logo
ಕನ್ನಡ ಸುದ್ದಿ  /  ಜೀವನಶೈಲಿ  /  ಮಂಗಳೂರು ಶೈಲಿಯಲ್ಲಿ ಮಾಡಿ ನೋಡಿ ರುಚಿಕರವಾದ ಏಡಿ ಸಾಂಬಾರ್: ಖಂಡಿತ ಇಷ್ಟಪಡುವಿರಿ, ಇಲ್ಲಿದೆ ರೆಸಿಪಿ

ಮಂಗಳೂರು ಶೈಲಿಯಲ್ಲಿ ಮಾಡಿ ನೋಡಿ ರುಚಿಕರವಾದ ಏಡಿ ಸಾಂಬಾರ್: ಖಂಡಿತ ಇಷ್ಟಪಡುವಿರಿ, ಇಲ್ಲಿದೆ ರೆಸಿಪಿ

Priyanka Gowda HT Kannada

Dec 18, 2024 03:41 PM IST

google News

ಮಂಗಳೂರು ಶೈಲಿಯಲ್ಲಿ ಮಾಡಿ ನೋಡಿ ರುಚಿಕರವಾದ ಏಡಿ ಸಾಂಬಾರ್: ಇಲ್ಲಿದೆ ರೆಸಿಪಿ

  • ಮೀನು ಸಾಂಬಾರ್, ಸೀಗಡಿ ಘೀ ರೋಸ್ಟ್, ಮೀನಿನ ಫ್ರೈ ರೆಸಿಪಿಗಳನ್ನು ನೀವು ತಿಂದಿರಬಹುದು. ಆದರೆ, ಮಂಗಳೂರು ಶೈಲಿಯ ಏಡಿ ಕರಿ ಅಥವಾ ಏಡಿ ಗಸಿ ಎಂದಾದರೂ ಟ್ರೈ ಮಾಡಿದ್ದೀರಾ. ಬಹಳ ರುಚಿಕರವಾಗಿರುವ ಈ ಖಾದ್ಯವನ್ನು ತಯಾರಿಸುವುದು ತುಂಬಾನೇ ಸರಳ. ಇಲ್ಲಿದೆ ರೆಸಿಪಿ.

ಮಂಗಳೂರು ಶೈಲಿಯಲ್ಲಿ ಮಾಡಿ ನೋಡಿ ರುಚಿಕರವಾದ ಏಡಿ ಸಾಂಬಾರ್: ಇಲ್ಲಿದೆ ರೆಸಿಪಿ
ಮಂಗಳೂರು ಶೈಲಿಯಲ್ಲಿ ಮಾಡಿ ನೋಡಿ ರುಚಿಕರವಾದ ಏಡಿ ಸಾಂಬಾರ್: ಇಲ್ಲಿದೆ ರೆಸಿಪಿ (PC: Slurrp)

ಮಂಗಳೂರು ಅಂದ್ರೆ ನೆನಪಾಗುವುದು ಇಲ್ಲಿನ ರುಚಿಕರವಾದ ಮೀನಿನ ಖಾದ್ಯಗಳು. ವಿವಿಧ ಬಗೆಯ ಮೀನಿನ ಖಾದ್ಯಗಳನ್ನು ಇಲ್ಲಿ ತಯಾರಿಸಲಾಗುತ್ತದೆ. ಮಂಗಳೂರಿಗೆ ಭೇಟಿ ನೀಡಿದವರು ಅದರಲ್ಲೂ ಮಾಂಸಾಹಾರ ಪ್ರಿಯರಾಗಿದ್ದರೆ ಮಿಸ್ ಮಾಡದೆ ಸೀ ಫುಡ್ ಅಥವಾ ಮೀನಿನ ಖಾದ್ಯಗಳ ರುಚಿ ನೋಡಿರಬಹುದು. ಮೀನು ಸಾಂಬಾರ್, ಸೀಗಡಿ ಘೀ ರೋಸ್ಟ್, ಮೀನಿನ ಫ್ರೈ ರೆಸಿಪಿಗಳನ್ನು ನೀವು ತಿಂದಿರಬಹುದು. ಏಡಿ ಕರಿ ಅಥವಾ ಏಡಿ ಗಸಿ ಎಂದಾದರೂ ಟ್ರೈ ಮಾಡಿದ್ದೀರಾ. ಬಹಳ ರುಚಿಕರವಾಗಿರುವ ಈ ಖಾದ್ಯವನ್ನು ತಯಾರಿಸುವುದು ತುಂಬಾನೇ ಸರಳ. ಇಲ್ಲಿ ಸಮುದ್ರದ ಏಡಿಯಿಂದ ಮಾಡಲಾಗುವ ಖಾದ್ಯ ರೆಸಿಪಿಯನ್ನು ನೀಡಲಾಗಿದೆ. ನೀವು ಒಮ್ಮೆ ಮಾಡಿ ನೋಡಿ, ಖಂಡಿತ ಇಷ್ಟವಾಗುವುದರಲ್ಲಿ ಸಂಶಯವಿಲ್ಲ. ಮಂಗಳೂರು ಶೈಲಿಯ ಈ ರೆಸಿಪಿ ಮಾಡುವುದು ಹೇಗೆ ಅನ್ನೋದು ಇಲ್ಲಿದೆ.

ಏಡಿ ಸಾಂಬಾರ್ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಸಾಮಗ್ರಿಗಳು: ಏಡಿ- 1 ಕೆ.ಜಿ, ಬ್ಯಾಡಗಿ ಮೆಣಸು- 15, ಕೊತ್ತಂಬರಿ ಬೀಜ- 3 ಟೀ ಚಮಚ, ಜೀರಿಗೆ- 1 ಟೀ ಚಮಚ, ಮೆಂತ್ಯ ಕಾಳು- 6 ರಿಂದ 7 ಕಾಳು, ಸಾಸಿವೆ- ಅರ್ಧ ಟೀ ಚಮಚ, ಕರಿಬೇವಿನ ಎಲೆ- ಸ್ವಲ್ಪ, ಅರಿಶಿನ- ಅರ್ಧ ಟೀ ಚಮಚ, ಹುಣಸೆಹಣ್ಣು- ಅರ್ಧ ನಿಂಬೆ ಗಾತ್ರ, ಕಾಳುಮೆಣಸು- ಅರ್ಧ ಟೀ ಚಮಚ, ಖಾರದ ಮೆಣಸು (ಬೇಕಿದ್ದರೆ)- 4, ತೆಂಗಿನ ತುರಿ- 1 ಕಪ್, ಶುಂಠಿ- 1 ಇಂಚಿನಷ್ಟು, ಟೊಮೆಟೊ-1, ಈರುಳ್ಳಿ- 1, ಬೆಳ್ಳುಳ್ಳಿ- 12 ಎಸಳು, ರುಚಿಗೆ ತಕ್ಕಷ್ಟು ಉಪ್ಪು, ಅಡುಗೆ ಎಣ್ಣೆ- ಬೇಕಾಗುವಷ್ಟು.

ಮಾಡುವ ವಿಧಾನ: ಮೊದಲಿಗೆ ಏಡಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಅದನ್ನು ಕತ್ತರಿಸಿ ತೊಳೆದು ಪಕ್ಕಕ್ಕೆ ಇಡಿ.

- ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಬ್ಯಾಡಗಿ ಮೆಣಸು, ಖಾರದ ಮೆಣಸು, ಕೊತ್ತಂಬರಿ ಬೀಜ, ಜೀರಿಗೆ, ಮೆಂತ್ಯ ಕಾಳು, ಸಾಸಿವೆ, ಕಾಳು ಮೆಣಸು, ಈರುಳ್ಳಿ ಇವೆಲ್ಲವನ್ನು ಬೇರೆ ಬೇರೆಯಾಗಿ ಹುರಿಯಿರಿ.

- ಟೊಮೆಟೊ, ತೆಂಗಿನತುರಿ, ಕರಿಬೇವಿನ ಎಲೆಯನ್ನು ಕೂಡ ಹುರಿಯಿರಿ.

- ಹುರಿದಿರುವ ಪದಾರ್ಥಗಳು ಬಿಸಿ ಆರಿದ ಬಳಿಕ ಇವೆಲ್ಲವನ್ನೂ ಜತೆಗೆ ಅರಿಶಿನ, ಹುಣಸೆ ಹಣ್ಣು, ಶುಂಠಿ, ಬೆಳ್ಳುಳ್ಳಿ ಸೇರಿಸಿ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.

- ಒಂದು ಪಾತ್ರೆಯನ್ನು ಸ್ಟೌವ್ ಮೇಲಿಟ್ಟು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದಾಗ ಬೇಕಿದ್ದರೆ ಕರಿಬೇವಿನ ಎಲೆಗಳನ್ನು ಸ್ವಲ್ಪ ಹಾಕಬಹುದು.

- ನಂತರ ರುಬ್ಬಿರುವ ಮಸಾಲೆ ಮಿಶ್ರಣವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಉಪ್ಪು ಸೇರಿಸಿ.

- ಮಸಾಲೆ ಒಂದು ಕುದಿ ಬಂದ ನಂತರ ಅದಕ್ಕೆ ಸ್ವಚ್ಛಗೊಳಿಸಿದ ಏಡಿಯನ್ನು ಸೇರಿಸಿ, ಕಡಿಮೆ ಉರಿಯಲ್ಲಿ ಬೇಯಿಸಿ.

- ಏಡಿ ಬೇಗ ಬೇಯುತ್ತದೆ. ಹೀಗಾಗಿ ಮೊದಲಿಗೆ ಮಸಾಲೆಯನ್ನು ಕುದಿ ಬರಿಸಿ ನಂತರ ಏಡಿ ಹಾಕುವುದು ಉತ್ತಮ.

- ಐದು ನಿಮಿಷದಲ್ಲಿ ಏಡಿ ಬೇಯುತ್ತದೆ. ಏಡಿ ಬೆಂದಿದೆಯೇ ಎಂದು ಪರೀಕ್ಷಿಸಿ. ಏಡಿ ಬೆಂದಿದ್ದರೆ ರುಚಿಕರವಾದ ಏಡಿ ಸಾಂಬಾರ್ ಸವಿಯಲು ಸಿದ್ಧ.

ಈ ಏಡಿ ಸಾಂಬಾರ್ ಅನ್ನು ಅನ್ನದ ಜತೆ, ಚಪಾತಿ, ರೊಟ್ಟಿ ಜತೆಯೂ ಸವಿಯಲು ರುಚಿಕರವಾಗಿರುತ್ತದೆ. ಒಮ್ಮೆ ಈ ರೀತಿ ಮಾಡಿ ನೋಡಿ, ಖಂಡಿತ ನಿಮಗೆ ಇಷ್ಟವಾಗಬಹುದು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ