logo
ಕನ್ನಡ ಸುದ್ದಿ  /  ಜೀವನಶೈಲಿ  /  ಬಾಯಿಯ ದುರ್ವಾಸನೆ ತಡೆಗಟ್ಟುವುದರಿಂದ ಮಧುಮೇಹ ನಿಯಂತ್ರಣದವರೆಗೆ: ಪ್ರತಿದಿನ ಸೇವಿಸಿ ಲವಂಗ

ಬಾಯಿಯ ದುರ್ವಾಸನೆ ತಡೆಗಟ್ಟುವುದರಿಂದ ಮಧುಮೇಹ ನಿಯಂತ್ರಣದವರೆಗೆ: ಪ್ರತಿದಿನ ಸೇವಿಸಿ ಲವಂಗ

Priyanka Gowda HT Kannada

Sep 27, 2024 02:24 PM IST

google News

ಲವಂಗವನ್ನು ದಿನನಿತ್ಯ ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

  • ಪ್ರತಿದಿನ ಲವಂಗವನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಇವು ಉರಿಯೂತ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಲವಂಗವನ್ನು ದಿನನಿತ್ಯ ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಲವಂಗವನ್ನು ದಿನನಿತ್ಯ ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಲವಂಗವನ್ನು ದಿನನಿತ್ಯ ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ. (Unsplash )

ಸಿಹಿ ಖಾದ್ಯವಿರಲಿ ಖಾರ ಖಾದ್ಯವಿರಲಿ ಆಹಾರಕ್ಕೆ ಸುವಾಸನೆ ಅಥವಾ ಪರಿಮಳಕ್ಕಾಗಿ ಲವಂಗವನ್ನು ಬಳಸಲಾಗುತ್ತದೆ. ಮಾಂಸಾಹಾರಿ ಭಕ್ಷ್ಯಗಳಿಂದ ಕೇಸರಿಬಾತ್‍ವರೆಗೆ ಲವಂಗವನ್ನು ಭಾರತೀಯರು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಆರೋಗ್ಯ ಕಾಪಾಡುವಲ್ಲಿ ಲವಂಗ ಪ್ರಾಮುಖ್ಯತೆಯನ್ನು ಪಡೆದಿದೆ. ಲವಂಗದಲ್ಲಿ ಪ್ರೋಟೀನ್, ಕಬ್ಬಿಣ, ಕಾರ್ಬೋಹೈಡ್ರೇಟ್, ಕ್ಯಾಲ್ಸಿಯಂ, ವಿಟಮಿನ್ ಸಿ, ಫೈಬರ್, ಮ್ಯಾಂಗನೀಸ್, ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್-ಕೆ ಸಮೃದ್ಧವಾಗಿದೆ. ಪ್ರತಿದಿನ ಬೆಳಿಗ್ಗೆ ಲವಂಗವನ್ನು ಸೇವಿಸುವುದರಿಂದ ಅನೇಕ ದೈಹಿಕ ಸಮಸ್ಯೆಗಳನ್ನು ನಿವಾರಿಸಲು ಸಹಕಾರಿ. ಲವಂಗವನ್ನು ಹಸಿಯಾಗಿ ತಿನ್ನುವುದು ಸ್ವಲ್ಪ ಕಷ್ಟವೇ ಹೌದು. ಆದರೆ, ಪ್ರತಿದಿನ ಇದನ್ನು ತಿನ್ನುವ ಅಭ್ಯಾಸ ಮಾಡಿಕೊಂಡರೆ ತುಂಬಾ ಒಳ್ಳೆಯದು. ದಿನನಿತ್ಯ ಲವಂಗ ಸೇವನೆ ಮಾಡುವುದರಿಂದ ಏನೆಲ್ಲಾ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಬಹುದು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಪ್ರತಿದಿನ ಲವಂಗ ಸೇವನೆಯಿಂದ ಪಡೆಯಬಹುದಾದ ಆರೋಗ್ಯ ಪ್ರಯೋಜನಗಳು

ಬಾಯಿಯ ದುರ್ವಾಸನೆ ತಡೆಗಟ್ಟಲು ಸಹಕಾರಿ: ದೀರ್ಘಾವಧಿಯ ಹಸಿವು ಮತ್ತು ನೈರ್ಮಲ್ಯದ ಕೊರತೆಯಿಂದ ಬಾಯಿಯಲ್ಲಿ ದುರ್ವಾಸನೆ ಉಂಟಾಗುತ್ತದೆ. ಈ ದುರ್ವಾಸನೆ ತಡೆಗಟ್ಟಲು ಲವಂಗ ಅತ್ಯುತ್ತಮ ಪರಿಹಾರವಾಗಿದೆ. ಇದಕ್ಕಾಗಿ ಪ್ರತಿದಿನ ಬೆಳಿಗ್ಗೆ 40 ದಿನಗಳ ಕಾಲ ಲವಂಗವನ್ನು ಬಾಯಿಯಲ್ಲಿ ಇರಿಸಿ. ಬಾಯಿಯ ದುರ್ವಾಸನೆ ಕಡಿಮೆಯಾಗುತ್ತದೆ.

ಅನಿಲ ಅಥವಾ ಹೊಟ್ಟೆ ಉಬ್ಬರ ಸಮಸ್ಯೆ: ಲವಂಗವನ್ನು ಶತಮಾನಗಳಿಂದಲೂ ಸಾಂಪ್ರದಾಯಿಕ ಔಷಧಗಳಲ್ಲಿ ಬಳಸಲಾಗುತ್ತದೆ. ಜೀರ್ಣಕ್ರಿಯೆಗೆ ಲವಂಗ ಉತ್ತಮ ಪರಿಹಾರವಾಗಿದೆ. ಆರೊಮ್ಯಾಟಿಕ್ ಸುವಾಸನೆಗೆ ಹೆಸರುವಾಸಿಯಾದ ಲವಂಗಗಳು ಅನಿಲ ಮತ್ತು ಹೊಟ್ಟೆ ಉಬ್ಬರ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಾಂಗದಿಂದ ಅನಿಲವನ್ನು ಹೊರಹಾಕುವಿಕೆಯನ್ನು ಉತ್ತೇಜಿಸುತ್ತದೆ. ಅನಿಲ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ಹೋಗಲಾಡಿಸಲು, ಬೆಳಿಗ್ಗೆ ಒಂದು ಲೋಟ ನೀರಿನಲ್ಲಿ ಕೆಲವು ಹನಿ ಲವಂಗ ಎಣ್ಣೆಯನ್ನು ಕುಡಿಯುವುದು ಕೂಡ ಒಳ್ಳೆಯದು. ಇದನ್ನು ಕುಡಿಯಲು ಸಾಧ್ಯವಾಗದಿದ್ದರೆ, ಒಂದು ಲವಂಗವನ್ನು ಜಗಿದು ರಸವನ್ನು ನುಂಗಬಹುದು.

ಶೀತಕ್ಕೆ ಪರಿಹಾರ: ಮಳೆಗಾಲ ಕಳೆಯುತ್ತಾ ಬಂದಿದ್ದರೂ ಅಲ್ಲಲ್ಲಿ ಆಗಾಗ ಮಳೆಯಾಗುತ್ತಿದೆ. ಇನ್ನೂ ಅನೇಕ ಮಂದಿ ಶೀತ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ಸಮಸ್ಯೆಯಿಂದ ಮುಕ್ತಿ ಪಡೆಯಲು ಲವಂಗವನ್ನು ಬಾಯಿಗೆ ಹಾಕಿಕೊಂಡು ಜಗಿಯಿರಿ. ಲವಂಗವನ್ನು ಪ್ರತಿದಿನ ತಿನ್ನುವುದರಿಂದ ಶೀತ ಮತ್ತು ಗಂಟಲು ನೋವನ್ನು ತಡೆಯುತ್ತದೆ. ಎರಡು ವಾರಗಳಲ್ಲಿ ಉತ್ತಮ ಬದಲಾವಣೆಗಳನ್ನು ನೋಡುವಿರಿ.

ತೂಕ ನಿರ್ವಹಣೆಗೆ ಪರಿಣಾಮಕಾರಿ: ಇಂದು ಬಹುತೇಕರು ಸ್ಥೂಲಕಾಯ ಅಥವಾ ಬೊಜ್ಜಿನ ಸಮಸ್ಯೆಯಿಂದ ಪಡಿಪಾಟಲು ಪಡುತ್ತಿದ್ದಾರೆ. ಅಂಥವರು ಲವಂಗ ತಿನ್ನುವುದನ್ನು ಪ್ರಯತ್ನಿಸಬೇಕು. ಪ್ರತಿದಿನ ಒಂದು ಲವಂಗವನ್ನು ಅಗಿಯಬೇಕು. ಹೀಗೆ ಮಾಡುವುದರಿಂದ ತೂಕ ಇಳಿಸಿಕೊಳ್ಳಬಹುದು. ಲವಂಗದಲ್ಲಿರುವ ಅಂಶಗಳು ಚಯಾಪಚಯವನ್ನು ಹೆಚ್ಚಿಸುವ ಮೂಲಕ ಕ್ಯಾಲೊರಿಗಳನ್ನು ವೇಗವಾಗಿ ಸುಡಲು ಸಹಾಯ ಮಾಡುತ್ತದೆ. ಇದು ತೂಕ ನಷ್ಟಕ್ಕೆ ಕಾರಣವಾಗುತ್ತದೆ.

ಮಧುಮೇಹ ನಿಯಂತ್ರಣಕ್ಕೆ ಸಹಕಾರಿ: ಲವಂಗವನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಲವಂಗದಲ್ಲಿರುವ ನೈಜಿರಿನ್ ಎಂಬ ವಸ್ತುವು ಇನ್ಸುಲಿನ್ ಹೆಚ್ಚಿಸಲು ಕೆಲಸ ಮಾಡುತ್ತದೆ. ಮಧುಮೇಹಿಗಳು ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ರಾತ್ರಿಯಲ್ಲಿ ಲವಂಗವನ್ನು ತಿನ್ನುವ ಅಭ್ಯಾಸವನ್ನು ರೂಢಿಸಿಕೊಳ್ಳುವುದು ಉತ್ತಮ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ