ನಾಲಿಗೆ ರುಚಿ ಹುಡುಕುತ್ತಿದೆಯಾ: ಹಾಗಿದ್ದರೆ ಟ್ರೈ ಮಾಡಿ ಗರಿಗರಿಯಾದ ಹೆಸರು ಬೇಳೆ ಪಕೋಡಾ, ಇಲ್ಲಿದೆ ರೆಸಿಪಿ
Sep 17, 2024 12:26 PM IST
ಗರಿಗರಿಯಾದ ಹೆಸರು ಬೇಳೆ ಪಕೋಡಾ ಮಾಡುವುದು ಹೇಗೆ, ಇಲ್ಲಿ ತಿಳಿದುಕೊಳ್ಳಿ.
ಬೆಳಗ್ಗೆ ಅಥವಾ ಸಂಜೆ ಏನಾದರೂ ಮಸಾಲೆಯುಕ್ತ ಗರಿಗರಿಯಾದ ತಿಂಡಿ ತಿನ್ನಬೇಕು ಎಂದು ಅನಿಸಿದರೆ ಈ ಹೆಸರು ಬೇಳೆ ಪಕೋಡಾವನ್ನು ಪ್ರಯತ್ನಿಸಬಹುದು. ಇದು ತಿನ್ನಲೂ ರುಚಿಕರವಾಗಿದ್ದು, ಆರೋಗ್ಯಕ್ಕೂ ಉತ್ತಮವಾಗಿದೆ. ಹಾಗಿದ್ದರೆ, ಗರಿಗರಿಯಾದ ಹೆಸರು ಬೇಳೆ ಪಕೋಡಾ ಮಾಡುವುದು ಹೇಗೆ, ಇಲ್ಲಿ ತಿಳಿದುಕೊಳ್ಳಿ.
ದಕ್ಷಿಣ ಭಾರತೀಯರು ಬೆಳಗ್ಗೆ ಇಡ್ಲಿ, ದೋಸೆ, ಪುಳಿಯೋಗರೆ, ಉಪ್ಪಿಟ್ಟು ಇತ್ಯಾದಿ ಇಂತಹ ಉಪಹಾರಗಳನ್ನೇ ಎಲ್ಲರೂ ಸೇವಿಸುತ್ತಾರೆ. ಆದರೆ, ಬೆಳಗ್ಗೆ ಈ ಉಪಹಾರಗಳ ಬದಲಿಗೆ ಟೇಸ್ಟಿಯಾದ, ಮಸಾಲೆಯುಕ್ತ ಖಾದ್ಯಗಳನ್ನು ಸೇವಿಸಲು ಬಯಸುವಿರಾ. ಉಪಹಾರಕ್ಕೆ ಕುರುಕಲು ತಿಂಡಿಯನ್ನು ಇಷ್ಟಪಡುವಿರಾ? ಹಾಗಿದ್ದರೆ ಬೆಳಗ್ಗಿನ ಉಪಹಾರಕ್ಕೆ ಹೆಸರು ಬೇಳೆ ಪಕೋಡಾವನ್ನು ಪ್ರಯತ್ನಿಸಬಹುದು. ಬೆಳಗ್ಗೆ ತಿನ್ನಲು ಇಷ್ಟವಿಲ್ಲದವರು ಸಂಜೆ ಸ್ನಾಕ್ಸ್ ಆಗಿಯೂ ಟೀ ಜೊತೆ ತಿನ್ನಬಹುದು. ಅದರಲ್ಲೂ ಮಳೆ ಬಂದಾಗ ಈ ಪಕೋಡಾವನ್ನು ತಿನ್ನುತ್ತಿದ್ದರೆ ಅದರ ಮಜಾವೇ ಬೇರೆ. ಇದನ್ನು ಮಾಡುವುದು ಅಂತಹ ಕಷ್ಟವೇನಲ್ಲ. ತಯಾರಿಸುವುದು ಕೂಡ ತುಂಬಾನೇ ಸಿಂಪಲ್. ರುಚಿಯೂ ಅದ್ಭುತ. ಹಾಗಿದ್ದರೆ ಈ ಗರಿಗರಿಯಾದ ಹೆಸರು ಬೇಳೆ ಪಕೋಡಾವನ್ನು ತಯಾರಿಸುವುದು ಹೇಗೆ, ಇಲ್ಲಿ ತಿಳಿದುಕೊಳ್ಳಿ.
ಹೆಸರು ಬೇಳೆ ಪಕೋಡಾ ಮಾಡುವುದು ಹೀಗೆ
ಬೇಕಾಗುವ ಸಾಮಗ್ರಿಗಳು: ಹೆಸರು ಬೇಳೆ- ಒಂದು ಕಪ್, ಮೊಸರು- 2 ರಿಂದ 3 ಚಮಚ, ಬೆಳ್ಳುಳ್ಳಿ ಎಸಳು- 7 ರಿಂದ 8, ಈರುಳ್ಳಿ- 2, ಗರಂ ಮಸಾಲ- ಒಂದು ಚಮಚ, ಚಾಟ್ ಮಸಾಲಾ- ಒಂದು ಚಮಚ, ಕೆಂಪು ಮೆಣಸಿನ ಪುಡಿ- ಒಂದು ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೊದಲಿಗೆ ಒಂದು ಕಪ್ ಹೆಸರು ಬೇಳೆಯನ್ನು ನೀರಿನಲ್ಲಿ ಅರ್ಧ ಗಂಟೆ ಕಾಲ ನೆನೆಸಿ. ನಂತರ ನೆನೆಸಿಟ್ಟ ಹೆಸರು ಬೇಳೆ (ಅರ್ಧ ಕಪ್) ಮತ್ತು ಬೆಳ್ಳುಳ್ಳಿಯನ್ನು ಮಿಕ್ಸರ್ ಜಾರ್‌ನಲ್ಲಿ ರುಬ್ಬಿಕೊಳ್ಳಿ (ನುಣ್ಣಗೆ ರುಬ್ಬುವುದು ಬೇಡ). ನಂತರ ಒಂದು ಬಟ್ಟಲಿನಲ್ಲಿ ಅರ್ಧ ಕಪ್ ಹೆಸರು ಬೇಳೆಯನ್ನು ಹಾಕಿ ಅದಕ್ಕೆ ರುಬ್ಬಿರುವ ಮಿಶ್ರಣವನ್ನು ಹಾಕಿ ಮಿಕ್ಸ್ ಮಾಡಿ. ಇದಕ್ಕೆ 2 ರಿಂದ 3 ಚಮಚ ಮೊಸರು, 2 ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಒಂದು ಚಮಚ ಗರಂ ಮಸಾಲ, ಒಂದು ಚಮಚ ಚಾಟ್ ಮಸಾಲ, ಒಂದು ಚಮಚ ಕೆಂಪು ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಇಲ್ಲಿಗೆ ಪಕೋಡಾ ಮಿಶ್ರಣ ಸಿದ್ಧವಾಗುತ್ತದೆ.
ನಂತರ ಗ್ಯಾಸ್ ಆನ್ ಮಾಡಿ ಬಾಣಲೆಯನ್ನಿಟ್ಟು ಅದಕ್ಕೆ ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆಯನ್ನು ಹಾಕಿ. ಎಣ್ಣೆ ಬಿಸಿಯಾದಾಗ ಹೆಸರು ಬೇಳೆ ಮಿಶ್ರಣದ ಸಣ್ಣ ಚೆಂಡಿನ ತುಂಡುಗಳನ್ನು ಒಂದೊಂದಾಗಿ ಬಾಣಲೆಯಲ್ಲಿ ಹಾಕಿ. ಅವು ಕೆಂಪಗಾಗುವವರೆಗೆ ಮಧ್ಯಮ ಉರಿಯಲ್ಲಿ ಚೆನ್ನಾಗಿ ಫ್ರೈ ಮಾಡಿ. ಹೀಗೆ ಮಾಡಿದರೆ ರುಚಿಕರವಾದ ಮತ್ತು ಆರೋಗ್ಯಕರವಾದ ಹೆಸರು ಬೇಳೆ ಪಕೋಡಾ ಸವಿಯಲು ಸಿದ್ಧ. ಇದನ್ನು ಹಸಿರು ಚಟ್ನಿಯೊಂದಿಗೆ ಸೇವಿಸಬಹುದು. ಬೆಳಗ್ಗೆ ಉಪಹಾರಕ್ಕೂ ತಿನ್ನಬಹುದು ಅಥವಾ ಸಂಜೆ ಸ್ನಾಕ್ಸ್ ಆಗಿಯೂ ಟೀ ಜೊತೆ ಸೇವಿಸಲು ಚೆನ್ನಾಗಿರುತ್ತದೆ.
ವಿಭಾಗ