ಕನ್ನಡ ಸುದ್ದಿ  /  Lifestyle  /  Parenting Tips How To Handle Children In Summer Holidays Ideas To Prepare Home Time Table In For Summer Vacation Bvy

ಮಕ್ಕಳ ಬೇಸಿಗೆ ರಜಾ ಅಮ್ಮನಿಗೆ ಆಗದಿರಲಿ ಸಜಾ: ಈ ಟಿಪ್ಸ್ ಫಾಲೊ ಮಾಡಿದ್ರೆ ಮಕ್ಕಳೊಂದಿಗೆ ನೀವೂ ಮನೆಯಲ್ಲಿ ಖುಷಿಯಾಗಿ ಇರ್ತೀರಿ -ಮನದ ಮಾತು

ಭವ್ಯಾ ವಿಶ್ವನಾಥ್: ಬೇಸಿಗೆ ರಜೆಯಲ್ಲಿ ಮಕ್ಕಳು ಮತ್ತು ಪೋಷಕರು ತಮ್ಮ ದಿನಚರಿಯಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಂಡರೆ ಖಂಡಿತವಾಗಿಯೂ ರಜೆಯನ್ನು ಯಾವುದೇ ಒತ್ತಡ, ಬೇಸರವಿಲ್ಲದೆ ಕಳೆಯಬಹುದು. ಪೋಷಕರು ಮತ್ತು ಮಕ್ಕಳಿಗೆ ಅನ್ವಯವಾಗುವ ಒಂದಿಷ್ಟು ಟಿಪ್ಸ್ ಇಲ್ಲಿದೆ. ಈ ಬರಹವನ್ನು ದೊಡ್ಡವರು ಮಾತ್ರವಲ್ಲ, ಮಕ್ಕಳೂ ಓದಬೇಕು.

ಬೇಸಿಗೆ ರಜೆಯಲ್ಲಿ ಮಕ್ಕಳನ್ನು ನಿಭಾಯಿಸಲು ಟಿಪ್ಸ್
ಬೇಸಿಗೆ ರಜೆಯಲ್ಲಿ ಮಕ್ಕಳನ್ನು ನಿಭಾಯಿಸಲು ಟಿಪ್ಸ್ (Pixabay)

ಬೇಸಿಗೆ ರಜೆ ಬಂದಿದೆ. ಮಕ್ಕಳಿಗೆ ಇದು ಖುಷಿಯ ಕಾಲ. ಅವರು ಸಂಭ್ರಮದಿಂದ ಮಜಾ ಮಾಡುತ್ತಿದ್ದರೆ, ಅವರನ್ನು ನೋಡಿಕೊಳ್ಳುವುದರಲ್ಲಿ ಅಪ್ಪ-ಅಮ್ಮ ಹೈರಾಣಾಗುತ್ತಾರೆ. ಮಕ್ಕಳು ಶಾಲೆಗೆ ಹೋಗುವಾಗ ಇರುತ್ತಿದ್ದ ಬೇಗ ಏಳುವುದು, ಎಬ್ಬಿಸುವುದು, ಡಬ್ಬಿ ರೆಡಿ ಮಾಡುವುದು, ಮಕ್ಕಳ ಯೂನಿಫಾರ್ಮ್ ಶೂ ತೆಗೆದಿಡುವ ಕೆಲಸಗಳಿಂದ ಬಿಡುಗಡೆ ಸಿಕ್ಕರೂ ರಜೆಯಲ್ಲಿ ಇಡೀ ದಿನ ಮನೆಯಲ್ಲಿಯೇ ಇರುವ ಮಕ್ಕಳನ್ನು ನಿಭಾಯಿಸುವುದು ಸಹ ದೊಡ್ಡ ಸವಾಲಾಗಿ ಪರಿಣಮಿಸುತ್ತದೆ. ಆದರೆ ಧೃಢ ಸಂಕಲ್ಪದಿಂದ ಒಂದಿಷ್ಟು ಬದಲಾವಣೆಗಳನ್ನು ದಿನಚರಿಯಲ್ಲಿ ಮಾಡಿಕೊಂಡರೆ ಖಂಡಿತವಾಗಿಯೂ ರಜೆಯನ್ನು ಪೋಷಕರು ಮತ್ತು ಮಕ್ಕಳು ಇಬ್ಬರೂ ಸಹ ಯಾವುದೇ ಒತ್ತಡ, ಬೇಸರವಿಲ್ಲದೆ ಕಳೆಯಬಹುದು. ಮಕ್ಕಳಿಗೆ ವಿರಾಮ, ಮಜಾ ಎಷ್ಟು ಮುಖ್ಯವೋ ಶಿಸ್ತು ಕೂಡ ಅಷ್ಟೇ ಮುಖ್ಯ. ಆದರೆ ಒತ್ತಡವಿಲ್ಲದೆ ಮಕ್ಕಳು ಇದನ್ನು ಪಾಲಿಸುವಂತೆ ಮಾಡುವುದು ಪೋಷಕರ ಕೈಲಿದೆ.

ಬೇಸಿಗೆ ರಜೆಯಲ್ಲಿ ಪೋಷಕರು ಹೀಗೆ ಮಾಡಿದರೆ ಮಕ್ಕಳನ್ನು ನಿಭಾಯಿಸುವುದು ಸುಲಭವಾಗುತ್ತೆ

1) ದಿನಚರಿ: ಶಾಲದಿನಗಳ ದಿನಚರಿಯನ್ನು ಸಂಪೂರ್ಣ ಬದಲಿಸಬೇಡಿ. ಮುಂಜಾನೆ ಕನಿಷ್ಠ 8 ರ ಒಳಗೆ ಏಳುವುದು ಮತ್ತು ರಾತ್ರಿ ಗರಿಷ್ಠ 9 ರ ಒಳಗೆ ಮಲಗುವುದನ್ನು ಮಕ್ಕಳಿಗೆ ಅಭ್ಯಾಸ ಮಾಡಿಸಿ. ಮಕ್ಕಳು ರಜೆಯಲ್ಲಿ ತಡವಾಗಿ ಏಳುವುದು ಮತ್ತು ತಡವಾಗಿ ಮಲಗುವುದನ್ನು ರೂಢಿಸಿಕೊಂಡರೆ ಶಾಲೆಗಳು ಮತ್ತೆ ಆರಂಭವಾದಾಗ ಬೇಗನೆ ಏಳುವುದು ಮತ್ತು ಆ ದಿನಚರಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ.

2) ವೇಳಾಪಟ್ಟಿ: ಮಕ್ಕಳು ತಮ್ಮ ದಿನವನ್ನು ಹೇಗೆ ಕಳೆಯಲು ಬಯಸುತ್ತಾರೆ ಎನ್ನುವ ಕುರಿತು ಅವರೊಂದಿಗೆ ಚರ್ಚಿಸಿ ಒಂದು ವೇಳಾಪಟ್ಟಿ ಸಿದ್ಧಪಡಿಸಿ. ಈ ಪ್ರಕ್ರಿಯೆಯಲ್ಲಿ ಮಕ್ಕಳ ಅಭಿಪ್ರಾಯಕ್ಕೆ ಮನ್ನಣೆ ಇರಲಿ. ಬೆಳಿಗ್ಗೆ ಏಳುವ ಹೊತ್ತಿನಿಂದ ಹಿಡಿದು ರಾತ್ರಿ ಮಲಗುವ ಸಮಯದವರೆಗಿನ ಎಲ್ಲ ವಿವರ ಈ ವೇಳಾಪಟ್ಟಿಯಲ್ಲಿ ಇರಲಿ.

3) ಸ್ಕ್ರೀನ್ ಟೈಮ್: ಟಿವಿ, ಮೊಬೈಲ್ ಸಮಯವನ್ನು ನಿಗದಿತಗೆೊಳಿಸಿ. ರಜೆ ದಿನಗಳಲ್ಲಿ ಹೆಚ್ಚು ಸಮಯವನ್ನು ಇವುಗಳಲ್ಲಿಯೇ ಕಳೆಯುವುದರ ಬದಲು, ಶಾಲಾದಿನಗಳಿಗಿಂತ ಸ್ವಲ್ಪ ಹೆಚ್ಚಾಗಲಿ. ಆದರೆ ರಜೆ ಇದೇ ಆಗಬಾರದು.

4) ಜಂಕ್ ಫುಡ್‌ಗೆ ಕಡಿವಾಣ: ಬಹುತೇಕ ಪಟ್ಟಣಗಳಲ್ಲಿ ರಜೆ ಬಂದ ತಕ್ಷಣವೇ ಮಕ್ಕಳು ಜಂಕ್ ಫುಡ್ ಮೊರೆ ಹೋಗುವುದು ಸಾಮಾನ್ಯ. ಆಟವಾಡುತ್ತ, ಟಿವಿ / ಮೊಬೈಲ್ ನೋಡುತ್ತಾ ಜಂಕ್ ಫುಡ್ ತಿನ್ನುವ ಅಭ್ಯಾಸ ರೂಢಿಸಿಕೊಳ್ಳುತ್ತಾರೆ. ಈ ಅಭ್ಯಾಸವೇ ಮುಂದೆ ಚಟವಾಗಿ ಬದಲಾಗಿ ಆರೋಗ್ಯವು ಕೆಡುತ್ತದೆ. ಮನೆಯಲ್ಲಿ ಸಿದ್ಧಪಡಿಸಿದ ಆರೋಗ್ಯಕರ ಅಡುಗೆ ಅಂಥವರಿಗೆ ರುಚಿಯಾಗಿದೆ ಅನ್ನಿಸುವುದಿಲ್ಲ. ರಜೆ ಮುಗಿದ ನಂತರ ಇದೇ ದೊಡ್ಡ ಸಮಸ್ಯೆಯಾಗುತ್ತದೆ. ಮಕ್ಕಳಿಗೆ ಒಂದು ವಾರದಲ್ಲಿ ಗರಿಷ್ಠ 2 ರಿಂದ 3 ಬಾರಿ ಮಾತ್ರ ಜಂಕ್‌ ಫುಡ್‌ ಕೊಡಲು ಸಮಯ ನಿಗದಿಗೊಳಿಸುವುದು ಒಳ್ಳೆಯದು.

5) ⁠ದೈಹಿಕ ಚಟುವಟಿಕೆ ಹೆಚ್ಚಾಗಲಿ: ರಜೆಯಲ್ಲಿ ಮಕ್ಕಳ ಆಟ ಮತ್ತು ವ್ಯಾಯಾಮದ ಪ್ರಮಾಣ ಹೆಚ್ಚಾಗಲಿ. ಹೊರಾಂಗಣ ಕ್ರೀಡೆಗಳಿಗೆ ಹೆಚ್ಚು ಪ್ರೋತ್ಸಾಹ ಕೊಡಿ. ದೇಹವು ದಣಿದಷ್ಟೂ ನಿದ್ದೆ ಚೆನ್ನಾಗಿ ಬರುತ್ತದೆ ಮತ್ತು ಟಿವಿ, ಫೋನ್ ಬಳಕೆಯೂ ಸಹ ಕಡಿಮೆಯಾಗುತ್ತದೆ. ದೈಹಿಕ ಚಟುವಟಿಕೆಯಿಂದ ಮಕ್ಕಳ ಮಿದುಳ ಬೆಳವಣಿಗೆ ಸಹ ಉತ್ತಮವಾಗುತ್ತದೆ.

6) ⁠ಮನೆಕೆಲಸ ಮಾಡಿಸಿ: ಮಕ್ಕಳಿಂದ ಮನೆಯ ಯಾವುದೇ ಕೆಲಸ ಮಾಡಿಸಬಾರದು ಎನ್ನುವ ಮನಃಸ್ಥಿತಿಯನ್ನು ಕೆಲ ಪೋಷಕರು ರೂಢಿಸಿಕೊಂಡಿರುತ್ತಾರೆ. ಇದು ತಪ್ಪು. ಮನೆಯಲ್ಲಿ ಕಸ ಗುಡಿಸುವುದು, ಪತ್ರಿಕೆ ಜೋಡಿಸುವುದು, ಬಟ್ಟೆ ಮಡಿಸುವುದು, ವಾಹನ ಸ್ವಚ್ಛಗೊಳಿಸುವುದು, ಗಿಡಗಳ ನಿರ್ವಹಣೆ, ಅಡುಗೆಗೆ ಸಹಕಾರ ಸೇರಿದಂತೆ ಸಣ್ಣಪುಟ್ಟ ಕೆಲಸಗಳಲ್ಲಿ ಮಕ್ಕಳನ್ನು ಳನ್ನು ಮನೆಯ ಸಣ್ಣಪುಟ್ಟ ಕೆಲಸ ಕಾಯ೯ಗಳಲ್ಲಿ ತೊಡಗಿಸಿದರೆ ಪೋಷಕರಿಗೂ ಸಹಾಯವಾಗುತ್ತದೆ. ಮಕ್ಕಳಿಗೂ ಜವಾಬ್ಧಾರಿ ಬರುತ್ತದೆ. ಮುಂದೆ ಅವರಿಗೆ ಇಂಥ ಕೆಲಸ ಗಂಡಸರದು, ಇಂಥ ಕೆಲಸ ಹೆಂಗಸರದು ಎನ್ನುವ ಮನೋಭಾವ ಬೆಳೆಯುವುದಿಲ್ಲ. ಎಲ್ಲ ರೀತಿಯ ಕೆಲಸಗಳಿಗೂ ಗೌರವಿಸುವುದನ್ನು ಕಲಿಯುತ್ತಾರೆ.

7) ⁠ಓದುವುದು ಮತ್ತು ಬರೆಯುವುದು: ಈಗ ಕೆಲ ಮಕ್ಕಳಿಗೆ ಇಂಗ್ಲಿಷ್ ಬಿಟ್ಟು ಬೇರೆ ಭಾಷೆಯಲ್ಲಿ ಓದು-ಬರಹ ಸಾಧ್ಯವಾಗುವುದಿಲ್ಲ. ಕೆಲ ಮಕ್ಕಳಿಗೆ ಕನ್ನಡ ಬಿಟ್ಟರೆ ಮತ್ತೊಂದು ಭಾಷೆ ಬರುವುದಿಲ್ಲ. ಹೊಸ ಭಾಷೆ ಕಲಿಕೆಗೆ, ಬಳಕೆಗೆ ಬೇಸಿಗೆ ರಜೆ ಹೇಳಿ ಮಾಡಿಸಿದ್ದು. ಉದಾ: ಮಕ್ಕಳ ಅಗತ್ಯಕ್ಕೆ ತಕ್ಕಂತೆ ಕನ್ನಡ / ಇಂಗ್ಲಿಷ್ / ಹಿಂದಿ ಅಥವಾ ನಿಮ್ಮಿಷ್ಟದ ಯಾವುದೇ ಭಾಷೆಯ ದಿನಪತ್ರಿಕೆ, ಕಥೆ ಪುಸ್ತಕ, ನಿಯತಕಾಲಿಕೆಗಳನ್ನು ಓದಲು ಪ್ರೋತ್ಸಾಹಿಸಿ. ಸ್ವತಂತ್ರವಾಗಿ ಪ್ರಬಂಧ ಬರೆಯಲು, ಕಥೆ-ಕವನ ಬರೆಯಲು ಐಡಿಯಾ ಕೊಡಿ.

8) ಸಮಾಜ ಸೇವೆ: ಸಣ್ಣ ವಯಸ್ಸಿನಿಂದಲೇ ಮಕ್ಕಳನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸುವುದು ಸಹ ಒಳ್ಳೆಯದು. ಶಾಲೆಗೆ ರಜೆ ಇದ್ದಾಗ ಇಂಥ ಚಟುವಟಿಕೆಗಳನ್ನು ಆರಂಭಿಸಬಹುದು.

-ಉದಾ: ಬಡ ಜನಗಳಿಗೆ (ಮಕ್ಕಳು/ ವೃಧ್ದರಿಗೆ) ಸಣ್ಣ ಸೇವೆಯನ್ನು ಸಲ್ಲಿಸುವುದು, ಸಣ್ಣ ತರಗತಿಯ ಮಕ್ಕಳಿಗೆ ಪಾಠ ಹೇಳಿಕೊಡುವುದು, ಪರಿಸರ ಸ್ನೇಹಿ ಚಟುವಟಿಕೆಗಳು, ಮನೆಯಲ್ಲಿಯೇ ಗಿಡ ಮರಗಳನ್ನು ನೋಡಿಕೊಳ್ಳುವ ಜವಾಬ್ಧಾರಿ ಕೊಡುವುದು ಇತ್ಯಾದಿ

ಈ ಚಟುವಟಿಕೆಗಳು ಆರಂಭದಲ್ಲಿ ರೂಢಿಸಿಕೊಳ್ಳಲು ಕಷ್ಟವಾಗಬಹುದು. ಆದರೆ ಕಾಲಕ್ರಮೇಣ ಅಭ್ಯಾಸವಾಗುತ್ತದೆ. ಆರಂಭದಲ್ಲಿ ವಿಫಲರಾದೆವೆಂದು ನಿರಾಸೆಯಿಂದ ಯಾವುದೇ ಚಟುವಟಿಕೆ ನಿಲ್ಲಿಸಬೇಡಿ. ಸತತ ಪ್ರಯತ್ನವಿರಲಿ. ಒಳ್ಳೆಯ ಮಾತಿನಲ್ಲಿ, ಶಿಕ್ಷೆ ವಿಧಿಸದೇ , ಬೈಯದೇ ಮಕ್ಕಳನ್ನು ದಾರಿಗೆ ತನ್ನಿ. ಪೋಷಕರೇ ಮಕ್ಕಳಿಗೆ ಆದರ್ಶ. ಪೋಷಕರು ಇಂಥ ಅಭ್ಯಾಸ, ಶಿಸ್ತು ಪಾಲಿಸಿದರೆ ಮಕ್ಕಳಿಗೆ ರೂಢಿಸಿಕೊಳ್ಳಲು ಸುಲಭವಾಗುತ್ತದೆ.

ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು
ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು

ಭವ್ಯಾ ವಿಶ್ವನಾಥ್ ಪರಿಚಯ

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542.

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.