logo
ಕನ್ನಡ ಸುದ್ದಿ  /  ಜೀವನಶೈಲಿ  /  Ghati Subramanya: ಷಣ್ಮುಖನ ಬೆನ್ನಿಗೆ ನರಸಿಂಹ ಇರುವ ಅಪರೂಪದ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ

Ghati Subramanya: ಷಣ್ಮುಖನ ಬೆನ್ನಿಗೆ ನರಸಿಂಹ ಇರುವ ಅಪರೂಪದ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ

HT Kannada Desk HT Kannada

Aug 20, 2023 12:00 PM IST

google News

ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಸುಬ್ರಹ್ಮಣ್ಯ ಹಾಗೂ ನರಸಿಂಹ ದೇವರು (ಎಡಚಿತ್ರ)

    • Ghati Subramanya ಕ್ಷೇತ್ರದಲ್ಲಿ ಸಾವಿರಾರು ನಾಗರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ನಾಗರ ಪಂಚಮಿ, ಷಷ್ಠಿ, ಚಂಪಾ ಷಷ್ಠಿ, ನಾಗರ ಚೌತಿ ದಿನಗಳಂದು ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. (ಬರಹ: ಅಕ್ಷರಾ ಕಿರಣ್)
ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಸುಬ್ರಹ್ಮಣ್ಯ ಹಾಗೂ ನರಸಿಂಹ ದೇವರು (ಎಡಚಿತ್ರ)
ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಸುಬ್ರಹ್ಮಣ್ಯ ಹಾಗೂ ನರಸಿಂಹ ದೇವರು (ಎಡಚಿತ್ರ)

ಶ್ರಾವಣ ಮಾಸದ ಮೊದಲ ಹಬ್ಬವೇ ನಾಗರಪಂಚಮಿ. ಈ ಬಾರಿ ಸೋಮವಾರ (ಆಗಸ್ಟ್ 21) ನಾಗರಪಂಚಮಿ ನಡೆಯಲಿದೆ. ಬೆಂಗಳೂರಿನ ಸಮೀಪವೇ ಇರುವ ಪ್ರಸಿದ್ಧ ಯಾತ್ರಾಸ್ಥಳ ಘಾಟಿ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿ ಪ್ರಯುಕ್ತ ವಿಶೇಷ ಪೂಜೆ ನಡೆಯಲಿದೆ. ಅಂದು ಸಾವಿರಾರು ಮಂದಿ ದೇಗುಲಕ್ಕೆ ಭೇಟಿ ನೀಡಿ, ಸುಬ್ರಹ್ಮಣ್ಯೇಶ್ವರ ಮತ್ತು ನರಸಿಂಹ ಸ್ವಾಮಿಯ ಆಶೀರ್ವಾದ ಪಡೆಯಲಿದ್ದಾರೆ.

ಬೆಂಗಳೂರಿನಿಂದ ಘಾಟಿ ಸುಬ್ರಹ್ಮಣ್ಯವು 60 ಕಿಲೋಮೀಟರ್ ದೂರದಲ್ಲಿದೆ. ಸುಂದರ ಪ್ರಕೃತಿಯ ನಡುವಿನಲ್ಲಿರುವ ಈ ತೀರ್ಥಕ್ಷೇತ್ರಕ್ಕೆ ಬರಲು ಬಸ್ ವ್ಯವಸ್ಥೆಯೂ ಚೆನ್ನಾಗಿದೆ. ಬೆಂಗಳೂರಿನಿಂದ ಘಾಟಿಗೆ ನೇರ ಸಂಪರ್ಕ ಕಲ್ಪಿಸುವ ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳು ಇವೆ. ನೇರ ಬಸ್ ಸಿಗದಿದ್ದರೆ ದೊಡ್ಡಬಳ್ಳಾಪುರಕ್ಕೆ ಬಂದು, ಅಲ್ಲಿಂದ ಬಸ್ ಅಥವಾ ಆಟೊಗಳಲ್ಲಿ ಘಾಟಿ ತಲುಪಬಹುದು. ಸ್ವಂತ ವಾಹನಗಳಲ್ಲಿ ಬರುವವರ ಸಂಖ್ಯೆಯೂ ಗಮನಾರ್ಹ ಪ್ರಮಾಣದಲ್ಲಿದೆ.

ಈ ದೇವಾಲಯಕ್ಕೆ 600 ವರ್ಷಗಳಿಗೂ ಹೆಚ್ಚು ಇತಿಹಾಸವಿದೆ. ಈ ದೇವಾಲಯವನ್ನು ಬಳ್ಳಾರಿಯ ಸಂಡೂರಿನ ಘೋರ್ಪಡೆ ಅರಸರು ಅಭಿವೃದ್ಧಿಪಡಿಸಿದ್ದಾರೆ ಎಂಬ ಇತಿಹಾಸವಿದೆ. ಈ ದೇವಾಲಯದ ವೈಶಿಷ್ಟ್ಯ ಎಂದರೆ ಇಲ್ಲಿ ಒಂದೇ ಕಲ್ಲಿನಲ್ಲಿ ಕೆತ್ತಲಾಗಿರುವ ಸುಬ್ರಹ್ಮಣ್ಯ ಹಾಗೂ ನರಸಿಂಹ ದೇವರುಗಳನ್ನು ಪೂಜಿಸಲಾಗುತ್ತದೆ. ಸುಬ್ರಮಣ್ಯನ ವಿಗ್ರಹವು ಪೂರ್ವಾಭಿಮುಖವಾಗಿದ್ದರೆ ನರಸಿಂಹನ ವಿಗ್ರಹವು ಪಶ್ಚಿಮಾಭಿಮುಖವಾಗಿದೆ.

ಕ್ಷೇತ್ರದಲ್ಲಿ ಸಾವಿರಾರು ನಾಗರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ನಾಗರ ಪಂಚಮಿ, ಷಷ್ಠಿ, ಚಂಪಾ ಷಷ್ಠಿ, ನಾಗರ ಚೌತಿ ದಿನಗಳಂದು ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ದೇವಾಲಯದ ಹೊರಗೆ ಪ್ರತಿಷ್ಠಾಪಿಸಲಾಗಿರುವ ನಾಗರಕಲ್ಲುಗಳಿಗೆ ಭಕ್ತರು ಹಾಲನ್ನು ಅರ್ಪಿಸುತ್ತಾರೆ. ಈ ಕ್ಷೇತ್ರದಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ನಾಗರಕಲ್ಲುಗಳಿವೆ.

ನಾಗರ ಪಂಚಮಿಯಂದು ಘಾಟಿ ಸುಬ್ರಹ್ಮಣ್ಯದಲ್ಲಿ ದೇವರ ದರ್ಶನ ಪಡೆದರೆ ಅಭಿವೃದ್ಧಿ ಮತ್ತು ಶ್ರೇಯಸ್ಸು ಸಿಗಲಿದೆ ಎಂಬ ನಂಬಿಕೆ ಭಕ್ತರಲ್ಲಿದೆ. ನಾಗದೋಷ ನಿವಾರಣೆಗೂ ಕೂಡ ಇಲ್ಲಿಗೆ ಬಂದು ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸುತ್ತಾರೆ. ನಾಗರ ಕಲ್ಲುಗಳನ್ನು ಸ್ವಚ್ಛವಾದ ಶುದ್ಧ ನೀರಿನಿಂದ ತೊಳೆದು ಅರಿಶಿನ ಕುಂಕುಮ ಹೂವಿಟ್ಟು ನಂತರ ನಾಗರ ಕಲ್ಲಿಗೆ ಹಾಲೆರೆಯುತ್ತಾರೆ. ಪ್ರತಿ ವರ್ಷ ನಾಗರಪಂಚಮಿ ಎಂದು ನಾಗರಕಲ್ಲಿಗೆ ತನ್ನಿರೆದರೆ ಸರ್ಪದೋಷ ನಿವಾರಣೆಯಾಗಲಿದೆ ಎಂಬ ನಂಬಿಕೆ ಹಿರಿಯರದ್ದು ಹೀಗಾಗಿಯೇ, ಇಂತಹ ಆಚರಣೆಗಳು ಕುಟುಂಬಗಳ ಹಿರಿಯರಿಂದ ನಡೆದುಕೊಂಡು ಬಂದಿರುತ್ತದೆ.

ಘಾಟಿ ಸುಬ್ರಹ್ಮಣ್ಯದಲ್ಲಿ ನಾಗರ ಪಂಚಮಿಯಂದು ವಿಶೇಷ ಪೂಜೆ ಹಾಗೂ ಅಲಂಕಾರಗಳು ನಡೆಯಲಿವೆ. ದೇವಾಲಯಕ್ಕೆ ಬೆಳಗ್ಗಿನಿಂದಲೇ ಭಕ್ತರು ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಘಾಟಿ ಕ್ಷೇತ್ರದಲ್ಲಿ ವರ್ಷಕ್ಕೊಮ್ಮೆ ನಡೆಯುವ ಜಾನುವಾರುಗಳ ಜಾತ್ರೆಯೂ ರಾಜ್ಯದ ರೈತರ ವಲಯದಲ್ಲಿ ಪ್ರಸಿದ್ಧವಾಗಿದೆ. ಡಿಸೆಂಬರ್ ತಿಂಗಳಲ್ಲಿ ನಡೆಯುವ ಈ ಜಾತ್ರೆಗೆ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು ತಮ್ಮ ಜಾನುವಾರುಗಳೊಂದಿಗೆ ಭಾಗವಹಿಸುತ್ತಾರೆ.

ಘಾಟಿಯ ಸಮೀಪವೇ ಇರುವ ಮಾಕಳಿದುರ್ಗವೂ ಪ್ರಸಿದ್ಧ ಪ್ರವಾಸಿ ಸ್ಥಳವಾಗಿದೆ. ಮಾಕಳಿದುರ್ಗ ರೈಲ್ವೆ ಸ್ಟೇಷನ್ ಸಹ ಬೆಟ್ಟಗಳ ನಡುವೆ ಇದೆ. ಸಮೀಪದ ಸೇತುವೆಯ ಮೇಲೆ ನಿಂತರೆ ಕಿಲೋಮೀಟರ್‌ಗಟ್ಟಲೆ ದೂರದವರೆಗೂ ರೈಲು ಸಂಚರಿಸುವುದು ಕಾಣಿಸುತ್ತದೆ. ಇದೂ ಸಹ ಪ್ರವಾಸಿಗರ ಆಕರ್ಷಣೆ ಎನಿಸಿದೆ.

ಬರಹ: ಅಕ್ಷರಾ ಕಿರಣ್

(ನಾಗರ ಪಂಚಮಿ ಕುರಿತ ಮತ್ತಷ್ಟು ಬರಹಗಳಿಗೆ kannada.hindustantimes.com/topic/culture ಲಿಂಕ್ ಕ್ಲಿಕ್ ಮಾಡಿ)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ