Drumstick Pickle: ನುಗ್ಗೆಕಾಯಿಯಿಂದ ತಯಾರಿಸಬಹುದು ಬಾಯಲ್ಲಿ ನೀರೂರಿಸುವ ಉಪ್ಪಿನಕಾಯಿ, ಈ ರೀತಿ ಮಾಡಿದ್ರೆ 6 ತಿಂಗಳು ಕೆಡೊಲ್ಲ
ಕನ್ನಡ ಸುದ್ದಿ  /  ಜೀವನಶೈಲಿ  /  Drumstick Pickle: ನುಗ್ಗೆಕಾಯಿಯಿಂದ ತಯಾರಿಸಬಹುದು ಬಾಯಲ್ಲಿ ನೀರೂರಿಸುವ ಉಪ್ಪಿನಕಾಯಿ, ಈ ರೀತಿ ಮಾಡಿದ್ರೆ 6 ತಿಂಗಳು ಕೆಡೊಲ್ಲ

Drumstick Pickle: ನುಗ್ಗೆಕಾಯಿಯಿಂದ ತಯಾರಿಸಬಹುದು ಬಾಯಲ್ಲಿ ನೀರೂರಿಸುವ ಉಪ್ಪಿನಕಾಯಿ, ಈ ರೀತಿ ಮಾಡಿದ್ರೆ 6 ತಿಂಗಳು ಕೆಡೊಲ್ಲ

ಹಲವರಿಗೆ ನುಗ್ಗೆಕಾಯಿ ಸಾಂಬಾರ್‌ ಎಂದರೆ ತುಂಬಾ ಇಷ್ಟ. ನುಗ್ಗೆಕಾಯಿ ಸಾಂಬಾರ್‌ ಮಾಡಿದ ದಿನ ಒಂದು ತುತ್ತು ಊಟ ಹೆಚ್ಚೇ ಮಾಡುತ್ತಾರೆ. ಹಲವು ಪೌಷ್ಟಿಕಾಂಶಗಳ ಆಗರವಾಗಿರುವ ನುಗ್ಗೆಕಾಯಿ ಆರೋಗ್ಯಕ್ಕೂ ಉತ್ತಮ. ನೀವು ದಿನಾ ನುಗ್ಗೆಕಾಯಿ ತಿನ್ನಬೇಕು ಅಂದ್ರೆ ಇದ್ರಿಂದ ಉಪ್ಪಿನಕಾಯಿ ತಯಾರಿಸಿ. ಈ ರೀತಿ ಉಪ್ಪಿನಕಾಯಿ ಮಾಡಿದ್ರೆ 6 ತಿಂಗಳ ಕಾಲ ಕೆಡದಂತೆ ಇಡಬಹುದು.

ನುಗ್ಗೆಕಾಯಿ ಉಪ್ಪಿನಕಾಯಿ
ನುಗ್ಗೆಕಾಯಿ ಉಪ್ಪಿನಕಾಯಿ

ಸರ್ವಕಾಲದಲ್ಲೂ ಲಭ್ಯವಿರುವ ನುಗ್ಗೆಕಾಯಿ ಸೇವನೆಯು ಆರೋಗ್ಯಕ್ಕೆ ಬಹಳ ಉತ್ತಮ. ಹಲವರಿಗೆ ನುಗ್ಗೆಕಾಯಿ ಫೇವರಿಟ್‌ ಎಂದರೂ ತಪ್ಪಾಗಲಿಕ್ಕಿಲ್ಲ. ಊಟದೊಂದಿಗೆ ಬೇಳೆ, ಮಸಾಲೆ ಸೇರಿಸಿ ತಯಾರಿಸಿದ ನುಗ್ಗೆಕಾಯಿ ಸಾಂಬಾರ್‌ ಇದ್ರೆ, ಆಹಾ ಸ್ವರ್ಗ ಸುಖ ಅಂದುಕೊಳ್ಳುವವರೂ ಇದ್ದಾರೆ. ಇದ್ರಿಂದ ಸಾಂಬಾರ್‌ ಮಾತ್ರವಲ್ಲ ಉಪ್ಪಿನಕಾಯಿ ಕೂಡ ತಯಾರಿಸಬಹುದು. ಉಪ್ಪಿನಕಾಯಿ ಅಂದ ಕೂಡಲೇ ಬಾಯಲ್ಲಿ ನೀರು ಬಂತಾ, ಉಪ್ಪಿನಕಾಯಿ ರುಚಿನೇ ಹಾಗೆ ಅಲ್ವಾ?.

ಈಗಂತೂ ಬೇಸಿಗೆಕಾಲ, ಉಪ್ಪಿನಕಾಯಿ ಮಾಡೋಕೆ ಹೇಳಿ ಮಾಡಿಸಿದ ಟೈಮ್‌. ನುಗ್ಗೆಕಾಯಿ ಉಪ್ಪಿನಕಾಯಿ ಮಾಡಿ ಭರಣಿಯಲ್ಲಿ ಸಂಗ್ರಹಿಸಿ ಇಡಿ. ಇದು 6 ತಿಂಗಳ ಕಾಲ ಕೆಡದಂತೆ ಇರುತ್ತದೆ. ಇದರ ರುಚಿ ಕೂಡ ಅದ್ಭುತ. ನುಗ್ಗೆಕಾಯಿ ಸಾಂಬಾರ್‌ಗಿಂತ ಇದರ ಉಪ್ಪಿನಕಾಯಿಯೇ ಸಖತ್‌ ಟೇಸ್ಟ್‌. ಹಾಗಾದ್ರೆ ಇದನ್ನು ಮಾಡೋದು ಹೇಗೆ ನೋಡಿ.

ನುಗ್ಗೆಕಾಯಿ ಉಪ್ಪಿನಕಾಯಿ

ಬೇಕಾಗುವ ಸಾಮಗ್ರಿಗಳು: ನುಗ್ಗೆಕಾಯಿ - 5, ಓಮ - ಒಂದು ಚಮಚ, ಅಡುಗೆ ಎಣ್ಣೆ - ಒಂದು ಕಪ್, ಹುಣಸೆಹಣ್ಣು - ಸುಮಾರು ನಿಂಬೆಹಣ್ಣಿನ ಗಾತ್ರ, ಅರಿಶಿನ - ಅರ್ಧ ಚಮಚ, ಉಪ್ಪು - ರುಚಿಗೆ, ಖಾರದಪುಡಿ - ಅರ್ಧ ಕಪ್, ಸಾಸಿವೆ - ಒಂದು ಚಮಚ,

ತಯಾರಿಸುವ ವಿಧಾನ: ನುಗ್ಗೆಕಾಯಿಯನ್ನು ಚೆನ್ನಾಗಿ ತೊಳೆದು ನೀರನ್ನು ಒರೆಸಿ, ಮೇಲಿನ ಹೊಟ್ಟನ್ನು ತೆಗೆದುಕೊಳ್ಳಿ. ಇದನ್ನು ಅರ್ಧ ಬೆರಳಿನ ಗಾತ್ರಕ್ಕೆ ಹೆಚ್ಚಿಟ್ಟುಕೊಳ್ಳಿ. ಒಲೆಯ ಮೇಲೆ ಬಾಣಲೆಯಲ್ಲಿ ಮೆಂತ್ಯ ಮತ್ತು ಸಾಸಿವೆಯನ್ನು ಹುರಿಯಿರಿ. ಅವುಗಳನ್ನು ಮಿಕ್ಸಿ ಜಾರ್‌ಗೆ ಹಾಕಿ ನುಣ್ಣಗೆ ಪುಡಿಮಾಡಿ. ಇದಕ್ಕೆ ಹುಣಸೆಹಣ್ಣು ಸೇರಿಸಿ ರುಬ್ಬಿಕೊಳ್ಳಿ. ಈ ಪುಡಿಯನ್ನು ಪಕ್ಕಕ್ಕೆ ಇರಿಸಿ. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಎಣ್ಣೆ ಬಿಸಿಯಾದಾಗ, ಸಾಸಿವೆ ಜೀರಿಗೆ ಹಾಕಿ, ಅದು ಸಿಡಿದ ತಕ್ಷಣ ನುಗ್ಗೆಕಾಯಿ ಹಾಕಿ. ಒಂದು ನಿಮಿಷ ಹುರಿದುಕೊಂಡು ಸ್ಟೌ ಆಫ್‌ ಮಾಡಿ. ಎಣ್ಣೆ ಸ್ವಲ್ಪ ತಣ್ಣಗಾದ ನಂತರ ಖಾರದ ಮತ್ತು ಉಪ್ಪು ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಮೊದಲೇ ಮಾಡಿಟ್ಟುಕೊಂಡ ಪುಡಿ ಸೇರಿಸಿ. ಅರಿಸಿನ ಚಿಟಿಕೆ ಹಾಕಿ. ಈ ಎಲ್ಲವನ್ನೂ ಚೆನ್ನಾಗಿ ಕಲೆಸಿ ನಾಲ್ಕು ಗಂಟೆಗಳ ಕಾಲ ಮುಚ್ಚಿಡಿ. ಇದನ್ನು ಗಾಜಿನ ಬಾಟಲಿನಲ್ಲಿ ಹಾಕಿ, ಎರಡು ದಿನಗಳವರೆಗೆ ಬಿಡಿ. ಈಗ ನಿಮ್ಮ ಮುಂದೆ ರುಚಿಯಾದ ನುಗ್ಗೆಕಾಯಿ ಉಪ್ಪಿನಕಾಯಿ ತಿನ್ನಲು ಸಿದ್ಧ. ಬಿಸಿ ಅನ್ನದ ಜೊತೆ ನುಗ್ಗೆಕಾಯಿ ಉಪ್ಪಿನಕಾಯಿ, ಒಂದು ಚಮಚ ತುಪ್ಪ ಹಾಕಿ ತಿಂದರೆ ಅದರ ರುಚಿಯೇ ಬೇರೆ.

ನುಗ್ಗೆಕಾಯಿಯಲ್ಲಿ ರಂಜಕ, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶ ಸಮೃದ್ಧವಾಗಿದೆ. ಇದನ್ನು ತಿನ್ನುವುದರಿಂದ ರಕ್ತಹೀನತೆಯ ಸಮಸ್ಯೆ ಕಡಿಮೆಯಾಗುತ್ತದೆ. ಮೂಳೆಗಳು ಸದೃಢವಾಗುತ್ತದೆ. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಸಂಧಿವಾತದಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡುತ್ತವೆ. ಹಾಗಾಗಿ ಕೀಲು ನೋವಿನಿಂದ ಬಳಲುತ್ತಿರುವವರು ನುಗ್ಗೆಕಾಯಿಯನ್ನು ನಿರಂತರವಾಗಿ ಸೇವಿಸಬೇಕು.

Whats_app_banner