Ramadan Recipes: ಬ್ಲೂ ಮೂನ್‌ನಿಂದ ಗುಲ್ಮರ್ಗ್‌ವರೆಗೆ; ರಂಜಾನ್ ಇಫ್ತಾರ್ ಕೂಟಕ್ಕೆ ಹೇಳಿ ಮಾಡಿಸಿದ ವಿಶೇಷ ಪಾನೀಯಗಳಿವು
Mar 28, 2024 07:17 PM IST
ರಂಜಾನ್ ಇಫ್ತಾರ್ ಕೂಟಕ್ಕೆ ಹೇಳಿ ಮಾಡಿಸಿದ ಪಾನೀಯಗಳಿವು
- ಪವಿತ್ರ ಮಾಸ ರಂಜಾನ್‌ನಲ್ಲಿ ಮುಸ್ಲಿಮರು ಒಂದು ತಿಂಗಳ ಕಾಲ ಉಪವಾಸ ಮಾಡುತ್ತಾರೆ. ಸೂರ್ಯಾಸ್ತದ ಬಳಿಕ ರೋಜಾ ಮುರಿದು ಇಫ್ತಾರ್ ಆಯೋಜಿಸುವ ಸಂದರ್ಭಕ್ಕೆ ಹೊಂದುವ ಸರಳವಾದ ಹಾಗೂ ರುಚಿಕರವಾದ ಪಾನೀಯಗಳ ಬಗ್ಗೆ ಮಾಹಿತಿ ಇಲ್ಲಿದೆ.
ಮುಸ್ಲಿಂ ಬಾಂಧವರು ಸದ್ಯ ರಂಜಾನ್ ತಿಂಗಳ ಉಪವಾಸದಲ್ಲಿದ್ದಾರೆ. ರೋಜಾ ಆಚರಿಸುವ ಸಂದರ್ಭದಲ್ಲಿ ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಏನನ್ನೂ ಸೇವಿಸುವಂತಿಲ್ಲ. ದ್ರವ ರೂಪದ ಆಹಾರ ಕೂಡ ಇವರ ಬಾಯಿಗೆ ಹೋಗುವಂತಿಲ್ಲ. ಮುಸ್ಸಂಜೆ ಬಳಿಕ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ರೋಜಾ ಅಥವಾ ರಂಜಾನ್ ಉಪವಾಸವನ್ನು ಮುರಿಯುತ್ತಾರೆ. ಇದನ್ನು ಇಫ್ತಾರ್ ಎಂದು ಕರೆಯಲಾಗುತ್ತದೆ. ರಾತ್ರಿ ಇಫ್ತಾರ್‌ನ ಸಂದರ್ಭದಲ್ಲಿ ಬಿರಿಯಾನಿ, ಕಬಾಬ್ ನಾನಾ ರೀತಿಯ ಪಾನೀಯಗಳು ಹೀಗೆ ಸಾಕಷ್ಟು ರೀತಿಯ ಭಕ್ಷ್ಯಗಳನ್ನು ಮಾಡಲಾಗುತ್ತದೆ.
ರೋಜಾ ಸಂದರ್ಭದಲ್ಲಿ ಇಡೀ ದಿನ ಮುಸ್ಲಿಮರು ಉಪವಾಸ ಇರುವುದರಿಂದ ಇಫ್ತಾರ್‌ನ ಸಂದರ್ಭದಲ್ಲಿ ದೇಹದಲ್ಲಿ ನೀರಿನಂಶ ಹೆಚ್ಚಿಸಲು ವಿವಿಧ ರೀತಿಯ ಪಾನೀಯಗಳನ್ನು ತಯಾರಿಸಿ ಕುಡಿಯುವುದು ನಿಜಕ್ಕೂ ಒಳ್ಳೆಯ ಆಯ್ಕೆಯಾಗಿದೆ. ಇಫ್ತಾರ್ ಕೂಟದಲ್ಲಿ ನೀವು ಮಾಡಬಹುದಾದ ರುಚಿ ರುಚಿಯಾದ ಹಾಗೂ ನೋಡಲೂ ಅತ್ಯಂತ ಮನಮೋಹಕ ಎನಿಸುವ ವಿವಿಧ ಪಾನೀಯಗಳನ್ನು ತಯಾರಿಸುವ ವಿಧಾನವನ್ನು ಇಲ್ಲಿ ನೀಡಲಾಗಿದೆ.
1. ಬ್ಲೂ ಮೂನ್
ಹೆಸರೇ ಹೇಳುವಂತೆ ಈ ಪಾನೀಯವು ನೀಲಿ ಬಣ್ಣದಲ್ಲಿ ಇರುತ್ತದೆ. ಇವುಗಳನ್ನು ತಯಾರಿಸುವುದು ಹೇಗೆ..? ಬೇಕಾಗುವ ಸಾಮಗ್ರಿಗಳೇನು ತಿಳಿದುಕೊಳ್ಳೋಣ:
ಬೇಕಾಗುವ ಸಾಮಗ್ರಿಗಳು: ಲಿಚಿ ಹಣ್ಣಿನ ರಸ - 150 ಮಿಲೀ, ನಿಂಬೆರಸ - 30 ಮಿಲೀ, ಮಾರುಕಟ್ಟೆಯಲ್ಲಿ ಸಿಗುವ ನೀಲಿ ಕುರಾಕೋ - 60 ಮಿಲೀ, ಮಾರುಕಟ್ಟೆಗಳಲ್ಲಿ ಸಿಗುವ ಸಿಂಪಲ್ ಸಿರಪ್ - 30 ಮಿಲೀ
ತಯಾರಿಸುವ ವಿಧಾನ: ಲಿಚಿ ಜ್ಯೂಸ್, ನಿಂಬೆರಸ , ನೀಲಿ ಕುರಾಕೋ ಹಾಗೂ ಸಿಂಪಲ್ ಸಿರಪ್ ಅನ್ನು ಒಂದು ಪಾತ್ರೆಗೆ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಇವುಗಳನ್ನು ಈಗ ಚಂದನೆಯ ಗಾಜಿನ ಲೋಟಕ್ಕೆ ಹಾಕಿ ಅನಾನಸ್ ಹಣ್ಣಿನ ತುಂಡಿನಿಂದ ಗಾಜಿನ ಲೋಟವನ್ನು ಅಲಂಕರಿಸಿ ಸವಿಯಲು ನೀಡಿ.
2. ಕಾಲಾ ನೂರ್ (ಕಪ್ಪು ವಜ್ರ)
ಇಫ್ತಾರ್ ಕೂಟದಲ್ಲಿ ತಯಾರಿಸಬಹುದಾದ ಮತ್ತೊಂದು ಬಗೆಯ ಜ್ಯೂಸ್ ಮಾಡುವ ವಿಧಾನ ಇಲ್ಲಿದೆ ನೋಡಿ
ಬೇಕಾಗುವ ಸಾಮಗ್ರಿಗಳು : ಬ್ಲಾಕ್ ಸಾಲ್ಟ್ 1 ಟೇಬಲ್ ಚಮಚ, ಅಡುಗೆಗೆ ಬಳಸುವ ಉಪ್ಪು 3 ಗ್ರಾಂ, ಹುರಿದ ಜೀರಿಗೆ ಪುಡಿ 1 ಗ್ರಾಂ, ಕಾಳುಮೆಣಸು - 2 ಗ್ರಾಂ, ನಿಂಬೆರಸ 20 ಮಿಲೀ, ರುಚಿ ಇರುವ ಸೋಡಾ 130 ಮಿಲೀ, ಮಾರುಕಟ್ಟೆಯಲ್ಲಿ ಸಿಗುವ ಕಾಲಾ ನೂರ್ ಮಸಾಲಾ - 1 ಚಮಚ
ಮಾಡುವ ವಿಧಾನ: ಕಾಲಾ ನೂರ್ ಮಸಾಲಾ ಹಾಗೂ ನಿಂಬೆರಸ ಸೇರಿದಂತೆ ಇನ್ನುಳಿದ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ. ಕೊನೆಯಲ್ಲಿ ಸೋಡಾ ಸೇರಿಸಿ ಸವಿಯಲು ನೀಡಿ.
3. ಪಾನ್ ಬಹಾರ್
ಬೇಕಾಗುವ ಸಾಮಗ್ರಿಗಳು : ಮೊಸರು 150 ಮಿಲೀ, ಮಾರುಕಟ್ಟೆಯಲ್ಲಿ ಸಿಗುವ ಸಿಂಪಲ್ಸ್ ಸಿರಪ್ 60 ಮಿಲೀ, ಸ್ವೀಟ್ ಪಾನ್ ಗಿಲೋರಿ 2 (ಮಾರುಕಟ್ಟೆಯಲ್ಲಿ ಸಿಗುತ್ತದೆ)
ಮಾಡುವ ವಿಧಾನ : ಮೊಸರು, ಮಾರುಕಟ್ಟೆಯಿಂದ ತಂದ ಪಾನ್ ಗಿಲೋರಿ ಸ್ವೀಟ್, ಸಿಂಪಲ್ ಸಿರಪ್ ಹಾಗೂ ಪುದೀನಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ. ಬಳಿಕ ಇದನ್ನು ಚಂದನೆಯ ಗಾಜಿನ ಲೋಟದಲ್ಲಿ ಹಾಕಿ ಸವಿಯಲು ನೀಡಿ.
4. ಗುಲ್ಮರ್ಗ್
ಬೇಕಾಗುವ ಸಾಮಗ್ರಿಗಳು : ಎಲ್ಲಾ ಹಣ್ಣುಗಳ ಮಿಶ್ರಣದ ಜ್ಯೂಸ್ 120 ಮಿಲೀ, ಹಾಲು 80 ಮಿಲೀ, ಸ್ಟ್ರಾಬೆರ್ರಿ ರಸ 60 ಮಿಲೀ
ಮಾಡುವ ವಿಧಾನ : ಎಲ್ಲಾ ಹಣ್ಣುಗಳ ಮಿಶ್ರಣದ ಜ್ಯೂಸ್, ಹಾಲು ಹಾಗೂ ಸ್ಟ್ರಾಬೆರ್ರಿ ರಸವನ್ನು ಮಿಕ್ಸ್ ಮಾಡಿ ಸವಿಯಲು ನೀಡಿ.