Garlic Pickle: ಊಟದ ರುಚಿ ಹೆಚ್ಚಿಸೋದು ಮಾತ್ರವಲ್ಲ, ಆರೋಗ್ಯಕ್ಕೂ ಉತ್ತಮ ಬೆಳ್ಳುಳ್ಳಿ ಉಪ್ಪಿನಕಾಯಿ, ತಯಾರಿಸುವ ವಿಧಾನ ಇಲ್ಲಿದೆ
Aug 25, 2024 02:41 PM IST
ಬೆಳ್ಳುಳ್ಳಿ ಉಪ್ಪಿನಕಾಯಿ
- ಭಾರತೀಯ ಸಾಂಬಾರ ಪದಾರ್ಥಗಳಲ್ಲಿ ಅಗ್ರಸ್ಥಾನ ಪಡೆದಿರುವ ಬೆಳ್ಳುಳ್ಳಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೆ ಹಲವರಿಗೆ ಇದರ ಘಾಟು ವಾಸನೆ ಹಿಡಿಸುವುದಿಲ್ಲ. ಆದರೆ ಇದರಿಂದ ಉಪ್ಪಿನಕಾಯಿ ತಯಾರಿಸಿದ್ರೆ ಬಾಯಿ ಚಪ್ಪರಿಸಿಕೊಂಡು ತಿನ್ನೋದು ಖಂಡಿತ. ಮನೆಯಲ್ಲೇ ಸುಲಭವಾಗಿ ಬೆಳ್ಳುಳ್ಳಿ ಉಪ್ಪಿನಕಾಯಿ ತಯಾರಿಸೋದು ಹೇಗೆ ನೋಡಿ.
ಬೆಳ್ಳುಳ್ಳಿ ಸೇವನೆಯಿಂದ ಮನುಷ್ಯನ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದು ಕೊಲೆಸ್ಟ್ರಾಲ್ ನಿಯಂತ್ರಣ ಸೇರಿದಂತೆ ಹಲವು ರೀತಿ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಪ್ರತಿದಿನ ಒಂದೆರಡು ಎಸಳು ಬೆಳ್ಳುಳ್ಳಿ ತಿನ್ನುವುದರಿಂದ ವಿವಿಧ ರೀತಿಯ ದೈಹಿಕ ಸಮಸ್ಯೆಗಳು ದೂರಾಗುತ್ತವೆ. ಆದರೆ ಬೆಳುಳ್ಳಿಯ ಘಾಟು ವಾಸನೆ, ಖಾರದ ರುಚಿ ಕೆಲವರಿಗೆ ಹಿಡಿಸುವುದಿಲ್ಲ.
ಒಗ್ಗರಣೆಗೆ ಸಾಮಾನ್ಯವಾಗಿ ಬೆಳ್ಳುಳ್ಳಿ ಬಳಸಿಯೇ ಬಳಸುತ್ತಾರೆ, ಇದರಿಂದ ಸಾಂಬಾರಿನ ಘಮವೂ ಹೆಚ್ಚಾಗುತ್ತದೆ. ಆದರೆ ಇದನ್ನು ಹಿಡಿಸದವರು ಬೆಳ್ಳುಳ್ಳಿಯನ್ನು ಬದಿಗೆ ಎತ್ತಿಡುತ್ತಾರೆ. ಆದರೆ ಅಂಥವರು ಬೆಳ್ಳುಳ್ಳಿ ತಿನ್ನುವಂತೆ ಮಾಡಬೇಕು ಎಂದರೆ ಬೆಳ್ಳುಳ್ಳಿಯಿಂದ ಉಪ್ಪಿನಕಾಯಿ ತಯಾರಿಸಬೇಕು. ಈ ಉಪ್ಪಿನಕಾಯಿ ಊಟ ರುಚಿ ಹೆಚ್ಚಿಸೋದು ಮಾತ್ರವಲ್ಲ ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿ. ಹಾಗಾದ್ರೆ ಬೆಳ್ಳುಳ್ಳಿ ಉಪ್ಪಿನಕಾಯಿ ತಯಾರಿಸಲು ಏನೆಲ್ಲಾ ಬೇಕು, ಇದನ್ನ ಮಾಡುವುದು ಹೇಗೆ ನೋಡಿ.
ಬೆಳ್ಳುಳ್ಳಿ ಉಪ್ಪಿನಕಾಯಿ ಮಾಡಲು ಬೇಕಾಗುವ ಸಾಮಗ್ರಿಗಳು
ಬೆಳ್ಳುಳ್ಳಿ ಎಸಳು – ಕಾಲು ಕೆಜಿ, ಮೆಂತ್ಯ – ಎರಡು, ಸಾಸಿವೆ – ನಾಲ್ಕು ಚಮಚ, ಖಾರದಪುಡಿ – ನಾಲ್ಕು ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಎಳ್ಳೆಣ್ಣೆ – ಒಂದು ಕಪ್
ಬೆಳ್ಳುಳ್ಳಿ ಉಪ್ಪಿನಕಾಯಿ ತಯಾರಿಸುವ ವಿಧಾನ
ಬೆಳ್ಳುಳ್ಳಿ ಉಪ್ಪಿನಕಾಯಿ ತಯಾರಿಸಲು ಆರಂಭದಲ್ಲಿ ಸಾಸಿವೆ ಹಾಗೂ ಮೆಂತ್ಯವನ್ನು ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಬೇಕು. ಅದಕ್ಕಾಗಿ ಮೆಂತ್ಯೆ ಹಾಗೂ ಸಾಸಿವೆ ಎರಡನ್ನೂ ಪ್ರತ್ಯೇಕವಾಗಿ ಹುರಿದುಕೊಳ್ಳಿ. ನಂತರ ಎರಡನ್ನೂ ಮಿಕ್ಸಿನಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ. ಈಗ ಒಂದು ಪಾತ್ರೆಯಲ್ಲಿ ಸಂಪೂರ್ಣವಾಗಿ ಸಿಪ್ಪೆ ಸುಲಿದೆ ಬೆಳ್ಳುಳ್ಳಿ ಎಸಳುಗಳು, ಹಸಿಮೆಣಸು, ಸಾಸಿವೆ–ಮೆಂತ್ಯ ಪುಡಿ, ರುಚಿಗೆ ತಕ್ಕಷ್ಟು ಉಪ‍್ಪು ಸೇರಿಸಿ ಮಿಶ್ರಣ ಮಾಡಿ. ಇದಕ್ಕೆ ಒಂದು ಕಪ್ ಎಣ್ಣೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಗಾಳಿಯಾಡದ ಡಬ್ಬಿಯಲ್ಲಿ ಸಂಗ್ರಹಿಸಿ ಇಡಿ. ಇದನ್ನು ಎರಡು ವಾರಗಳ ಕಾಲ ಹಾಗೇ ಬಿಡಿ. ಮೂನಾಲ್ಕು ದಿನಕ್ಕೊಮ್ಮೆ ನೀರಿಲ್ಲದ ಆರಿದ ಚಮಚದಿಂದ ಕಲೆಸಿ. ಎರಡು ವಾರಗಳಲ್ಲಿ ಸಖತ್ ಟೇಸ್ಟಿ ಆಗಿರೋ ಬೆಳ್ಳುಳ್ಳಿ ಉಪ್ಪಿನಕಾಯಿ ತಿನ್ನಲು ಸಿದ್ಧವಾಗುತ್ತದೆ. ಇದರ ಪರಿಮಳ ಎಂಥವರನ್ನಾದರೂ ಬೆಳ್ಳುಳ್ಳಿ ಉಪ್ಪಿನಕಾಯಿ ತಿನ್ನುವಂತೆ ಮಾಡುತ್ತದೆ.
ಈ ಬೆಳ್ಳುಳ್ಳಿ ಉಪ್ಪಿನಕಾಯಿಯನ್ನು ಬೇಳೆ ಸಾಂಬಾರ್ ಅನ್ನ ಅಥವಾ ಮೊಸರಿನೊಂದಿಗೆ ತಿಂದರೆ ಆಹಾ ಸ್ವರ್ಗ ಸುಖ. ಹಾಗೆಯೇ ದೋಸೆ, ಇಡ್ಲಿಗಳ ಜೊತೆಯೂ ಇದನ್ನು ನೆಂಜಿಕೊಂಡು ತಿನ್ನಬಹುದು. ಬಿಸಿ ಅನ್ನಕ್ಕೆ ಈ ಬೆಳ್ಳುಳ್ಳಿ ಉಪ್ಪಿನಕಾಯಿ ಕಲೆಸಿ, ಅದರ ಜೊತೆ ಸ್ವಲ್ಪ ತುಪ್ಪ ಸೇರಿಸಿ ತಿನ್ನುತ್ತಿದ್ದರೆ ಇದರ ರುಚಿಗೆ ನೀವು ಕಳೆದು ಹೋಗೋದು ಖಂಡಿತ.
ಬೆಳ್ಳುಳ್ಳಿ ದೇಹಕ್ಕೆ ಅಗತ್ಯವಿರುವ ಪ್ರತಿರಕ್ಷಣ ವ್ಯವಸ್ಥೆಯನ್ನು ದೇಹಕ್ಕೆ ಒದಗಿಸುತ್ತದೆ. ದೇಹವು ಯಾವುದೇ ಸೋಂಕು ಮತ್ತು ವೈರಸ್‌ಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೆಚ್ಚಿಸುವ ಗುಣ ಬೆಳ್ಳುಳ್ಳಿಯಲ್ಲಿದೆ.
ವಿಭಾಗ