ಮಕ್ಕಳು ಇಷ್ಟಪಡುವ ಪೋಷಕರು ನೀವಾಗಬೇಕೆಂಬ ಆಸೆಯಿದೆಯೇ? ಹಾಗಿದ್ದರೆ ಈ 4 ರೀತಿಯ ಪೇರೆಂಟಿಂಗ್ ಬಗ್ಗೆ ನಿಮಗೆ ಗೊತ್ತಿರಲೇಬೇಕು: ಮನದ ಮಾತು
ಭವ್ಯಾ ವಿಶ್ವನಾಥ್: ಮಕ್ಕಳು ಚೆನ್ನಾಗಿರಬೇಕು, ಅವರ ಭವಿಷ್ಯ ಉಜ್ವಲವಾಗಬೇಕು ಎಂದು ಎಲ್ಲ ಪೋಷಕರು ಬಯಸುತ್ತಾರೆ. ಮಕ್ಕಳನ್ನು ಬೆಳೆಸುವ ವಿಧಾನದಲ್ಲಿ 4 ರೀತಿಯ ಶೈಲಿಗಳನ್ನು ಮನಃಶಾಸ್ತ್ರಜ್ಞರು ಗುರುತಿಸಿದ್ದಾರೆ. ಈ ಪೈಕಿ ನಿಮ್ಮ ಶೈಲಿ ಯಾವುದು? ನಿಮ್ಮ ಕ್ರಮದಲ್ಲಿರುವ ಸರಿ-ತಪ್ಪುಗಳೇನು? ತಿಳಿಯೋಣ ಬನ್ನಿ.
ಮಕ್ಕಳನ್ನು ಬೆಳೆಸುವುದು ಸುಲಭವಲ್ಲ. ಮಕ್ಕಳನ್ನು ಸರಿಯಾಗಿ ಸಾಕಬೇಕು ಎನ್ನುವ ಕಾರಣಕ್ಕೆ ಕೆಲಸ ಬಿಟ್ಟ ಎಷ್ಟೋ ಜನರನ್ನು ನಾವು ನೋಡಿದ್ದೇವೆ. ಆದರೆ ಮಕ್ಕಳನ್ನು ಚೆನ್ನಾಗಿ ಬೆಳೆಸುವ ಧಾವಂತದಲ್ಲಿ ಪೋಷಕರು ಎರಡು ಮುಖ್ಯ ತಪ್ಪುಗಳನ್ನು ಮಾಡುತ್ತಾರೆ. ಮಕ್ಕಳನ್ನು ಅತಿಯಾಗಿ ಮುದ್ದಿಸುವುದೂ ತಪ್ಪು, ಅತಿಯಾಗಿ ಶಿಕ್ಷಿಸುವುದೂ ತಪ್ಪು. ಮಕ್ಕಳನ್ನು ಬೆಳೆಸುವುದರಲ್ಲಿ ಒಂದು ಹದ ಇರಬೇಕು ಎಂದು ಹಿರಿಯರು ಹೇಳುವುದನ್ನು ಕೇಳಿರುತ್ತೇವೆ. ಮಕ್ಕಳನ್ನು ಬೆಳೆಸುವ 4 ಮುಖ್ಯ ವಿಧಾನಗಳನ್ನು ಮನಃಶಾಸ್ತ್ರರು ಗುರುತಿಸಿದ್ದಾರೆ. ಪ್ರತಿ ವಿಧಾನದಲ್ಲಿಯೂ ಸಂವಹನ, ಶಿಸ್ತು, ಪೋಷಣೆ ಮತ್ತು ಮಕ್ಕಳಿಂದ ನಿರೀಕ್ಷೆ ಪ್ರತ್ಯೇಕವಾಗಿಯೇ ಇರುತ್ತದೆ. ಇಲ್ಲಿರುವ ಎಲ್ಲ 4 ವಿಧಾನಗಳನ್ನು ನೀವು ಸಾವಧಾನವಾಗಿ ಓದಿಕೊಳ್ಳಿ. ನಿಮ್ಮ ಶೈಲಿ ಯಾವುದು? ನಿಮ್ಮ ಮಕ್ಕಳ ಸ್ವಭಾವಕ್ಕೆ ಯಾವ ರೀತಿಯ ಪೇರೆಂಟಿಂಗ್ ಸೂಕ್ತ ಎನ್ನುವುದನ್ನು ಕಂಡುಕೊಳ್ಳಲು ನೆರವಾಗಬಹುದು.
1) ನಾನು ಸರಿ, ನಾನು ಹೇಳಿದಂತೆ ಕೇಳು ಸಾಕು: ಸರ್ವಾಧಿಕಾರಿ ಮನೋಭಾವದ ಪೋಷಕರು (Authoritative Parenting)
ಮಕ್ಕಳನ್ನು ಬೆಳೆಸಲು ಈ ಶೈಲಿ ಅನುಸರಿಸುವ ಪೋಷಕರು ಕಟ್ಟುನಿಟ್ಟಾದ, ಶಿಸ್ತು, ಕ್ರಮಬದ್ಧವಾದ ಪಾಲನೆಗೆ ಹೆಚ್ಚು ಒತ್ತು ಕೊಡುತ್ತಾರೆ. ಶಿಸ್ತಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಮಕ್ಕಳು ಪೋಷಕರು ಹಾಕಿದ ನಿಯಮಗಳನ್ನು ಬದ್ಧತೆಯಿಂದ, ವಿನಯದಿಂದ ಪಾಲಿಸಬೇಕೆಂದು ಬಯಸುತ್ತಾರೆ. ಮಕ್ಕಳು ಇದನ್ನು ಈಡೇರಿಸದ ಪಕ್ಷದಲ್ಲಿ ಕಠಿಣ ಶಿಕ್ಷೆಯನ್ನು ವಿಧಿಸುತ್ತಾರೆ. ಭಯ, ಹೆದರಿಕೆಯಿಂದ ಮಕ್ಕಳನ್ನು ದಾರಿಗೆ ತರುವ ಪ್ರಯತ್ನ ಇವರದು. ಮಕ್ಕಳೆಂದರೆ ಹೀಗೆಯೇ ಇರಬೇಕು, ನಮ್ಮ ನಿರೀಕ್ಷೆಗಳನ್ನೆಲ್ಲಾ ಪೂರೈಸಬೇಕು ಎನ್ನುವ ನಿರೀಕ್ಷೆ ಇರಿಸಿಕೊಂಡಿರುತ್ತಾರೆ.
ಪೋಷಕರಾದ ನಾವು ಮಕ್ಕಳಿಗಿಂತ ಹಿರಿಯರು, ಎಲ್ಲವನ್ನು ಬಲ್ಲವರು, ತಿಳಿದವರು, ಅನುಭವ ಉಳ್ಳವರು, ಮಕ್ಕಳ ಒಳಿತನ್ನು ಬಯಸುವವರು, ಆದ್ದರಿಂದ ನಮ್ಮ ಮಾತನ್ನು ಮಕ್ಕಳು ನಿರಾಕರಿಸದೆ ಚಾಚು ತಪ್ಪದೇ ಪಾಲಿಸಬೇಕೆಂಬ ಅಭಿಪ್ರಾಯ ಇವರದ್ದಾಗಿರುತ್ತದೆ. ಮಕ್ಕಳು ತಪ್ಪು ಮಾಡಿದಾಗ ಶಿಕ್ಷೆ ವಿಧಿಸುವುದೇ ಸರಿಯಾದ ಕ್ರಮ ಎನ್ನುವುದು ಇವರ ನಂಬಿಕೆ.
ಇಂಥ ಪೋಷಕರ ಬಳಿ ಸಂಭಾಷಣೆಗೆ ಹೆಚ್ಚು ಅವಕಾಶವಿರುವುದಿಲ್ಲ. ಇವರು ಮಕ್ಕಳಿಗೂ ಹೆಚ್ಚು ಸ್ವಾತಂತ್ರ್ಯ ಕೊಡುವುದಿಲ್ಲ. ಮಕ್ಕಳ ಅಭಿರುಚಿ, ಅಭಿಪ್ರಾಯವನ್ನು ಪರಿಗಣಿಸುವುದು ಬಹಳ ಕಡಿಮೆ. ಮಕ್ಕಳು ತಮ್ಮ ವಿಚಾರ ಅನಿಸಿಕೆ ವ್ಯಕ್ತಪಡಿಸಲು ಅವಕಾಶ ನೀಡುವುದಿಲ್ಲ. ಮಕ್ಕಳು ತಿರುಗುತ್ತರ ಕೊಟ್ಟರೆ ಅಥವಾ ಪ್ರಶ್ನೆಗಳನ್ನು ಕೇಳಿದರೆ, ಪೋಷಕರಿಗೆ ಇದು ಅಗೌರವ ಕೊಟ್ಟಂತೆ ಭಾಸವಾಗುತ್ತದೆ. ಇದರಿಂದ ಕೋಪಗೊಂಡು ಶಿಕ್ಷೆ ವಿಧಿಸುವ ಸಾಧ್ಯತೆ ಹೆಚ್ಚು. ಮಕ್ಕಳನ್ನು ಅತೀಯಾಗಿ ಹೀಯಾಳಿಸುವುದು, ನಿಂದಿಸುವುದು, ಹೊಡೆಯುವುದು ಇಂತಹ ಪೋಷಕರಲ್ಲಿ ಹೆಚ್ಚಾಗಿರುತ್ತದೆ
ಮಕ್ಕಳ ಆಥಿ೯ಕ, ಶೈಕ್ಷಣಿಕ, ದೈಹಿಕ ಅಗತ್ಯದ ಹಾಗೂ ಜವಾಬ್ಧಾರಿಯನ್ನು ನಿರ್ವಹಿಸುತ್ತಾರೆ. ಆದರೆ ಮಕ್ಕಳ ಮಾನಸಿಕ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸುವುದಿಲ್ಲ. ಪ್ರೀತಿಯನ್ನು ಹಿತಕರವಾಗಿ ವ್ಯಕ್ತಪಡಿಸುವುದಿಲ್ಲ. ಶಿಸ್ತು, ನಿಯಮಗಳು, ಸೌಲಭ್ಯಗಳ ಮೂಲಕವೇ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಇವರಿಗೆ ಮಕ್ಕಳಿಂದ ಅವರ ವಯಸ್ಸಿಗೆ ಮೀರಿದ ನಿರೀಕ್ಷೆಗಳು ಇರುತ್ತವೆ. ಮಕ್ಕಳು ತಮ್ಮ ಎಲ್ಲ ನಿರೀಕ್ಷೆಗಳನ್ನು ಪೂರೈಸಲೇಬೇಕು ಎಂದು ಬಯಸುತ್ತಾರೆ. ಮಕ್ಕಳ ತಪ್ಪುಗಳನ್ನು, ಅವರಿಂದ ಆಗುವ ಆಶಾಭಂಗಗಳನ್ನು ಸಹಿಸುವುದಿಲ್ಲ
ಇಂಥವರು ಸಾಮಾನ್ಯವಾಗಿ ಹೀಗೆ ಮಾತನಾಡುತ್ತಾರೆ. ಉದಾ: 'ನಾನು ನಿನ್ನ ಅಮ್ಮ, ಸುಮ್ಮನೇ ಹೇಳಿದ್ದನ್ನು ಮಾಡು ಅಷ್ಟೇ. ಇಲ್ಲದಿದ್ರೆ ಪರಿಣಾಮ ನೆಟ್ಟಗಿರಲ್ಲ'. 'ಪರೀಕ್ಷೆಯಲ್ಲಿ ಇಷ್ಟೇ ಅಂಕಗಳಿಸಬೇಕು. ಪಕ್ಕದ ಮನೆಯ ಹುಡುಗ ನಿನ್ನ ವಯಸ್ಸಿನವನು. ಅವನಷ್ಟೆೇ ಮಾರ್ಕ್ಸ್ ನೀನೂ ತಗೊಬೇಕು. ಇಲ್ಲದಿದ್ರೆ ಪರಿಣಾಮ ಏನಾಗುತ್ತೆ ಅಂತ ನೋಡು'. ಇತ್ಯಾದಿ
2) ಮಕ್ಕಳ ಬೆನ್ನಿಗೆ ಸದಾ ಇರುವ ಅತಿಕಾಳಜಿಯ ಪೋಷಕರು (Indulgent Parenting or Permissive parent)
ಈ ಶೈಲಿಯ ಪೋಷಕರು ಅಧಿಕಾರ ಚಲಾಯಿಸುವ ಪೋಷಕರಿಗೆ ವಿರುದ್ಧವಾಗಿ ವರ್ತಿಸುತ್ತಾರೆ. ಮಕ್ಕಳ ಬಳಿ ಪೋಷಕರಂತೆ ವರ್ತಿಸದೆ, ಸ್ನೇಹಿತರಂತೆ ನಡೆದುಕೆೊಳ್ಳುತ್ತಾರೆ. ಇವರ ಪಾಲನೆಯ ಶೈಲಿಯಲ್ಲಿ ಅತಿಯಾದ ಮಾತುಕತೆ, ಸಂಭಾಷಣೆ ಇರುತ್ತದೆ. ಮಕ್ಕಳನ್ನು ಓಲೈಸಿಕೊಳ್ಳಲು ಹೆಚ್ಚಿನ ಪ್ರಯತ್ನ ಇರುತ್ತದೆ. ಮಕ್ಕಳನ್ನು ಅತಿಯಾಗಿ ಪ್ರೀತಿಸುತ್ತಾರೆ ಮತ್ತು ಅವರ ಕಾಳಜಿ ವಹಿಸುತ್ತಾರೆ. ಮಾನಸಿಕವಾಗಿಯೂ ಮಕ್ಕಳ ಬೆಂಬಲಕ್ಕೆ ನಿಲ್ಲುತ್ತಾರೆ. ತಮ್ಮ ಮಕ್ಕಳು ಏನೇ ತಪ್ಪು ಮಾಡಿದರೂ, ನಿಂದಿಸುವುದಾಗಲಿ, ಹೊಡೆಯುವುದಾಗಲಿ ಅಥವಾ ಬೇರೆ ಯಾವುದೇ ಶಿಕ್ಷೆ ಕೊಡುವುದನ್ನಾಗಲಿ ಮಾಡುವುದಿಲ್ಲ. ತಪ್ಪನ್ನು ತಿದ್ದುವುದೂ ಇಲ್ಲ. ಮಕ್ಕಳಿಗೆ ಸರಿಯಾಗಿ ಮಾರ್ಗದರ್ಶನ ಕೊಡುವುದಿಲ್ಲ. ಸರಿ-ತಪ್ಪುಗಳ ಕುರಿತು ಕನಿಷ್ಠ ಮಾರ್ಗದರ್ಶನ ಕೊಡುತ್ತಾರೆ. ಮಕ್ಕಳಿಗೆ ಯಾವುದೇ ಕಾರಣಕ್ಕೂ ಬೇಸರವಾಗಬಾರದು, ನಿರಾಸೆಯಾಗಬಾರದು ಎಂದು ಬಹಳ ಕಾಳಜಿ ಮಾಡುತ್ತಾರೆ.
ಮಕ್ಕಳ ಮೇಲೆ ಹೆಚ್ಚು ನಿಯಮಗಳು ಮತ್ತು ಶಿಸ್ತನ್ನು ಹೇರುವುದಿಲ್ಲ. ಮಕ್ಕಳ ಸಮಸ್ಯೆಗಳನ್ನು ತಾವೇ ಬಗೆಹರಿಸಲು ಬಯಸುತ್ತಾರೆ. ಮಕ್ಕಳಿಗೆ ಸಾಧ್ಯವಾದಮಟ್ಟಿಗೂ ತೊಂದರೆ, ಕಷ್ಟ, ನೋವುಗಳಾಗದಂತೆ ನೋಡಿಕೊಳ್ಳುತ್ತಾರೆ. ಮಕ್ಕಳನ್ನು ಇವರು ಅತಿಯಾಗಿ ಪ್ರೀತಿಸುತ್ತಾರೆ. ಹಾಗೆಯೇ ಮಕ್ಕಳು ಸಹ. ತಮ್ಮನ್ನು ಅತಿಯಾಗಿ ಪ್ರೀತಿಸಬೇಕೆಂದು ಬಯಸುತ್ತಾರೆ. ಮಕ್ಕಳ ಇಷ್ಟಕ್ಕೆ ವಿರೋಧ ಮಾಡುವುದಿಲ್ಲ. ಮಕ್ಕಳ ಏನು ಮಾಡಬೇಕೆಂದು ಬಯಸುತ್ತಾರೋ ಅವೆಲ್ಲವನ್ನೂ ಮಾಡುವುದಕ್ಕೆ ಪ್ರೋತ್ಸಾಹ ನೀಡುತ್ತಾರೆ. ಮಕ್ಕಳ ಬಯಕೆಗಳನ್ನು ಆದಷ್ಟು ಈಡೇರಿಸುವುದಕ್ಕೆ ಪ್ರಯತ್ನಿಸುತ್ತಾರೆ.
3) ಮಕ್ಕಳನ್ನೇ ನಿರ್ಲಕ್ಷ್ಯ ಮಾಡುವ ಪೋಷಕರು (Neglectful parents)
ಹೆಸರೇ ಸೂಚಿಸುವಂತೆ ಈ ರೀತಿಯ ಪೋಷಕರು ಮಕ್ಕಳ ಕುರಿತು ನಿರ್ಲಕ್ಷ್ಯ ಧೋರಣೆ ಹೊಂದಿರುತ್ತಾರೆ. ಪೋಷಕರು ಈ ರೀತಿ ನಡೆದುಕೊಳ್ಳುವುದಕ್ಕೆ ಹಲವು ಕಾರಣ ಇರಬಹುದು. ಉದಾ: ಪೋಷಕರು ತಮ್ಮ ವೃತ್ತಿಯಲ್ಲಿ ಅತಿಯಾಗಿ ಬ್ಯುಸಿ ಇರಬಹುದು. ಅಥವಾ ಮಾನಸಿಕ ಕಾಯಿಲೆಯಿಂದ ಬಳಲುತ್ತಿರಬಹುದು. ಇಂಥ ಪೋಷಕರು ಮಕ್ಕಳ ಬಗ್ಗೆ ತಲೆಯನ್ನೇ ಕೆಡಿಸಿಕೆೊಳ್ಳುವುದಿಲ್ಲ. ಮಕ್ಕಳ ಬಗ್ಗೆ ಕಾಳಜಿ ಕಡಿಮೆಯಿದ್ದು ಏನೇ ಸಮಸ್ಯೆಯಿದ್ದರೂ ಅವರೇ ಬಗೆಹರಸಿಕೊಳ್ಳಲಿ ಎನ್ನುವ ಧೋರಣೆ ಹೊಂದಿರುತ್ತಾರೆ. ಅಧಿಕಾರ ಚಲಾಯಿಸುವ ಪೋಷಕರು ಅಥವಾ ಅತೀಕಾಳಜಿಯ ಪೋಷಕರ ತರಹ ಮಕ್ಕಳ ಬಗ್ಗೆ ಗಮನವೇ ಹರಿಸುವುದಿಲ್ಲ. ಮಕ್ಕಳು ಏನಾದರೂ ಒಳ್ಳೆಯ ಕೆಲಸ ಮಾಡಿದರೆ ಇವರಿಗೆ ಸಂತೋಷವೂ ಆಗುವುದಿಲ್ಲ. ಇವರು ಮಕ್ಕಳ ತಪ್ಪುಗಳನ್ನೂ ಗುರುತಿಸುವುದಿಲ್ಲ. ಗುರುತಿಸಿದರೂ ತಿದ್ದುವುದಿಲ್ಲ. ಅದಕ್ಕಾಗಿ ಶಿಕ್ಷೆ ವಿಧಿಸುವುದಿಲ್ಲ. ಮಕ್ಕಳಿಗೆ ತಮಗೆ ಬಯಸಿದ್ದನ್ನು ಮಾಡುವುದಕ್ಕೆ ಸಾಕಷ್ಟು ಸ್ವಾತಂತ್ರ್ಯವಿರುತ್ತದೆ.
ಇಂಥ ಪೋಷಕರು ಮಕ್ಕಳ ಮೇಲೆ ಯಾವುದೇ ರೀತಿಯ ಶಿಸ್ತು, ನಿಯಮಗಳನ್ನು ಹೇರುವುದಿಲ್ಲ. ಮಕ್ಕಳೊಂದಿಗೆ ಮಾತುಕತೆ, ಸಂಭಾಷಣೆಯ ಕೊರತೆ ಇರುತ್ತದೆ. ಮಕ್ಕಳ ಮತ್ತು ಪೋಷಕರ ನಡುವೆ ಅಥ೯ಪೂಣ೯, ಪರಿಪೂಣ೯ ಸಂಭಾಷಣೆ ಕಡಿಮೆ. ಸಂವಹನವು ಕನಿಷ್ಠ ಮಟ್ಟದಲ್ಲಿ ಇರುತ್ತದೆ.
ಮಕ್ಕಳ ಮೇಲೆ ಪ್ರೀತಿ ಇದ್ದರೂ ಸಮರ್ಪಕವಾಗಿ ವ್ಯಕ್ತಪಡಿಸುವುದಿಲ್ಲ. ಮಕ್ಕಳಿಗೆ ಅಗತ್ಯವಿರುವ ಮಾನಸಿಕ ಬೆಂಬಲವನ್ನೂ ಕೊಡುವುದಿಲ್ಲ. ಭಾವನೆಗಳ ನಿರ್ಲಕ್ಷಿಸುತ್ತಾರೆ, ಸ್ವತಃ ತಮ್ಮ ಭಾವನೆಗಳನ್ನೂ ನಿಗ್ರಹಿಸುತ್ತಾರೆ. ಸಹಾನುಭೂತಿಯ ಕೊರತೆ ಹಾಗೂ ಮೌನವು ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಈ ರೀತಿಯ ಪೋಷಕರಿಗೆ ಮಕ್ಕಳಿಂದ ಹೆಚ್ಚಿನ ನಿರೀಕ್ಷೆಗಳೂ ಏನೂ ಇರುವುದಿಲ್ಲ.
4) ಮಕ್ಕಳನ್ನು ಸಮಾನವಾಗಿ ಕಾಣುವ ಪೋಷಕರು (Democratic Parents)
ಈ ಶೈಲಿಯ ಪೋಷಕರು ಮನೆಗಳಲ್ಲಿ, ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪಾಲಿಸುತ್ತಾರೆ. ಅಂದರೆ ಮಕ್ಕಳಿಗೂ ದೊಡ್ಡವರಿಗೆ ಸಮನಾದ ಗೌರವ ಕೊಡುತ್ತಾರೆ. ಹಕ್ಕು, ಕತ೯ವ್ಯಗಳು ಮಕ್ಕಳ ಹಾಗೂ ಪೋಷಕರ ನಡುವೆ ಸಕ್ರಿಯವಾಗಿರುತ್ತದೆ. ಮಕ್ಕಳನ್ನು ಬೆಳೆಸುವ ವಿಚಾರದಲ್ಲಿ ಈ ಶೈಲಿಯನ್ನು ಆದರ್ಶ ಎಂದು ಪರಿಗಣಿಸಲಾಗಿದೆ. ಇಂಥ ಪೋಷಕರು ಮಕ್ಕಳೊಂದಿಗೆ ಮುಕ್ತವಾಗಿ ಮಾತನಾಡುತ್ತಾರೆ. ಎರಡೂ ಕಡೆಯಿಂದಯೂ ಗೌರವಾರ್ಹ ರೀತಿಯಲ್ಲಿ ಮಾತುಕತೆಗಳಾಗುತ್ತವೆ.
ಭಾವನೆಗಳು, ಅಭಿಪ್ರಾಯ, ನಿಧಾ೯ರಗಳನ್ನು ಪರಸ್ಪರ ವ್ಯಕ್ತಪಡಿಸುವುದಕ್ಕೆ ಅವಕಾಶವಿರುತ್ತದೆ. ಮಕ್ಕಳಿಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವ ಸ್ವಾತಂತ್ರ್ಯವಿರುತ್ತದೆ.
ಇಂಥ ಪೋಷಕರು ಶಿಸ್ತಿಗೆ ಆದ್ಯತೆ ಕೊಡುತ್ತಾರೆ ಮತ್ತು ಸ್ವತಃ ಪಾಲಿಸುತ್ತಾರೆ. ಆದರೆ ಮಕ್ಕಳ ಮೇಲೆ ಶಿಸ್ತಿನ ವಿಚಾರಕ್ಕಾಗಿ ಒತ್ಡಡ ಹೇರುವುದಿಲ್ಲ. ಶಿಸ್ತು ಉಲ್ಲಂಘಿಸಿದರೆ ಕಠಿಣ ಶಿಕ್ಷೆಯನ್ನೂ ವಿಧಿಸುವುದಿಲ್ಲ. ಪೋಷಕರು ಶಿಸ್ತಿಗೆ ಸ್ವತಃ ಆದಶ೯ವಾಗುತ್ತಾರೆ. ಮಾತುಕತೆ, ಪ್ರೇರಣೆಯ ಮೂಲಕ ಶಿಸ್ತನ್ನು ಪಾಲಿಸಲು ಉತ್ತೇಜನ ನೀಡುತ್ತಾರೆ. ಮಕ್ಕಳಿಗೆ ನಿಂದನೆ, ಅವಹೇಳನ, ಅನಾರೋಗ್ಯಕರ ಹೋಲಿಕೆಗಳಿರುವುದಿಲ್ಲ. ಪ್ರತಿಯೊಂದನ್ನೂ ವಿವರಿಸಿ, ಕಾರಣಗಳನ್ನು ನೀಡುತ್ತಾರೆ. ವ್ಯವಸ್ಥಿತವಾಗಿ, ಮಾನಸಿಕ ಬೆಂಬಲದಿಂದ ನಿಯಮಗಳನ್ನು ಪಾಲಿಸುವಂತೆ ಪ್ರೋತ್ಸಾಹ ನೀಡುತ್ತಾರೆ. ತಪ್ಪು ಮಾಡಿದರೆ ತಿದ್ದಿಕೊಳ್ಳುವುದಕ್ಕೆ ಅವಕಾಶ ನೀಡುತ್ತಾರೆ. ಸತತ ಮಾಗ೯ದಶ೯ನ ನೀಡುತ್ತಾರೆ.
ಮಕ್ಕಳ ವಯಸ್ಸಿಗೆ ತಕ್ಕ ಮತ್ತು ಆರೋಗ್ಯಕರವಾದ ನಿರೀಕ್ಷೆಗಳಿರುತ್ತವೆ. ಮಕ್ಕಳ ನಿರೀಕ್ಷೆಗಳನ್ನು ಸಹ ಪರಿಗಣಿಸಲಾಗುತ್ತದೆ. ತಮ್ಮ ನಿರೀಕ್ಷೆಗಳನ್ನು ಹೇರುವುದಿಲ್ಲ. ಒಂದು ಪಕ್ಷ ನಿರೀಕ್ಷೆಗಳು ಈಡೇರದಿದ್ದರೆ ಅತಿಯಾಗಿ ನಿರಾಸೆಗೊಂಡು ಮಾನಸಿಕ ಮತ್ತು ದೈಹಿಕ ಶಿಕ್ಷೆ ವಿಧಿಸುವುದಿಲ್ಲ.
ನಿಮ್ಮ ಶೈಲಿ ಯಾವುದು? ನಿಮ್ಮ ಮಕ್ಕಳು ಹೇಗೆ?
ಹೀಗೆ ನಮ್ಮ ಸುತ್ತಲು ವಿಭಿನ್ನ ಶೈಲಿಯ ಪೋಷಕರು ಇರುತ್ತಾರೆ. ಪ್ರತಿ ಕುಟುಂಬ, ಪ್ರತಿ ತಂದೆತಾಯಿ ಸಹ ತಮ್ಮ ಅಗತ್ಯಕ್ಕೆ ತಕ್ಕಂತೆ ತಮ್ಮದೇ ಆದ ಶೈಲಿಯನ್ನು ರೂಢಿಸಿಕೊಂಡಿರುತ್ತಾರೆ. ಈ ಪೈಕಿ ಯಾವುದಾದರೂ ಒಂದು ಶೈಲಿಯನ್ನು ಪರಿಪೂರ್ಣ ಎಂದು ಹೇಳಲು ಆಗುವುದಿಲ್ಲ. ಯಾರೋ ಒಬ್ಬ ಪೋಷಕರನ್ನು ಪರಿಪೂರ್ಣ ಎಂದು ಹೇಳಲು ಆಗುವುದಿಲ್ಲ. ನಿಮ್ಮ ಪೇರೆಂಟಿಂಗ್ ಶೈಲಿ ಯಾವುದು? ಅದು ಸರಿಯಾಗಿದೆಯೇ? ಅಥವಾ ಏನಾದರೂ ಬದಲಾವಣೆ ಮಾಡಿಕೊಳ್ಳಬೇಕೆ ಎಂದು ತಿಳಿಯಲು ಆಪ್ತ ಸಮಾಲೋಚಕರ ನೆರವು ಪಡೆದುಕೊಳ್ಳಿ.
ಭವ್ಯಾ ವಿಶ್ವನಾಥ್ ಪರಿಚಯ
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.
ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542.