ಹೆಸರುಬೇಳೆಯಿಂದ ತಯಾರಿಸಬಹುದು ಸಖತ್ ಟೇಸ್ಟಿ ಪಕೋಡಾ, ಸಂಜೆ ಕಾಫಿ ಜತೆ ಬೆಸ್ಟ್ ಎನ್ನಿಸುವ ಸ್ನ್ಯಾಕ್ಸ್ ಇದು
Moong Dal pakoda: ಈರುಳ್ಳಿ ಪಕೋಡಾ, ಪನೀರ್ ಪಕೋಡಾ, ಆಲೂ ಪಕೋಡಾ ಹೆಸರು ಕೇಳಿರುತ್ತೀರಾ, ಆದ್ರೆ ಮೂಂಗ್ ಪಕೋಡಾ ಹೆಸರು ಕೇಳಿದ್ದೀರಾ, ಇದು ನಿಜಾಮಾಬಾದ್‌ನ ಸ್ಪೆಷಲ್ ಸ್ನ್ಯಾಕ್ಸ್. ಸಂಜೆ ಹೊತ್ತಿಗೆ ಬೆಸ್ಟ್ ಎನ್ನಿಸುವ ಈ ಕುರಕಲು ತಿಂಡಿಯನ್ನ ಮಾಡೋದು ಹೇಗೆ ನೋಡಿ.
ಸಂಜೆ ಹೊತ್ತಿಗೆ ಏನಾದ್ರೂ ಸ್ನ್ಯಾಕ್ಸ್ ತಿನ್ನಬೇಕು ಅನ್ನಿಸೋದು ಸಹಜ. ಅದರಲ್ಲೂ ಮಳೆಗಾಲ ಅಥವಾ ಮೋಡದ ವಾತಾವರಣ ಇರುವಾಗ ಬೇಡವೆಂದರೂ ಇಂತಹ ತಿನಿಸುಗಳನ್ನು ತಿನ್ನಬೇಕು ಎನ್ನುವ ಆಸೆ ಹೆಚ್ಚುತ್ತದೆ. ಸಂಜೆಯ ಸ್ನ್ಯಾಕ್ಸ್‌ಗೆ ನೀವು ಏನಾದ್ರೂ ಸ್ಪೆಷಲ್ ಮಾಡಬೇಕು ಅಂತಿದ್ರೆ ಹೆಸರುಬೇಳೆ ಪಕೋಡಾ ಮಾಡಬಹುದು.
ಹೈದರಾಬಾದ್‌ನ ನಿಜಾಮಾಬಾದ್‌ನಲ್ಲಿ ಫೇಮಸ್ ಆಗಿರುವ ಹೆಸರು ಬೇಳೆ ಪಕೋಡಾವನ್ನು ಮಾಡುವುದು ಸುಲಭ. ಇದು ಈರುಳ್ಳಿ, ಕಡಲೆಹಿಟ್ಟಿನ ಪಕೋಡಕ್ಕಿಂತ ಭಿನ್ನವಾದ ರುಚಿ ಹೊಂದಿರುತ್ತದೆ. ಈ ಪಕೋಡಾ ಆರೋಗ್ಯಕ್ಕೂ ಉತ್ತಮ, ಮನೆಯಲ್ಲಿ ಸುಲಭವಾಗಿ ಅದೇ ರುಚಿಯ ಪಕೋಡಾವನ್ನು ಮಾಡಿ ತಿನ್ನಬಹುದು.
ಹೆಸರುಬೇಳೆ ಪಕೋಡಾ ಮಾಡಲು ಬೇಕಾಗುವ ಸಾಮಗ್ರಿಗಳು
ಹೆಸರುಬೇಳೆ – 1 ಕಪ್, ಹಸಿಮೆಣಸು – 2, ಚಿಕ್ಕದಾಗಿ ಹೆಚ್ಚಿಕೊಂಡು ಶುಂಠಿ – 2, ಜೀರಿಗೆ – 1 ಚಮಚ, ಖಾರದ ಪುಡಿ – 1 ಚಮಚ, ಕೊತ್ತಂಬರಿ ಬೀಜ – 1 ಚಮಚ, ಉಪ್ಪು – ರುಚಿಗೆ, ನೀರು – 1 ಲೋಟ, ಕರಿಯಲು – ಎಣ್ಣೆ
ಹೆಸರುಬೇಳೆ ಪಕೋಡಾ ಮಾಡುವ ವಿಧಾನ
ಹೆಸರುಬೇಳೆಯನ್ನು ಸ್ವಚ್ಚವಾಗಿ ತೊಳೆದು ಒಂದು ಬಟ್ಟಲಿನಲ್ಲಿ ಕನಿಷ್ಠ ಮೂರರಿಂದ ನಾಲ್ಕು ಗಂಟೆ ನೆನೆಸಿಡಿ. ನಂತರ ನೀರು ಸೇರಿಸಿ, ತರಿತರಿಯಾಗಿ ರುಬ್ಬಿಕೊಳ್ಳಿ. ಅದಕ್ಕೆ ಹಸಿಮೆಣಸು, ಶುಂಠಿ, ಚಿಟಿಕೆ ಇಂಗು ಸೇರಿಸಿ ಇನ್ನೊಂದು ಸುತ್ತು ರುಬ್ಬಿಕೊಳ್ಳಿ. ರುಬ್ಬಿಕೊಂಡು ಹಿಟ್ಟಿಗೆ ಖಾರದಪುಡಿ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈಗ ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ ಮಿಶ್ರಣವನ್ನು ಸ್ವಲ್ಪ ಸ್ವಲ್ಪವಾಗಿ ಎಣ್ಣೆಗೆ ಬಿಡಿ. ಈ ಮಿಶ್ರಣ ಪಕೋಡಾದ ರೀತಿಯಾಗುತ್ತದೆ. ಇದನ್ನು ಎರಡೂ ಕಡೆ ಕಾಯಿಸಿ. ಬಣ್ಣ ಬದಲಾದ ಮೇಲೆ ಹೊರ ತೆಗೆಯಿರಿ. ನಂತರ ಟಿಶ್ಯೂ ಪೇಪರ್ ಮೇಲೆ ಹರಡಿ. ಇದನ್ನು ಕೆಚಪ್ ಅಥವಾ ಗ್ರೀನ್ ಚಟ್ನಿ ಜೊತೆ ತಿನ್ನಲು ಚೆನ್ನಾಗಿರುತ್ತದೆ. ಕಾಫಿ ಜೊತೆಗೂ ಇದು ಉತ್ತಮ ಸ್ನ್ಯಾಕ್ಸ್ ಎನ್ನಿಸಿಕೊಳ್ಳುತ್ತದೆ. ಗರಿಗರಿಯಾದ ಈ ಪಕೋಡಾ ಮಕ್ಕಳಿಗೂ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ. ನಿಜಾಮಾಬಾದ್‌ನ ಈ ವಿಶೇಷ ತಿಂಡಿಯನ್ನು ನೀವು ಮನೆಯಲ್ಲಿ ತಯಾರಿಸಿ. ಹೆಸರುಬೇಳೆ ಆರೋಗ್ಯಕ್ಕೆ ಉತ್ತಮವಾಗಿರುವ ಕಾರಣ ಈ ಪಕೋಡದಿಂದ ಆರೋಗ್ಯಕ್ಕೆ ಹಾನಿಯಾಗುವುದು ಕಡಿಮೆ.
ವಿಭಾಗ