ನಿನ್ನ ಬೇಸರವನ್ನೂ ಸಹ ಪರಿಗಣಿಸದೆ ಇರುವುದು ಬೇಸರದ ಸಂಗತಿ. ನೀನು ಏನಾದರೂ ಹೇಳಲು ಹೋದರೆ, ಚಿಕ್ಕವಳೆಂದು ನಿರ್ಲಕ್ಷ್ಯ ಮಾಡುವುದು, ನಿನ್ನ ಹುಟ್ಟಿದ ಹಬ್ಬವನ್ನೂ ಸಹ ಮರೆಯುವುದು, ನಿನಗೆ ಬಹಳ ನೋವು ತಂದಿರುವಂತೆ ಕಾಣುತ್ತದೆ. ಅದರಲ್ಲೂ ಶಾಲೆಯಲ್ಲಿ ಗೆಳೆಯರ ಹುಟ್ಟಿದ ಹಬ್ಬವನ್ನು ಪೋಷಕರು ಆಚರಿಸಿದಾಗ ನಿನಗೆ ಮತಷ್ಟು ನೋವಾಗಿ, ನಾನೋಬ್ಳೆ ಹೀಗೆ ಎನ್ನುವ ಬೇಸರ ನಿನಗೆ ಬಂದಿರಬಹುದು.

ಹೌದು, ಮನೆಯಲ್ಲಿ ಪೋಷಕರ ನಡುವೆ ಹೊಂದಾಣಿಕೆ ಇಲ್ಲದೆ ಕದನಗಳು ಹೆಚ್ಚಾದಾಗ, ನಿನ್ನಂಥ ಮಕ್ಕಳಿಗೆ ಸಂತೋಷ ಮತ್ತು ನೆಮ್ಮದಿಯು ಇರುವುದಿಲ್ಲ. ಅದರಲ್ಲೂ ಒಂದೇ ಮಗು ಇರುವ ಕುಟುಂಬಗಳಲ್ಲಿ, ಮಗುವಿಗೆ ಹೇಳಿಕೊಳ್ಳಲು ಒಡಹುಟ್ಟಿದವರಿಲ್ಲದೆ ಒಂಟಿತನವು ಬಹಳ ಕಾಡುತ್ತದೆ. ಆದರೆ ತಾತ, ಅಜ್ಜಿ ಇರುವ ಮನೆಗಳಲ್ಲಿ, ಕಠಿಣ ಪರಿಸ್ಥಿತಿಯಲ್ಲಿ ಮಗುವಿಗೆ ಮಾನಸಿಕ ಬೆಂಬಲ ಹಾಗೂ ಆರೈಕೆ ಸಿಗುವ ಸಾಧ್ಯತೆಯಿರುತ್ತದೆ. ಇದರಿಂದ ಮಗುವಿನ ಮೇಲಿನ ಮಾನಸಿಕ ಒತ್ತಡ ಹಾಗೂ ಕೆಟ್ಟ ಆಲೋಚನೆಗಳು ಕಡಿಮೆಯಾಗುತ್ತದೆ.

ಹದಿಹರೆಯದ ವಯಸ್ಸಿನಲ್ಲಿ ಹಾರ್ಮೋನ್ ಬದಲಾವಣೆಗಳಾಗುತ್ತಿರುವ ಕಾರಣ ಹೆಣ್ಣುಮಕ್ಕಳ ಮನಃಸ್ಥಿತಿಯೂ ಬಹಳ ಸೂಕ್ಷ್ಮವಾಗಿರುತ್ತದೆ. ದೈಹಿಕ ಬದಲಾವಣೆಗಳಿಗೆ ಹೊಂದಿಕೊಳ್ಳುವ ವೇಳೆಯಲ್ಲಿ ತಾಯಿ ತಂದೆಯರ ಪೋಷಣೆ, ಮಾರ್ಗದರ್ಶನ ಅಗತ್ಯವಿರುತ್ತದೆ. ಆದರೆ ಇಂಥ ಮಹತ್ವದ ಸಂದಭ೯ದಲ್ಲಿ ಪೋಷಕರದೇ ಸಮಸ್ಯೆಯಾದರೆ ಮಕ್ಕಳಿಗೆ ಅಸಹಾಯಕ ಮನಃಸ್ಥಿತಿ ಮತ್ತು ಅನಾಥ ಭಾವನೆ ಹುಟ್ಟುತ್ತದೆ.

ಯಾವುದೇ ಮಗುವಿಗೆ 10ನೇ ತರಗತಿ ಒಂದು ಮಹತ್ವದ ಘಟ್ಟ. ಈ ವಯಸ್ಸಿನಲ್ಲಿ ಬಹಳಷ್ಟು ಒತ್ತಡ ಹಾಗು ಆತಂಕಗಳಿರುತ್ತವೆ. ಪೋಷಕರ ಪ್ರೋತ್ಸಾಹ, ಬೆಂಬಲ, ಸಾಂತ್ವನ ಅಗತ್ಯ. ಆದರೆ ನಿನಗಿದು ಸಿಗುತ್ತಿಲ್ಲ. ಹೀಗಾಗಿ ಹೆಚ್ಚು ಸಮಸ್ಯೆ ಎನಿಸುತ್ತಿದೆ. ಈ ಸಂಕಷ್ಟಗಳ ಮಧ್ಯೆ ಒಂದು ಒಳ್ಳೆಯ ವಿಚಾರವೇನೆಂದರೆ, ನೀನು ಓದುವುದರಲ್ಲಿ ಬುದ್ಧಿವಂತೆ ಮತ್ತು ನಿನಗೆ ಓದಬೇಕೆನ್ನುವ ಆಸಕ್ತಿಯೂ ಇದೆ. ಓದುವ ಕಡೆಗೆ ಹೆಚ್ಚು ಗಮನ ಕೊಡು. ಓದಿನ ಕಡೆಗೆ ಗಮನ ಕೊಟ್ಟಾಗ ನಿನಗೆ ಆಗುವ ಬೇಸರ ತುಸು ಕಡಿಮೆಯಾಗಬಹುದು. ನಿನ್ನ ಒಂಟಿತನದ ಭಾವನೆಯೂ ಕಡಿಮೆ ಆಗಬಹುದು.

ಒಂದು ಪಕ್ಷ ನಿನ್ನ ಪೋಷಕರಿಗೆ ಬುದ್ಧಿ ಕಲಿಸುವ ಉದ್ದೇಶದಿಂದ, ನೀನು 10ನೇ ಕ್ಲಾಸ್ ಫೇಲ್ ಆದರೆ ಅದು ನಿನ್ನ ಭವಿಷ್ಯಕ್ಕೆ ಒಳ್ಳೆಯದಲ್ಲ. ನಿನ್ನ ಓದು, ವಿದ್ಯೆಯಿಂದ ನಿನ್ನ ಭವಿಷ್ಯ ರೂಪುಗೊಳ್ಳುತ್ತದೆ. ವಿದ್ಯಾವಂತಳಾದರೆ ನಿನ್ನ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ನೀನು ಆರ್ಥಿಕವಾಗಿಯೂ ಸ್ವಾವಲಂಬಿಯಾಗಬಹುದು. ಸಮಾಜದಲ್ಲಿಯೂ ಒಳ್ಳೆಯ ಹೆಸರು ಸಂಪಾದಿಸಬಹುದು. ಮನೆಯಲ್ಲೂ ಸಹ ನಿನ್ನ ಮಾತನ್ನು ಗೌರವದಿಂದ ಸ್ವೀಕರಿಸುತ್ತಾರೆ.

10ನೇ ತರಗತಿ ಫೇಲ್ ಆದರೆ ಏನೂ ಪ್ರಯೋಜನವಿಲ್ಲ

10ನೇ ತರಗತಿಯಲ್ಲಿ ಫೇಲ್ ಆಗಬೇಕು ಎಂದುಕೊಳ್ಳುವ ಮೊದಲು ಈ ಪ್ರಶ್ನೆಗಳನ್ನು ಕೇಳಿಕೊ. ಈಗ ನೀನು ಅಸಹಾಯಕ ಸ್ಥಿತಿಯಲ್ಲಿರುವುದು ನಿಜ. ಒಂಟಿಯಾಗಿರುವುದೂ ನಿಜ, ಆದರೆ...

1) ನೀನು 10 ತರಗತಿಯಲ್ಲಿ ಫೇಲ್ ಆದರೆ ನಿನ್ನ ಸಮಸ್ಯೆಗೆ ಪರಿಹಾರ ಸಿಗುತ್ತದೆಯೇ?

2) ನೀನು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲ್ ಆದರೆ ನಿನ್ನ ಪೋಷಕರು ಸರಿ ಹೋಗುತ್ತಾರೆಯೇ?

3) ನೀನು 10 ನೇ ತರಗತಿ ಫೇಲ್ ಆದರೆ ನಿನ್ನ ಒಂಟಿತನವಾಗಲಿ ಅಥವಾ ಅಸಹಾಯಕತೆಯಾಗಲಿ ದೂರವಾಗುತ್ತದೆಯೇ?

4) ನಿನ್ನ ಪೋಷಕರು ಫೇಲ್ ಆದ ನಿನ್ನ ಉದ್ದೇಶವನ್ನು ಅರ್ಥ ಮಾಡಿಕೊಳ್ಳುತ್ತಾರೆಯೇ?

5) ಅವರಿಗೆ ನಿನ್ನ ಮೇಲೆ ಪ್ರೀತಿ ಗೌರವ ಹೆಚ್ಚಾಗುತ್ತದೆಯೇ?

6) ನೀನು ಫೇಲ್ ಆದರೆ ಅವರ ನಿನ್ನ ಮಾತನ್ನು ಕೇಳುವಂತವರಾಗುತ್ತಾರೆಯೇ?

7) ನೀನು 10ನೇ ತರಗತಿಯಲ್ಲಿ ಫೇಲ್ ಆದರೆ ನಿನ್ನ ಸ್ನೇಹಿತರು ಶಿಕ್ಷಣದಲ್ಲಿ ಮುಂದೆ ಸಾಗುತ್ತಾರೆ. ನೀನು ಹಿಂದುಳಿಯುವೆ. ಅವರನ್ನು ಕಳೆದುಕೊಳ್ಳುವ ಸಾಧ್ಯತೆಯಿಲ್ಲವೇ?

ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹೀಗೆ ಮಾಡು

ಈ ಮೇಲಿನ ಪ್ರಶ್ನೆಗಳಿಗೆ, ನಿಧಾನವಾಗಿ ಯೋಚಿಸಿ ಉತ್ತರವನ್ನು ನೀಡು. ಅದರ ಜೊತೆಗೆ ನಿನ್ನ ಮಾನಸಿಕ ಸಮಸ್ಯೆಗೆ ಪರಿಹಾರ ಪಡೆದುಕೊಳ್ಳಲು ಹೀಗೆ ಮಾಡು.

1) ನಿನ್ನ ತಾಯಿ ಅಥವಾ ತಂದೆಯ ಬಳಿ ಅಥವಾ ಇಬ್ಬರೂ ಒಟ್ಟಿಗೆ ಇದ್ದಾಗ ಅವರೊಂದಿಗೆ ಕುಳಿತುಕೊಂಡು ಮುಕ್ತವಾಗಿ ನಿನ್ನ ಬೇಸರದ ಬಗ್ಗೆ ತಿಳಿಸು. ಇದೂ ಸಾಧ್ಯವಾಗದಿದ್ದರೆ

2) ನಿನ್ನ ಹಿರಿಯರ (ನೆಂಟರು) ಬಳಿ ಹಂಚಿಕೊಂಡು ಸಹಾಯ, ಮಾಗ೯ದಶ೯ನ ಪಡೆದುಕೊಳ್ಳುವುದಕ್ಕೆ ಪ್ರಯತ್ನಪಡು. ಇದೂ ಸಹ ಸಾಧ್ಯವಾಗದಿದ್ದರೆ

3) ಆಪ್ತಸಮಾಲೋಚಕರ ಸಹಾಯ , ಮಾಗ೯ದಶ೯ನ ಪಡೆದುಕೊ. ನಿನ್ನ ಪೋಷಕರಿಗೂ ಸಹ ಆಪ್ತಸಮಾಲೋಚನೆಯ ಅಗತ್ಯವಿರಬಹುದು. ಖಂಡಿತವಾಗಿಯೂ ಆಪ್ತಸಮಾಲೋಚಕರು ಸರಿಯಾದ ಮಾಗ೯ದಶ೯ನ ನೀಡುತ್ತಾರೆ.

ನಿನಗೆ ನಾನು ಹೇಳುವುದು ಇಷ್ಟೇ. ನಿನಗೆ ಒಳ್ಳೆಯದಾಗಲಿ. 10ನೇ ತರಗತಿಯ ಪರೀಕ್ಷೆಯನ್ನು ಚೆನ್ನಾಗಿ ಮಾಡು, ನಿನ್ನ ಭವಿಷ್ಯ ನಿನ್ನ ಕೈಲಿದೆ.

ಭವ್ಯಾ ವಿಶ್ವನಾಥ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542.

    ಹಂಚಿಕೊಳ್ಳಲು ಲೇಖನಗಳು