Raisins: ರುಚಿಯಾದ ದ್ರಾಕ್ಷಿ ಸಿಕ್ರೆ ಮನೆಯಲ್ಲೇ ಒಣದ್ರಾಕ್ಷಿ ಮಾಡಿಕೊಳ್ಳಬಹುದು, ಹೇಗೆ ಅಂದ್ರಾ? ಇಲ್ಲಿದೆ ವಿವರ
Sep 13, 2024 05:00 PM IST
ಮನೆಯಲ್ಲೇ ರುಚಿಯಾದ ಒಣದ್ರಾಕ್ಷಿ ಮಾಡುವ ವಿಧಾನ
- Raisins Making at Home: ಒಣದ್ರಾಕ್ಷಿಯನ್ನು ಮನೆಯಲ್ಲಿಯೇ ಮಾಡಿದರೆ ಕಲಬೆರಕೆ ಅಥವಾ ಗುಣಮಟ್ಟದ ಭಯ ಇರುವುದಿಲ್ಲ. ಸುಲಭ ವಿಧಾನದಲ್ಲಿ ಮನೆಯಲ್ಲಿ ಒಣದ್ರಾಕ್ಷಿ ಮಾಡಬಹುದು. ಹಬೆಯಲ್ಲಿ ಬೇಯಿಸಿ ಮಾಡುವ ವಿಧಾನಕ್ಕೆ ಬದಲಾಗಿ, ಇನ್ನೂ ಸರಳ ವಿಧಾನ ಇಲ್ಲಿದೆ.
ಸಿಹಿ ತಿನಿಸು ಮಾತ್ರವಲ್ಲದೆ ಕೆಲವೊಂದು ಖಾರದ ಅಡುಗೆಗಳಲ್ಲಿಯೂ ಒಣದ್ರಾಕ್ಷಿಯ ಬಳಕೆಯಾಗುತ್ತದೆ. ಕೆಲವೊಂದು ಅಡುಗೆಗಳಲ್ಲಿ ಸಿಹಿತಿಂಡಿಯ ಮೇಲೆ ಅಲಂಕಾರ ಅಥವಾ ಗಾರ್ನಿಶ್‌ಗೆ ಹೆಚ್ಚಾಗಿ ಒಣದ್ರಾಕ್ಷಿ ಬಳಸುತ್ತೇವೆ. ಇದು ಅಡುಗೆಯ ರುಚಿ ಹೆಚ್ಚಿಸುವುದು ಮಾತ್ರವಲ್ಲದೆ ಆರೋಗ್ಯಕ್ಕೂ ಒಳ್ಳೆಯದು. ಈ ಒಣದ್ರಾಕ್ಷಿಯನ್ನು ದ್ರಾಕ್ಷಿ ಹಣ್ಣನ್ನು ಒಣಗಿಸುವ ಮೂಲಕ ತಯಾರಿಸಲಾಗುತ್ತದೆ. ಇದರಲ್ಲಿ ಹೇರಳವಾದ ಫೈಬರ್ ಮತ್ತು ಗ್ಲೂಕೋಸ್, ಫ್ರಕ್ಟೋಸ್‌ನಂತಹ ನೈಸರ್ಗಿಕ ಸಕ್ಕರೆಗಳ ಜೊತೆಗೆ ಉತ್ತಮ ಪ್ರಮಾಣದ ಜೀವಸತ್ವಗಳು ಮತ್ತು ಖನಿಜಗಳು ತುಂಬಿವೆ. ಅಷ್ಟೇ ಅಲ್ಲದೆ ಒಣದ್ರಾಕ್ಷಿಯಲ್ಲಿ ಪಾಲಿಫಿನಾಲ್‌ಗಗಳು, ಆಂಥೋಸಯಾನಿನ್‌ಗಳು ಮತ್ತು ಫ್ಲೇವೊನಾಲ್‌ಗಳಂತಹ ಸಂಯುಕ್ತಗಳು ಕೂಡಾ ಇರುವುದು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ.
ಆರೋಗ್ಯ ಮತ್ತು ರುಚಿಯನ್ನು ಹೆಚ್ಚಿಸುವ ಒಣದ್ರಾಕ್ಷಿಗೆ ಬೆಲೆ ತುಸು ಹೆಚ್ಚು. ಕೆಲವೊಮ್ಮೆ ನಿಮಗೆ ಒಣದ್ರಾಕ್ಷಿ ಅಗತ್ಯವಿದ್ದಾಗ ಮನೆಯಲ್ಲಿ ಅದು ಖಾಲಿಯಾಗಿರಬಹುದು. ಅಥವಾ ನಿಮಗೆ ಮಾರುಕಟ್ಟೆಯಲ್ಲಿಯೂ ಸಿಗದ ಸನ್ನಿವೇಶ ಎದುರಾಗಬಹುದು. ಅಂತಹ ಸಮಯದಲ್ಲಿ ನೀವು ಮನೆಯಲ್ಲಿಯೇ ಸುಲಭ ವಿಧಾನದಲ್ಲಿ ಒಣದ್ರಾಕ್ಷಿ ತಯಾರಿಸಬಹುದು. ಅಲ್ಲದೆ ಇದನ್ನು ಕೆಲವು ದಿನಗಳವರೆಗೆ ಸಂಗ್ರಹಿಸಬಹುದು. ಮನೆಯಲ್ಲೇ ನೀವು ಮಾಡುವುದರಿಂದ ಅದರ ಗುಣಮಟ್ಟದ ಬಗ್ಗೆ ಯಾವುದೇ ಗೊಂದಲ ಇರುವುದಿಲ್ಲ. ಕಲಬೆರಕೆಯ ಭಯವೂ ಇಲ್ಲದೆ ಕಡಿಮೆ ಖರ್ಚಿನಲ್ಲಿ ನೀವು ಈ ಒಣದ್ರಾಕ್ಷಿ ಮಾಡಬಹುದು.
ಮನೆಯಲ್ಲಿ ಒಣದ್ರಾಕ್ಷಿ ತಯಾರಿಸುವ ಸುಲಭ ವಿಧಾನಕ್ಕೆ ನೀವು ಅಡುಗೆಮನೆಯಲ್ಲಿಯೇ ಇರುವ ವಸ್ತುಗಳನ್ನು ಬಳಸಿಕೊಳ್ಳಬಹುದು. ಇದಕ್ಕೆ ಹೆಚ್ಚುವರಿಯಾಗಿ ಯಾವುದೇ ವಸ್ತುಗಳ ಅಗತ್ಯವಿಲ್ಲ. ಈ ಸುಲಭ ಅಡುಗೆ ಸಲಹೆಗಳನ್ನು ಅನುಸರಿಸಿ ನೋಡಿ.
ಒಣದ್ರಾಕ್ಷಿಗೆ ದ್ರಾಕ್ಷಿ ಖರೀದಿ ಮಾಡುವುದು ಹೇಗೆ?
ಮನೆಯಲ್ಲಿ ಒಣದ್ರಾಕ್ಷಿ ತಯಾರಿಸಲು ಮೊದಲು ನೀವು ಮಾರುಕಟ್ಟೆಯಿಂದ ದ್ರಾಕ್ಷಿ ಹಣ್ಣನ್ನು ಖರೀದಿಸಬೇಕು. ಒಣದ್ರಾಕ್ಷಿಗೆ ದ್ರಾಕ್ಷಿ ಖರೀದಿಸುವಾಗ ಆ ದ್ರಾಕ್ಷಿಯನ್ನು ಸೂಕ್ಷ್ಮವಾಗಿ ಖರೀದಿಸಬೇಕು. ಅದು ತುಂಬಾ ಮೃದುವಾಗಿರಬಾರದು. ಅಲ್ಲದೆ ರುಚಿಯಲ್ಲಿ ತುಂಬಾ ಹುಳಿಯೂ ಇರಬಾರದು. ಹುಳಿ ದ್ರಾಕ್ಷಿಯಿಂದ ತಯಾರಿಸಿದ ಒಣದ್ರಾಕ್ಷಿಯ ರುಚಿ ಉತ್ತಮವಾಗಿರುವುದಿಲ್ಲ.
ದ್ರಾಕ್ಷಿಯಿಂದ ಒಣದ್ರಾಕ್ಷಿ ತಯಾರಿಸಲು ಮೊದಲಿಗೆ ನೀವು ಗೊಂಚಲಿನಿಂದ ದ್ರಾಕ್ಷಿಯನ್ನು ಬಿಡಿಸಿ ನೀರಿನಲ್ಲಿ ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಬೇಕು. ಇದರ ನಂತರ ದ್ರಾಕ್ಷಿಗೆ ನೀರನ್ನು ಬೆರೆಸಿ ದೊಡ್ಡ ಪಾತ್ರೆಯಲ್ಲಿ ಹಾಕಿ ಗ್ಯಾಸ್ ಮೇಲೆ ಇಡಬೇಕು. ದ್ರಾಕ್ಷಿ ಉಬ್ಬಿ ಮೇಲಕ್ಕೆ ಬರುವವರೆಗೆ ಕಡಿಮೆ ಉರಿಯಲ್ಲಿ ಕುದಿಸಬೇಕು. ದ್ರಾಕ್ಷಿ ನೀರಿನಲ್ಲಿ ಕುದಿಯುವಾಗ ಗ್ಯಾಸ್ ಆಫ್ ಮಾಡಿ ಆ ನೀರನ್ನು ಬಸಿಯಬೇಕು. ಆ ಬಳಿಕ ದ್ರಾಕ್ಷಿಯನ್ನು ಒಣಗಲು ಇಡಬೇಕು.
ದ್ರಾಕ್ಷಿಯನ್ನು ಈ ರೀತಿ ಒಣಗಿಸಿ
ದ್ರಾಕ್ಷಿಯನ್ನು ಅಗಲವಾದ ಪಾತ್ರೆಯಲ್ಲಿ ಬಿಡಿಬಿಡಿಯಾಗಿ ಹರಡಬೇಕು. ಅದನ್ನು ಬಿಸಿಲಿನಲ್ಲಿ ಒಣಗಲು 3 ರಿಂದ 4 ದಿನಗಳವರೆಗೆ ಇಡಬೇಕು. ಬಿಸಿಲು ಸರಿಯಾಗಿ ಬಿದ್ದರೆ ಬೇಗನೆ ಒಣಗುತ್ತದೆ. 3 ದಿನ ದಾಟಿದ ಮೇಲೆ ದ್ರಾಕ್ಷಿಯು ಒಣದ್ರಾಕ್ಷಿಯಾಗಿ ಮಾರ್ಪಟ್ಟಿರುವುದು ನಿಮ್ಮ ಗಮನಕ್ಕೆ ಬರುತ್ತದೆ. ಆ ಬಳಿಕ ಅದನ್ನು ನಿಮಗೆ ಬೇಕಾದ ಡಬ್ಬದಲ್ಲಿ ಹಾಕಿ ಇಡಬಹುದು.
ಇನ್ನಷ್ಟು ರೆಸಿಪಿಗಳಿಗೆ ಇಲ್ಲಿ ಕ್ಲಿಕ್ ಮಾಡಿ