Chicken Rasam: ಟೊಮೆಟೊ ರಸಂ ಅಲ್ಲ ಇದು ಚಿಕನ್ ರಸಂ, ಅನ್ನಕ್ಕೆ ಸಖತ್ ಕಾಂಬಿನೇಷನ್ ಆಗಿರೋ ಈ ರೆಸಿಪಿ ಮಳೆಗಾಲಕ್ಕೆ ಹೇಳಿ ಮಾಡಿಸಿದ್ದು
ರಸಂ ಅಂದ್ರೆ ಯಾರಿಗಿಷ್ಟವಿಲ್ಲ. ಅದರಲ್ಲೂ ಮಳೆಗಾಲದ ಈ ತಂಪು ವೆದರ್‌ಗೆ ರಸಂ ಇದ್ರೆ ಊಟ ಎರಡು ತುತ್ತು ಹೆಚ್ಚೇ ಸೇರುತ್ತೆ. ನಾವೀಗ ಹೇಳ್ತಾ ಇರೋದು ವೆಜ್ ರಸಂ ಬಗ್ಗೆ ಅಲ್ಲ, ಇದು ನಾನ್‌ವೆಜ್ ರಸಂ. ಅದುವೇ ಚಿಕನ್ ರಸಂ, ಇದರ ರುಚಿಯನ್ನು ನೀವು ಮಾಡಿ ಸವಿಯಿರಿ.
ಕೆಲವರಿಗೆ ಊಟದಲ್ಲಿ ಎಷ್ಟೇ ಬಗೆ ಬಗೆಯ ಖಾದ್ಯಗಳಿದ್ದರೂ ರಸಂ ಇರಲೇಬೇಕು. ರಸಂನೊಂದಿಗೆ ಅನ್ನ ತಿಂದರಷ್ಟೇ ಹೊಟ್ಟೆ ತುಂಬಿದ ಅನುಭವ. ರಸಂ ಕೇವಲ ಊಟಕ್ಕಷ್ಟೇ ಅಲ್ಲ, ಸುಮ್ಮನೆ ಕುಡಿಯಲು ಸಖತ್ ಆಗಿರುತ್ತೆ. ಅದರಲ್ಲೂ ಮಳೆ ಸುರಿಯುವ ಈ ಸಮಯದಲ್ಲಿ ರಸಂ ಇದ್ದರೆ ಊಟ ಒಂದೆರಡು ತುತ್ತು ಹೆಚ್ಚೇ ಸೇರುತ್ತೆ. ಆದರೆ ನೀವು ಮಾಂಸಾಹಾರಿಗಳಾಗಿದ್ದು ನಿಮಗೆ ಟೊಮೆಟೊ ರಸಂ ತಿಂದು ತಿಂದು ಬೇಸರ ಆಗಿದ್ರೆ ನೀವು ಚಿಕನ್ ರಸಂ ಟ್ರೈ ಮಾಡಬಹುದು.
ಇದೇನಪ್ಪಾ ಇದು, ಚಿಕನ್ ಅಲ್ಲೂ ರಸಂ ಮಾಡ್ತಾರಾ? ಇದರ ರುಚಿ ಹೆಂಗಿರಬಹುದು, ಇದನ್ನು ತಯಾರಿಸೋಕೆ ಏನೆಲ್ಲಾ ಸಾಮಗ್ರಿಗಳು ಬೇಕಾಗಬಹುದು ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮ ಮನದಲ್ಲಿ ಮೂಡಬಹುದು. ಈ ಪ್ರಶ್ನೆಗಳಿಗೆಲ್ಲಾ ಖಂಡಿತ ಇಲ್ಲ ಉತ್ತರವಿದೆ.
ಟೊಮೆಟೊ ರಸಂಗೆ ಹೋಲಿಸಿದರೆ ಚಿಕನ್ ರಸಂನಲ್ಲಿ ಸಾಕಷ್ಟು ಪೋಷಕಾಂಶಗಳಿರುತ್ತದೆ. ಇದು ಸಖತ್ ಟೇಸ್ಟಿ ಕೂಡ ಹೌದು. ಖಾರ, ಹುಳಿ, ಉಪ್ಪು, ಚಿಕನ್ ಪರಿಮಳ ಹೊಂದಿರುವ ಈ ರಸಂ ಅನ್ನಕ್ಕೆ ಮಸ್ತ್ ಕಾಂಬಿನೇಷನ್. ಇದನ್ನು ಚಿಕನ್ ಸೂಪ್‌ನಂತೆ ಕೂಡ ಕುಡಿಯಬಹುದು. ಪೋಷಕಾಂಶಗಳ ಆಗರವಾಗಿರುವ ಚಿಕನ್ ರಸಂ ಮಕ್ಕಳು ಹಾಗೂ ವಯಸ್ಸಾದವರಿಗೆ ತುಂಬಾ ಪ್ರಯೋಜನಕಾರಿ. ಹಾಗಾದರೆ ಈ ಚಿಕನ್ ರಸಂ ತಯಾರಿಸೋದು ಹೇಗೆ ನೋಡಿ.
ಚಿಕನ್ ರಸಂಗೆ ಬೇಕಾಗುವ ಸಾಮಗ್ರಿಗಳು
ಚಿಕನ್ ತುಂಡುಗಳು - 1 ಕಪ್, ನಿಂಬೆ ರಸ - ಒಂದು ಚಮಚ, ಈರುಳ್ಳಿ ಪೇಸ್ಟ್ - ಒಂದು ಕಪ್, ಕೊತ್ತಂಬರಿ ಪುಡಿ - ಒಂದು ಚಮಚ, ಬೆಳ್ಳುಳ್ಳಿ ಎಸಳು - ಮೂರು, ಶುಂಠಿ - ಸಣ್ಣ ತುಂಡು, ಲವಂಗ - ಎರಡು, ಏಲಕ್ಕಿ - ಎರಡು, ತುಪ್ಪ - ಎರಡು ಚಮಚ, ಅರಿಸಿನ ಪುಡಿ - ಅರ್ಧ ಚಮಚ, ಖಾರದಪುಡಿ - ಒಂದು ಚಮಚ, ಗಸಗಸೆ - ಅರ್ಧ ಚಮಚ,
ಚಿಕನ್ ರಸಂ ತಯಾರಿಸುವ ವಿಧಾನ
ಚಿಕನ್ ತುಂಡುಗಳನ್ನು ಮುಂಚಿತವಾಗಿ ಬೇಯಿಸಿ ಪಕ್ಕಕ್ಕೆ ಇರಿಸಿಕೊಳ್ಳಿ. ಚಿಕನ್ ಬೇಯಿಸುವಾಗಲೇ ಅರಿಶಿನ ಮತ್ತು ಉಪ್ಪು ಸೇರಿಸಿ ಬೇಯಿಸಿದರೆ ಒಳ್ಳೆಯದು. ಈಗ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಲವಂಗ, ಏಲಕ್ಕಿ, ಗಸಗಸೆ, ಅರಿಶಿನ, ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ರುಬ್ಬಿಕೊಂಡು ಈ ಮಿಶ್ರಣವನ್ನು ಪಕ್ಕಕ್ಕೆ ಇರಿಸಿ. ಈಗ ಪ್ಯಾನ್ ಅನ್ನು ಒಲೆಯ ಮೇಲಿಟ್ಟು ತುಪ್ಪ ಹಾಕಿ. ತುಪ್ಪ ಬಿಸಿಯಾದ ಮೇಲೆ ರುಬ್ಬಿಟ್ಟುಕೊಂಡಿದ್ದ ಮಸಾಲೆಯನ್ನು ಸೇರಿಸಿ ಮತ್ತು ಹಸಿ ವಾಸನೆ ಹೋಗುವವರೆಗೆ ಕಡಿಮೆ ಉರಿಯಲ್ಲಿ ಫ್ರೈ ಮಾಡಿ. ಸುಮಾರು 5 ನಿಮಿಷಗಳ ಕಾಲ ಫ್ರೈ ಮಾಡಿದ ನಂತರ ಒಂದು ಲೀಟರ್ ನೀರು ಸೇರಿಸಿ. ನೀರು ಕುದಿಯುವಾಗ, ಮೊದಲೇ ಬೇಯಿಸಿಟ್ಟುಕೊಂಡ ಚಿಕನ್ ತುಂಡುಗಳನ್ನು ಸೇರಿಸಿ ಮತ್ತು 20 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ. ಚೆನ್ನಾಗಿ ಕುದಿಯುತ್ತಿರುವಾಗ ಕೊತ್ತಂಬರಿ ಸೊಪ್ಪನ್ನು ಉದುರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಅಷ್ಟೇ, ಚಿಕನ್ ರಸಂ ರೆಡಿ. ಒಮ್ಮೆ ಹೀಗೆ ಮಾಡಿದರೆ ಎರಡರಿಂದ ಮೂರು ದಿನಗಳವರೆಗೆ ಇಟ್ಟುಕೊಂಡು ತಿನ್ನಬಹುದು. ಇದು ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇದನ್ನು ಸೂಪ್‌ನಂತೆ ಕುಡಿಯಬಹುದು.
ಚಿಕನ್ ಬೇಯಿಸಿದ ನೀರನ್ನು ಚೆಲ್ಲದೆ ಬೆರೆಸುವುದು ಉತ್ತಮ. ಏಕೆಂದರೆ ಅವು ಹಲವು ಪೋಷಕಾಂಶಗಳನ್ನು ಒಳಗೊಂಡಿರುತ್ತವೆ. ಇದನ್ನು ಚಿಕನ್ ರಸಂ ರೂಪದಲ್ಲಿ ತಿನ್ನುವುದರಿಂದ ದೇಹದಲ್ಲಿ ಕೊಬ್ಬು ಸಂಗ್ರಹವಾಗುವುದಿಲ್ಲ. ರಸಂಗೆ ಆರೋಗ್ಯಕರ ಆಹಾರ ಪದಾರ್ಥಗಳನ್ನು ಸೇರಿಸಿರುತ್ತೇವೆ. ಹಾಗಾಗಿ ಇದನ್ನು ತಿಂದರೆ ಆರೋಗ್ಯಕ್ಕೆ ಎಲ್ಲ ರೀತಿಯಿಂದಲೂ ಒಳ್ಳೆಯದು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)