ಕನ್ನಡ ಸುದ್ದಿ  /  Lifestyle  /  Food Mango Pickle Follow These 10 Tips To Store Mango Pickles For Long Time How To Store Mango Pickle Bgy

Mango Pickle: ಮಾವಿನಕಾಯಿ ಉಪ್ಪಿನಕಾಯಿ ವರ್ಷಗಳ ಕಾಲ ಕೆಡದಂತಿರಬೇಕಾ, ಹಾಗಿದ್ರೆ ಈ 10 ಕ್ರಮಗಳನ್ನು ತಪ್ಪದೇ ಪಾಲಿಸಿ

ಮಾವಿನಕಾಯಿ ಉಪ್ಪಿನಕಾಯಿ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಆದರೆ ಮನೆಯಲ್ಲೇ ಉಪ್ಪಿನಕಾಯಿ ತಯಾರಿಸುವುದೆಂದರೆ ಬೇಗನೇ ಕೆಟ್ಟು ಹೋದರೆ ಎಂಬ ಚಿಂತೆ ಕಾಡುವುದೇ ಹೆಚ್ಚು. ವರ್ಷಗಳ ಕಾಲ ಮಾವಿನ ಉಪ್ಪಿನಕಾಯಿಯನ್ನು ಶೇಖರಿಸಿಕೊಳ್ಳಲು ಇಲ್ಲಿವೆ 10 ಸುಲಭ ವಿಧಾನಗಳು. (ಬರಹ: ಭಾಗ್ಯ ದಿವಾಣ)

ಮಾವಿನಕಾಯಿ ಉಪ್ಪಿನಕಾಯಿ ವರ್ಷಗಳ ಕಾಲ ಕೆಡದಂತಿರಲು ಈ 10 ಕ್ರಮಗಳನ್ನು ತಪ್ಪದೇ ಪಾಲಿಸಿ
ಮಾವಿನಕಾಯಿ ಉಪ್ಪಿನಕಾಯಿ ವರ್ಷಗಳ ಕಾಲ ಕೆಡದಂತಿರಲು ಈ 10 ಕ್ರಮಗಳನ್ನು ತಪ್ಪದೇ ಪಾಲಿಸಿ

ಭಾರತೀಯ ಆಹಾರ ಪದ್ಧತಿಯಲ್ಲಿ ಉಪ್ಪಿನಕಾಯಿಗೆ ಬಹಳ ಪ್ರಾಮುಖ್ಯವಿದೆ. ಊಟಕ್ಕೂ ಉಪ್ಪಿನಕಾಯಿಗೂ ವಿಶೇಷ ನಂಟು. ಊಟದ ರುಚಿ ಹೆಚ್ಚಬೇಕು ಎಂದರೆ ತಟ್ಟೆಯ ತುದಿಯಲ್ಲಿ ಉಪ್ಪಿನಕಾಯಿ ಇರಬೇಕು. ಊಟದ ಜೊತೆಗಷ್ಟೇ ಅಲ್ಲದೆ ತಿಂಡಿಗಳ ಜೊತೆಗೂ ಉಪ್ಪಿನಕಾಯಿ ಹೊಂದಿಕೊಳ್ಳುತ್ತದೆ. ಮಾವಿನಕಾಯಿ, ನೆಲ್ಲಿಕಾಯಿ, ಅಮಟೆಕಾಯಿ, ನಿಂಬೆಹುಳಿ ಮಾತ್ರವಲ್ಲದೆ ಮಿಶ್ರ ತರಕಾರಿಗಳ ಉಪ್ಪಿನಕಾಯಿಗೂ ಬಲು ಬೇಡಿಕೆಯಿದೆ. ಅದರಲ್ಲೂ ಮನೆಯಲ್ಲೇ ಮಾಡಿದ ಮಾವಿನಕಾಯಿ ಉಪ್ಪಿನಕಾಯಿ ಅಂದರೆ ಅದರ ರುಚಿ ಒಂದು ಪಟ್ಟು ಹೆಚ್ಚೇ ಎನ್ನಬಹುದು.

ಮಾವಿನಕಾಯಿ ಉಪ್ಪಿನಕಾಯಿ ತಯಾರಿಸುವ ವಿಧಾನ ಕೊಂಚ ಕಷ್ಟ. ಇದಕ್ಕೆ ಶ್ರದ್ಧೆ, ತಾಳ್ಮೆ ಜೊತೆಗೆ ಸಂಯಮವೂ ಬೇಕು. ದಿಢೀರ್‌ ಮಾಡುವ ಉಪ್ಪಿನಕಾಯಿಗಳನ್ನು ತಿಂಗಳವರೆಗೂ ಬಳಕೆ ಮಾಡುವುದು ಕಷ್ಟ. ಆ ಕಾರಣಕ್ಕೆ ಹೆಚ್ಚು ಸಮಯ ವ್ಯಯಿಸಿ, ದೀರ್ಘಕಾಲದವರೆಗೆ ಬಳಸಲು ಸಾಧ್ಯವಾಗುವಂತಹ ಉಪ್ಪಿನಕಾಯಿಯನ್ನು ತಯಾರಿಸುವುದು ಉತ್ತಮ. ಅಂತಹ ಉಪ್ಪಿನಕಾಯಿ ತಯಾರಿಸಿದ ಮೇಲೆ ಅದನ್ನು ಕೆಡದಂತೆ ಶೇಖರಿಸಿಡುವ ಸಾಂಪ್ರದಾಯಿಕ ವಿಧಾನಗಳು ತಿಳಿದಿಬೇಕು ಅಲ್ಲವೇ? ನೀವು ಮನೆಯಲ್ಲಿ ಉಪ್ಪಿನಕಾಯಿ ಮಾಡುವ ಯೋಚನೆ ಇದ್ದು, ದೀರ್ಘಕಾಲದವರೆಗೆ ಉಪ್ಪಿನಕಾಯಿ ಕೆಡದಂತೆ ಇರಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ.

ಮಾವಿನ ಮಿಡಿಯನ್ನು ಸ್ವಚ್ಛಗೊಳಿಸಿ, ಹನಿ ನೀರು ಉಳಿಯದಂತೆ ನೋಡಿಕೊಳ್ಳಿ

ಮಾವಿನ ಕಾಯಿ ಅಥವಾ ಮಾವಿನ ಮಿಡಿ ಉಪ್ಪಿನಕಾಯಿ ಹಾಕುವ ಮೊದಲ ಹಂತವಾಗಿ ಮಾವಿನ ಕಾಯಿಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಬೇಕು. ನಂತರ ಅದನ್ನು ಒಣ ಬಟ್ಟೆ ಉಪಯೋಗಿಸಿ ನೀರಿನ ಅಂಶ ಉಳಿದಂತೆ ಚೆನ್ನಾಗಿ ಒರೆಸಿಕೊಳ್ಳಬೇಕು. ಮಾವಿನ ಮಿಡಿಯಲ್ಲಿ ನೀರಿನ ಅಂಶ ಉಳಿದರೆ ಉಪ್ಪಿನಕಾಯಿ ಬಲು ಬೇಗನೆ ಕೆಟ್ಟು ಹೋಗುತ್ತದೆ. ಅಲ್ಲದೇಹೋದರೆ, ಬೇಗನೆ ಹಸಿರು ಬಣ್ಣದಿಂದ ಕಪ್ಪು ಬಣ್ಣಕ್ಕೆ ತಿರುಗಿ, ರುಚಿಯೂ ಕೆಡುತ್ತದೆ. ಒದ್ದೆ ಕೈಗಳಿಂದ ಉಪ್ಪಿನಕಾಯಿ ಮುಟ್ಟದಿರಿ.

ಗಾಜಿನ ಬಾಟಲ್‌ ಅಥವಾ ಭರಣಿಯಲ್ಲಿ ಶೇಖರಿಸಿಕೊಳ್ಳಿ

ಸ್ವಚ್ಛಗೊಳಿಸಿದ ಮಾವಿನಕಾಯಿಗಳನ್ನು ಗಾಜಿನ ಬಾಟಲ್‌ ಅಥವಾ ಭರಣಿಗಳಲ್ಲಿ ಅಗತ್ಯವಿರುವಷ್ಟು ಕಲ್ಲು ಉಪ್ಪು ಹಾಕಿ ನೆನೆಸಿಡಬೇಕು. ಅದು ಮುದುಡಿ ಹಸಿರು ಬಣ್ಣದಿಂದ ತುಸು ಹಳದಿ ಬಣ್ಣಕ್ಕೆ ಬದಲಾಗುವವರೆಗೂ ವಾರಕ್ಕೆ ಒಂದು ಬಾರಿ ಅಥವಾ ಎರಡು ಬಾರಿ ಮಾವಿನ ಮಿಡಿಯನ್ನು ಅಡಿಮೇಲು ಮಾಡುತ್ತಿರಬೇಕು. ಉಪ್ಪಿನಕಾಯಿ ಮಸಾಲೆಯನ್ನು ಮಾವಿನಕಾಯಿಯೊಂದಿಗೆ ಸೇರಿಸಿಕೊಂಡ ನಂತರವೂ ಸಹ ಪ್ಲಾಸ್ಟಿಕ್‌ ಡಬ್ಬ, ಸ್ಟೀಲ್‌ ಇಲ್ಲವೇ ಸ್ಟೀಲ್‌ ಪ್ರೂಫ್‌ ಡಬ್ಬಗಳಲ್ಲಿ ಉಪ್ಪಿನಕಾಯಿಯನ್ನು ಶೇಖರಿಸಬಾರದು. ಉಪ್ಪಿನಕಾಯಿ ತಯಾರಿಕೆಯಲ್ಲಿ ಉಪ್ಪನ್ನು ವಿಪರೀತ ಹಾಕೋದ್ರಿಂದ ಸ್ಟೀಲ್‌ ಡಬ್ಬಿಯಲ್ಲಿ ಹಾಕಿದರೆ ಅವೆರಡು ಸಂಪರ್ಕ ಹೊಂದಿ, ರಸ್ಟ್‌ ಹಿಡಿದು, ಶಿಥಿಲವಾಗುವ ಸಾಧ್ಯತೆಯಿದೆ. ಇದು ಆರೋಗ್ಯಕ್ಕೂ ಹಾನಿಕರ. ಉಪ್ಪಿನಕಾಯಿಯನ್ನು ಗಾಜಿನ ಬಾಟಲ್ ಇಲ್ಲವೇ ಭರಣಿಗಳಲ್ಲಿ ಇಡುವುದರಿಂದ ದೀರ್ಘಕಾಲದವರೆಗೆ ಸಂಗ್ರಹಿಸಬಹುದು.

ಭರಣಿಗಳ ಮುಚ್ಚಳದಡಿ ಎಣ್ಣೆ ಸವರಿದ ಬಾಳೆ ಎಲೆಯನ್ನಿಡಿ

ಭರಣಿ ಅಥವಾ ಗಾಜಿನ ಬಾಟಲ್‌ಗಳಲ್ಲಿ ಉಪ್ಪಿನಕಾಯಿಯನ್ನು ಶೇಖರಿಸಿಕೊಳ್ಳುವ ಮೊದಲು, ಗಾಳಿಯಲ್ಲಿನ ತೇವಾಂಶವು ಗಾಜಿನ ಬಾಟಲ್‌ ಒಳಗೆ ಸೇರಿಕೊಳ್ಳದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಬಾಳೆ ಎಲೆಗೆ ಕೊಬ್ಬರಿ ಎಣ್ಣೆ ಸವರಿ ಮುಚ್ಚಳದ ಅಡಿಭಾಗದಲ್ಲಿರಿಸಬೇಕು. ಇದರಿಂದ ಶಿಲೀಂದ್ರಿಯಗಳು ಅಥವಾ ಬ್ಯಾಕ್ಟೀರಿಯಾಗಳು ಉಪ್ಪಿನಕಾಯಿಯಲ್ಲಿ ಬೆಳೆಯುವುದಿಲ್ಲ.

ಗಾಜಿನ ಬಾಟಲ್‌ ಮುಚ್ಚಳ ಹಾಕುವ ಮುನ್ನ ಒಂದು ಸುತ್ತು ಬಟ್ಟೆ ಕಟ್ಟಿ

ಉಪ್ಪಿನಕಾಯಿಗೆ ಗಾಳಿ ಸೋಕದಂತೆ ತಡೆಯಲು ಹಾಗೂ ವರ್ಷಗಳ ಕಾಲ ಕೆಡದಂತೆ ಕಾಯ್ದುಕೊಳ್ಳಲು ಯಾವುದೇ ಪ್ರಿಸರ್ವೇಟಿವ್‌ಗಳನ್ನು ಬಳಸಬೇಕಿಲ್ಲ. ಬದಲಾಗಿ ಹಳೆಯ ಕಾಲದಿಂದಲೂ ಭರಣಿ, ಇಲ್ಲವೇ ಗಾಜಿನ ಬಾಟಲ್‌ ಮೇಲ್ಭಾಗವನ್ನು ದಪ್ಪನೆಯ ಬಟ್ಟೆಯನ್ನು ಮುಚ್ಚಿ, ದಾರದಿಂದ ಬಿಗಿಯಾಗಿ ಕಟ್ಟಲಾಗುತ್ತದೆ. ಇಲ್ಲವೇ ಪ್ಲಾಸ್ಟಿಕ್‌ ಲಕೋಟೆಯನ್ನೂ ಕಟ್ಟುವುದಿದೆ. ಇದರಿಂದ ಮೂರ್ನಾಲ್ಕು ವರ್ಷಗಳಾದರೂ ಉಪ್ಪಿನಕಾಯಿ ಕೆಡುವುದಿಲ್ಲ.

ಸೂರ್ಯನ ಬೆಳಕು ಬೀಳದ ಜಾಗದಲ್ಲಿರಿಸಿ

ಉಪ್ಪಿನಕಾಯಿ ಹಾಕಿದ ಮೇಲೆ ಆ ಭರಣಿಯನ್ನು ಅಪ್ಪಿತಪ್ಪಿಯೂ ಸೂರ್ಯನ ಬೆಳಕಿನಲ್ಲಿರಿಸಬೇಡಿ. ಇದು ತೇವಾಂಶ ಹೆಚ್ಚಲು ಕಾರಣವಾಗುತ್ತದೆ.

ಬೆಚ್ಚನೆಯ ಜಾಗವನ್ನು ಆಯ್ಕೆ ಮಾಡಿಕೊಳ್ಳಿ

ಮನೆಯಲ್ಲಿ ಎಲ್ಲಿ ಬೆಚ್ಚನೆಯ ಜಾಗವಿದೆಯೆಂದು ನೋಡಿಕೊಂಡು ಅಲ್ಲಿ ಉಪ್ಪಿನಕಾಯಿ ಭರಣಿಯನ್ನಿಟ್ಟುಕೊಳ್ಳಿ.

ಒಂದು ಬಾರಿ ಭರಣಿಯನ್ನು ಇರಿಸಿದರೆ, ಮತ್ತೆ ಅದರ ಜಾಗವನ್ನು ಆಗಾಗ ಬದಲಿಸಕೂಡದು. ಇದರಿಂದ ಉಪ್ಪಿನಕಾಯಿಯನ್ನು ವರ್ಷಗಳ ಕಾಲ ಉಳಿಸುವ ಆಸೆಗೆ ತಣ್ಣೀರೆರಚಿದಂತಾಗುತ್ತದೆ.

ಆಗಾಗ ದೊಡ್ಡ ಭರಣಿಯನ್ನು ತೆರೆಯುವ ಬದಲು ಸಣ್ಣ ಭರಣಿಗಳಲ್ಲಿ ತುಂಬಿಕೊಳ್ಳಿ

ದೊಡ್ಡ ಭರಣಿಗಳಲ್ಲಿ ಉಪ್ಪಿನಕಾಯಿಯನ್ನು ಸಂಗ್ರಹಿಸಿಟ್ಟಾಗ ಅವಶ್ಯಕತೆ ಬಂದಾಗೆಲ್ಲಾ ನಾವು ಪದೇ ಪದೆ ಅದರ ಮುಚ್ಚಳ ತೆಗೆಯಬೇಕಾಗುತ್ತದೆ. ಇದರಿಂದಾಗಿ ಭರಣಿಯ ಒಳಗೆ ಗಾಳಿ ಹೋಗಿ ಬೇಗನೆ ಕೆಟ್ಟುಹೋಗುತ್ತದೆ. ಆದ್ದರಿಂದ ಸಣ್ಣ ಭರಣಿ ಅಥವಾ ಗಾಜಿನ ಬಾಟಲ್‌ ಗಳಿಗೆ ಉಪ್ಪಿನಕಾಯಿ ತುಂಬಿಸಿಕೊಳ್ಳಿ. ಮುಗಿದಾಗ ಮತ್ತೊಮ್ಮೆ ತುಂಬಿಕೊಂಡರಾಯಿತು.

ಉಪ್ಪಿನಕಾಯಿ ಕೆಡದಂತೆ ವಿನೆಗರ್‌ ಬಳಸಿ

ಉಪ್ಪಿನಕಾಯಿ ಹಾಕಿದ ಮೇಲೆ, ಅದರ ಮೇಲ್ಭಾಗದಲ್ಲಿ ಸ್ವಲ್ಪ ವಿನೆಗರ್‌ ಹಾಕಿಕೊಳ್ಳಿ. ಇದರಿಂದ ಉಪ್ಪಿನಕಾಯಿ ಬಲು ಬೇಗನೆ ಕೆಡುವುದಿಲ್ಲ. ಅಲ್ಲದೆ ರುಚಿಯಲ್ಲೂ ಯಾವುದೇ ವ್ಯತ್ಯಾಸವಾಗಲಾರದು.

ನಿಂಬೆ ರಸವನ್ನು ಹಾಕಿ ನೋಡಿ

ಬೀಜಗಳಿಂದ ಮುಕ್ತಗೊಳಿಸಿದ ನಿಂಬೆಹಣ್ಣಿನ ರಸವನ್ನು ಉಪ್ಪಿನಕಾಯಿ ಸಿದ್ಧವಾಗಿ ಭರಣಿಗಳಿಗೆ ಹಾಕಿಕೊಂಡ ನಂತರ ಮೇಲ್ಘಾಗದಿಂದ ಸಿಂಪಡಿಸಿಕೊಳ್ಳಿ. ಇದು ಉಪ್ಪಿನಕಾಯಿಯ ಆಯುಷ್ಯವನ್ನು ಹೆಚ್ಚಿಸುತ್ತದೆ. ಅಲ್ಲದೇ ವರ್ಷಗಳ ಕಾಲ ಅದೇ ರುಚಿಯನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ.

ಕುದಿಸಿ ತಣಿಸಿದ ಉಪ್ಪು ನೀರನ್ನೇ ಉಪಯೋಗಿಸಿ

ಉಪ್ಪಿನಕಾಯಿಯ ಮಸಾಲೆ ಸ್ವಲ್ಪ ಗಟ್ಟಿಯಾಯಿತೆಂದರೆ, ಅದನ್ನು ತೆಳ್ಳಗಾಗಿಸಲು ಅದಕ್ಕೆ ನೇರ ಕಲ್ಲುಪ್ಪು ಹಾಕಿಯೋ ಇಲ್ಲವೇ ಕಲ್ಲುಪ್ಪು ಹಾಕಿ ಮಿಶ್ರ ಮಾಡಿದ ನೀರನ್ನೋ ಹಾಕುವ ರೂಢಿ ಇದ್ದರೆ ಮಾವಿನ ಮಿಡಿಗಳು ಬೇಗನೆ ಕೆಟ್ಟು ಹೋಗುವ ಸಾಧ್ಯತೆಗಳಿವೆ. ಆದ್ದರಿಂದ ಉಪ್ಪು ನೀರನ್ನು ಚೆನ್ನಾಗಿ ಕುದಿಸಿ ತಣಿಸಿದ ನಂತರ, ಮೇಲೆ ಕಾಣಿಸಿಕೊಳ್ಳುವ ನೊರೆಯನ್ನು ಬೇರ್ಪಡಿಸಿಕೊಳ್ಳಿ. ಇದಾದ ಬಳಿಕ ಸಿಗುವ ಕಡು ಉಪ್ಪುನೀರನ್ನು ಉಪ್ಪಿನಕಾಯಿ ಮಸಾಲೆಗೆ ಸೇರಿಸಿಕೊಳ್ಳಬಹುದು.

ಒಟ್ಟಿನಲ್ಲಿ ಕಾಲ ಅದೆಷ್ಟೇ ಬದಲಾದರೂ ಉಪ್ಪಿನಕಾಯಿಯನ್ನು ಶೇಖರಿಸಿಟ್ಟುಕೊಳ್ಳುವಂತಹ ಕೆಲವು ವಿಚಾರಗಳಲ್ಲಿ ಸಾಂಪ್ರದಾಯಿಕ ಶೈಲಿಗಳನ್ನು ಅನುಸರಿಸುವುದು ಉತ್ತಮ. ಇದರಿಂದ ಮಾವಿನಕಾಯಿ ಇಲ್ಲವೇ ಮಾವಿನ ಮಿಡಿ ಉಪ್ಪಿನಕಾಯಿಯ ರುಚಿಯೂ ಕೆಡದು, ವರ್ಷಗಳ ಕಾಲ ಬಳಕೆಗೂ ಲಭ್ಯವಾಗುತ್ತದೆ.

 

ವಿಭಾಗ