logo
ಕನ್ನಡ ಸುದ್ದಿ  /  ಜೀವನಶೈಲಿ  /  ರಸಂ ಟೀ, ಹೆಸರು ವಿಚಿತ್ರವಾದ್ರೂ ರುಚಿ ಸೂಪರ್; ಚಳಿಗಾಲದಲ್ಲಿ ಬಾಯಿರುಚಿ ಜತೆ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುವ ರೆಸಿಪಿಯಿದು

ರಸಂ ಟೀ, ಹೆಸರು ವಿಚಿತ್ರವಾದ್ರೂ ರುಚಿ ಸೂಪರ್; ಚಳಿಗಾಲದಲ್ಲಿ ಬಾಯಿರುಚಿ ಜತೆ ರೋಗನಿರೋಧಕ ಶಕ್ತಿಯನ್ನೂ ಹೆಚ್ಚಿಸುವ ರೆಸಿಪಿಯಿದು

Reshma HT Kannada

Nov 10, 2024 11:34 AM IST

google News

ರಸಂ ಟೀ ರೆಸಿಪಿ

    • ಚಳಿಗಾಲದಲ್ಲಿ ಬಾಯಿ ರುಚಿ ಹೆಚ್ಚಿಸಿಕೊಳ್ಳುವ ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಈ ಹಿತವಾದ ವಾತಾವರಣದಲ್ಲಿ ನಾಲಿಗೆಗೆ ಹಿಡಿಸುವ ರೆಸಿಪಿ ಮಾಡ್ಬೇಕು ಅಂತಿದ್ರೆ ರಸಂ ಟೀ ಮಾಡಿ. ಇದರ ಹೆಸರು ವಿಚಿತ್ರವಾದ್ರೂ ರುಚಿ ಸಖತ್ ಆಗಿರುತ್ತೆ. ಆರೋಗ್ಯಕ್ಕೂ ಇದು ಉತ್ತಮ.
ರಸಂ ಟೀ ರೆಸಿಪಿ
ರಸಂ ಟೀ ರೆಸಿಪಿ

ರಸಂ ಟೀ ಇದೇನಪ್ಪಾ ಇದು ರಸಂ ಗೊತ್ತು, ಟೀ ಕೂಡ ಗೊತ್ತು ಆದ್ರೆ ರಸಂಗೂ ಟೀಗೂ ಏನು ಸಂಬಂಧ ಅಂತ ನೀವು ಯೋಚಿಸಬಹುದು. ಇದು ಚಳಿಗಾಲದ ವಿಶೇಷ ರೆಸಿಪಿ. ರಸಂ ಟೀ ಅನ್ನೋದು ಕೇವಲ ಬಾಯಿ ರುಚಿ ಹೆಚ್ಚಿಸುವ ಖಾದ್ಯವಲ್ಲ, ಇದು ಆರೋಗ್ಯಕ್ಕೂ ಬಹಳ ಉತ್ತಮ. ಇದನ್ನು ಟೀ ರೀತಿ ಕುಡಿಯಲೂಬಹುದು, ಅನ್ನದ ಜೊತೆ ಕಲೆಸಿಕೊಂಡು ತಿನ್ನಲೂಬಹುದು. 

ರಸಂ ಟೀ ವಿಟಮಿನ್ ಸಿ, ಆ್ಯಂಟಿ ಬಯೋಟಿಕ್ ಗುಣಗಳಿಂದ ಕೂಡಿದ್ದು, ಇದು ವೈರಲ್ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ. ಬದಲಾಗುತ್ತಿರುವ ಹವಾಮಾನ ಪರಿಸ್ಥಿತಿಯಲ್ಲಿ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಲು ರಸಂ ಟೀ ಬಹಳ ಉತ್ತಮ ಎಂದು ಹೇಳಬಹುದು. ಚಳಿಗಾಲದಂತಹ ಸಮಯದಲ್ಲಿ ನಾಲಿಗೆ ರುಚಿಯಾದ ಆಹಾರವನ್ನು ಬಯಸುವುದು ಸಹಜ. ಈ ರಸಂ ಟೀ ನಾಲಿಗೆಗೆ ರುಚಿ ಹತ್ತಿಸುವ ಜೊತೆಗೆ ಆರೋಗ್ಯಕ್ಕೂ ಉತ್ತಮವಾಗಿರುವ ಕಾರಣ ಬೆಸ್ಟ್ ಆಯ್ಕೆ ಎನ್ನಬಹುದು. ಇದನ್ನು ನೀವು ಒಮ್ಮೆ ಕುಡಿದರೆ ಮತ್ತೆ ಮತ್ತೆ ಕುಡಿಯಬೇಕು ಅನ್ನಿಸೋದು ಖಂಡಿತ.

ಹಾಗಾದರೆ ರಸಂ ಟೀ ಮಾಡೋದು ಹೇಗೆ, ಇದಕ್ಕೆ ಏನೆಲ್ಲಾ ಸಾಮಗ್ರಿಗಳು ಬೇಕು ಎಂಬುದನ್ನು ನೋಡೋಣ. ಇದು ಕೆಲವೇ ನಿಮಿಷಗಳಲ್ಲಿ ಥಟ್ಟಂತ ರೆಡಿ ಆಗುವ ರೆಸಿಪಿ. ಹಾಗಾಗಿ ಮನೆಯಲ್ಲಿ ತಯಾರಿಸಿ ತಿನ್ನೋದು ಮರಿಬೇಡಿ. 

ರಸಂ ಟೀ ರೆಸಿಪಿ

ಬೇಕಾಗುವ ಸಾಮಗ್ರಿಗಳು: ಟೊಮೆಟೊ – 1, ಬೆಳ್ಳುಳ್ಳಿ – 3 ರಿಂದ 4 ಎಸಳು, ನೀರು – 2 ಲೋಟ, ಜೀರಿಗೆ – 2ಚಮಚ, ಕಾಳುಮೆಣಸು – 2 ಚಮಚ, ಹುಣಸೆಹಣ್ಣು – ಚಿಕ್ಕ ನಿಂಬೆಗಾತ್ರದ್ದು, ಕರಿಬೇವು – 1 ಎಸಳು, ತುಪ್ಪ – 2 ಚಮಚ, ಸಾಸಿವೆ – 1 ಚಮಚ, ಅರಿಸಿನ ಪುಡಿ – ಕಾಲು ಚಮಚ, ಒಣಮೆಣಸು – 2, ಕೊತ್ತಂಬರಿ ಸೊಪ್ಪು – ಸ್ವಲ್ಪ, ಉಪ್ಪು – ರುಚಿಗೆ

ರಸಂ ಟೀ ಮಾಡುವ ವಿಧಾನ

ಮಿಕ್ಸಿ ಜಾರಿಗೆ ಜೀರಿಗೆ, ಕಾಳುಮೆಣಸು, ಬೆಳ್ಳುಳ್ಳಿ, ಕರಿಬೇವು ಸೇರಿಸಿ. ಈ ಎಲ್ಲವನ್ನೂ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ತೆಗೆದು ಇರಿಸಿ, ಅದೇ ಮಿಕ್ಸಿ ಜಾರಿಗೆ ಟೊಮೆಟೊ ಹಾಗೂ ಹುಣಸೆಹಣ್ಣು ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ಈಗ ಒಂದು ಪಾತ್ರೆಗೆ ನೀರು ಹಾಕಿ ಕೆಲ ಹೊತ್ತು ಕುದಿಯಲು ಬಿಡಿ. ಇದಕ್ಕೆ ರುಬ್ಬಿಕೊಂಡ ಮಸಾಲೆ ಮಿಶ್ರಣ ಹಾಗೂ ಟೊಮೆಟೊ–ಹುಣಸೆಹಣ್ಣು ಪೇಸ್ಟ್ ಹಾಕಿ. ಈ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಕಡಿಮೆ ಉರಿಯಲ್ಲಿ 5 ನಿಮಿಷಗಳ ಕಾಲ ಕುದಿಸಿ. ಈಗ ಒಗ್ಗರಣೆ ಪಾತ್ರೆಯಲ್ಲಿ ತುಪ್ಪ ಹಾಕಿ. ಬಿಸಿಯಾದ ಮೇಲೆ ಸಾಸಿವೆ, ಅರಿಸಿನ, ಒಣಮೆಣಸು ಹಾಕಿ. ಇದನ್ನು ಒಂದೆರಡು ನಿಮಿಷ ಕೈಯಾಡಿಸಿ. ಇದನ್ನು ಕುದಿಯುತ್ತಿರುವ ರಸಂಗೆ ಸೇರಿಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿ. ಈಗ ನಿಮ್ಮ ಮುಂದೆ ರುಚಿಯಾದ ರಸಂ ಟೀ ಸವಿಯಲು ಸಿದ್ಧ. ಇದನ್ನು ಬಿಸಿ ಇರುವಾಗಲೇ ಕುಡಿಯಿರಿ. ಇದು ಬಿಸಿ ಬಿಸಿ ಅನ್ನದ ಜೊತೆ ಕಲೆಸಿ ತಿನ್ನಲು ಕೂಡ ಸಖತ್ ಆಗಿರುತ್ತೆ.

ಚಳಿಗಾಲದ ಸಮಯದಲ್ಲಿ ದೇಹದಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುವ ಕಾರಣ ಇಂತಹ ಖಾದ್ಯಗಳನ್ನ ತಯಾರಿಸಿ ತಿನ್ನಬೇಕು. ಇದರಿಂದ ನೀವು ಕೆಮ್ಮು, ಜ್ವರ, ಗಂಟಲುನೋವಿನಂತಹ ಸಾಮಾನ್ಯ ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಬಹುದು. ಇದು ಬಾಯಿರುಚಿ ತಣಿಸುವುದು ಸುಳ್ಳಲ್ಲ. 

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ