logo
ಕನ್ನಡ ಸುದ್ದಿ  /  ಜೀವನಶೈಲಿ  /  ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ನುಗ್ಗೆಸೊಪ್ಪಿನ ಪಚಡಿ; ಮಧುಮೇಹಿಗಳಿಗಿದು ಹೇಳಿ ಮಾಡಿಸಿದ ರೆಸಿಪಿ; ಮಾಡೋದು ಬಲು ಸುಲಭ

ಆರೋಗ್ಯಕ್ಕೆ ಅಮೃತ, ರುಚಿಗೆ ಅದ್ಭುತ ನುಗ್ಗೆಸೊಪ್ಪಿನ ಪಚಡಿ; ಮಧುಮೇಹಿಗಳಿಗಿದು ಹೇಳಿ ಮಾಡಿಸಿದ ರೆಸಿಪಿ; ಮಾಡೋದು ಬಲು ಸುಲಭ

Reshma HT Kannada

Oct 21, 2024 11:56 AM IST

google News

ನುಗ್ಗೆಸೊಪ್ಪಿನ ಪಚಡಿ

    • ನುಗ್ಗೆಕಾಯಿ ಅಷ್ಟೇ ಅಲ್ಲ ನುಗ್ಗೆಸೊಪ್ಪಿನಿಂದಲೂ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದರಿಂದ ವಿವಿಧ ಬಗೆಯ ರೆಸಿಪಿಗಳನ್ನ ತಯಾರಿಸಲಾಗುತ್ತದೆ. ಅದರಲ್ಲಿ ನುಗ್ಗೆಸೊಪ್ಪಿನ ಪಚಡಿ ಅಥವಾ ಚಟ್ನಿ ಕೂಡ ಒಂದು. ಇದು ಆರೋಗ್ಯಕ್ಕೆ ಅಮೃತ ಎನ್ನುವುದು ಸುಳ್ಳಲ್ಲ. ಇದರ ರುಚಿ ಕೂಡ ಅದ್ಭುತ. ಇದನ್ನು ಮಾಡೋದು ಹೇಗೆ ನೋಡಿ.
ನುಗ್ಗೆಸೊಪ್ಪಿನ ಪಚಡಿ
ನುಗ್ಗೆಸೊಪ್ಪಿನ ಪಚಡಿ

ನುಗ್ಗೆಕಾಯಿಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದು ದೇಹವನ್ನು ತಂಪಾಗಿಡುವುದು ಮಾತ್ರವಲ್ಲ ಜೀರ್ಣಕ್ರಿಯೆಯನ್ನೂ ಸುಧಾರಿಸುತ್ತದೆ. ತೂಕ ನಿರ್ವಹಣೆ, ಲೈಂಗಿಕ ಶಕ್ತಿ ವೃದ್ಧಿಯಾಗಲೂ ನುಗ್ಗೆಕಾಯಿ ಉತ್ತಮ. ನುಗ್ಗೆಕಾಯಿ ಮಾತ್ರವಲ್ಲ, ನುಗ್ಗೆಸೊಪ್ಪು ಕೂಡ ಆರೋಗ್ಯಕ್ಕೆ ಉತ್ತಮ. ನುಗ್ಗೆಸೊಪ್ಪಿನಿಂದ ವಿವಿಧ ಬಗೆಯ ಖಾದ್ಯಗಳನ್ನ ತಯಾರಿಸಬಹುದು. ಇದರ ಖಾದ್ಯಗಳು ರುಚಿಯ ಜೊತೆಗೆ ಆರೋಗ್ಯಕ್ಕೂ ಉತ್ತಮ. ನುಗ್ಗೆಸೊಪ್ಪನ್ನು ಯಾವುದೇ ರೀತಿಯಲ್ಲಿ ತಿನ್ನುವುದು ಆರೋಗ್ಯಕ್ಕೆ ಉತ್ತಮ.

ಆರೋಗ್ಯದ ಮೇಲೆ ಪವಾಡದ ರೀತಿಯಲ್ಲಿ ಕೆಲಸ ಮಾಡುವ ನುಗ್ಗೆಸೊಪ್ಪು ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಒದಗಿಸುತ್ತದೆ. ಮಧುಮೇಹಿಗಳು ನುಗ್ಗೆಸೊಪ್ಪು ಬಹಳ ಉತ್ತಮ. ಇದು ರಕ್ತದಲ್ಲಿನ ಸಕ್ಕರೆಯ ಮಟ್ಟ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದ ಸಖತ್ ಟೇಸ್ಟಿ ಆಗಿರುವ ಪಚಡಿ ಮಾಡಬಹುದು. ಇದು ಅನ್ನದ ಜೊತೆಗೆ ಸಖತ್ ಕಾಂಬಿನೇಷನ್ ಆಗುತ್ತೆ. ಹಾಗಾದರೆ ನುಗ್ಗೆಸೊಪ್ಪಿನ ಪಚಡಿ ಮಾಡುವುದು ಹೇಗೆ, ಇದಕ್ಕೆ ಏನೆಲ್ಲಾ ಬೇಕು ನೋಡಿ.

ನುಗ್ಗೆಸೊಪ್ಪಿನ ಪಚಡಿ

ಬೇಕಾಗುವ ಸಾಮಗ್ರಿಗಳು: ನುಗ್ಗೆಸೊಪ್ಪು - ಎರಡು ಕಪ್, ಬೆಳ್ಳುಳ್ಳಿ ಎಸಳು - ಎಂಟು, ಮೆಣಸಿನಕಾಯಿ - ಎಂಟು, ಉಪ್ಪು - ರುಚಿಗೆ, ‌ಅರಿಶಿನ - ಕಾಲು ಚಮಚ, ಹುಣಸೆಹಣ್ಣು - ನಿಂಬೆಹಣ್ಣಿನ ಗಾತ್ರದ್ದು, ಮೆಂತ್ಯ - ಅರ್ಧ ಚಮಚ, ಜೀರಿಗೆ - ಅರ್ಧ ಚಮಚ, ಟೊಮೆಟೊ – 2, ಕಾಳುಮೆಣಸು – 2, ಉದ್ದಿನಬೇಳೆ – 1 ಚಮಚ, ಸಾಸಿವೆ - ಒಂದು ಚಮಚ, ಜೀರಿಗೆ - ಒಂದು ಚಮಚ, ಎಣ್ಣೆ - ಸ್ವಲ್ಪ, ಕರಿಬೇವು - ಒಂದು ಮುಷ್ಟಿ

ನುಗ್ಗೆಸೊಪ್ಪಿನ ಪಚಡಿ ಮಾಡುವ ವಿಧಾನ

ನುಗ್ಗೆಸೊಪ್ಪನ್ನು ಬಿಡಿಸಿ, ಚೆನ್ನಾಗಿ ತೊಳೆದು ಬದಿಗಿರಿಸಿ. ಒಲೆಯ ಮೇಲೆ ಬಾಣಲಿ ಇಟ್ಟು ಎಣ್ಣೆ ಹಾಕಿ ಬಿಸಿಮಾಡಿ. ಅದರಲ್ಲಿ ಹಸಿಮೆಣಸಿನಕಾಯಿ ಹಾಕಿ ಹುರಿದು ಪಕ್ಕಕ್ಕೆ ಇಡಿ. ಉಳಿದ ಎಣ್ಣೆಯಲ್ಲಿ ನುಗ್ಗೆಸೊಪ್ಪು ಹಾಕಿ ಹಸಿ ವಾಸನೆ ಹೋಗುವವರೆಗೆ ಹುರಿದುಕೊಳ್ಳಿ. ಎರಡರಿಂದ ಮೂರು ನಿಮಿಷಗಳ ಕಾಲ ಚೆನ್ನಾಗಿ ಎಣ್ಣೆಯಲ್ಲಿ ಹುರಿಯಬೇಕು. ನಂತರ ಮೆಂತ್ಯ ಮತ್ತು ಜೀರಿಗೆ ಸೇರಿಸಿ ಫ್ರೈ ಮಾಡಿ. ಅದಕ್ಕೆ ಟೊಮೆಟೊ ಚೂರುಗಳು, ಉಪ್ಪು ಮತ್ತು ಅರಿಶಿನ ಸೇರಿಸಿ ಪುನಃ ಫ್ರೈ ಮಾಡಿ. ಟೊಮೆಟೊ ಮೃದುವಾದಾಗ ಸ್ಟವ್ ಆಫ್ ಮಾಡಿ. ಈ ಮಿಶ್ರಣವನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ಈಗ ಮಿಕ್ಸಿ ಜಾರ್‌ನಲ್ಲಿ ನುಗ್ಗೆಸೊಪ್ಪಿನ ಮಿಶ್ರಣ, ಹುಣಸೆಹಣ್ಣು, ಬೆಳ್ಳುಳ್ಳಿ ಎಸಳು, ಹಸಿಮೆಣಸಿನಕಾಯಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಈ ಸಂಪೂರ್ಣ ಮಿಶ್ರಣವನ್ನು ಒಂದು ಬಟ್ಟಲಿನಲ್ಲಿ ತೆಗೆದು ಇರಿಸಿ. ಈಗ ಇನ್ನೊಂದು ಪಾತ್ರೆಗೆ ಎರಡು ಚಮಚ ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಜೀರಿಗೆ, ಕಾಳುಮೆಣಸು, ಸಾಸಿವೆ, ಉದ್ದಿನಬೇಳೆ ಹಾಕಿ ಹುರಿದುಕೊಳ್ಳಿ. ಅದಕ್ಕೆ ಕರಿಬೇವಿನ ಎಲೆಗಳನ್ನೂ ಸೇರಿಸಿ. ಈ ಒಗ್ಗರಣೆಯನ್ನು ರುಬ್ಬಿಕೊಂಡ ಮಿಶ್ರಣಕ್ಕೆ ಸೇರಿಸಿ, ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಈಗ ನಿಮ್ಮ ಮುಂದೆ ರುಚಿಯಾದ ನುಗ್ಗೆಕಾಯಿ ಪಚಡಿ ತಿನ್ನಲು ಸಿದ್ಧ. ಇದನ್ನು ಬಿಸಿ ಅನ್ನದ ಜೊತೆ ತಿಂದರೆ ರುಚಿ ಅದ್ಭುತ.

ಇತರ ಪಚಡಿಗಳಿಗೆ ಹೋಲಿಸಿದರೆ ನುಗ್ಗೆಸೊಪ್ಪಿನ ಪಡಚಿ ತುಂಬಾ ವಿಶೇಷ. ಇದು ಟೇಸ್ಟಿ ಮಾತ್ರವಲ್ಲದೆ ನಮ್ಮ ಆರೋಗ್ಯಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳನ್ನು ಒಳಗೊಂಡಿದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಖಂಡಿತವಾಗಿಯೂ ನುಗ್ಗೆಸೊಪ್ಪಿನ ಖಾದ್ಯಗಳನ್ನು ತಿನ್ನಬೇಕು. ಒಮ್ಮೆ ತಿಂದರೆ ಖಂಡಿತ ಇಷ್ಟವಾಗುತ್ತದೆ. ನುಗ್ಗೆಸೊಪ್ಪಿನ ಪಲ್ಯ, ಪರೋಟ ಕೂಡ ಮಾಡಬಹುದು. ಪ್ರಧಾನಿ ಮೋದಿ ಕೂಡ ನುಗ್ಗೆಸೊಪ್ಪಿನ ಪರೋಟ ಇಷ್ಟಪಟ್ಟು ತಿನ್ನುತ್ತಾರೆ ಎಂದು ಹಿಂದೊಮ್ಮೆ ಅವರೇ ಹೇಳಿದ್ದನ್ನು ನೆನಪಿಸಿಕೊಳ್ಳಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ